ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಕ್ಕೆ ಎಸೆಯುತ್ತೇವೆ: ಸುವೇಂದು

PC:PTI
ಕೊಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಕ್ಕೆ ಎಸೆಯುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಈ ಹೇಳಿಕೆಯ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು ವ್ಯಾಪಕ ಪ್ರತಿಭಟನೆ ನಡೆಸಿದರು. ಇದನ್ನು ದ್ವೇಷಭಾಷಣ ಎಂದು ಬಣ್ಣಿಸಿದ ಅವರು, ಬಿಜೆಪಿಯ ಹಲ್ದಿಯಾ ಶಾಸಕ ತಪಸಿ ಮಂಡಲ್ ಬಂಡಾಯ ಎದ್ದ ಬಳಿಕ ಸುವೇಂದು ಅಧಿಕಾರಿಯವರ ಮಾನಸಿಕ ಸ್ಥಿರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಫೆಬ್ರವರಿ 17ರಿಂದ ಬಜೆಟ್ ಅಧಿವೇಶನದ ಕೊನೆಯವರೆಗೂ ಸದನದಿಂದ ಅಮಾನತಗೊಂಡಿರುವ ಸುವೇಂದು ಅಧಿಕಾರಿ, ಮಮತಾ ಸರ್ಕಾರವನ್ನು ಕೋಮು ಆಡಳಿತ ಎಂದು ಬಣ್ಣಿಸಿ, ಮುಸ್ಲಿಂ ಲೀಗ್ ನ ಎರಡನೇ ಅವತಾರದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಹರಿಹಾಯ್ದಿದ್ದರು.
ಈ ಬಾರಿ ಬಂಗಾಳದ ಜನತೆ ಈ ಸರ್ಕಾರವನ್ನು ಕಿತ್ತೊಗೆಯುತ್ತದೆ ಎಂದು ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದರು.
ಸುವೇಂದು ಹೇಳಿಕೆ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.