ವಿಧಿ 370ರ ರದ್ದತಿಯನ್ನು ಎತ್ತಿ ಹಿಡಿದ ತೀರ್ಪು: ಮೂರು ಪ್ರಮುಖ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಉತ್ತರಿಸಿದ್ದು ಹೀಗೆ...
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಸೋಮವಾರ ತನ್ನ 5-0 ಸರ್ವಾನುಮತದ ತೀರ್ಪಿನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಎತ್ತಿಹಿಡಿದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಎಸ್.ಕೆ.ಕೌಲ್ ಅವರು ಎರಡು ಪ್ರತ್ಯೇಕ, ಆದರೆ ಸಹಮತದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅರ್ಜಿಗಳು ಒಳಗೊಂಡಿದ್ದ ಮೂರು ಪ್ರಮುಖ ವಿಷಯಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ಏನು ಹೇಳಿದೆ ಎನ್ನುವುದು ಇಲ್ಲಿದೆ:
*ಜಮ್ಮು-ಕಾಶ್ಮೀರದ ‘ವಿಶಿಷ್ಟ’ ಮತ್ತು ‘ವಿಶೇಷ ಸ್ಥಾನಮಾನ’ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು, 1947ರಲ್ಲಿ ಭಾರತದಲ್ಲಿ ವಿಲೀನಗೊಂಡ ಬಳಿಕ ಅದು ಸಾರ್ವಭೌಮತೆಯ ಯಾವುದೇ ಅಂಶವನ್ನು ಉಳಿಸಿಕೊಂಡಿರಲಿಲ್ಲ ಎಂದು ಎತ್ತಿಹಿಡಿದಿದೆ.
ಜಮ್ಮು-ಕಾಶ್ಮೀರದ ಅಂದಿನ ಆಡಳಿತಗಾರ ಮಹಾರಾಜ ಹರಿಸಿಂಗ್ ಅವರು ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳುವುದಾಗಿ ಘೋಷಣೆಯನ್ನು ಹೊರಡಿಸಿದ್ದರೆ ಅವರ ಉತ್ತರಾಧಿಕಾರಿ ಕರಣ್ ಸಿಂಗ್ ಅವರು ರಾಜ್ಯದಲ್ಲಿ ಇತರ ಎಲ್ಲ ಕಾನೂನುಗಳಿಗಿಂತ ಭಾರತದ ಸಂವಿಧಾನವು ಮೇಲುಗೈ ಹೊಂದಿರುತ್ತದೆ ಎಂದು ಘೋಷಿಸಿದ್ದರು ಎಂದು ನ್ಯಾಯಾಲಯವು ಹೇಳಿದೆ.
ಇದು ಮೂಲಭೂತವಾಗಿ, ಭಾರತಕ್ಕೆ ಸೇರ್ಪಡೆಗೊಂಡಿದ್ದ ಇತರ ಪ್ರತಿಯೊಂದೂ ರಾಜಪ್ರಭುತ್ವದ ವಿಲೀನದಂತಹ ಪರಿಣಾಮವನ್ನು ಹೊಂದಿತ್ತು ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಜಮ್ಮು-ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಸಿಜೆಐ ಚಂದ್ರಚೂಡ್ ಅವರು ಭಾರತೀಯ ಸಂವಿಧಾನದ ವಿಧಿ 1 ಮತ್ತು 370ರ ಜೊತೆಗೆ ಜಮ್ಮು-ಕಾಶ್ಮೀರ ಸಂವಿಧಾನದ ವಿಧಿ 3ನ್ನೂ ಉಲ್ಲೇಖಿಸಿದ್ದಾರೆ.
ಜಮ್ಮು-ಕಾಶ್ಮೀರವು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಮತ್ತು ಅವಿಭಾಜ್ಯ ಅಂಗವಾಗಿ ಉಳಿಯಲಿದೆ ಎಂದು ಜಮ್ಮು-ಕಾಶ್ಮೀರ ಸಂವಿಧಾನದ ವಿಧಿ 3 ಹೇಳುತ್ತದೆ. ಈ ನಿಬಂಧನೆಯನ್ನು ತಿದ್ದುಪಡಿ ಮಾಡುವಂತಿಲ್ಲ ಎಂದೂ ಜಮ್ಮು-ಕಾಶ್ಮೀರ ಸಂವಿಧಾನವು ಸ್ಪಷ್ಟವಾಗಿ ಹೇಳಿದೆ.
ಜಮ್ಮು-ಕಾಶ್ಮೀರವು ತನ್ನ ಸ್ವಂತ ಸಂವಿಧಾನವನ್ನು ಹೊಂದಿರುವ ಏಕೈಕ ರಾಜ್ಯವಾಗಿರುವುದು ಸಹ ವಿಶೇಷ ಸ್ಥಾನಮಾನವನ್ನು ವ್ಯಾಖ್ಯಾನಿಸುವುದಿಲ್ಲ ಎಂದು ಹೇಳಿರುವ ನ್ಯಾ.ಕೌಲ್, ರಾಜ್ಯದಲ್ಲಿ ದೈನಂದಿನ ಆಡಳಿತವು ಸುಗಮವಾಗಿರುವಂತೆ ಖಚಿತಪಡಿಸುವುದು ಜಮ್ಮು-ಕಾಶ್ಮೀರ ಸಂವಿಧಾನದ ಉದ್ದೇಶವಾಗಿತ್ತು ಮತ್ತು ರಾಜ್ಯವನ್ನು ಭಾರತದೊಂದಿಗೆ ಏಕೀಕರಿಸುವುದು ವಿಧಿ 370ರ ಉದ್ದೇಶವಾಗಿತ್ತು ಎಂದಿದ್ದಾರೆ.
