ರಾಜ್ಯಸಭೆಯಲ್ಲೂ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

Screengrab: youtube / Sansad TV
ಹೊಸದಿಲ್ಲಿ: ಲೋಕಸಭೆಯಲ್ಲಿ ಸುಗಮವಾಗಿ ಅಂಗೀಕಾರಗೊಂಡಿದ್ದ ವಕ್ಫ್(ತಿದ್ದುಪಡಿ) ಮಸೂದೆಯು ಮತ್ತೊಂದು ಮ್ಯಾರಾಥಾನ್ ಚರ್ಚೆಯ ಬಳಿಕ ಶುಕ್ರವಾರ ಬೆಳಗಿನ ಜಾವ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಮಸೂದೆಯ ಪರವಾಗಿ 128 ಮತ್ತು ವಿರುದ್ಧವಾಗಿ 95 ಮತಗಳು ಬಿದ್ದಿವೆ.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರವನ್ನು ಕಾಯ್ದುಕೊಂಡಿರುವ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ(ಬಿಜೆಡಿ)ವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಲು ರಾಜ್ಯಸಭೆಯಲ್ಲಿನ ತನ್ನ ಏಳು ಸದಸ್ಯರಿಗೆ ಕರೆ ನೀಡಿತ್ತು.
ಮ್ಯಾರಥಾನ್ ಚರ್ಚೆ
ರಾಜ್ಯಸಭೆಯಲ್ಲಿ ವಾದಗಳು ನಿರೀಕ್ಷಿತ ರೀತಿಯಲ್ಲಿಯೇ ಇದ್ದವು. ಚರ್ಚೆಯನ್ನು ಆರಂಭಿಸಿದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯು ಮುಸ್ಲಿಮರ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡಲಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದರು. ವಕ್ಫ್ ಮಂಡಳಿಯ ನಿರ್ವಹಣೆ,ರಚನೆಯಲ್ಲಿ ಸಂಪೂರ್ಣವಾಗಿ ಮುಸ್ಲಿಮರೇ ಇರುತ್ತಾರೆ ಮತ್ತು ಫಲಾನುಭವಿಗಳೂ ಅವರೇ ಆಗಿರುತ್ತಾರೆ,ಹೀಗಾಗಿ ಮಂಡಳಿಯಲ್ಲಿ ಮುಸ್ಲಿಮೇತರರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಮಸೂದೆಯು ಧರ್ಮದ ಕುರಿತಾಗಿಲ್ಲ, ಆದರೆ ಆಸ್ತಿ ಮತ್ತು ಅದರ ನಿರ್ವಹಣೆಯ ಕುರಿತಾಗಿದೆ ಹಾಗೂ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದ ರಿಜಿಜು, ಈಗ ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಮುನ್ನ ಮಾಲಿಕತ್ವದ ಪುರಾವೆ ಅಗತ್ಯವಾಗಲಿದೆ. ಇದು ವಕ್ಫ್ ಮಂಡಳಿಯು ತನ್ನದೆಂದು ಹಕ್ಕು ಸಾಧಿಸುವ ಆಸ್ತಿಯನ್ನು ಸ್ವಯಂಚಾಲಿತವಾಗಿ ವಕ್ಫ್ ಆಸ್ತಿ ಎಂದು ಹೆಸರಿಸಲು ಕಾರಣವಾಗಿದ್ದ ಹಿಂದಿನ ನಿಬಂಧನೆಯನ್ನು ತೆಗೆದುಹಾಕಲಿದೆ ಎಂದರು.
ರಿಜಿಜು ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ವಕ್ಫ್ ಹಣೆಪಟ್ಟಿ ಅಂಟಿಸಿಕೊಂಡ ಆಸ್ತಿಗಳನ್ನು ಪಟ್ಟಿ ಮಾಡಿದ್ದರು. ಇವುಗಳಲ್ಲಿ ದಿಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿಯ ಆಸ್ತಿಗಳು,ತಮಿಳುನಾಡಿನಲ್ಲಿರುವ ಸುಮಾರು 400 ವರ್ಷಗಳಷ್ಟು ಹಳೆಯದಾದ ದೇವಸ್ಥಾನ,ಪಂಚತಾರಾ ಹೋಟೆಲ್ಗಾಗಿ ಭೂಮಿ ಮತ್ತು ಹಳೆಯ ಸಂಸತ್ ಕಟ್ಟಡ ಕೂಡ ಸೇರಿವೆ.
ರಿಜಿಜು ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್,123 ಆಸ್ತಿಗಳ ಬಗ್ಗೆ ಅವರು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಅವು ಮಸೀದಿಗಳು, ದಫನ ಭೂಮಿಗಳು ಅಥವಾ ದರ್ಗಾಗಳಾಗಿವೆ ಎಂದು ಹೇಳಿದರು.
