ರಾಣಾ ಅಯ್ಯೂಬ್ ಮೇಲಿನ ಆನ್ ಲೈನ್ ದಾಳಿ | ಪತ್ರಕರ್ತರ ಸುರಕ್ಷತೆ ಕಾಪಾಡುವಂತೆ ಭಾರತಕ್ಕೆ ʼವಾಷಿಂಗ್ಟನ್ ಪೋಸ್ಟ್ʼ ಆಗ್ರಹ
Photo: facebook/ranaayyubjournalist
ಹೊಸದಿಲ್ಲಿ: ಪತ್ರಕರ್ತೆ ರಾಣಾ ಅಯ್ಯೂಬ್ ಮೇಲಿನ ಮತ್ತೊಂದು ದಾಳಿಯನ್ನು ಭಾರತದ ರಾಷ್ಟ್ರೀಯ ಪತ್ರಿಕಾ ದಿನದಂದು ವಾಷಿಂಗ್ಟನ್ ಪೋಸ್ಟ್ ಹೈಲೈಟ್ ಮಾಡಿದ್ದು, ಪತ್ರಕರ್ತರ ಸುರಕ್ಷತೆ ಕಾಪಾಡುವಂತೆ ಭಾರತ ಸರಕಾರಕ್ಕೆ ಆಗ್ರಹಿಸಿದೆ.
ನವೆಂಬರ್ 16 ಭಾರತದ ರಾಷ್ಟ್ರೀಯ ಪತ್ರಿಕಾ ದಿನವಾಗಿದೆ. ಈ ದಿನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿನ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮದ ನಿರ್ಣಾಯಕ ಪಾತ್ರವನ್ನು ಗುರುತಿಸುವ ದಿನವಾಗಿದೆ. ರಾಣಾ ಅಯ್ಯೂಬ್ ಅವರ ಫೋನ್ ಸಂಖ್ಯೆ ವೈರಲ್ ಮಾಡಿರುವುದು, ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿರುವುದು, ಅಶ್ಲೀಲ ಸಂದೇಶವನ್ನು AI ಮೂಲಕ ರಚಿಸಿರುವುದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹದಗೆಡುತ್ತಿರುವ ಸ್ಥಿತಿಯನ್ನು ಒತ್ತಿಹೇಳುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.
ಜಾಗತಿಕವಾಗಿ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಹೇಳಿದೆ. ಪತ್ರಕರ್ತರು ಬೆದರಿಕೆ ಮತ್ತು ಕಿರುಕುಳದ ಭಯವಿಲ್ಲದೆ ವರದಿ ಮಾಡಲು ಸಾಧ್ಯವಾಗಬೇಕು. ರಾಣಾ ಮತ್ತು ಎಲ್ಲಾ ಪತ್ರಕರ್ತರ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.
ಅಯ್ಯೂಬ್ ತನ್ನ ಕಿರುಕುಳ ಅನುಭವಿಸುವುದು ಇದೇ ಮೊದಲಲ್ಲ. ಅಯ್ಯೂಬ್ ಅವರು ದೀರ್ಘಕಾಲದಿಂದ ಬಲಪಂಥೀಯರು ಮತ್ತು ಸರಕಾರದ ವಿರುದ್ಧ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದಿದ್ದಾರೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿಯೂ ಇದನ್ನು ಅನುಭವಿಸಿದ್ದಾರೆ. ಇದಲ್ಲದೆ ಅವರ ಕುಟುಂಬವನ್ನು ಕೂಡ ಗುರಿಯಾಗಿಸಿಕೊಳ್ಳಲಾಗಿದೆ.
ರಾಣಾ ಅಯ್ಯೂಬ್ ಭಾರತೀಯ ಪತ್ರಕರ್ತೆ ಮತ್ತು ಮೋದಿ ಸರ್ಕಾರದ ಪ್ರಬಲ ವಿಮರ್ಶಕಿಯಾಗಿದ್ದರು. ʼಗುಜರಾತ್ ಫೈಲ್ಸ್: ಅನ್ಯಾಟಮಿ ಆಫ್ ಎ ಕವರ್ ಅಪ್ʼ ನ ಲೇಖಕರಾಗಿರುವ ಅವರು ತೆಹಲ್ಕಾದಲ್ಲಿ ಸಂಪಾದಕರಾಗಿದ್ದರು. ಅವರು ಧಾರ್ಮಿಕ ಹಿಂಸಾಚಾರ, ಹತ್ಯೆಗಳು ಮತ್ತು ಬಂಡಾಯದ ಬಗ್ಗೆ ವರದಿ ಮಾಡಿ ಗಮನ ಸೆಳೆದಿದ್ದರು.
ಎಕ್ಸ್ ನಲ್ಲಿನ ಬಲಪಂಥೀಯ ಖಾತೆ ‘The Hindutva Knight’ (ಹಿಂದುತ್ವ ನೈಟ್) ಇತ್ತೀಚೆಗೆ ಅವರ ಪೋನ್ ಸಂಖ್ಯೆ ಬಹಿರಂಗಪಡಿಸುವ ಮೂಲಕ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಒಂದೇ ರಾತ್ರಿಯಲ್ಲಿ ರಾಣಾ ಅಯ್ಯೂಬ್ ಗೆ 200ಕ್ಕೂ ಹೆಚ್ಚು ನಿಂದನೀಯ ಕರೆಗಳು ಮತ್ತು ಅಶ್ಲೀಲ ಸಂದೇಶಗಳು ಬಂದಿದ್ದವು.
ರಾತ್ರಿ 1 ಗಂಟೆ ಸುಮಾರಿಗೆ ಬಲಪಂಥೀಯ ಎಕ್ಸ್ ಖಾತೆಯೊಂದು ನನ್ನ ಪೋನ್ ನಂಬರ್ ಹಂಚಿಕೊಂಡಿತ್ತು.ಇದರಿಂದಾಗಿ ರಾತ್ರಿಯಿಡೀ ನನಗೆ ಅಪರಿಚಿತ ಕರೆಗಳು ಬಂದಿದೆ. ನನಗೆ ವೀಡಿಯೊ ಕರೆಗಳು, ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ರಾಣಾ ಅಯ್ಯೂಬ್ ಎಕ್ಸ್ ನಲ್ಲಿ ಹೇಳಿಕೊಂಡಿದ್ದರು.