ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಯಾವಾಗ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ಹೊಸದಿಲ್ಲಿ: ಜಮ್ಮು-ಕಾಶ್ಮೀರವನ್ನು ನಿಗದಿತ ಅವಧಿಗಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಗಿತ್ತು, ಬಹುಶಃ ಭದ್ರತಾ ಕಾರಣಗಳಿಂದ ಇರಬಹುದು ಎಂದು ಮಂಗಳವಾರ ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸರಕಾರಕ್ಕೆ ವಾದಿಸಲು ಮಾರ್ಗವೊಂದನ್ನು ಒದಗಿಸಿದರಾದರೂ, ಅದು ಎಂದು ಪೂರ್ಣ ಪ್ರಮಾಣದ ರಾಜ್ಯವಾಗಿ ಮರುಸ್ಥಾಪನೆಗೊಳ್ಳಲಿದೆ ಎನ್ನುವುದಕ್ಕೆ ಉತ್ತರಿಸುವಂತೆ ಕೇಂದ್ರದ ಮೇಲೆ ಒತ್ತು ಹೇರಿದರು.
ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಶಾಶ್ವತವಲ್ಲ ಎಂದು ಭೋಜನ ಅವಧಿಯ ನಂತರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,‘ಆ.31ರಂದು ಜಮ್ಮು-ಕಾಶ್ಮೀರ ಕುರಿತು ಸಕಾರಾತ್ಮಕ ಹೇಳಿಕೆಯನ್ನು ನಾವು ನೀಡುತ್ತೇವೆ. ಆದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿಯಲಿದೆ ’ ಎಂದು ಹೇಳಿದರು. 2023 ಸೆಪ್ಟೆಂಬರ್ ವೇಳೆಗೆ ಲಡಾಖ್ನಲ್ಲಿ ಚುನಾವಣೆಗಳು ಪೂರ್ಣಗೊಳ್ಳಲಿವೆ ಎಂದರು. ಇದಕ್ಕೂ ಮುನ್ನ ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿಗಳು,ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆಗೆ ಕಾಲಮಿತಿಯ ಕುರಿತು ಕೇಂದ್ರದಿಂದ ಸಲಹೆಗಳನ್ನು ಪಡೆಯುವಂತೆ ಸಾಲಿಸಿಟರ್ ಜನರಲ್ ಮತ್ತು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಸೂಚಿಸಿದ್ದರು.
‘ನಾವು ನಿಮ್ಮನ್ನು ಬದ್ಧವಾಗಿಸಲು ಬಯಸುವುದಿಲ್ಲ. ರಾಷ್ಟ್ರೀಯ ಭದ್ರತೆಯ ವಿಷಯಗಳು ಒಳಗೊಂಡಿವೆ ಎನ್ನುವುದು ನಮಗೆ ತಿಳಿದಿದೆ. ದೇಶದ ಸಂರಕ್ಷಣೆಯು ಪ್ರಮುಖ ಕಾಳಜಿಯಾಗಿದೆ ಎನ್ನುವುದು ನಮಗೆ ಗೊತ್ತು. ಹೀಗಾಗಿ ನೀವು(ಸಾಲಿಸಿಟರ್ ಜನರಲ್) ಅಥವಾ ಅಟಾರ್ನಿ ಜನರಲ್ ನಿಮ್ಮನ್ನು ಬದ್ಧವಾಗಿಸಿಕೊಳ್ಳದೆ ಕಾಲಮಿತಿಯೇನಾದರೂ ಇದೆಯೇ ಎಂಬ ಬಗ್ಗೆ ಸೂಚನೆಗಳನ್ನು ಪಡೆದುಕೊಳ್ಳುವುದು ಸಾಧ್ಯವೇ? ಜಮ್ಮು-ಕಾಶ್ಮೀರವು ಶಾಶ್ವತವಾಗಿ ಕೇಂದ್ರಾಡಳಿತ ಪ್ರದೇಶವಲ್ಲ ಮತ್ತು ಒಂದು ಕಾಲಮಿತಿಯೊಳಗೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ ಪ್ರಕ್ರಿಯೆ ನಡೆಯುತ್ತದೆ ಎಂದು ಸರಕಾರವು ನಮ್ಮ ಮುಂದೆ ಹೇಳಿಕೆಯನ್ನು ನೀಡಬೇಕಿದೆ ’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಕೇಂದ್ರಕ್ಕೆ ತಿಳಿಸಿದ್ದರು.
ಪ್ರಜಾಪ್ರಭುತ್ವದ ಮರುಸ್ಥಾಪನೆಯು ನಮ್ಮ ದೇಶಕ್ಕೆ ಒಂದು ಪ್ರಮುಖ ಅಂಶವಾಗಿದೆ ಎಂದೂ ಅವರು ನೆನಪಿಸಿದ್ದರು.
ಅಸ್ತಿತ್ವದಲ್ಲಿರುವ ಮತ್ತು ಕ್ರಿಯಾತ್ಮಕ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲು ಸಂಸತ್ತಿಗೆ ಅಧಿಕಾರವಿದೆಯೇ ಎಂಬ ಕುರಿತು ಸಂವಿಧಾನ ಪೀಠದಿಂದ ಪ್ರಶ್ನೆಗಳ ಸುರಿಮಳೆಯ ನಡುವೆಯೇ ಮುಖ್ಯ ನ್ಯಾಯಮೂರ್ತಿಗಳು ಕೇಂದ್ರಕ್ಕೆ ‘ರಾಷ್ಟ್ರೀಯ ಭದ್ರತೆ’ಯ ಮಾರ್ಗವನ್ನು ಒದಗಿಸಿದ್ದಾರೆ.