ನೀರಿನ ಬಿಕ್ಕಟ್ಟು | ವಂದೇಭಾರತ್ ರೈಲನ್ನು ತಡೆದು ಪ್ರತಿಭಟಿಸಿದ ಮಹಿಳೆಯರು!
PC : PTI
ಜಮ್ಮು: ಬಿಸಿಗಾಳಿ ವಾತಾವರಣದೊಂದಿಗೆ ಉಂಟಾಗಿರುವ ನೀರಿನ ಬಿಕ್ಕಟ್ಟಿನ ವಿರುದ್ಧ ರೈಲ್ವೆ ನಿಲ್ದಾಣದೆದುರು ಪ್ರತಿಭಟನೆ ನಡೆಸಿರುವ ಮಹಿಳೆಯರು, ಗುರುವಾರ ವಂದೇಭಾರತ್ ರೈಲನ್ನು ತಡೆದಿರುವ ಘಟನೆ ವರದಿಯಾಗಿದೆ.
ನಮ್ಮ ಕಾಲನಿಯಲ್ಲಿನ ನೀರಿನ ಬಿಕ್ಕಟ್ಟಿನತ್ತ ಕೂಡಲೇ ಗಮನ ಹರಿಸದಿದ್ದರೆ, ಎಲ್ಲ ಒಳ ಬರುವ ಹಾಗೂ ಹೊರಹೋಗುವ ರೈಲುಗಳನ್ನು ತಡೆಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಜಮ್ಮು ರೈಲ್ವೆ ನಿಲ್ದಾಣದ ಆಡಳಿತ ಮಂಡಳಿಯು ನಿಯಮಿತ ನೀರು ಸರಬರಾಜನ್ನು ಖಾತರಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಪೂರ್ವ ಜಮ್ಮು ಕಾಲನಿಯಿಂದ ಮಹಿಳೆಯರು ಹಾಗೂ ಕೆಲವು ಮಕ್ಕಳ ಗುಂಪೊಂದು ಪ್ರತಿಭಟನೆ ನಡೆಸಲು ಜಮ್ಮು ರೈಲು ನಿಲ್ದಾಣದತ್ತ ಧಾವಿಸಿತು.
ಬಕೆಟ್ಗಳನ್ನು ಹಿಡಿದಿದ್ದ ಕೆಲ ಪ್ರತಿಭಟನಾಕಾರರು ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಮಧ್ಯಪ್ರವೇಶಿಸುವುದಕ್ಕೂ ಮುನ್ನ, ರೈಲ್ವೆ ನಿಲ್ದಾಣದಲ್ಲಿ ವಂದೇಭಾರತ್ ರೈಲನ್ನು ತಡೆ ಹಿಡಿದಿದ್ದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಕಾಲನಿಯಲ್ಲಿ ಉದ್ಭವಿಸಿರುವ ನೀರಿನ ಬಿಕ್ಕಟ್ಟಿನತ್ತ ತಕ್ಷಣವೇ ಗಮನ ಹರಿಸಲಾಗುವುದು ಎಂದು ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದರು. ಆದರೆ, ನಮ್ಮ ಕುಂದುಕೊರತೆಯನ್ನು ಪರಿಹರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.