FACT CHECK - ಮುಸ್ಲಿಂ ಸಂಪ್ರದಾಯದಂತೆ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿವಾಹ ನೆರವೇರಿತ್ತೆ? ಸತ್ಯಾಂಶ ಇಲ್ಲಿದೆ…
Photo: www.thequint.com
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ಭಾವಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು thequint.in ವರದಿ ಮಾಡಿದೆ.
ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿರುವ ಈ ಭಾವಚಿತ್ರವನ್ನು ಉಲ್ಲೇಖಿಸಿ, “ನೀವೆಷ್ಟೆ ಸತ್ಯವನ್ನು ಮುಚ್ಚಿಟ್ಟರೂ, ಸತ್ಯ ಯಾವಾಗಲೂ ಹೊರಗೆ ಬಂದೇ ಬರುತ್ತದೆ. ಇದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಿಜ ಭಾವಚಿತ್ರ. ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮುಹಮ್ಮದ್ ಘಾಝಿ ಕುಟುಂಬ” ಎಂದು ಹೇಳಲಾಗಿದೆ.
ಈ ಪ್ರತಿಪಾದನೆಯ ಕುರಿತು thequint.com ಸತ್ಯಶೋಧನಾ ವೇದಿಕೆಯು ಪರಿಶೀಲನೆ ನಡೆಸಿದಾಗ, Indian Culture ಸಂಸ್ಥೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಆ ಚಿತ್ರವನ್ನು ರಾಜೀವ್ ಗಾಂಧಿಯವರ ವಿವಾಹೋತ್ಸವ ಸಂದರ್ಭದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದ್ದು ಎಂದು ಹೇಳಿರುವುದು ಕಂಡು ಬಂದಿದೆ.
ಅಲ್ಲದೆ ಚಾರಿತ್ರಿಕ ಸಾಕ್ಷ್ಯಗಳ ಪ್ರಕಾರ, ಈ ಇಬ್ಬರೂ ಹಿಂದೂ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಪರಸ್ಪರ ವಿವಾಹವಾಗಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಭಾವಚಿತ್ರದ ಹಿನ್ನಲೆ ಹುಡುಕಿದಾಗ, “ಫೆಬ್ರವರಿ 1968ರಲ್ಲಿ ನಡೆದ ರಾಜೀವ್ ಗಾಂಧಿ ವಿವಾಹೋತ್ಸವ ಸಮಾರಂಭದಲ್ಲಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮುಹಮ್ಮದ್ ಯೂನಸ್ ಫ್ಯಾನ್ಸಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವುದು” ಎಂದು ವಿವರಣೆ ನೀಡಲಾಗಿದೆ.
ಅಲ್ಲದೆ, ವಿವಾಹದ ಸಂದರ್ಭದಲ್ಲಿ ತೆಗೆದಿರುವ ಪ್ರಥಮ ಭಾವಚಿತ್ರದಲ್ಲಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಹೂಮಾಲೆ ಧರಿಸಿರುವುದನ್ನು ಕಾಣಬಹುದಾಗಿದೆ.
ಹೀಗಾಗಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ದೃಢಪಟ್ಟಿದೆ.
ಚಿತ್ರ ಕೃಪೆ : ದಿ ಕ್ವಿಂಟ್