ವಯನಾಡ್ ಭೂಕುಸಿತ | ಶೋಧ ಕಾರ್ಯಾಚರಣೆ ಪುನರಾರಂಭ
PC : PTI
ವಯನಾಡ್ : ವಯನಾಡ್ನ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಶೋದ ಕಾರ್ಯಾಚರಣೆಯನ್ನು ರವಿವಾರ ಮರು ಆರಂಭಿಸುತ್ತಿದ್ದಂತೆ ರಕ್ಷಣಾ ಕಾರ್ಯಕರ್ತರಿಗೆ ಎರಡು ದೇಹ ಭಾಗಗಳು ದೊರೆತಿವೆ.
ಭೂಕುಸಿತ ಸಂಭವಿಸಿದ ಬಳಿಕ ಇದುವರೆಗೆ ಪತ್ತೆಯಾಗದ 130ಕ್ಕೂ ಅಧಿಕ ಜನರಿಗಾಗಿ ಕೊನೆಯದಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ವಯಂ ಸೇವಕರಲ್ಲದೆ, ಯುವ ಸಂಘಟನೆಯ ಸದಸ್ಯರು, ಸಂತ್ರಸ್ತರು ರವಿವಾರ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾಂತನ್ ಪಾರಾದ ನದಿಯಲ್ಲಿ ಎರಡು ದೇಹ ಭಾಗಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಡಕ್ಕೈ, ಚೂರಲ್ಮಲ, ಪುಂಚಿರಿಮಟ್ಟಂ ಹಾಗೂ ಚೆಲಿಯಾರ್ ನದಿ ದಂಡೆ ಸೇರಿದಂತೆ ಭೂಕುಸಿತ ಪೀಡಿತ ಪ್ರದೇಶಗಳ 6 ವಲಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸೂಚಿಪಾರಾ ಹಾಗೂ ಕಾಂತನ್ಪಾರಾದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ ಮೃತದೇಹಗಳನ್ನು ಪತ್ತೆ ಹಚ್ಚಲು ಕಾಡವರ್ ಶ್ವಾನಗಳನ್ನು ಕೂಡ ಪೀಡಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅಪರಾಹ್ನ ಅದನ್ನು ರದ್ದುಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ ಬಳಿಕ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು.