ನೀತಿಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗದಿಂದ ಪ್ರಧಾನಿ ಮೋದಿಗೆ ನೋಟಿಸ್
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿಗೂ ನೋಟಿಸ್
ನರೇಂದ್ರ ಮೋದಿ, ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಭಾರತೀಯ ಚುನಾವಣಾ ಆಯೋಗವು ಗುರುವಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ಸದಸ್ಯ ರಾಹುಲ್ ಗಾಂಧಿಗೆ ನೋಟಿಸ್ಗಳನ್ನು ಜಾರಿಗೊಳಿಸಿದೆ. ಈ ತಾರಾ ಪ್ರಚಾರಕರ ಚುನಾವಣಾ ಪ್ರಚಾರ ಭಾಷಣಗಳನ್ನು ‘‘ಕಠಿಣ ಮಾನದಂಡಗಳ ಆಧಾರದಲ್ಲಿ’’ ವಿಮರ್ಶಿಸಬೇಕಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ನೋಟಿಸ್ಗಳಿಗೆ ಉತ್ತರವನ್ನು ಸೋಮವಾರ 11 ಗಂಟೆಯ ಮೊದಲು ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷವು ಸಾರ್ವಜನಿಕರ ಸಂಪತ್ತನ್ನು ಮುಸ್ಲಿಮರಿಗೆ ಮರುವಿಂಗಡಿಸಲು ಹೊರಟಿದೆ ಎಂಬುದಾಗಿ ರವಿವಾರ ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಹೇಳಿದ ದಿನಗಳ ಬಳಿಕ ಚುನಾವಣಾ ಆಯೋಗವು ನೋಟಿಸ್ ನೀಡಿದೆ.
ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸುವ ಉದ್ದೇಶದ ಈ ಹೇಳಿಕೆಗಾಗಿ ಪ್ರತಿಪಕ್ಷಗಳು ಮೋದಿ ವಿರುದ್ಧ ಕೆಂಡಕಾರಿವೆ. ಪ್ರಧಾನಿಯ ಹೇಳಿಕೆಗಳನ್ನು ‘‘ದ್ವೇಷ ಭಾಷಣ’’ ಎಂಬುದಾಗಿ ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ‘‘ಮೋದಿಯು ರಾಜಕೀಯ ಸಂವಾದದ ಘನತೆಯನ್ನು ಕೆಳ ಮಟ್ಟಕ್ಕೆ ಒಯ್ದಿದ್ದಾರೆ’’ ಎಂದು ಹೇಳಿದ್ದಾರೆ.
ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನ್ವಾದಿ)ಗಳ ದೂರುಗಳ ಆಧಾರದಲ್ಲಿ, ಪ್ರಧಾನಿಯ ‘‘ದ್ವೇಷ ಭಾಷಣ’’ಕ್ಕೆ ಸಂಬಂಧಿಸಿದ ನೋಟಿಸನ್ನು ಚುನವಣಾ ಆಯೋಗವು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ನೀಡಿದೆ. ‘‘ರಾಜಕೀಯ ಸಂವಾದದಲ್ಲಿ ಉನ್ನತ ಮಾನದಂಡಗಳನ್ನು ಅನುಸರಿಸುವಂತೆ ಮತ್ತು ಮಾದರಿ ನೀತಿ ಸಂಹಿತೆಯ ವಿಧಿಗಳನ್ನು ಅಕ್ಷರ ಮತ್ತು ಆಶಯಗಳಂತೆ ಅನುಸರಿಸುವಂತೆ ನಿಮ್ಮ ಎಲ್ಲಾ ತಾರಾ ಪ್ರಚಾರಕರಿಗೆ ಸೂಚಿಸುವಂತೆ ಬಿಜೆಪಿಯ ಅಧ್ಯಕ್ಷರ ನೆಲೆಯಲ್ಲಿ ನಿಮಗೆ (ನಡ್ಡಾ) ನಿರ್ದೇಶನ ನೀಡಲಾಗಿದೆ’’ ಎಂದು ನೋಟಿಸ್ ಹೇಳಿದೆ.
ರಾಹುಲ್ ಗಾಂಧಿ ಕೇರಳದಲ್ಲಿ ಮಾಡಿದ ಭಾಷಣವೊಂದಕ್ಕೆ ಸಂಬಂಧಿಸಿ ಬಿಜೆಪಿಯ ದೂರಿನ ಆಧಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಮೋದಿಯನ್ನು ‘‘ಹೀಯಾಳಿಸಿದ್ದಾರೆ ಮತ್ತು ಅನುಚಿತ ಪದಗಳನ್ನು ಬಳಸಿದ್ದಾರೆ’’ ಎಂದು ಬಿಜೆಪಿ ಆರೋಪಿಸಿದೆ.
