ವಯನಾಡ್ ಭೂಕುಸಿತ | ಮೃತರ ಸಂಖ್ಯೆ 256ಕ್ಕೆ ಏರಿಕೆ; 200 ಕ್ಕೂ ಅಧಿಕ ಮಂದಿ ನಾಪತ್ತೆ
PC: x.com/iyarkai_earth
ವಯನಾಡ್: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ವಯನಾಡ್ನಲ್ಲಿ ಸಮರೋಪಾದಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 256ಕ್ಕೇರಿದೆ. 227 ಮಂದಿ ನಾಪತ್ತೆಯಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಪರಿಹಾರ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಇದುವರೆಗೆ ಪರಿಹಾರ ತಂಡಗಳು 1592 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ. ಘಟನೆಯಲ್ಲಿ ಬದುಕಿ ಉಳಿದಿರಬಹುದಾದ ವ್ಯಕ್ತಿಗಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿವರಿಸಿದ್ದಾರೆ.
ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಎರಡು ಭೀಕರ ಭೂಕುಸಿತಗಳಿಂದ ಮುಂಡಕ್ಕೈ ಹಾಗೂ ಅಕ್ಕಪಕ್ಕದ ಎರಡು ಗ್ರಾಮಗಳಲ್ಲಿ ವ್ಯಾಪಕ ಹಾನಿಯಾಗಿದೆ. ಮೃತಪಟ್ಟವರಲ್ಲಿ 23 ಮಕ್ಕಳು ಸೇರಿದ್ದಾರೆ ಎಂದು ವಯನಾಡ್ ಜಿಲ್ಲಾಡಳಿತ ಹೇಳಿದೆ. 96 ಮೃತದೇಹಗಳನ್ನು ಇದುವರೆಗೆ ಗುರುತಿಸಲಾಗಿದ್ದು, 75 ಮಂದಿಯ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದೆ.
ಭೂಸೇನೆ, ನೌಕಾಪಡೆ ಮತ್ತು ಎನ್ಡಿಆರ್ಎಫ್ ತಂಡಗಳು ನಿರಂತರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮರ ಹಾಗೂ ಕಾಂಕ್ರಿಟ್ ಅವಶೇಷಗಳಡಿ ಬದುಕಿ ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ. ಮಳೆ ತನ್ನ ಅಬ್ಬರವನ್ನು ಮುಂದುವರಿಸಿದ್ದು, ಬೆಟ್ಟಗುಡ್ಡಗಳಿಂದ ಕೂಡಿದ ಗ್ರಾಮವನ್ನು ತಲುಪುವುದೇ ಪರಿಹಾರ ತಂಡಗಳಿಗೆ ದುಸ್ಸಾಹಸ ಎನಿಸಿದೆ.
ಮುಂಡಕ್ಕೈ ಮತ್ತು ಪಕ್ಕದ ಪ್ಲಾಂಟೇಶನ್ ಪ್ರದೇಶಗಳಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ. ಇಡೀ ದಿನ ಭಾರತೀಯ ವಾಯುಪಡೆ ಹೆಲಿಪಾಕ್ಟರ್ಗಳು ವೈಮಾನಿಕ ಸಮೀಕ್ಷೆಗಳನ್ನು ನಡೆಸಿವೆ. ಸೈನಿಕರು ಚೂರಲ್ಮಲ ಎಂಬಲ್ಲಿ ಪರಿಹಾರ ಕಾರ್ಯಾಚರಣೆಗಾಗಿ ಹಗ್ಗದ ಸೇತುವೆಗಳನ್ನು ನಿರ್ಮಿಸಿದ್ದಾರೆ. ವಿಕೋಪದ ಬಳಿಕ ನಾಪತ್ತೆಯಾಗಿರುವವರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.