ಕಿರುಚಿತ್ರದಲ್ಲಿ ನರಿಗಳ ಸಹಜ ಬದುಕನ್ನು ಸೆರೆ ಹಿಡಿದ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ
ಸಾಂದರ್ಭಿಕ ಚಿತ್ರ | PC : freepik.com
ಕೋಝಿಕ್ಕೋಡ್ : 27 ವರ್ಷದ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಬಂಗಾರದ ಬಣ್ಣದ ನರಿಗಳ ಕುರಿತು 24 ನಿಮಿಷಗಳ ಅಪರೂಪದ ಸಾಕ್ಷ್ಯಚಿತ್ರ ನಿರ್ಮಿಸಿದ್ದು, ಈ ಸಾಕ್ಷ್ಯಚಿತ್ರವು ಅರಣ್ಯ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.
ಆಗಾಗ ತೋಳಗಳು ಎಂಬ ತಪ್ಪು ತಿಳಿವಳಿಕೆಗೆ ಕಾರಣವಾಗುವ ಈ ನರಿಗಳ ಸಂರಕ್ಷಣೆ ಪ್ರಯತ್ನದ ಅಗತ್ಯ ಹಾಗೂ ಅವುಗಳ ಅಳಿವನ್ನು ತಡೆಯುವ ಉದ್ದೇಶವನ್ನು ಈ ಸಾಕ್ಷ್ಯಚಿತ್ರ ಹೊಂದಿದೆ.
ಸಂಶೋಧಕರಿಂದ ಪದೇ ಪದೇ ಅವಕಾಶವಾದಿ ಭಕ್ಷಕ ಪ್ರಾಣಿಗಳು ಎಂದು ಕರೆಸಿಕೊಳ್ಳುವ ಈ ಬುದ್ಧಿವಂತ ನರಿಗಳ ಬಗ್ಗೆ ಪೆರಾಂಬ್ರ ನಿವಾಸಿ ಅಭಿಜಿತ್ ಎಸ್. ಬಾಬು ನಿರ್ಮಿಸಿರುವ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ “ಫಾಲೊ ದಿ ಹೌಲ್:ಜಾಕಲ್-ದಿ ರಿಯಲ್ ಸ್ಟೋರಿ” ಹಲವು ಮೈನವಿರೇಳಿಸುವ ಒಳನೋಟಗಳನ್ನು ತೆರೆದಿಡುತ್ತದೆ.
“ಈ ಸವಾಲಿನ ಯೋಜನೆಯನ್ನು ಪೂರೈಸಲು ನನಗೆ ಎರಡು ವರ್ಷಗಳ ಕಾಲ ಹಿಡಿಯಿತು. ಈ ಸಾಕ್ಷ್ಯಚಿತ್ರವು ನನ್ನ ‘ಅರ್ತ್ ಎಕೋಸ್’ ಯೂಟ್ಯೂಬ್ ವಾಹಿನಿಯಲ್ಲಿ ಅಕ್ಟೋಬರ್ 8ರಂದು ಬಿಡುಗಡೆಯಾಗಿತ್ತು. ಇತ್ತೀಚೆಗೆ ನಡೆದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ಅತ್ಯುತ್ತಮ ಕಿರುಚಿತ್ರ ಎಂದು ರಾಜ್ಯ ಪ್ರಶಸ್ತಿಗೆ ಭಾಜನವಾದ ನಂತರ, ಈ ಸಾಕ್ಷ್ಯಚಿತ್ರಕ್ಕೆ ವೀಕ್ಷಕರಿಂದ ಪ್ರೋತ್ಸಾಹಕರ ಪ್ರತಿಕ್ರಿಯೆ ದೊರೆಯಿತು” ಎಂದು ಕ್ಯಾಮೆರಾ ಹಾಗೂ ನಿರ್ಮಾಣೋತ್ತರ ಕೆಲಸಗಳೆರಡನ್ನೂ ನಿರ್ವಹಿಸಿರುವ ಅಭಿಜಿತ್ ಹೇಳುತ್ತಾರೆ.
ಕಿರುಚಿತ್ರದ ಸಂಪೂರ್ಣ ಕತೆಯು ಪೆರಾಂಬ್ರದಲ್ಲಿನ ಚೆನೋಲಿಯಲ್ಲಿರುವ ನನ್ನ ನಿವಾಸದ ಬಳಿಯ ಗ್ರಾನೈಟ್ ಗಣಿಯ ಸುತ್ತ ಬಿಚ್ಚಿಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ.
ಬೆನ್ನಿನ ಮೇಲೆ ವಿಶಿಷ್ಟ ಬಂಗಾರದ ಪಟ್ಟೆಗಳು ಹಾಗೂ ಪೊದೆಯಂತಹ ಬಾಲವನ್ನು ಹೊಂದಿರುವ, ಸ್ಥಳೀಯವಾಗಿ ಕುರುನರಿ ಎಂದು ಕರೆಯಲ್ಪಡುವ ಈ ನರಿಗಳ ನಿಗೂಢ ಪ್ರಪಂಚವನ್ನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅಭಿಜಿತ್ ದೀರ್ಘಕಾಲದಿಂದ ಅತೀವ ಆಸಕ್ತಿಯಿಂದ ಗಮನಿಸಿಕೊಂಡು ಬಂದಿದ್ದಾರೆ.
