ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಫೋಗಟ್ ಸ್ಪರ್ಧೆ ಸಾಧ್ಯತೆ : ವರದಿ
ವಿನೇಶ್ ಫೋಗಟ್ | PC : PTI
ಹೊಸದಿಲ್ಲಿ : ಹಿರಿಯ ಕುಸ್ತಿತಾರೆ ವಿನೇಶ್ ಫೋಗಟ್ ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಫೋಗಟ್ ಅವರ ಆಪ್ತರು ಐಎಎನ್ಎಸ್ ಸುದ್ದಿಸಂಸ್ಥೆಗೆ ಮಂಗಳವಾರ ತಿಳಿಸಿದ್ದಾರೆ.
ನಾನು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿನೇಶ್ ಅವರು ಈಗಾಗಲೇ ಹೇಳಿದ್ದಾರೆ. ಆದರೆ ಕೆಲವು ರಾಜಕೀಯ ಪಕ್ಷಗಳು ವಿನೇಶ್ ಗೆ ಮನವರಿಕೆ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ ಎಂದು ವರದಿ ತಿಳಿಸಿದೆ.
ಪ್ಯಾರಿಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯ ಫೈನಲ್ನಲ್ಲಿ ಆಡುವುದರಿಂದ ಅನರ್ಹಗೊಂಡಿದ್ದ ವಿನೇಶ್ ಚಿನ್ನದ ಪದಕ ಜಯಿಸುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದ್ದರು. 100 ಗ್ರಾಂ ಅಧಿಕ ತೂಕ ಇದ್ದಾರೆಂಬ ಕಾರಣಕ್ಕೆ ವಿನೇಶ್ರನ್ನು ಅನರ್ಹಗೊಳಿಸಲಾಗಿತ್ತು.
ರಾಷ್ಟ್ರೀಯ ರಾಜಧಾನಿಯಲ್ಲಿ ಹಾಗೂ ವಿನೇಶ್ ಅವರ ತವರೂರು ಸೋನಿಪತ್ ನ ಬಲಾಲಿಯಲ್ಲಿ ಶನಿವಾರ ವಿನೇಶ್ಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾಂಗ್ರೆಸ್ ನ ಸಂಸದ ದೀಪೇಂದರ್ ಹೂಡಾ ಅವರು ಹೂಹಾರ ಹಾಕಿ ಸ್ವಾಗತಿಸಿದ್ದರು. ವಿನೇಶ್ ಯಾವ ಪಕ್ಷವನ್ನು ಸೇರಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಫೋಗಟ್ ಹಾಗೂ ಬಬಿತಾ ಫೋಗಟ್, ಬಜರಂಗ್ ಪುನಿಯಾ ಹಾಗೂ ಯೋಗೇಶ್ವರ್ ದತ್ ನಡುವೆ ಸ್ಪರ್ಧೆ ನಡೆಯುವುದನ್ನು ನೋಡಬಹುದು. ಕೆಲವು ರಾಜಕೀಯ ಪಕ್ಷಗಳು ವಿನೇಶ್ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿವೆ ಎಂದು ಫೋಗಟ್ ಕುಟುಂಬದ ಆಪ್ತರು 2024ರ ಒಲಿಂಪಿಕ್ಸ್ ಫೈನಲಿಸ್ಟ್ ಫೋಗಟ್ ಅವರ ಭವಿಷ್ಯದ ಯೋಜನೆಯ ಬಗ್ಗೆ ಐಎಎನ್ಎಸ್ ಕೇಳಿದಾಗ ಪ್ರತಿಕ್ರಿಯಿಸಿದರು.
ವಿನೇಶ್ ಶನಿವಾರದಂದು ಏರ್ಪೋರ್ಟ್ ಗೆ ಆಗಮಿಸಿದಾಗ ವಿನೇಶ್ ಅವರ ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳು ಸ್ವಾಗತಿಸಿದ್ದರು. ತನಗೆ ಸಿಕ್ಕ ಪ್ರೀತಿ ಹಾಗೂ ಬೆಂಬಲದಿಂದ ಭಾವುಕರಾಗಿದ್ದ ವಿನೇಶ್ ಕಣ್ಣೀರಿಟ್ಟಿದ್ದರು.
ಕಳೆದ ವರ್ಷ ಕುಸ್ತಿಯಿಂದ ನಿವೃತ್ತಿಯಾಗಿದ್ದ ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಕೂಡ ವಿನೇಶ್ರನ್ನು ಸ್ವಾಗತಿಸಿದವರಲ್ಲಿ ಮೊದಲಿಗರಾಗಿದ್ದರು.