ವಯನಾಡ್ ಸಂತ್ರಸ್ತರ ಪುನರ್ವಸತಿಗೆ ಆರ್ಥಿಕ ನೆರವು ನೀಡಲು ಹಿಂದೇಟು: ಮೋದಿ ಸರ್ಕಾರದ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ | PC : PTI
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ವಯನಾಡ್ ಭೂಕುಸಿತದ ಸಂತ್ರಸ್ತರ ಪುನರ್ವಸತಿಗೆ ಆರ್ಥಿಕ ನೆರವು ನೀಡಲು ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇರಳ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ನೀಡಿದ ಸಂದೇಶದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಿಣರಾಯಿ, “ಕೋಮುವಾದಿ ರಾಜಕೀಯ ಶಕ್ತಿಗಳು ರಾಜ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಪ್ರಸ್ತುತ ಸಂದರ್ಭವು ಈ ಕೇರಳ ರಚನೆಯ ದಿನಾಚರಣೆಯ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ರಾಜ್ಯದ ಪ್ರಗತಿಯನ್ನು ತಡೆಯುತ್ತಿವೆ. ವಯನಾಡ್ ದುರಂತ ಸಂಭವಿಸಿ ಮೂರು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ ಕೇಂದ್ರ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಅವರು ಟೀಕಿಸಿದರು.
ಕೇಂದ್ರ ಸರ್ಕಾರವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದ ಅವರು, ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ಇತರ ರಾಜ್ಯಗಳಿಗೆ ತಕ್ಷಣವೇ ಸಹಾಯವನ್ನು ಒದಗಿಸಲಾಗುತ್ತಿದೆ, ಆದರೆ, ಕೇರಳದ ಮನವಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಪ್ರತಿಪಕ್ಷಗಳು ಕೇರಳದ ಅಗತ್ಯಗಳಿಗಾಗಿ ಮಾತನಾಡುವ ಬದಲು, ರಾಜ್ಯದ ವಿರುದ್ಧದ ಈ ನಿರ್ಲಕ್ಷ್ಯದ ಬಗ್ಗೆ ಮೌನವಾಗಿದೆ ಎಂದು ಆರೋಪಿಸಿದರು.
ಕೇರಳ ಹೈಕೋರ್ಟ್ ಆದೇಶಗಳು ಮತ್ತು ರಾಜ್ಯ ವಿಧಾನಮಂಡಲದ ಮನವಿಗಳ ಹೊರತಾಗಿಯೂ, ಪುನರ್ವಸತಿಗಾಗಿ ಕೇರಳಕ್ಕೆ ಅಗತ್ಯವಿರುವ 1,202 ಕೋಟಿ ರೂ.ಗಳನ್ನು ನೀಡಲು ಕೇಂದ್ರ ಸರ್ಕಾರ ಇಚ್ಛೆ ತೋರಿಸಿಲ್ಲ ಎಂದು ಅವರು ಹೇಳಿದರು.
ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಪಾಲಕ್ಕಾಡ್ ಮತ್ತು ಚೆಲಕ್ಕರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ನಡುವೆಯೇ ಅವರ ಹೇಳಿಕೆಗಳು ಬಂದಿವೆ.