ಅಕ್ಕಿ ರಫ್ತಿನ ಮೇಲೆ ಭಾರತ ನಿಷೇಧ ಹೇರಿದ್ದು ಏಕೆ? ಇದು ಜಾಗತಿಕವಾಗಿ ಪರಿಣಾಮ ಬೀರಿದ್ದು ಹೇಗೆ?
ಅಮೆರಿಕದಲ್ಲಿ ಅಕ್ಕಿಗಾಗಿ ಹಾಹಾಕಾರ, ದಿಢೀರ್ ಬೆಲೆ ಏರಿಕೆಯಿಂದ ಅನಿವಾಸಿ ಭಾರತೀಯರು ಹೈರಾಣು
Photo: screengrab : @sirajnoorani | twitter
ಹೊಸದಿಲ್ಲಿ: ಭಾರತದ ರಫ್ತು ನೀತಿಯಲ್ಲಿ ಬದಲಾವಣೆ ಮತ್ತು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧವು ಅಮೆರಿಕ ಮತ್ತು ಇತರ ದೇಶಗಳಲ್ಲಿ ಹಾಹಾಕಾರವನ್ನು ಸೃಷ್ಟಿಸಿದೆ. ಅಕ್ಕಿಯ ಅಭಾವ ತಲೆದೋರುವ ಭೀತಿಯಿಂದ ಅನಿವಾಸಿ ಭಾರತೀಯರೇ ಹೆಚ್ಚಿರುವ ಜನರು ಅಮೆರಿಕದಲ್ಲಿಯ ದಿನಸಿ ಅಂಗಡಿಗಳಿಗೆ ಮುಗಿಬಿದ್ದು ಭಾರೀ ಪ್ರಮಾಣದಲ್ಲಿ ಅಕ್ಕಿಯನ್ನು ಖರೀದಿಸುತ್ತಿರುವುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಕ್ಕಿಯ ಬೆಲೆಗಳೂ ದುಪ್ಪಟ್ಟಿಗಿಂತ ಹೆಚ್ಚಾಗಿದ್ದು, ಕೆಲವು ಮಳಿಗೆಗಳಲ್ಲಿ ಗ್ರಾಹಕರು ಖರೀದಿಸಬಹುದಾದ ಅಕ್ಕಿಯ ಪ್ರಮಾಣದ ಮೇಲೆ ನಿರ್ಬಂಧವನ್ನು ಹೇರಲಾಗಿದೆ.
ಭಾರತೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಅಕ್ಕಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಬೆಲೆಗೆ ಕಡಿವಾಣ ಹಾಕಲು ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿ ಗುರುವಾರ ಆದೇಶವನ್ನು ಹೊರಡಿಸಿದೆ. ಒಟ್ಟು ಅಕ್ಕಿ ರಫ್ತಿನಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯ ಪಾಲು ಶೇ.25ರಷ್ಟಿದ್ದು,ಈ ನಿಷೇಧವು ದೇಶದಲ್ಲಿಯ ಗ್ರಾಹಕರಿಗೆ ಖರೀದಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ ಎಂದು ಅದು ಹೇಳಿದೆ.
ಅಕ್ಕಿಯ ಚಿಲ್ಲರೆ ಮಾರಾಟ ಬೆಲೆಗಳು ಕಳೆದೊಂದು ವರ್ಷದಲ್ಲಿ ಶೇ.11.5ರಷ್ಟು ಮತ್ತು ಕಳೆದ ತಿಂಗಳಲ್ಲಿ ಶೇ.3ರಷ್ಟು ಏರಿಕೆಯಾಗಿವೆ. ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ಶೇ.20ರಷ್ಟು ರಫ್ತು ಸುಂಕದೊಂದಿಗೆ ವಿದೇಶಗಳಿಗೆ ರವಾನಿಸಲಾಗುತ್ತಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ದೇಶದಲ್ಲಿ ಅಕ್ಕಿಯ ಉತ್ಪಾದನೆಗೆ ಭಾರೀ ಹೊಡೆತ ಬಿದ್ದಿದೆ. ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತು ನಿಷೇಧದಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಗಳು ಇಳಿಯಲಿವೆ ಎಂದು ಸಚಿವಾಲಯವು ತಿಳಿಸಿದೆ.
