ʼನಾನೇಕೆ ರಾತ್ರಿ ಪ್ರಧಾನಿ ಮೋದಿಯನ್ನು ಭೇಟಿಯಾಗಬೇಕು?ʼ
ಗುಲಾಂ ನಬಿ ಆಝಾದ್ ಅವರ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ತಿರುಗೇಟು
ಗುಲಾಂ ನಬಿ ಆಝಾದ್ , ಫಾರೂಕ್ ಅಬ್ದುಲ್ಲಾ | indiatoday.in
ಹೊಸದಿಲ್ಲಿ : ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಸಾರ್ವಜನಿಕರ ಕಣ್ತಪ್ಪಿಸಿ ರಾತ್ರಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದರು ಎಂಬ ಹಿರಿಯ ರಾಜಕಾರಣಿ ಗುಲಾಂ ನಬಿ ಆಝಾದ್ ಅವರ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, "ನಾನು ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಬೇಕಾದರೆ, ಹಗಲಿನಲ್ಲಿ ಭೇಟಿಯಾಗುತ್ತೇನೆ. ನಾನು ರಾತ್ರಿಯಲ್ಲಿ ಅವರನ್ನು ಏಕೆ ಭೇಟಿ ಮಾಡಬೇಕು? ಅವರು ಹಾಗೆ ಯೋಚಿಸಲು ಕಾರಣವೇನು? ಫಾರೂಕ್ ಅಬ್ದುಲ್ಲಾ ಅವರನ್ನು ಮಾನಹಾನಿ ಮಾಡುತ್ತಿದ್ದೀರಾ?” ಎಂದು ಪಶ್ನಿಸಿದರು.
“ಯಾರೂ ಅವರಿಗೆ ರಾಜ್ಯಸಭಾ ಸ್ಥಾನ ಕೊಡಲು ಬಯಸದಿದ್ದಾಗ ನಾನೇ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದ್ದೆ. ಆದರೆ ಇಂದು ಇದನ್ನೆಲ್ಲ ಹೇಳುತ್ತಿದ್ದಾರೆ .ಪ್ರಧಾನಿ, ಕೇಂದ್ರ ಗೃಹ ಸಚಿವರು ನಿವಾಸದಲ್ಲಿ ಕುಳಿತಿರುವ ತಮ್ಮ ಏಜೆಂಟರ ಹೆಸರು ಹೇಳಬೇಕು. ಸತ್ಯವನ್ನು ಜನರ ಮುಂದಿಡಬೇಕು ”ಎಂದು ಅವರು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಫಾರೂಕ್ ಅಬ್ದುಲ್ಲಾ ಮತ್ತು ಅವರ ಮಗ ಉಮರ್ 2014 ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆಝಾದ್ ಹೇಳಿಕೊಂಡಿದ್ದಾರೆ. ತಂದೆ-ಮಗ ಜೋಡಿ "ಡಬಲ್ ಗೇಮ್" ಆಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಫಾರೂಕ್ ಅಬ್ದುಲ್ಲಾ ಇಂಡಿಯಾ ಟುಡೆ ಟಿವಿಗೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ಫಾರೂಕ್ ಅಬ್ದುಲ್ಲಾ ಅವರು ಭವಿಷ್ಯದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಸೇರುವ ಸುಳಿವು ನೀಡಿದ್ದರು. ನಂತರ ಅದನ್ನು ಉಮರ್ ಅಬ್ದುಲ್ಲಾ ನಿರಾಕರಿಸಿದರು ಎಂದರು.
"ಸಂದರ್ಶನದಲಿ ಫಾರೂಕ್ ಹೇಳಿದ್ದು ಬಾಯಿ ತಪ್ಪಿ ಹೇಳಿದ ಮಾತಲ್ಲ. ಫಾರೂಕ್ ಮತ್ತು ಉಮರ್ ಸರಕಾರ ಮತ್ತು ಪ್ರತಿಪಕ್ಷಗಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಆಝಾದ್ ಹೇಳಿದರು.
ಸಂವಿಧಾನದ ವಿಧಿ 370 ರ ರದ್ದತಿಗೆ ಸ್ವಲ್ಪ ಮೊದಲು, ಆಗಸ್ಟ್ 3, 2019 ರಂದು ಅಬ್ದುಲ್ಲಾ ಮತ್ತು ಪ್ರಧಾನಿ ಮೋದಿ ನಡುವಿನ ಸಭೆಯನ್ನು ಆಝಾದ್ ಬೆಳಕಿಗೆ ತಂದರು. ಈ ನಿರ್ಧಾರದ ಬಗ್ಗೆ ಅಬ್ದುಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದಿಲ್ಲಿಯಲ್ಲಿ ವದಂತಿಗಳು ಹರಡಿವೆ ಎಂದು ಅವರು ಹೇಳಿದ್ದಾರೆ. ಕಣಿವೆಯ ನಾಯಕರನ್ನು ಗೃಹಬಂಧನದಲ್ಲಿ ಇರಿಸುವಂತೆಯೂ ಸೂಚಿಸಲಾಗಿತ್ತು ಎಂದರು.
