ವಯನಾಡ್ ಭೂಕುಸಿತ | ಪಿಂಚಣಿ, ಅಲ್ಪ ಸಂಪಾದನೆಯನ್ನೇ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಚಹಾ ಅಂಗಡಿ ಮಾಲಕಿ ಝುಬೈದಾ
PC : mathrubhumi.com
ವಯನಾಡ್ : ಉದ್ಯಮಿಗಳು, ಸೆಲೆಬ್ರೆಟಿಗಳು ಹಾಗೂ ಸಂಸ್ಥೆಗಳು ಮುಖ್ಯಮಂತ್ರಿ ಅವರ ಸಂಕಷ್ಟ ಪರಿಹಾರ ನಿಧಿಗೆ ಲಕ್ಷ, ಕೋಟಿ ರೂ. ದೇಣಿಗೆ ನೀಡುತ್ತಿರುವ ನಡುವೆ ಕೊಲ್ಲಂನ ಚಹಾ ಅಂಗಡಿ ನಡೆಸುವ ವೃದ್ಧೆಯೋರ್ವರು ತಮ್ಮ ಅಲ್ಪ ಸಂಪಾದನೆ ಹಾಗೂ ಪಿಂಚಣಿಯನ್ನು ಸ್ವಾರ್ಥ ರಹಿತವಾಗಿ ದೇಣಿಗೆ ನೀಡಿದ್ದಾರೆ.
ತನ್ನ ದಿನನಿತ್ಯದ ಖರ್ಚಿಗೆ ಪುಟ್ಟ ಚಹಾ ಅಂಗಡಿ ನಡೆಸುತ್ತಿರುವ ಕೊಲ್ಲಂ ಜಿಲ್ಲೆಯ ಪಲ್ಲಿತೊಟ್ಟಂನ ನಿವಾಸಿ ಸುಬೈದ ಮುಖ್ಯಮಂತ್ರಿ ಅವರ ಸಂಕಷ್ಟ ಪರಿಹಾರ ನಿಧಿಗೆ 10 ಸಾವಿರ ರೂ. ದೇಣಿಗೆ ನೀಡಿದ್ದಾರೆ. ತನ್ನ ಚಹಾ ಅಂಗಡಿಯಲ್ಲಿನ ವ್ಯಾಪಾರದಿಂದ ಗಳಿಸಿದ ಅಲ್ಪ ಮೊತ್ತ ಹಾಗೂ ತಾನು, ತನ್ನ ಪತಿ ಸ್ವೀಕರಿಸಿರುವ ವೃದ್ಧರ ಕಲ್ಯಾಣ ಪಿಂಚಣಿಯಿಂದ ಅವರು ಈ ದೇಣಿಗೆ ನೀಡಿದ್ದಾರೆ.
‘‘ಸಾಲದ ಬಡ್ಡಿ ಪಾವತಿಸಲು ನಾನು ಕೆಲವು ದಿನಗಳ ಹಿಂದೆ ಬ್ಯಾಂಕ್ನಿಂದ ಹಣ ತೆಗೆದಿದ್ದೆ. ಆದರೆ, ನಾವು ವಯನಾಡ್ ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ನೆರವು ನೀಡಲು ಪ್ರತಿಯೊಬ್ಬರಲ್ಲೂ ನೆರವು ಕೋರುತ್ತಿರುವುದನ್ನು ಟೀವಿಯಲ್ಲಿ ನೋಡಿದೆವು. ಕೂಡಲೇ ನನ್ನ ಪತಿ ಕೂಡಲೇ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ಹಣವನ್ನು ನೀಡು ಎಂದು ನನ್ನಲ್ಲಿ ಹೇಳಿದರು. ನೆರವು ನೀಡುವುದು ಹೆಚ್ಚು ಮುಖ್ಯವಾದುದರಿಂದ ಬಡ್ಡಿಯನ್ನು ಮತ್ತೆ ಪಾವತಿಸಬಹುದು ಎಂದು ಅವರು ತಿಳಿಸಿದರು. ಆದುದರಿಂದ ನಾನು ಜಿಲ್ಲಾಧಿಕಾರಿಯವರ ಕಾರ್ಯಾಲಯಕ್ಕೆ ತೆರಳಿ ಹಣವನ್ನು ನೀಡಿದೆ’’ ಎಂದು ತಿಳಿಸಿದ್ದಾರೆ.
ಸುಬೈದಾ ಅವರು ಸ್ವಾರ್ಥ ರಹಿತವಾಗಿ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಮುಖ್ಯಮಂತ್ರಿ ಸಂತ್ರಸ್ತರ ಪರಿಹಾರ ನಿಧಿ (ಸಿಎಂಡಿಆರ್ಎಫ್)ಗೆ ದೇಣಿಗೆ ನೀಡಿದ್ದರು. ಈ ಹಿಂದೆ ಅವರು ತನ್ನ ನಾಲ್ಕು ಮೇಕೆಗಳನ್ನು ಮಾರಾಟ ಮಾಡಿ ನೆರೆ ಪರಿಹಾರಕ್ಕಾಗಿ ದೇಣಿಗೆ ನೀಡಿದ್ದರು.
ಝುಬೈದಾ ಅವರ ಅವರ ಈ ನಿಸ್ವಾರ್ಥ ಸೇವೆ ಹಲವರ ಪ್ರಶಂಸೆಗೆ ಪಾತ್ರವಾಗಿದೆ.