►ವಿಧಿ 370 ಸಂವಿಧಾನದ ‘ತಾತ್ಕಾಲಿಕ’ ಅಥವಾ ಕಾಯಂ ನಿಬಂಧನೆಯೇ?
370ನೇ ವಿಧಿಯು ತಾತ್ಕಾಲಿಕ, ಪರಿವರ್ತನೀಯ ನಿಬಂಧನೆ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.
ಸಿಜೆಐ ಚಂದ್ರಚೂಡ್ ಅವರು, 370ನೇ ವಿಧಿಯ ಸೇರ್ಪಡೆ ಮತ್ತು ಅದಕ್ಕೆ ತಾತ್ಕಾಲಿಕ ನಿಬಂಧನೆಗಳೊಂದಿಗೆ ಸಂವಿಧಾನದ 21ನೇ ಭಾಗದಲ್ಲಿ ಸೇರಿಸಿದ ಐತಿಹಾಸಿಕ ಸಂದರ್ಭದ ಪುರಾವೆಗಳನ್ನು ಉಲ್ಲೇಖಿಸಿದರು.
1947ರಲ್ಲಿ ರಾಜ್ಯದಲ್ಲಿದ್ದ ಯುದ್ಧಸದೃಶ ಸ್ಥಿತಿಯಲ್ಲಿ ‘ತಾತ್ಕಾಲಿಕ’ ನಿಬಂಧನೆಯು ಉದ್ದೇಶವೊಂದನ್ನು ಪೂರೈಸಿತ್ತು ಎಂದೂ ಅವರು ಹೇಳಿದರು.
*370ನೇ ವಿಧಿಯ ಪರಿಣಾಮಕಾರಿ ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳು
ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 2019ರ ರಾಷ್ಟ್ರಪತಿಗಳ ಎರಡೂ ಘೋಷಣೆಗಳನ್ನು ಎತ್ತಿಹಿಡಿದಿದೆ.
ವ್ಯಾಪಕ ಒಕ್ಕೂಟ ವಿಷಯಗಳು ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಸುತ್ತ ಚರ್ಚೆಯ ಹೊರತಾಗಿ ಪ್ರಮುಖ ಕಾನೂನು ಸವಾಲು 370ನೇ ವಿಧಿಯನ್ನು ರದ್ದುಗೊಳಿಸಿದ್ದ 2019ರ ರಾಷ್ಟ್ರಪತಿಗಳ ಘೋಷಣೆಗಳನ್ನು ಗುರಿಯಾಗಿಸಿಕೊಂಡಿತ್ತು.
‘ಜಮ್ಮು-ಕಾಶ್ಮೀರ ಸಂವಿಧಾನ ಸಭೆ’ಗೆ ‘ಜಮ್ಮು-ಕಾಶ್ಮೀರ ಶಾಸಕಾಂಗ ಸಭೆ’ ಎಂಬ ಹೊಸ ಅರ್ಥವನ್ನು ನೀಡಿದ್ದ ಘೋಷಣೆ ಸೇರಿದಂತೆ ರಾಷ್ಟ್ರಪತಿಗಳ ಎರಡೂ ಘೋಷಣೆಗಳನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ.
ಜಮ್ಮು-ಕಾಶ್ಮೀರವು ರಾಷ್ಟ್ರಪತಿಗಳ ಆಳ್ವಿಕೆಯಲ್ಲಿರುವಾಗ ಭಾರತ ಒಕ್ಕೂಟವು ರಾಜ್ಯದ ಅಧಿಕಾರಗಳನ್ನು ವಹಿಸಿಕೊಂಡು ಈ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಎನ್ನುವುದು ಮುಖ್ಯ ವಿಷಯವಾಗಿತ್ತು. ಇಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಗಳ ಆಡಳಿತದಡಿ ರಾಜ್ಯಪಾಲರ ಅಧಿಕಾರಗಳು ಮತ್ತು ಇತಿಮಿತಿಗಳನ್ನು ಚರ್ಚಿಸಿದ್ದ ‘ಎಸ್.ಆರ್.ಬೊಮ್ಮಾಯಿ ವಿರುದ್ಧ ಭಾರತ ಒಕ್ಕೂಟ’ ಪ್ರಕರಣದಲ್ಲಿಯ 1994ರ ಮಹತ್ವದ ತೀರ್ಪನ್ನು ಉಲ್ಲೇಖಿಸಿದೆ.
ರಾಜ್ಯಪಾಲರು (ಜಮ್ಮು-ಕಾಶ್ಮೀರ ಪ್ರಕರಣದಲ್ಲಿ ರಾಷ್ಟ್ರಪತಿಗಳು) ರಾಜ್ಯ ಶಾಸಕಾಂಗದ ‘ಎಲ್ಲ ಅಥವಾ ಯಾವುದೇ’ ಪಾತ್ರಗಳನ್ನು ವಹಿಸಿಕೊಳ್ಳಬಹುದು ಮತ್ತು ಅಸಾಮಾನ್ಯ ಪ್ರಕರಣಗಳಲ್ಲಿ ಮಾತ್ರ ಇಂತಹ ಕ್ರಮವನ್ನು ನ್ಯಾಯಾಂಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಿಜಿಐ ಚಂದ್ರಚೂಡ್ ಹೇಳಿದರು.
ಬೊಮ್ಮಾಯಿ ತೀರ್ಪಿನ ವ್ಯಾಖ್ಯಾನವನ್ನು ನೆಚ್ಚಿಕೊಂಡ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರಪತಿಗಳ ಆದೇಶಗಳು ದುರುದ್ದೇಶಪೂರಿತವಾಗಿದ್ದವು ಅಥವಾ ಅಧಿಕಾರದ ಅಪ್ರಸ್ತುತ ಬಳಕೆಯಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ ಎಂದು ಹೇಳಿದೆ.