ಉಮರ್ ಅಬ್ದುಲ್ಲಾ ಅವರೂ ಗುಲಾಂ ನಬಿ ಆಝಾದ್ ವಿರುದ್ಧ ವಾಗ್ದಾಳಿ ನಡೆಸಿದರು, "ವಾ ಭಾಯಿ, ವಾ ಗುಲಾಂ ನಬಿ ಆಝಾದ್ ಅವರೇ. ಇಂದು ನಿಮಗೆ ಬಹಳ ಸಿಟ್ಟು ಬಂದ ಹಾಗಿದೆ. 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಸಭಾ ಸ್ಥಾನಕ್ಕಾಗಿ ನಮಗೆ ಭಿಕ್ಷೆ ಬೇಡುತ್ತಿದ್ದ ಗುಲಾಂ ಎಲ್ಲಿದ್ದಾರೆ? 'ಅಬ್ದುಲ್ಲಾಗಳಿಗೆ ವಿಧಿ 370ರ ಬಗ್ಗೆ ಗೊತ್ತಿತ್ತು'. ಆದರೂ ನಮ್ಮನ್ನು ಪಿಎಸ್ಎ(ಪಬ್ಲಿಕ್ ಸೇಫ್ಟಿ ಆಕ್ಟ್) ಅಡಿಯಲ್ಲಿ 8 ತಿಂಗಳುಗಳಿಗಿಂತ ಹೆಚ್ಚು ಕಾಲ ಬಂಧಿಸಲಾಗಿತ್ತು. ನೀವು ಸ್ವತಂತ್ರರಾಗಿದ್ದಿರಿ, ಆಗಸ್ಟ್ 5 ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಏಕೈಕ ಮಾಜಿ ಸಿಎಂ ಬಂಧನ ಮುಕ್ತರಾಗಿದ್ದರು. 'ಅಬ್ದುಲ್ಲಾ ರಹಸ್ಯವಾಗಿ ಭೇಟಿಯಾಗುತ್ತಾರೆ' ಆದರೂ ನನ್ನ ತಂದೆ ಅವರು ಸಂಸತ್ ಸದಸ್ಯತ್ವ ಕಳೆದುಕೊಂಡಾಗ ಅವರ ಸರ್ಕಾರಿ ಮನೆಯಿಂದ ಹೊರಹಾಕಲ್ಪಟ್ಟವರು'. ಸಚಿವರಿಗೆ ನೀಡುವ ಬಂಗಲೆಯನ್ನು ಇರಿಸಿಕೊಳ್ಳಲು ನಿಮಗೆ ಇನ್ನೂ ಅನುಮತಿ ಇದೆಯೇ?'ಅಬ್ದುಲ್ಲಾಗಳು ಕಾಶ್ಮೀರದಲ್ಲಿ ಒಂದು ಮತ್ತು ದಿಲ್ಲಿಯಲ್ಲಿ ಇನ್ನೊಂದು ಮಾತು ಹೇಳುತ್ತಾರೆ' ಎನ್ನುತ್ತೀರಿ. ಆದರೆ ಪ್ರಧಾನಿ ರಾಜ್ಯಸಭೆಯಲ್ಲಿ ನಿಮಗಾಗಿ ಕಣ್ಣೀರಿಡುತಾರೆ ಮತ್ತು ಪ್ರತಿ ಭಾಷಣದಲ್ಲಿ ನಮ್ಮನ್ನು ಟೀಕಿಸುತ್ತಾರೆ ಎಂದರು.
“ಕಾಂಗ್ರೆಸ್ ತೊರೆದು ಚೆನಾಬ್ ಕಣಿವೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಒಪ್ಪಿದ್ದಕ್ಕೆ ನಿಮಗೆ ಪದ್ಮಶ್ರೀ ಸಿಕ್ಕಿತು ಎಂಬುದನ್ನು ನಾವು ಮರೆಯಬಾರದು. ಯಾರು ಆಝಾದ್ ಮತ್ತು ಯಾರು ಗುಲಾಮ್ ಎನ್ನುವುದನ್ನು ಸಮಯವೇ ಹೇಳುತ್ತದೆ. ಜನರೇ ನಿರ್ಧರಿಸುತ್ತಾರೆ” ಎಂದು ಅವರು ತಮ್ಮ X ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.