ಕೇರಳ ಮೂಲದ ರಿನ್ಸನ್ ಜೋಸ್ ಗೂ ಪೇಜರ್ ಸ್ಫೋಟಕ್ಕೂ ಏನು ಸಂಬಂಧ?
ರಿನ್ಸನ್ ಜೋಸ್ PC: x.com/sam6
ಲೆಬನಾನ್: ಹಿಝ್ಬುಲ್ಲಾ ಕಾರ್ಯಕರ್ತರನ್ನು ಗುರಿ ಮಾಡಿ ನಡೆದ ಪೇಜರ್ ಸ್ಫೋಟಕ್ಕೂ ಸೊಫಿಯಾ ಮೂಲದ ಬಲ್ಗೇರಿಯನ್ ಕಂಪನಿ ನೋರ್ತಾ ಗ್ಲೋಬಲ್ ಲಿಮಿಟೆಡ್ ಗೂ ಸಂಬಂಧವಿದೆ ಎಂಬ ಅಂಶ ತನಿಖೆಯಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇರಳದ ವಯನಾಡ್ ನಿಂದ ವಲಸೆ ಬಂದು ನಾರ್ವೆ ಪೌರತ್ವ ಪಡೆದಿರುವ 37 ವರ್ಷ ವಯಸ್ಸಿನ ರಿನ್ಸನ್ ಜೋಸ್ ತನಿಖೆಯ ಕೇಂದ್ರಬಿಂದುವಾಗಿದ್ದಾನೆ.
ಲೆಬನಾನ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಬಲ್ಗೇರಿಯಾದಲ್ಲಿ ನೋಂದಣಿಯಾದ ಕಂಪನಿಯೊಂದರ ಪಾತ್ರದ ಬಗ್ಗೆ ರಕ್ಷನಾ ಸಚಿವಾಲಯದ ಜತೆ ಸೇರಿ ತನಿಖೆ ನಡೆಸಲಾಗುತ್ತಿದೆ ಎಂದು ಬಲ್ಗೇರಿಯನ್ ಭದ್ರತಾ ಏಜೆನ್ಸಿ ಡಿಎಎನ್ಎಸ್ ಗುರುವಾರ ಪ್ರಕಟಿಸಿದೆ ಎಂದು ದ ಕ್ರೆಡೆಲ್.ಕೋ ವರದಿ ಮಾಡಿದೆ.
ನಾರ್ವೆಯಲ್ಲಿ 2022ರಲ್ಲಿ ನೋಂದಣಿಯಾಗಿರುವ ನೋರ್ತಾ ಗ್ಲೋಬಲ್ ಲಿಮಿಟೆಡ್ ನ ಏಕೈಕ ಮಾಲೀಕ ರಿನ್ಸನ್ ಜೋಸ್ ಎನ್ನುವುದು ದೃಢಪಟ್ಟಿದೆ ಎಂದು ಸಿಬಿಎಸ್ ನ್ಯೂಸ್ ಹೇಳಿದೆ.
ಉದ್ಯೋಗ ಸಲಹಾ ಸಂಸ್ಥೆ ನಡೆಸುತ್ತಿದ್ದ ರಿನ್ಸನ್, ನಾರ್ವೆಯಲ್ಲಿರುವ ಮಲಯಾಳಿ ಸಮುದಾಯದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದ. ಹಬ್ಬಗಳ ಆಚರಣೆ ಮತ್ತು ಫುಟ್ಬಾಲ್ ಕ್ಲಬ್ ಗಳನ್ನು ಕೂಡಾ ನಿರ್ವಹಿಸುತ್ತಿದ್ದ. 2022ರ ಮಾರ್ಚ್ ನಿಂದ ಈತ ಡಿಎನ್ ಮೀಡಿಯಾ ಗ್ರೂಪ್ ಜತೆ ಕಾರ್ಯನಿರ್ವಹಿಸುತ್ತಿದ್ದ. ಜತೆಗೆ ನಾರ್ತಾಲಿಂಕ್ ಎಂಬ ಐಟಿ ಸೇವೆ, ಸಲಹೆ, ಖರೀದಿ ಮತ್ತು ನೇಮಕಾತಿ ಕಂಪನಿಯನ್ನು ಕೂಡಾ ನಿರ್ವಹಿಸುತ್ತಿದ್ದ ಅಂಶ ಈತನ ಲಿಂಕ್ಡ್ಇನ್ ಪ್ರೊಫೈಲ್ ನಿಂದ ತಿಳಿದು ಬರುತ್ತದೆ. ಪುದುಚೇರಿ ವಿವಿಯಿಂದ ಎಂಬಿಎ ಪದವಿ ಪಡೆದ ಈತ ಆ ಬಳಿಕ ಅಂತರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿ ವಿಷಯದಲ್ಲಿ ಓಸ್ಲೊ ಮೆಟ್ರೊಪಾಲಿಟನ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದ. ಪೂರ್ ಸರ್ವೆಂಟ್ಸ್ ಆಫ್ ಡಿವೈನ್ ಪ್ರಾವಿಡೆನ್ಸ್ ನಲ್ಲಿ ಶಿಕ್ಷಕನಾಗಿಯೂ ಸೇವೆ ಸ್ಲಿಸಿದ್ದ. ನೋರ್ತಾ ಗ್ಲೋಬಲ್ ಲಿಮಿಟೆಡ್ ಎನ್ನುವುದು ನಾರ್ತಾಲಿಂಕ್ ನ ಶೆಲ್ ಕಂಪನಿ ಎಂದು ಹೇಳಲಾಗಿದ್ದು, ಸದ್ಯಕ್ಕೆ ಈತ ಅಮೆರಿಕದಲ್ಲಿದ್ದಾನೆ ಎಂದು ತಿಳಿದು ಬಂದಿದೆ.