ಬೆಲೆಗಳನ್ನು ತಗ್ಗಿಸಲು ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೆಪ್ಟಂಬರ್ 2022ರಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯ ಮೇಲೆ ಶೇ.20ರಷ್ಟು ರಫ್ತು ಸುಂಕವನ್ನು ಹೇರಲಾಗಿತ್ತು. ಆದರೆ 2021-22ರ ಸೆಪ್ಟಂಬರ್-ಮಾರ್ಚ್ ಅವಧಿಯಲ್ಲಿ 33.66 ಲ.ಮೆ.ಟನ್ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಾಗಿದ್ದರೆ,ಶೇ.20ರಷ್ಟು ಸುಂಕವನ್ನು ಹೇರಿದ ನಂತರವೂ 2022-23ರ ಇದೇ ಅವಧಿಯಲ್ಲಿ 42.12 ಲ.ಮೆ.ಟನ್ ಅಕ್ಕಿ ರಫ್ತಾಗಿದೆ. 2023-24ರ ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ ಸುಮಾರು 15.54 ಲ.ಮೆ.ಟನ್ ರಫ್ತಾಗಿದ್ದರೆ 2022-23ರ ಇದೇ ಅವಧಿಯಲ್ಲಿ ಕೇವಲ 11.55 ಲ.ಮೆ.ಟನ್ ರಫ್ತಾಗಿತ್ತು,ಅಂದರೆ ಶೇ.35ರಷ್ಟು ಏರಿಕೆಯಾಗಿದೆ.
ಬಾಸ್ಮತಿಯೇತರ ಬೇಯಿಸಿದ ಅಕ್ಕಿ ಅಥವಾ ಕುಚಲಕ್ಕಿ ಮತ್ತು ಬಾಸ್ಮತಿ ಅಕ್ಕಿ ರಫ್ತನ್ನು ಭಾರತವು ಮುಂದುವರಿಸಲಿದೆ.
ಸರಕಾರದ ಪ್ರಕಾರ ಮುಂಬರುವ ಹಬ್ಬಗಳ ಋತುವಿನಲ್ಲಿ ಸಾಕಷ್ಟು ದಾಸ್ತಾನು ಲಭ್ಯತೆ ಮತ್ತು ಬೆಲೆ ಇಳಿಕೆಯನ್ನು ಖಚಿತಪಡಿಸಿಕೊಳ್ಳಲು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಲಾಗಿದೆ. ರಾಜಸ್ಥಾನ,ಮಧ್ಯಪ್ರದೇಶ,ಛತ್ತೀಸ್ಗಡ ಮತ್ತು ತೆಲಂಗಾಣದಂತಹ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವುದು ಮತ್ತು 2024ರಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವುದು ಸಹ ಸರಕಾರದ ಈ ಕ್ರಮಕ್ಕೆ ಪ್ರೇರಣೆ ನೀಡಿದೆ ಎಂದು ಭಾವಿಸಲಾಗಿದೆ. ಅಲ್ಲದೆ ಇತ್ತೀಚಿನ ಭಾರೀ ಮಳೆಯಿಂದಾಗಿ,ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದ್ದು,ಇದೂ ಸರಕಾರದ ರಫ್ತು ನಿಷೇಧ ನಿರ್ಧಾರಕ್ಕೆ ತನ್ನ ಕೊಡುಗೆ ಸಲ್ಲಿಸಿದೆ ಎನ್ನಲಾಗಿದೆ.
ಭಾರತವು ಚೀನಾದ ನಂತರ ಅತ್ಯಂತ ದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಅಕ್ಕಿ ರಫ್ತಿನಲ್ಲಿ ಶೇ.40ಕ್ಕೂ ಅಧಿಕ ಪಾಲನ್ನು ಹೊಂದಿದೆ. ಸರಕಾರದ ಕ್ರಮ ಜಾಗತಿಕ ಮಾರುಕಟ್ಟೆಗಳಲ್ಲಿ ಅಕ್ಕಿಯ ದಿಢೀರ್ ಬೆಲೆ ಏರಿಕೆಗೆ ಕಾರಣವಾಗಿದೆ. ಚೀನಾದಲ್ಲಿಯೂ ಈ ವರ್ಷ ಪ್ರತಿಕೂಲ ಹವಾಮಾನದಿಂದಾಗಿ ಭತ್ತದ ಬೆಳೆಗೆ ಸಾಕಷ್ಟು ಹಾನಿಯುಂಟಾಗಿದೆ.
ಭಾರತದ ಅಕ್ಕಿಗೆ ಆಫ್ರಿಕಾದ ದೇಶಗಳು ಮುಖ್ಯ ಮಾರುಕಟ್ಟೆಗಳಾಗಿವೆ. ಹೀಗಾಗಿ ಭಾರತದ ನಿರ್ಧಾರವು ಆಫ್ರಿಕಾದ ಖರೀದಿದಾರರ ಮೇಲೆ ಅತ್ಯಂತ ಹೆಚ್ಚು ಪ್ರತಿಕೂಲ ಪರಿಣಾಮವನ್ನು ಬೀರಲಿದೆ.