ನ.13ರಂದು ವಯನಾಡು ಲೋಕಸಭಾ ಉಪಚುನಾವಣೆ : ಪ್ರಿಯಾಂಕಾ ಗಾಂಧಿ ಸಜ್ಜು
ಪ್ರಿಯಾಂಕಾ ಗಾಂಧಿ | PC : ANI
ಹೊಸದಿಲ್ಲಿ : ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ನ.13ರಂದು ಉಪಚುನಾವಣೆಯನ್ನು ನಡೆಸುವುದಾಗಿ ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತನ್ನ ಸೋದರ ರಾಹುಲ್ ಗಾಂಧಿಯವರು ತೆರವುಗೊಳಿಸಿರುವ ಈ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲೋಕಸಭಾ ಚುನಾವಣೆಗಳಲ್ಲಿ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್ ಉತ್ತರ ಪ್ರದೇಶದ ರಾಯಬರೇಲಿಯನ್ನು ಉಳಿಸಿಕೊಂಡು ವಯನಾಡನ್ನು ತೆರವುಗೊಳಿಸಿದ್ದರು.
ಪ್ರಿಯಾಂಕಾರ ರಂಗಪ್ರವೇಶವು ಕೇರಳದಲ್ಲಿ ಕಾಂಗ್ರೆಸ್ ಪಾಲಿಗೆ ಹೊಸ ಅಧ್ಯಾಯವಾಗಲಿದೆ.
ಜೂ.17ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಪಕ್ಷದ ಉನ್ನತ ನಾಯಕರ ಸಭೆಯ ಬಳಿಕ ವಯನಾಡಿನಲ್ಲಿ ಪ್ರಿಯಾಂಕಾರನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಲಾಗಿತ್ತು.
1999ರಿಂದಲೂ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕಾ ಆರಂಭದಲ್ಲಿ ಅಮೇಠಿಯಲ್ಲಿ ತನ್ನ ತಾಯಿ ಸೋನಿಯಾ ಗಾಂಧಿಯವರ ಪರ ಪ್ರಚಾರ ಮಾಡಿದ್ದರು. ರಾಜಕೀಯದಲ್ಲಿ ತನ್ನ ಸುದೀರ್ಘ ಉಪಸ್ಥಿತಿಯ ಹೊರತಾಗಿಯೂ ಪ್ರಿಯಾಂಕಾ ಎಂದೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಬಿಜೆಪಿಯ ಸ್ಮತಿ ಇರಾನಿಯವರಿಂದಾಗಿ ತನ್ನ ಭದ್ರಕೋಟೆ ಅಮೇಠಿಯನ್ನು ಕಳೆದುಕೊಂಡ ಬಳಿಕ 2019ರಲ್ಲಿ ವಯನಾಡ ಕ್ಷೇತ್ರದಿಂದ ಗೆದ್ದಿದ್ದ ರಾಹುಲ್ ಗಾಂಧಿ ಅದರೊಂದಿಗೆ ಗಾಢ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಮೂಲಕ ಅದನ್ನು ಗಾಂಧಿ ಕುಟುಂಬಕ್ಕೆ ಪ್ರಮುಖ ಕ್ಷೇತ್ರವನ್ನಾಗಿಸಿದ್ದಾರೆ.