ರಾಮಮಂದಿರ ಉದ್ಘಾಟನೆಗೆ ಹಾಜರಾಗುವುದಿಲ್ಲ : ಕಾಂಗ್ರೆಸ್ ಘೋಷಣೆ
“ಧರ್ಮವು ವೈಯಕ್ತಿಕ ವಿಚಾರ, ಆರೆಸ್ಸೆಸ್ – ಬಿಜೆಪಿ ರಾಜಕೀಯ ಮಾಡುತ್ತಿದೆ”
ಹೊಸದಿಲ್ಲಿ: ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು,ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ತಾನು ನಿರ್ಧರಿಸಿರುವುದಾಗಿ ಬುಧವಾರ ತಿಳಿಸಿದೆ.
ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಅಪೂರ್ಣ ಮಂದಿರದ ಉದ್ಘಾಟನೆಯನ್ನು ನೆರವೇರಿಸಲಾಗುತ್ತಿದೆ. 2019ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಮತ್ತು ಶ್ರೀರಾಮನನ್ನು ಆರಾಧಿಸುವ ಕೋಟ್ಯಂತರ ಜನರ ಭಾವನೆಗಳನ್ನು ಗೌರವಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ ರಂಜನ ಚೌಧುರಿ ಅವರು ಸ್ಪಷ್ಟವಾಗಿ ಆರೆಸ್ಸೆಸ್/ಬಿಜೆಪಿ ಕಾರ್ಯಕ್ರಮವಾಗಿರುವ ಮಂದಿರ ಉದ್ಘಾಟನೆಯ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಖರ್ಗೆ, ಸೋನಿಯಾ ಮತ್ತು ಚೌಧುರಿ ಅವರಿಗೆ ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಗಳನ್ನು ನೀಡಲಾಗಿತ್ತು. ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್ ಮತ್ತು ಎಚ್.ಡಿ.ದೇವೇಗೌಡ ಅವರನ್ನೂ ಆಹ್ವಾನಿಸಲಾಗಿದೆ. ಆಹ್ವಾನ ಪತ್ರಿಕೆಗಳ ರವಾನೆ ಕಾರ್ಯಕ್ರಮ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಪಕ್ಷ ನಾಯಕರು ಆಹ್ವಾನಗಳನ್ನು ಸ್ವೀಕರಿಸಲಿದ್ದಾರೆ.
ರಾಮ ಮಂದಿರ ನಿರ್ಮಾಣದೊಂದಿಗೆ ಗುರುತಿಸಿಕೊಂಡಿರುವ ನಿಯೋಗವು ಸೋನಿಯಾ ಮತ್ತು ಖರ್ಗೆಯವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಮತ್ತು ಎಲ್ಲ ರಾಜಕೀಯ ಪಕ್ಷಗಳ ಮುಖ್ಯಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಎಲ್ಲ ರಾಷ್ಟ್ರೀಯ ಪಕ್ಷಗಳ ಮುಖ್ಯಸ್ಥರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದರೆ,ಹಲವು ಮುಖ್ಯಮಂತ್ರಿಗಳು ರಾಜಕೀಯ ಪಕ್ಷಗಳ ಮುಖ್ಯಸ್ಥರಾಗಿದ್ದರೂ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಆಹ್ವಾನಿತರ ಪಟ್ಟಿಯಲ್ಲಿಲ್ಲ.