ವಯನಾಡ್ ಭೂಕುಸಿತ | ಕುಟುಂಬದ 9 ಮಂದಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಶ್ರುತಿಗೆ ಸರಕಾರಿ ಉದ್ಯೋಗ
Pic | X/@iprdkerala
ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡು ಆ ಬಳಿಕ ನಡೆದ ರಸ್ತೆ ಅಪಘಾತದಲ್ಲಿ ಏಕೈಕ ಆಶ್ರಯವಾಗಿದ್ದ ಭಾವಿ ಪತಿಯನ್ನು ಕೂಡ ಕಳೆದುಕೊಂಡು ಅನಾಥಳಾಗಿದ್ದ ಶ್ರುತಿಗೆ ಕೇರಳ ಸರಕಾರ ಉದ್ಯೋಗವನ್ನು ನೀಡಿದೆ.
ಶ್ರುತಿಗೆ ಉದ್ಯೋಗವನ್ನು ನೀಡುವ ಬಗ್ಗೆ ಕೇರಳ ಸಚಿವ ಸಂಪುಟ ಇತ್ತೀಚೆಗೆ ತೀರ್ಮಾನವನ್ನು ತೆಗೆದುಕೊಂಡಿತ್ತು. ಸೋಮವಾರ ಕಂದಾಯ ಇಲಾಖೆಯಲ್ಲಿ ಕ್ಲಕ್ ಆಗಿ ಶ್ರುತಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸ್ಥಳೀಯ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರುತಿ, ಕಷ್ಟದ ಸಮಯದಲ್ಲಿ ಬೆಂಬಲಿಸಿದ ಸರ್ಕಾರ ಮತ್ತು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಾನು ಯಾರನ್ನೂ ನಿರ್ದಿಷ್ಟವಾಗಿ ಹೆಸರಿಸುತ್ತಿಲ್ಲ. ಎಲ್ಲರೂ ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಕೃತಜ್ಞಳಾಗಿದ್ದೇನೆ. ಅಪಘಾತದ ಬಳಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನನ್ನ ಕೆಲಸವನ್ನು ನಿಭಾಯಿಸಲು ನಾನು ಸಮರ್ಥಳಾಗಿದ್ದೇನೆ ಎಂದು ಹೇಳಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಶ್ರುತಿ ಜು.30ರಂದು ಮೆಪ್ಪಾಡಿ ಪಂಚಾಯತ್ ನ ಚೂರಲ್ಮಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಪೋಷಕರು ಮತ್ತು ಸಹೋದರಿ ಸೇರಿದಂತೆ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದರು. ಈ ವೇಳೆ ಅವರ ನಿಶ್ಚಿತ ವರ ಜೆನ್ಸನ್ ಅವರಿಗೆ ಏಕೈಕ ಆಶ್ರಯವಾಗಿದ್ದರು. ಜೆನ್ಸನ್ ಜೊತೆಗಿನ 10 ವರ್ಷಗಳ ಪ್ರೀತಿಯ ಬಳಿಕ ಅವರಿಬ್ಬರು ಜೂ. 2ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೆನ್ಸನ್ ಗೆ ಅಪಘಾತಕ್ಕೆ ಕೆಲವೇ ದಿನಗಳ ಮೊದಲು ಅಂದರೆ ಆ.29 ರಂದು ಭಾವಿ ದಂಪತಿಗಳು ಪುತ್ತುಮಲ ಧಪನ ಭೂಮಿಗೆ ಭೇಟಿ ನೀಡಿದ್ದರು. ಅಲ್ಲಿ ಶ್ರುತಿ ಅವರ ಕೆಲವು ಕುಟುಂಬ ಸದಸ್ಯರನ್ನು ಸಮಾಧಿ ಮಾಡಲಾಗಿತ್ತು. ಅಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಂತೆ ವಿವಾಹವಾಗುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದರು.
ಭೂಕುಸಿತ ದುರಂತಕ್ಕೆ ಮೊದಲು ಶ್ರುತಿ-ಜೆನ್ಸನ್ ಜೋಡಿ ಡಿಸೆಂಬರ್ ನಲ್ಲಿ ಅದ್ದೂರಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಬದಲಾದ ಸನ್ನಿವೇಶಗಳಿಂದ ಸೆಪ್ಟೆಂಬರ್ ನಲ್ಲಿ ಕೋರ್ಟ್ ನಲ್ಲಿ ನೋಂದಣಿ ಮೂಲಕ ಸರಳ ವಿವಾಹಕ್ಕೆ ನಿರ್ಧರಿಸಿದ್ದರು. ಸೆ.10ರಂದು ಜೆನ್ಸನ್ ಪ್ರಯಾಣಿಸುತ್ತಿದ್ದ ಕಾರು ಖಾಸಗಿ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಜೆನ್ಸನ್ ತೀವ್ರವಾಗಿ ಗಾಯಗೊಂಡಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರುತಿ ಮತ್ತು ಜೆನ್ಸನ್ ಅವರ ಕುಟುಂಬದ ಇತರ ಸದಸ್ಯರಿಗೂ ಗಾಯಗಳಾಗಿತ್ತು. ಜೆನ್ಸನ್ ಮೂಗು ಮತ್ತು ಮೆದುಳಿನ ರಕ್ತಸ್ರಾವ ಸೇರಿದಂತೆ ಗಂಭೀರ ಗಾಯಗಳಿಂದ ಮೃತಪಟ್ಟಿದ್ದರು.