ವೆಸ್ಟ್ಇಂಡೀಸ್ ವಿಕೆಟ್ ಕೀಪರ್-ಬ್ಯಾಟರ್ ಶೇನ್ ಡೌರಿಚ್ ನಿವೃತ್ತಿ

ಶೇನ್ ಡೌರಿಚ್ | Photo: X
ಬಾರ್ಬಡೋಸ್: ವೆಸ್ಟ್ಇಂಡೀಸ್ ನ ವಿಕೆಟ್ ಕೀಪರ್-ಬ್ಯಾಟರ್ ಶೇನ್ ಡೌರಿಚ್ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದು, ಇಂಗ್ಲೆಂಡ್ ವಿರುದ್ಧ ಏಕದಿನ ಅಂತರ್ರಾಷ್ಟ್ರೀಯ ಸರಣಿಯ ತಂಡದಿಂದ ಹಿಂದೆ ಸರಿದಿದ್ದಾರೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ(ಸಿಡಬ್ಲ್ಯುಐ)ಗುರುವಾರ ತಿಳಿಸಿದೆ.
ಡೌರಿಚ್ ಅವರು ಮೂರು ವರ್ಷಗಳ ಬಿಡುವಿನ ನಂತರ ಈ ತಿಂಗಳು ವೆಸ್ಟ್ಇಂಡೀಸ್ ತಂಡಕ್ಕೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು. ಡೌರಿಚ್ ಏಕೈಕ ಏಕದಿನ ಪಂದ್ಯವನ್ನಾಡಿ ನಾಲ್ಕು ವರ್ಷಗಳೇ ಕಳೆದಿವೆ.
32ರ ಹರೆಯದ ಡೌರಿಚ್ ವಿಂಡೀಸ್ ಪರ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1,570 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ 2018ರಲ್ಲಿ ಗಳಿಸಿರುವ 125 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ವಿಕೆಟ್ ಕೀಪರ್ ಆಗಿ 85 ಕ್ಯಾಚ್ ಗಳನ್ನು ಪಡೆದಿದ್ದು, ಐದು ಸ್ಟಂಪಿಂಗ್ ಮಾಡಿದ್ದಾರೆ.
ಶೇನ್ ವೆಸ್ಟ್ಇಂಡೀಸ್ ಗಾಗಿ ಆಡುವಾಗ ನೀಡಿರುವ ಕೊಡುಗೆಗಾಗಿ ಧನ್ಯವಾದ ಸಲ್ಲಿಸು ಬಯಸುತ್ತೇವೆ. ಅವರೊಬ್ಬ ಶಿಸ್ತುಬದ್ಧ, ಕಠಿಣ ಪರಿಶ್ರಮದ ಕ್ರಿಕೆಟಿಗರು. ಅವರು ವಿಕೆಟ್ ಕೀಪರ್ ಆಗಿ ಉತ್ತಮ ನಿರ್ವಹಣೆ ತೋರಿದ್ದರು ಎಂದು ಸಿಡಬ್ಲ್ಯುಐನ ಕ್ರಿಕೆಟ್ ನಿರ್ದೇಶಕ ಮೈಲ್ಸ್ ಬಾಸ್ಕೋಂಬೆ ಹೇಳಿದ್ದಾರೆ.