ವಂದೇ ಭಾರತ್ ರೈಲು: ಅಲ್ಪ ಅಂತರದ ಪ್ರಯಾಣ ದರ ಇಳಿಕೆ ನಿರೀಕ್ಷೆ
Photo: PTI
ಹೊಸದಿಲ್ಲಿ: ಕಡಿಮೆ ಅಂತರದ ಪ್ರದೇಶಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿ ಸಂಚರಿಸುವ ಜನ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ಭಾರತೀಯ ರೈಲ್ವೆ ಚಾಲನೆ ನೀಡಿದೆ. ಜನರಿಗೆ ತೃಪ್ತಿಕರವಾದ ಬೆಲೆ ನಿಗದಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಇಂಧೋರ್-ಭೋಪಾಲ್, ಭೋಪಾಲ್-ಜಬಲ್ಪುರ, ನಾಗ್ಪುರ-ಬಿಲಾಸಪುರ ಮಾರ್ಗಗಳು ಸೇರಿದಂತೆ ಹಲವು ರೈಲುಗಳ ಪ್ರಯಾಣದವರನ್ನು ಇಳಿಸಿ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ" ಎಂದು ಅವರು ವಿವರಿಸಿದ್ದಾರೆ.
ಇಂಧೋರ್- ಭೋಪಾಲ್ ವಂದೇ ಭಾರತ್ ರೈಲು ಪ್ರಯಾಣದ ಅವಧಿ ಮೂರು ಗಂಟೆಗಳಾಗಿದ್ದು, ಜೂನ್ ನಲ್ಲಿ ಒಟ್ಟು ಪ್ರಯಾಣಿಕ ಸಾಮರ್ಥ್ಯದ ಶೇಕಡ 29ರಷ್ಟು ಮಂದಿ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಅಂತೆಯೇ ವಾಪಸ್ಸಾಗುವ ರೈಲಿನಲ್ಲಿ ಕೇವಲ ಶೇಕಡ 21ರಷ್ಟು ಪ್ರಯಾಣಿಕರು ಇದ್ದರು" ಎಂದು ಅಂಕಿ ಅಂಶ ನೀಡಿದ್ದಾರೆ.
ನಾಗ್ಪುರ-ಬಿಲಾಸಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣ ಅವಧಿ 5 ಗಂಟೆ 30 ನಿಮಿಷ ಇದ್ದು, ಒಟ್ಟು ಸಾಮರ್ಥ್ಯದ ಸರಾಸರಿ 55ರಷ್ಟು ಮಂದಿ ಮತ್ತು 4.5 ಗಂಟೆ ಪ್ರಯಾಣ ಅವಧಿ ಇರುವ ಭೋಪಾಲ್-ಜಬಲ್ಪುರ ರೈಲಿನಲ್ಲಿ ಶೇಕಡ 32ರಷ್ಟು ಮಂದಿ ಮಾತ್ರ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಲೆ ಇಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಧೋರ್-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಪ್ರಸ್ತುತ ಎಸಿ ಚೇರ್ ಕಾರ್ ಟಿಕೆಟ್ ಗೆ ಪ್ರಯಾಣಿಕ 950 ರೂಪಾಯಿ ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಗೆ 1525 ರೂಪಾಯಿ ತೆರಬೇಕಾಗುತ್ತದೆ. ನಾಗ್ಪುರ- ಬಿಲಾಸಪುರ ರೈಲು ಪ್ರಯಾಣದ ದರ ಎಕ್ಸಿಕ್ಯೂಟಿವ್ ಕಾರ್ ಗೆ 2045 ರೂಪಾಯಿ ಮತ್ತು ಸಾಧಾರಣ ಚೇರ್ ಕಾರ್ ಗೆ 1075 ರೂಪಾಯಿ ಇದೆ.