ಮಾದರಿ ನೀತಿ ಸಂಹಿತೆ ಅಥವಾ ಭಾರತೀಯ ದಂಡ ಸಂಹಿತೆಯ ಯಾವ ವಿಧಿಗಳನ್ನು ಉಲ್ಲಂಘಿಸಲಾಗಿದೆ ಎನ್ನುವುದನ್ನು ದೂರುಗಳಲ್ಲಿ ಉಲ್ಲೇಖಿಸಲಾಗಿದೆಯಾದರೂ, ಚುನಾವಣಾ ಆಯೋಗದ ನೋಟಿಸ್ಗಳಲ್ಲಿ ಅವುಗಳನ್ನು ಪ್ರಸ್ತಾಪಿಸಲಾಗಿಲ್ಲ. ಮೋದಿ ಅಥವಾ ರಾಹುಲ್ ಗಾಂಧಿಯ ಹೆಸರುಗಳನ್ನೂ ಉಲ್ಲೇಖಿಸಲಾಗಿಲ್ಲ.
ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ಸೇರಿದಂತೆ ತಾರಾ ಪ್ರಚಾರಕರಿಗೆ ಚುನಾವಣಾ ಆಯೋಗವು ಈವರೆಗೆ ನೋಟಿಸ್ಗಳನ್ನು ನೀಡಿದೆ. ಆದರೆ ಹಿಂದಿನ ವರ್ಷಗಳಲ್ಲಿ ಮೋದಿ ವಿರುದ್ಧ ಹಲವು ದೂರುಗಳು ದಾಖಲಾಗಿರುವ ಹೊರತಾಗಿಯೂ ಅವರಿಗೆ ವೈಯಕ್ತಿಕವಾಗಿ ಆಯೋಗವು ನೋಟಿಸ್ಗಳನ್ನು ನೀಡಿರಲಿಲ್ಲ.
‘‘ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇರುವುದು ಮುಸ್ಲಿಮರಿಗೆ ಎಂಬುದಾಗಿ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಹೇಳಿತ್ತು’’ ಎಂಬ ಮೋದಿ ಭಾಷಣದ ತುಣುಕನ್ನು ಕಾಂಗ್ರೆಸ್ ತನ್ನ ದೂರಿನಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದೆ. ಅವರು ಯಾರಿಗೆ ಸಂಪನ್ಮೂಲಗಳ ಮರುಹಂಚಿಕೆ ಮಾಡುತ್ತಾರೆ ಎಂದು ಮೋದಿ ಪ್ರಶ್ನಿಸಿದ್ದರು. ‘‘ಹೆಚ್ಚು ಮಕ್ಕಳು ಇರುವವರಿಗೆ. ನುಸುಳುಕೋರರಿಗೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ಕೊಡಲಾಗುತ್ತದೆಯೇ? ನೀವು ಅದನ್ನು ಒಪ್ಪುತ್ತೀರಾ? ನಮ್ಮ ತಾಯಂದಿರು ಮತ್ತು ಸಹೋದರಿಯರ ಬಳಿ ಇರುವ ಚಿನ್ನದ ಸಮೀಕ್ಷೆ ನಡೆಸಿ, ಬಳಿಕ ಅದನ್ನು ಮರುಹಂಚಿಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಅದನ್ನು ಅವರು ಯಾರಿಗೆ ವಿತರಣೆ ಮಾಡುತ್ತಾರೆ? ಮನಮೋಹನ್ ಸಿಂಗ್ ಸರಕಾರದ ಪ್ರಕಾರ, ದೇಶದ ಸಂಪನ್ಮೂಲಗಳ ಮೇಲೆ ಮೊದಲ ಅಧಿಕಾರ ಇರುವವರಿಗೆ- ಮುಸ್ಲಿಮರಿಗೆ. ಇದು ನಗರ ನಕ್ಸಲ್ ಯೋಚನೆ. ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ಮಂಗಳ ಸೂತ್ರವನ್ನೂ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಇಳಿಯುತ್ತಾರೆ’’ ಎಂದು ಮೋದಿ ಆ ಭಾಷಣದಲ್ಲಿ ಹೇಳಿದ್ದರು.
ಮೋದಿಯ ಭಾಷಣವು ಐಪಿಸಿ ಮತ್ತು ನೀತಿ ಸಂಹಿತೆಯ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