‘ನಾನು ಅವುಗಳ ಪಟ್ಟಿಯನ್ನು ಸಲ್ಲಿಸಲು ಬಯಸುತ್ತೇನೆ’ ಎಂದು ಹೇಳಿದ ಹುಸೇನ್, ಬ್ರಿಟಿಷರು ಲುಟ್ಯೆನ್ಸ್ ದಿಲ್ಲಿಯನ್ನು ಆಕ್ರಮಿಸಿಕೊಂಡಾಗ ಪ್ರದೇಶ ನಿರ್ಮಾಣದ ಬಳಿಕ ಅವರು ಈ ಆಸ್ತಿಗಳನ್ನು ವಕ್ಫ್ಗೆ ಹಸ್ತಾಂತರಿಸಿದ್ದರು. ಈ ಆಸ್ತಿಗಳು ವಕ್ಫ್ ಬಳಿಯಿವೆ. 2013ಕ್ಕೆ ಸಂಬಂಧಿಸಿದಂತೆ ರಿಜಿಜು ಇವುಗಳನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಹೇಳಿದರು.
ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಡಿ ನ್ಯಾಯಮಂಡಳಿಯ ತೀರ್ಪಿನಿಂದ ಜನರು ನೊಂದಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂಬ ಬಿಜೆಪಿಯ ವಾದವನ್ನು ಹುಸೇನ್ ಪ್ರಶ್ನಿಸಿದ್ದು ಅವರ ಮತ್ತು ಶಾ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. ಇದು ಸುಳ್ಳು. ಯಾರಿಗೂ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿರದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಅಷ್ಟೊಂದು ಪ್ರಕರಣಗಳು ಏಕೆ ಬಾಕಿಯಿವೆ ಎಂದು ಹುಸೇನ್ ಪ್ರಶ್ನಿಸಿದರು.
ಅವರು(ಕಾಂಗ್ರೆಸ್) 2013ರ ಕಾಯ್ದೆಯಲ್ಲಿ ನ್ಯಾಯಾಲಯದಲ್ಲಿ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಸಿವಿಲ್ ಮೊಕದ್ದಮೆಗೆ ಅವಕಾಶವನ್ನು ಕಲ್ಪಿಸಿರಲಿಲ್ಲ. ಅವರು ಹೈಕೋರ್ಟ್ನಲ್ಲಿ ಅತ್ಯಂತ ಸೀಮಿತ ವ್ಯಾಪ್ತಿಯನ್ನು ಹೊಂದಿರುವ ರಿಟ್ ಅರ್ಜಿಗೆ ಮಾತ್ರ ಅವಕಾಶ ಕಲ್ಪಿಸಿದ್ದರು ಎಂದು ಅಮಿತ್ ಶಾ ಉತ್ತರಿಸಿದರು.
ಮಸೂದೆಯ ಪರವಾಗಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು,ಪ್ರತಿಪಕ್ಷಗಳು ವಿಷಯವನ್ನು ಬೇರೆಡೆಗೆ ತಿರುಗಿಸಲು ಮತ್ತು ಹಳಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಅವು ಮುಸ್ಲಿಮ್ ಸಮುದಾಯದ ವಂಚಿತ ವರ್ಗಗಳ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು ಎಂದು ಪ್ರತಿಪಾದಿಸಿದ ನಡ್ಡಾ,ಮುಸ್ಲಿಮ್ ದೇಶಗಳು ವಕ್ಫ್ ಆಸ್ತಿಗಳನ್ನು ಪಾರದರ್ಶಕಗೊಳಿಸುತ್ತಿರುವಾಗ ಮತ್ತು ವ್ಯವಸ್ಥೆಗೆ ಡಿಜಿಟಲ್ ರೂಪವನ್ನು ನೀಡುತ್ತಿರುವಾಗ ಭಾರತವೇಕೆ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಈ ಮಸೂದೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಬಾರದು ಎಂದು ಹೇಳಿದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,‘ನೀವು(ಸರಕಾರ) ಮಾಡುತ್ತಿರುವುದು ಒಳ್ಳೆಯದಲ್ಲ. ಇದು ದೇಶದಲ್ಲಿ ವಿವಾದಗಳಿಗೆ ಕಾರಣವಾಗುತ್ತದೆ. ನೀವು ವಿವಾದಗಳಿಗೆ ಬೀಜಗಳನ್ನು ಬಿತ್ತುತ್ತಿದ್ದೀರಿ. ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ನಾನು ಗೃಹಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದೋಷಗಳನ್ನು ಸರಿಪಡಿಸುವುದರಲ್ಲಿ ಹಾನಿಯೇನಿದೆ?’ ಎಂದು ಪ್ರಶ್ನಿಸಿದರು.
