ಕಚೇರಿಯಲ್ಲಿ ಹೆಲ್ಮೆಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರ ವಿಡಿಯೋ ವೈರಲ್; ಕಾರಣವೇನು ಗೊತ್ತೇ?
ಹೈದರಾಬಾದ್: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಬೀರ್ ಪುರ್ ಮಂಡಲದಲ್ಲಿನ ಮಂಡಲ್ ಪರಿಷದ್ ಅಭಿವೃದ್ಧಿ ಅಧಿಕಾರಿಯ ಕಚೇರಿಯಲ್ಲಿ ಸರ್ಕಾರಿ ನೌಕರರು ತಲೆಗೆ ಹೆಲ್ಮೆಟ್ (ಶಿರಸ್ತ್ರಾಣ) ಧರಿಸಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಕಚೇರಿಯ ಕಟ್ಟಡವು ಶಿಥಿಲಾವಸ್ಥೆ ತಲುಪಿರುವುದರಿಂದ ಸಿಬ್ಬಂದಿಗಳು ಇಂತಹ ಕ್ರಮದ ಮೊರೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯಲ್ಲಿ ತಲೆಗೆ ಹೆಲ್ಮೆಟ್ ಧರಿಸಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವಿಡಿಯೊವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸುರಕ್ಷತೆಯ ದೃಷ್ಟಿಯಿಂದ ಅವರು ಹೆಲ್ಮೆಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು freepressjournal.in ವರದಿ ಮಾಡಿದೆ.
ವರದಿಗಳ ಪ್ರಕಾರ, ಉಳಿದುಕೊಳ್ಳಲು ಯೋಗ್ಯವಲ್ಲದ ಈ ಪುರಾತನ ಕಟ್ಟಡದಲ್ಲಿ ನೌಕರರು ತಮ್ಮ ಜೀವದ ಹಂಗನ್ನು ತೊರೆದು ಅಪಾಯಕಾರಿ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಟ್ಟಡದ ಮೇಲ್ಚಾವಣಿಯಿಂದ ಅವಶೇಷಗಳು ನಮ್ಮ ತಲೆಯ ಮೇಲೆ ಬೀಳುವ ಸ್ಥಿತಿಯನ್ನು ನಾವು ಅನುಭವಿಸುತ್ತಿದ್ದೇವೆ ಎಂದು ನೌಕರರು ಹೇಳುತ್ತಾರೆ. ಕಟ್ಟಡವು 100 ವರ್ಷಕ್ಕಿಂತ ಹೆಚ್ಚು ಪುರಾತನವಾಗಿರುವುದರಿಂದ, ಆ ಕಟ್ಟಡದ ಒಂದು ಪಾರ್ಶ್ವವು ಪತನಗೊಳ್ಳುವ ಹಂತ ತಲುಪಿದೆ ಎಂದು ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದೂರು ನೀಡಿದ್ದಾರೆ. ಈ ಕಟ್ಟಡವು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಾತ್ರ ಅಪಾಯಕಾರಿಯಾಗಿಲ್ಲ; ಬದಲಿಗೆ ಆ ಕಟ್ಟಡಕ್ಕೆ ಭೇಟಿ ನೀಡುವ ಸಂದರ್ಶಕರ ಪಾಲಿಗೂ ಅಪಾಯಕಾರಿಯಾಗಿದೆ.
ಕಚೇರಿಯ ಸಿಬ್ಬಂದಿಗಳು ಕಚೇರಿಯನ್ನು ಸುರಕ್ಷಿತ ಹಾಗೂ ಉತ್ತಮ ಸೌಲಭ್ಯಗಳಿರುವ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಚೇರಿಯ ಸ್ಥಿತಿಯ ಕುರಿತು ನೌಕರರು ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ ಮತ್ತು ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಕೋರಿದ್ದಾರೆ. ಹೀಗಿದ್ದೂ ಆ ಮನವಿಗಳೆಲ್ಲ ವ್ಯರ್ಥವಾಗಿವೆ. ಹೀಗಾಗಿ ಅದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದನ್ನು ಬಿಟ್ಟು ನಮ್ಮ ಬಳಿ ಬೇರೆ ಆಯ್ಕೆ ಇಲ್ಲ ಎಂದು ನೌಕರರು ಆರೋಪಿಸಿದ್ದಾರೆ.
ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಕಾಣಿಸಿಕೊಂಡ ನಂತರ ನೆಟ್ಟಿಗರೂ ಪ್ರತಿಕ್ರಿಯಿಸತೊಡಗಿದ್ದಾರೆ. ಅವರು ನೌಕರರ ಬೆಂಬಲಕ್ಕೆ ಧಾವಿಸಿದ್ದಾರೆ ಮತ್ತು ಅವರ ಕೆಲಸದೆಡೆಗಿನ ಏಕಾಗ್ರತೆಯನ್ನು ಪ್ರಶಂಸಿಸಿದ್ದಾರೆ. ನೌಕರರು ಹೆಲ್ಮೆಟ್ ಧರಿಸಿರುವುದರಿಂದ ಸುರಕ್ಷಿತವಾಗಿದ್ದಾರೆ. ಆದರೆ, ಅಲ್ಲಿ ಕೆಲಸ ಮಾಡಿಸಿಕೊಳ್ಳಲು ಬರುವ ಸಂದರ್ಶಕರ ಪಾಡೇನು ಎಂದು ಓರ್ವ ಬಳಕೆದಾರರು ಪ್ರಶ್ನೆ ಎತ್ತಿದ್ದಾರೆ. ಸರ್ಕಾರಿ ನೌಕರರು ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ.