ಅವರು ಮೊದಲಿಂದ ಕೊನೆಯವರೆಗೆ ಮಾಡಿದ್ದು ‘ಮಂಗನಾಟ’: ಮೊಯಿತ್ರಾ
ಇದು ‘ಕಾಂಗರೂ ನ್ಯಾಯಾಲಯ’ ಎಂದ ಸಂಸದೆ
ಮಹುವಾ ಮೊಯಿತ್ರಾ Photo- PTI
ಹೊಸದಿಲ್ಲಿ: ಲೋಕಸಭೆಯ ನೈತಿಕ ಸಮಿತಿಯನ್ನು ಶುಕ್ರವಾರ ಮತ್ತೆ ತರಾಟೆಗೆ ತೆಗೆದುಕೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಅದು ‘ಕಾಂಗರೂ ನ್ಯಾಯಾಲಯ’ (ಕಾನೂನಿಗೆ ಅನುಸಾರವಾಗಿ ನಡೆಯದೆ, ಸ್ವೇಚ್ಛಾಚಾರದಿಂದ ನಡೆಯುವ ನ್ಯಾಯಾಲಯ) ಎಂದು ಬಣ್ಣಿಸಿದ್ದಾರೆ. ‘‘ಸಂಸತ್ನಲ್ಲಿ ಪ್ರಶ್ನೆ ಕೇಳಲು ಹಣ ಪಡೆಯಲಾಗಿದೆ’’ ಎಂದು ಆರೋಪಿಸುವ ಪ್ರಕರಣದಲ್ಲಿ, ಅದು ಆರಂಭದಿಂದ ಕೊನೆಯವರೆಗೂ ಮಂಗನಾಟವಾಡಿದೆ’’ ಎಂದು ಅವರು ಹೇಳಿದ್ದಾರೆ.
‘‘ನೈತಿಕ ಸಮಿತಿಯು ಮೊದಲು ನನ್ನನ್ನು ಉಚ್ಚಾಟಿಸಬೇಕು ಹಾಗೂ ಬಳಿಕ ಪುರಾವೆ ಹುಡುಕುವಂತೆ ಸಿಬಿಐಗೆ ಸೂಚಿಸುವಂತೆ ಕೇಂದ್ರ ಸರಕಾರವನ್ನು ಕೋರಬೇಕು’’ ಎಂದು ಅವರು ‘x’ನಲ್ಲಿ ಬರೆದಿದ್ದಾರೆ.
‘‘ನೈತಿಕ ಸಮಿತಿಯಿಂದ ಅನೈತಿಕವಾಗಿ ಉಚ್ಚಾಟಿಸಲ್ಪಟ್ಟ ಮೊದಲ ವ್ಯಕ್ತಿಯಾಗಿ ಸಂಸದೀಯ ಇತಿಹಾಸಕ್ಕೆ ಸೇರ್ಪಡೆಗೊಳ್ಳಲು ನನಗೆ ಹೆಮ್ಮೆಯಾಗಿದೆ. ಅವರಿಗೆ ನನ್ನನ್ನು ಉಚ್ಚಾಟಿಸುವ ಅಧಿಕಾರವಿಲ್ಲ. ಮೊದಲು ಉಚ್ಚಾಟಿಸಿ, ಆಮೇಲೆ ಪುರಾವೆ ಹುಡುಕಲು ಸಿಬಿಐಗೆ ಸೂಚಿಸುವಂತೆ ಸರಕಾರಕ್ಕೆ ಹೇಳಿ. ಇದು ಕಾಂಗರೂ ನ್ಯಾಯಾಲಯ. ಅಲ್ಲಿ ನಡೆದಿರುವುದು ಮೊದಲಿನಿಂದ ಕೊನೆಯವರೆಗೂ ಮಂಗನಾಟ’’ ಎಂದು ಅವರು ಬರೆದಿದ್ದಾರೆ.
ಲೋಕಸಭೆಯಿಂದ ಮೊಯಿತ್ರಾರನ್ನು ವಜಾಗೊಳಿಸುವಂತೆ ನೈತಿಕ ಸಮಿತಿಯು ಶಿಫಾರಸು ಮಾಡಿದ ಒಂದು ದಿನದ ಬಳಿಕ ಅವರು ಈ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ, ಸಮಿತಿಯ ಶಿಫಾರಸಿನ ಬಳಿಕ ‘ಇಂಡಿಯಾ ಟುಡೆ’ ಟಿವಿಗೆ ನೀಡಿದ ಸಂದರ್ಶನದಲ್ಲಿ, ಲೋಕಸಭೆಯಿಂದ ಉಚ್ಚಾಟಿಸುವ ಬೆದರಿಕೆಯು ನನ್ನ ಪಾಲಿಗೆ ‘‘ಗೌರವದ ಪದಕ’’ವಾಗಿದೆ ಎಂದು ಹೇಳಿದರು. ‘‘ನೈತಿಕ ಸಮಿತಿಗೆ ವಜಾಗೊಳಿಸುವ ಅಧಿಕಾರವೇ ಇಲ್ಲ. ಹೆಚ್ಚೆಂದರೆ ಅವರು ನನ್ನನ್ನು ಅಮಾನತುಗೊಳಿಸಬಹುದು. ವಜಾಗೊಳಿಸಲು ಶಿಫಾರಸು ಮಾಡುವ ಅಧಿಕಾರ ಇರುವುದು ಹಕ್ಕುಬಾಧ್ಯತೆ ಸಮಿತಿಗೆ ಮಾತ್ರ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.