ಮಸೂದೆಯು ಲೋಕಸಭೆಯಲ್ಲಿ 288 ಪರ ಮತ್ತು 232 ವಿರುದ್ಧ ಮತಗಳೊಂದಿಗೆ ಅಂಗೀಕಾರಗೊಂಡಿದೆ ಎಂದು ಹೇಳಿದ ಖರ್ಗೆ,ಪ್ರತಿಯೊಬ್ಬರೂ ಅದನ್ನು ಒಪ್ಪಿಕೊಂಡಿದ್ದಾರೆಯೇ? ಇಲ್ಲ. ಅಂದರೆ ಮಸೂದೆಯಲ್ಲಿ ನ್ಯೂನತೆಗಳಿವೆ ಎಂದು ಅರ್ಥ. ನೀವು ಇದನ್ನು ನೋಡಬೇಕು. ನೀವು ‘ ಜಿಸ್ ಕಿ ಲಾಠಿ ಉಸೀ ಕಿ ಭೈಂಸ್’ ಎಂದು ಹೋದರೆ ಅದು ಯಾರಿಗೂ ಒಳ್ಳೆಯದಲ್ಲ ಎಂದರು.
ಶಾಸನದಲ್ಲಿಯ ನಿಬಂಧನೆಗಳಿಗಾಗಿ ಕೇಂದ್ರವನ್ನು ಗುರಿಯಾಗಿಸಿಕೊಂಡ ಖರ್ಗೆ,‘ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರ ಅಗತ್ಯವೇನಿದೆ? ತಿರುಪತಿ ದೇವಸ್ಥಾನದ ಆಡಳಿತದಲ್ಲಿ ನೀವು ಯಾವುದೇ ಮುಸ್ಲಿಮರನ್ನು ಸೇರಿಸುತ್ತೀರಾ? ರಾಮ ಮಂದಿರ ಟ್ರಸ್ಟ್ನಲ್ಲಿ ಮುಸ್ಲಿಮ್ ಸದಸ್ಯರಿದ್ದಾರೆಯೇ? ಮುಸ್ಲಿಮರನ್ನು ಬಿಡಿ,ನೀವು ನನ್ನಂತಹ ದಲಿತ ಹಿಂದೂವನ್ನೂ ಅಲ್ಲಿ ಸೇರಿಸುವುದಿಲ್ಲ ’ಎಂದು ಕುಟುಕಿದರು.
ಖರ್ಗೆಯವರ ಭಾವನೆಗಳನ್ನು ಪ್ರತಿಧ್ವನಿಸಿದ ಎಐಎಂಐಎಂ ನಾಯಕ ಇಮ್ತಿಯಾಜ್ ಜಲೀಲ್,‘ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ನೇಮಕಗೊಳ್ಳುತ್ತಾರಾದರೆ ಅವರು ಇಮ್ತಿಯಾಜ್ ಜಲೀಲ್ರನ್ನು ಶಿರಡಿ ಸಾಯಬಾಬಾ ಮಂದಿರ ಟ್ರಸ್ಟ್ ಅಥವಾ ತಿರುಪತಿ ದೇವಸ್ಥಾನ ಟ್ರಸ್ಟ್ನಲ್ಲಿ ಸೇರಿಸುತ್ತಾರೆಯೇ? ಸಿಖ್ ಸಮುದಾಯಕ್ಕಾಗಿ ಇಂತಹ ಮಂಡಳಿಯೊಂದು ಅಸ್ತಿತ್ವಕ್ಕೆ ಬಂದರೆ ಸಿಕ್ಖೇತರರನ್ನು ಅಲ್ಲಿ ನೇಮಕ ಮಾಡಲಾಗುವುದಿಲ್ಲ. ಹೀಗಾಗಿ ಇಂತಹ ವಿಷಯಗಳು ವಕ್ಫ್ ಮಂಡಳಿಗೆ ಮಾತ್ರವೇಕೆ?’ ಎಂದು ಪ್ರಶ್ನಿಸಿದರು.
ಮಸೂದೆಗೆ ಮುಂದೇನಾಗಲಿದೆ?
288-232 ಮತಗಳಿಂದ ಲೋಕಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯು 128-95 ಮತಗಳಿಂದ ಅಂಗೀಕರಿಸಿದೆ. ಇನ್ನೀಗ ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾಗುವ ಪ್ರಸ್ತಾವಿತ ಶಾಸನವು ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವ 1995ರ ಕಾಯ್ದೆಯನ್ನು ತಿದ್ದುಪಡಿಗೊಳಿಸಲು ಉದ್ದೇಶಿಸಿದೆ.