ವನ್ಯಜೀವಿ ಛಾಯಾಗ್ರಾಹಣದ ಕುರಿತು ಅವರಿಗಿದ್ದ ವ್ಯಾಮೋಹವು ನರಿಗಳ ವಿಶೇಷ ದೃಶ್ಯಾವಳಿಗಳು, ಅವುಗಳ ಆಹಾರ ಅಭ್ಯಾಸಗಳು, ವಿಶಿಷ್ಟ ಆವಾಸಸ್ಥಾನದ ಸ್ವರೂಪಗಳು, ಜೀವಂತವಾಗುಳಿಯುವ ತಂತ್ರಗಳು ಹಾಗೂ ಸೌಹಾರ್ದಯುತವಾಗಿ ಜೀವಿಸುವ ತಂತ್ರಗಳನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ತಮಗೆ ಎಲ್ಲಿ ಮಲ ವಿಸರ್ಜಿಸಲು ತರಬೇತಿ ನೀಡಲಾಗಿರುತ್ತದೊ ಅಲ್ಲಿಯೇ ನರಿಗಳು ಮಲ ವಿಸರ್ಜಿಸುವುದನ್ನು ತಮ್ಮ ವಿಶೇಷ ದೃಶ್ಯಾಯವಳಿಗಳ ಮೂಲಕ ಅಭಿಜಿತ್ ಪ್ರಸ್ತುತಪಡಿಸಿದ್ದಾರೆ. ಮಲ ವಿಸರ್ಜನೆಯ ಬಳಿಕ ಬಂಡೆಗಳಿಗೆ ಒರೆಸಿಕೊಳ್ಳುವುದು ಸೇರಿದಂತೆ ನರಿಗಳ ಸ್ವಯಂ ಶುಚಿತ್ವದ ತಂತ್ರಗಳ ಮೇಲೆ ಈ ದೃಶ್ಯಾವಳಿಗಳು ಬೆಳಕು ಚೆಲ್ಲಿವೆ. ಇದರೊಂದಿಗೆ ತಮ್ಮ ಗಡಿಯನ್ನು ಗುರುತಿಸಿಕೊಳ್ಳುವ ಅವುಗಳ ತಂತ್ರವನ್ನೂ ಈ ದೃಶ್ಯಾವಳಿಗಳು ಸೆರೆ ಹಿಡಿದಿವೆ.
ಈ ಸಾಕ್ಷ್ಯಚಿತ್ರವು ನರಿಗಳ ಕೂಗಿನ ವೈವಿಧ್ಯತೆ ಹಾಗೂ ಅವುಗಳ ವಿಶಿಷ್ಟ ಸಂಪರ್ಕ ವಿಧಾನಗಳ ಕುರಿತೂ ಅಗತ್ಯ ಗಮನ ಹರಿಸಿದೆ.
ನರಿಗಳ ರಕ್ಷಣೆಗೆ ಉತ್ತಮ ಸಂರಕ್ಷಣಾ ಕಾರ್ಯವಿಧಾನ ಹಾಗೂ ನರಿಗಳ ಗುಂಪಿನಲ್ಲಿ ಪರಾವಲಂಬಿ ಮತ್ತು ಮಲಿನಕಾರಿ ಸೋಂಕಿನಿಂದ ಉಂಟಾಗುವ ರೋಗಗಳಿಗೆ ಅಗತ್ಯವಿರುವ ಚಿಕಿತ್ಸೆಯ ಬಗ್ಗೆ ಗಮನ ಹರಿಸಿರುವ ಈ 24 ನಿಮಿಷಗಳ ಸಾಕ್ಷ್ಯಚಿತ್ರವು, ಈ ನರಿ ಜಾತಿಗಳ ನಡುವೆ ಅಂತರ್ ನಿರ್ದಿಷ್ಟ ಸಂಕರ ಸಾಧ್ಯತೆ ಬಗ್ಗೆ ಮತ್ತಷ್ಟು ಆಳವಾದ ಸಂಶೋಧನೆ ನಡೆಸಬೇಕು ಎಂದೂ ಪ್ರಾಧಿಕಾರಗಳಿಗೆ ಮನವಿ ಮಾಡಿದೆ.
ಇಲಿ, ಅಳಿಲಿನಂತಹ ಸಣ್ಣ ಪ್ರಾಣಿಗಳನ್ನು ನಿಯಂತ್ರಿಸುವಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿ, ರೈತರಿಗೆ ನೆರವು ನೀಡುವ ಭಾರತದ ಈ ಅಚ್ಚರಿಯ ವನ್ಯಜೀವಿಗಳನ್ನು ನಮ್ಮ ನೆಲದಲ್ಲೇ ರಕ್ಷಿಸಲು ಸೂಕ್ತ ಉಪಕ್ರಮ ಕೈಗೆತ್ತಿಕೊಳ್ಳಬೇಕು ಎಂಬುದು ಅಭಿಜಿತ್ ಬಯಕೆಯಾಗಿದೆ.
ಸೌಜನ್ಯ: thehindu.com