ಪಶ್ಚಿಮ ಬಂಗಾಳ ಗ್ರಾಮೀಣ ಚುನಾವಣೆ; ವಿಜಯೋತ್ಸವ ಆಚರಿಸುತ್ತಿರುವ ತೃಣಮೂಲ ಕಾಂಗ್ರೆಸ್
Photo: PTI
ಕೊಲ್ಕತ್ತಾ: ವ್ಯಾಪಕ ಹಿಂಸಾಚಾರದ ನಡುವೆ ಪಶ್ಚಿಮ ಬಂಗಾಳದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ರಾಜ್ಯದ ಆಡಳಿತಾರೂಢ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ವಿಜಯೋತ್ಸವ ಆಚರಿಸುತ್ತಿದ್ದು, ಹಸಿರು ಗುಲಾಲ್ ಗಳನ್ನು ಎರಚಿ, ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ.
"ಗ್ರಾಮೀಣ ಬಂಗಾಳದಲ್ಲಿ ಟಿಎಂಸಿ ನಿಚ್ಚಳ ಮುನ್ನಡೆ ಗಳಿಸಿದೆ. ಜನರ ಪ್ರೀತಿ, ಒಲವು ಹಾಗೂ ಟಿಎಂಸಿಗೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ರಾಜ್ಯದ ಜನರ ಹೃದಯಲ್ಲಿ ಇರುವುದು ಕೇವಲ ಟಿಎಂಸಿ ಎನ್ನುವುದು ಈ ಚುನಾವಣೆಯಿಂದ ಸ್ಪಷ್ಟವಾಗಿದೆ" ಎಂದು ಮಮತಾ ಬ್ಯಾನರ್ಜಿ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಮೂರು ಸ್ತರದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಒಟ್ಟು 74 ಸಾವಿರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 63229 ಗ್ರಾಮಪಂಚಾಯ್ತಿ, 9730 ಪಂಚಾಯ್ತಿ ಸಮಿತಿ ಹಾಗೂ 928 ಜಿಲ್ಲಾ ಪರಿಷತ್ ಸ್ಥಾನಗಳು ಸೇರಿವೆ. ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ ತೃಣಮೂಲ ಕಾಂಗ್ರೆಸ್ 23198 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 5756, ಸಿಪಿಐಎಂ 2048 ಹಾಗೂ ಕಾಂಗ್ರೆಸ್ 1439 ಸ್ಥಾನಗಳಲ್ಲಿ ಮುಂದಿವೆ.
ಹೊಸದಾಗಿ ರಂಗಕ್ಕೆ ಇಳಿದಿರುವ ಐಎಸ್ಎಫ್ 1721 ಸ್ಥಾನಗಳಲ್ಲಿ ಮುಂದಿದ್ದರೆ, ತೃಣಮೂಲ ಕಾಂಗ್ರೆಸ್ನ ಬಂಡುಕೋರ ಅಭ್ಯರ್ಥಿಗಳು ಸೇರಿದಂತೆ 718 ಮಂದಿ ಪಕ್ಷೇತರರು ಜಯ ಸಾಧಿಸಿದ್ದ, 216 ಕ್ಷೇತ್ರಗಳಲ್ಲಿ ಮುಂದಿದ್ದಾರೆ.
ಮತ ಎಣಿಕೆ ಕೇಂದ್ರಗಳಿಗೆ ವಿರೋಧ ಪಕ್ಷಗಳ ಏಜೆಂಟರನ್ನು ತಡೆಯುವ ಮೂಲಕ ಟಿಎಂಸಿ ಗೂಂಡಾಗಳು ಮತಗಳ ಲೂಟಿಗೆ ಇಳಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.