ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ನಡುವೆ ಸಂಬಂಧ ಇತ್ತೇ?: ಸಿಬಿಐಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಹಾಗೂ ವಿದ್ವಾಂಸ ಎಂ.ಎಂ. ಕಲ್ಬುರ್ಗಿ | Photo: PTI
ಹೊಸದಿಲ್ಲಿ: ವಿಚಾರವಾದಿ ನರೇಂದ್ರ ದಾಭೋಲ್ಕರ್, ಸಿಪಿಐ ನಾಯಕ ಗೋವಿಂದ ಪನ್ಸಾರೆ, ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿದ್ವಾಂಸ ಎಂ.ಎಂ. ಕಲ್ಬುರ್ಗಿ ಹತ್ಯೆಯ ನಡುವೆ ಪರಸ್ಪರ ಸಂಬಂಧ ಇತ್ತೇ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಯನ್ನು ಪ್ರಶ್ನಿಸಿದೆ.
ವಾಮಾಚಾರದ ವಿರುದ್ಧ ಹೋರಾಡುತ್ತಿದ್ದ ದಾಬೋಲ್ಕರ್ ಅವರನ್ನು 2013 ಆಗಸ್ಟ್ 20ರಂದು ಮುಂಜಾನೆ ವಾಕಿಂಗ್ ಗೆ ಹೋಗುತ್ತಿದ್ದ ಸಂದರ್ಭ ಮೋಟಾರು ಸೈಕಲ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು. ಪನ್ಸಾರೆ ಅವರನ್ನು 2015 ಫೆಬ್ರವರಿ 20ರಂದು, ಗೌರಿ ಲಂಕೇಶ್ ಅವರನ್ನು 2017 ಸೆಪ್ಟಂಬರ್ 5ರಂದು, ಕಲ್ಬುರ್ಗಿ ಅವರನ್ನು 2015 ಆಗಸ್ಟ್ 30ರಂದು ಹತ್ಯೆಗೈಯಲಾಗಿತ್ತು. ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ನಿರಂತರ ಮೇಲ್ವಿಚಾರಣೆ ನಡೆಸಲು ನಿರಾಕರಿಸಿ ಬಾಂಬೆ ಉಚ್ಚ ನ್ಯಾಯಾಲಯ 2023 ಎಪ್ರಿಲ್ 18ರಂದು ನೀಡಿದ ಆದೇಶ ಪ್ರಶ್ನಿಸಿ ನರೇಂದ್ರ ದಾಬೋಲ್ಕರ್ ಅವರ ಪುತ್ರಿ ಮುಕ್ತಾ ದಾಬೋಲ್ಕರ್ ಅವರ ಸಲ್ಲಿಸಿದ ಮನವಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಸಿಬಿಐಯಲ್ಲಿ ಈ ಪ್ರಶ್ನೆ ಕೇಳಿತು.
ಮುಕ್ತಾ ದಾಬೋಲ್ಕರ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್, ಈ ನಾಲ್ಕು ಹತ್ಯೆಗಳ ಹಿಂದೆ ಅತಿ ದೊಡ್ಡ ಪಿತೂರಿ ಇತ್ತು ಎಂದು ಪೀಠಕ್ಕೆ ತಿಳಿಸಿದರು. ಲಭ್ಯವಿರುವ ಪುರಾವೆಗಳು ಈ ನಾಲ್ಕು ಪ್ರಕರಣಗಳ ನಡುವೆ ಸಂಬಂಧ ಇರುವ ಸಾಧ್ಯತೆಯನ್ನು ಸೂಚಿಸಿದೆ.
ಮುಕ್ತಾ ದಾಬೋಲ್ಕರ್ ಅವರು ಈ ವಿಷಯವನ್ನು ಉಚ್ಚ ನ್ಯಾಯಾಲಯದಲ್ಲಿ ಎತ್ತಿದ್ದರು ಎಂದು ಅವರು ಹೇಳಿದರು. ‘‘ವಿಚಾರಣೆ ಎದುರಿಸುತ್ತಿರುವ ಆರೋಪಿ (ದಾಬೋಲ್ಕರ್ ಪ್ರಕರಣ)ಗೆ ಇತರ ನಾಲ್ಕು ಮಂದಿಯ ಹತ್ಯೆ ಪ್ರಕರಣದೊಂದಿಗೆ ಸಂಬಂಧ ಇಲ್ಲ ಎಂದು ನೀವು ಹೇಳುತ್ತೀರಿ ಅಲ್ಲವೇ? ’’ ಎಂದು ನ್ಯಾಯಮೂರ್ತಿ ಧುಲಿಯಾ ಸಿಬಿಐ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಐಶ್ವರ್ಯ ಭಾತಿ ಅವರನ್ನು ಪ್ರಶ್ನಿಸಿದರು. ‘‘ಅದನ್ನೇ ನಾವು ತಿಳಿದುಕೊಳ್ಳಲು ಬಯಸಿರುವುದು’’ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು ಹಾಗೂ ಈ ಬಗ್ಗೆ ಪರಿಶೀಲಿಸುವಂತೆ ಸಿಬಿಐಗೆ ಸೂಚಿಸಿದರು.