ಜನತೆಯ ಆಶೀರ್ವಾದದಿಂದ ಪ್ರತಿ ಹೋರಾಟವನ್ನೂ ಗೆಲ್ಲುತ್ತೇನೆ : ವಿನೇಶ್ ಫೋಗಟ್
ಹರ್ಯಾಣದ ಜುನಾಲಾದಿಂದ ಚುನಾವಣಾ ಪ್ರಚಾರ ಆರಂಭಿಸಿದ ಕುಸ್ತಿಪಟು
ವಿನೇಶ್ ಫೋಗಟ್ | PC : PTI
ಚಂಡೀಗಡ : ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜುನಾಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರು ರವಿವಾರ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಜನತೆಯ ಬೆಂಬಲದೊಂದಿಗೆ ಪ್ರತಿ ಹೋರಾಟದಲ್ಲಿಯೂ ಗೆಲ್ಲುವ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಬಳಿಕ ಮೊದಲ ಬಾರಿಗೆ ಜುನಾಲಾಕ್ಕೆ ಆಗಮಿಸಿದ ವಿನೇಶ್ರಿಗೆ ಭರ್ಜರಿ ಸ್ವಾಗತ ದೊರೆಯಿತು. ಹಿರಿಯರು, ಮಹಿಳೆಯರು ಮತ್ತು ವಿವಿಧ ಖಾಪ್ಗಳ ಪ್ರತಿನಿಧಿಗಳು ಸೇರಿದಂತೆ ಬೆಂಬಲಿಗರು ಪುಷ್ಪಹಾರಗಳೊಂದಿಗೆ ಅವರನ್ನು ಸ್ವಾಗತಿಸಿ ಆಶೀರ್ವದಿಸಿದರು.
ಆಗಿನ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಒಲಿಂಪಿಯನ್ಗಳಾದ ವಿನೇಶ್ ಮತ್ತು ಬಜರಂಗ್ ಪುನಿಯಾ ಅವರು ಶುಕ್ರವಾರ ಕಾಂಗ್ರೆಸ್ಗೆ ಸೇರುವ ಮೂಲಕ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಅದೇ ದಿನ ಹರ್ಯಾಣ ವಿಧಾನಸಭಾ ಚುನಾವಣೆಗಾಗಿ ತನ್ನ 32 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್ ವಿನೇಶ್ರನ್ನು ಜುನಾಲಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಪ್ರಚಾರದ ನಡುವೆ ಬ್ರಿಜ್ಭೂಷಣ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿನೇಶ್, ‘ಬ್ರಿಜ್ಭೂಷಣ್ ದೇಶವಲ್ಲ. ನನ್ನ ದೇಶವು ನನ್ನ ಜೊತೆಯಲ್ಲಿ ನಿಂತಿದೆ. ನನ್ನ ಪ್ರೀತಿಪಾತ್ರರು ನನ್ನ ಜೊತೆಯಲ್ಲಿದ್ದಾರೆ,ನನಗೆ ಅವರೇ ಮುಖ್ಯ. ಕುಸ್ತಿಯಲ್ಲಿ ನನ್ನ ಗೆಲುವನ್ನು ಖಚಿತಪಡಿಸಿದ್ದಂತೆ ಅವರು ಚುನಾವಣೆಯಲ್ಲಿಯೂ ತಮ್ಮ ಆಶೀರ್ವಾದಗಳನ್ನು ಮುಂದುವರಿಸಲಿದ್ದಾರೆ ಮತ್ತು ಅವರ ಆಶೀರ್ವಾದಗಳೊಂದಿಗೆ ಪ್ರತಿಯೊಂದೂ ಹೋರಾಟವನ್ನು ನಾವು ಗೆಲ್ಲುತ್ತೇವೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಡಬ್ಲ್ಯುಎಫ್ಐ ಅನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ತನ್ನ ಸಂಚಿನಲ್ಲಿ ವಿನೇಶ್ ಮತ್ತು ಪುನಿಯಾರನ್ನು ದಾಳಗಳನ್ನಾಗಿ ಬಳಸುತ್ತಿದೆ ಎಂದು ಬ್ರಿಜ್ಭೂಷಣ್ ಶನಿವಾರ ಆರೋಪಿಸಿದ್ದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಿನೇಶ್,‘ಒಲಿಂಪಿಕ್ನಲ್ಲಿ ಪದಕವನ್ನು ಕಳೆದುಕೊಂಡ ನೋವು ನಾನು ಭಾರತಕ್ಕೆ ಮರಳಿದ ಬಳಿಕ ದೇಶದ ಜನರು ನನ್ನ ಮೇಲೆ ಪ್ರೀತಿಯ ಸುರಿಮಳೆಗೈದ ದಿನವೇ ಶಮನಗೊಂಡಿತ್ತು. ನಾನೀಗ ಅವರ ನೋವುಗಳನ್ನು ಶಮನಿಸಬೇಕಿದೆ ಮತ್ತು ಅದು ನನ್ನ ಹೊಣೆಗಾರಿಕೆಯಾಗಿದೆ ’ ಎಂದರು.
‘ನನಗೀಗ 30 ವರ್ಷ. ನಾನು ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಜನರು ನಿಮ್ಮೊಂದಿಗಿದ್ದಾಗ ಯಾವುದೇ ಸವಾಲನ್ನು ನೀವು ಮೆಟ್ಟಿ ನಿಲ್ಲುತ್ತೀರಿ’ ಎಂದು ಅವರು ಹೇಳಿದರು.
ವಿನೇಶ್ ಮೂಲತ ಚರಖಿ ದಾದ್ರಿ ಜಿಲ್ಲೆಯ ಬಲಾಲಿಯವರಾಗಿದ್ದು, ಜುಲಾನಾ ಅವರ ಪತಿಯ ಊರಾಗಿದೆ.