ಉತ್ತರಾಖಂಡ ವ್ಯಾಪಕ ಕಾಳ್ಗಿಚ್ಚು: ನಾಲ್ವರು ಸಜೀವ ದಹನ, ಜನಜೀವನ ಅಸ್ತವ್ಯಸ್ತ
Photo: X/thenewspeddlers
ಡೆಹ್ರಾಡೂನ್: ಉತ್ತರಾಖಂಡ ಅರಣ್ಯದ ವಿವಿಧೆಡೆಗಳಲ್ಲಿ ಕಾಳ್ಗಿಚ್ಚು ವ್ಯಾಪಕವಾಗುತ್ತಿದ್ದು, ಭಾನುವಾರ 28 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇದರಿಂದ ಕಳೆದ ಮೂರು ದಿನಗಳಲ್ಲಿ ಬೆಂಕಿಗೆ ಆಹುತಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.
ಕಳೆದ ತಿಂಗಳು ಸೇವೆ ಆರಂಭಿಸಿದ್ದ ಆದಿ ಕೈಲಾಶ್ ಹೆಲಿಕಾಪ್ಟರ್, ವ್ಯಾಪಕ ಕಾಳ್ಗಿಚ್ಚಿನ ಕಾರಣದಿಂದ ಸತತ ಎರಡನೇ ದಿನ ಕೂಡಾ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಕಾಳ್ಗಿಚ್ಚಿನ ಹೊಗೆಯಿಂದಾಗಿ ಪಿತೋರ್ ಗಢ ನೈನಿ-ಸೈನಿ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳ ಸೇವೆಯನ್ನು ಕೂಡಾ ರದ್ದುಪಡಿಸಲಾಗಿದೆ.
ಅಲ್ಮೋರಾ ಜಿಲ್ಲೆಯ ಪ್ರಮುಖ ದೇಗುಲವಾದ ದುನಾಗಿರಿ ದೇವಾಲಯದ ಓಣಿಗೆ ಬೆಂಕಿ ವ್ಯಾಪಿಸಿದ್ದರಿಂದ ದೇವಾಲಯವನ್ನು ತೆರವುಗೊಳಿಸಬೇಕಾಯಿತು. ಬೆಂಕಿಯ ಕೆನ್ನಾಲಿಗೆ ಬೆನ್ನಟ್ಟುವ ಹಿನ್ನೆಲೆಯಲ್ಲಿ ಭಕ್ತಾದಿಗಳು ಆತಂಕದಿಂದ ಚೀರಾಡುತ್ತಾ ಸುರಕ್ಷಿತ ಪ್ರದೇಶಗಳಿಗೆ ಓಡುವ ವಿಡಿಯೊಗಳು ಹರಿದಾಡುತ್ತಿವೆ.
ಬಲವಾದ ಗಾಳಿ ಬೀಸುತ್ತಿರುವುದು ಕಾಳ್ಗಿಚ್ಚು ಮತ್ತಷ್ಟು ವ್ಯಾಪಕವಾಗಲು ಕಾರಾಣವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ದೇವಾಲಯದ ಅರ್ಚಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಕ್ತಾದಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೆರವಾದ ಅರಣ್ಯ ಅಧಿಕಾರಿಗಳು ಇಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಳ್ಗಿಚ್ಚಿನ ಕಾರಣದಿಂದ ಎಲ್ಲೆಡೆ ವಾತಾವರಣದಲ್ಲಿ ಬೂದಿಯ ಧೂಳು ವ್ಯಾಪಕವಾಗಿ ಸೇರಿದ್ದು, ಅದೇ ಗಾಳಿಯನ್ನು ಉಸಿರಾಡಬೇಕಾಗಿದೆ ಎಂದು ಸ್ಥಳೀರು ಹೇಳಿದ್ದಾರೆ. ಹಲ್ದ್ವಾನಿಯಿಂದ ಡೆಹ್ರಾಡೂನ್ ರಸ್ತಯೆಲ್ಲಿ ಬೆಂಕಿಯ ಕಾರಣದಿಂದ ಭೂಕುಸಿತ ಮತ್ತು ದೊಡ್ಡ ಬಂಡೆಗಳು ರಸ್ತೆಗೆ ಉರುಳಿವೆ. ಬೆಟ್ಟ ಪ್ರದೇಶದಲ್ಲಿ ಹಗಲು ರಾತ್ರಿ ವ್ಯಾಪಕ ಬೆಂಕಿ ಕಂಡುಬರುತ್ತಿದೆ.