ಜಗತ್ತಿನಾದ್ಯಂತ ವಾಟ್ಸಾಪ್ ಸರ್ವರ್ ಡೌನ್; ಬಳಕೆದಾರರ ಪರದಾಟ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಮೆಟಾ ಒಡೆತನದ ಜನಪ್ರಿಯ ಮೆಸೇಜ್ ಅಪ್ಲಿಕೇಶನ್ ವಾಟ್ಸಾಪ್ ಶನಿವಾರ ತಾಂತ್ರಿಕ ಸಮಸ್ಯೆಗೆ ತುತ್ತಾಗಿದೆ. ಸಂದೇಶ ಕಳುಹಿಸಲು, ಸ್ಟೇಟಸ್ ಅಪ್ ಲೋಡ್ ಮಾಡಲು ತೀವ್ರ ತೊಂದರೆಯಾಗಿದೆ. ಸ್ವಯಂಚಾಲಿತವಾಗಿ ಕರೆಗಳು ಹೋಗುತ್ತಿವೆ ಎಂದು ಬಳಕೆದಾರರು ದೂರಿದ್ದಾರೆ.
ಕೆಲವು ಬಳಕೆದಾರರು ಸ್ಟೇಟಸ್ ಗಳನ್ನು ವಾಟ್ಸಾಪ್ ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ. ಗ್ರೂಪ್ಗಳಿಗೆ ಮೆಸೇಜ್ ಮಾಡುವಾಗಲೂ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ವಾಟ್ಸಾಪ್ ಡೌನ್ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಈ ಅಡಚಣೆಯಿಂದಾಗಿ ಬಳಕೆದಾರರು ತೊಂದರೆಗೊಳಗಾಗಿದ್ದು, ಜನರು ಸಂಪರ್ಕ ಹೊಂದಲು ಪರದಾಡುತ್ತಿರುವುದರಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಕುರಿತು ವ್ಯಾಪಕ ದೂರುಗಳು ದಾಖಲಾಗಿವೆ. ಬಳಕೆದಾರರು ಎಕ್ಸ್ ನಲ್ಲಿ #Whatsappdown ಹ್ಯಾಶ್ ಟ್ಯಾಗ್ ಬಳಸಿ, ಸರ್ವರ್ ಸಮಸ್ಯೆಯ ಕುರಿತು ಬೆಳಕು ಚೆಲ್ಲಿದ್ದಾರೆ. ಆ ಮೂಲಕ ವಾಟ್ಸ್ ಆ್ಯಪ್ ಸೇವೆಯಲ್ಲಿನ ತೊಡಕಿನ ಕುರಿತು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ತನ್ನ ವೇದಿಕೆಯಲ್ಲಿ ಬಳಕೆದಾರರು ಒದಗಿಸುವ ಸಮಸ್ಯೆಗಳ ಮಾಹಿತಿ ಸೇರಿದಂತೆ, ವಿವಿಧ ಮೂಲಗಳಿಂದ ವಸ್ತುಸ್ಥಿತಿ ಮಾಹಿತಿಯನ್ನು ಸಂಗ್ರಹಿಸುವ DownDetector ಪ್ರಕಾರ, ಈ ಸಂಬಂಧ, ಶನಿವಾರ ಸಂಜೆ 5.17ರವರೆಗೆ ಕನಿಷ್ಠ ಪಕ್ಷ 521 ದೂರುಗಳು ದಾಖಲಾಗಿವೆ. ಈ ಪೈಕಿ ಶೇ. 85ರಷ್ಟು ದೂರುಗಳು ಸಂದೇಶ ರವಾನೆಯಲ್ಲಿನ ಅಡಚಣೆ ಕುರಿತು ಕಳವಳ ವ್ಯಕ್ತಪಡಿಸಿದ್ದರೆ, ಶೇ. 12ರಷ್ಟು ಮಂದಿ ಆ್ಯಪ್ ಸಮಸ್ಯೆಗಳು ಹಾಗೂ ಶೇ. 3ರಷ್ಟು ಮಂದಿ ಲಾಗಿನ್ ಸಮಸ್ಯೆಗಳ ಕುರಿತು ವರದಿ ಮಾಡಿದ್ದಾರೆ.
►#WhatsAppDown ಟ್ರೆಂಡಿಂಗ್
ಈ ಸೇವಾ ವ್ಯತ್ಯಯದ ಸಂದರ್ಭದಲ್ಲಿ ಹಲವಾರು ಬಳಕೆದಾರರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೈಕಿ ಓರ್ವ ಬಳಕೆದಾರರು, “ನೀವು ನಿಮ್ಮ ಫೋನ್ ಅನ್ನು ಮರುಚಾಲನೆಗೊಳಿಸುವುದನ್ನು ತಡೆಯಿರಿ. ಕೇವಲ ವಾಟ್ಸ್ ಆ್ಯಪ್ ಮಾತ್ರ ನಿಧಾನವಾಗಿಲ್ಲ, ಬದಲಿಗೆ, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಕೂಡಾ ನಿಧಾನವಾಗಿವೆ” ಎಂದು ಸಲಹೆ ನೀಡಿದ್ದಾರೆ.