ಕಣ್ಣೀರು ಹಾಕುವುದಿಲ್ಲ, ಆದಿವಾಸಿಗಳ ಕಣ್ಣೀರಿಗೆ ಬೆಲೆಯಿಲ್ಲ: ಜಾರ್ಖಂಡ್ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ ಭಾವನಾತ್ಮಕ ಭಾಷಣ
ಹೇಮಂತ್ ಸೊರೇನ್ (NDTV)
ರಾಂಚಿ: ಜಾರ್ಖಂಡ್ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ವಿಶ್ವಾಸಮತ ಪರೀಕ್ಷೆಗೆ ಮುಂಚಿತವಾಗಿ ಭಾವನಾತ್ಮಕ ಭಾಷಣ ಮಾಡಿದ ಮಾಜಿ ಸಿಎಂ ಹಾಗೂ ಜೆಎಂಎಂ ನಾಯಕ ಹೇಮಂತ್ ಸೊರೇನ್, "ನಾನು ಇಂದು ಕಣ್ಣೀರು ಸುರಿಸುವುದಿಲ್ಲ, ಏಕೆಂದರೆ ಆದಿವಾಸಿಗಳ ಮತ್ತು ಹಿಂದುಳಿದ ವರ್ಗಗಳ ಜನರ ಕಣ್ಣೀರಿಗೆ ಬೆಲೆ ಇಲ್ಲ" ಎಂದು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಇಂದು ವಿಶ್ವಾಸಮತ ಪರೀಕ್ಷೆಗಾಗಿ ಕೋರ್ಟ್ ಅನುಮತಿಯೊಂದಿಗೆ ವಿಧಾನಸಭೆಗೆ ಆಗಮಿಸಿರುವ ಹೇಮಂತ್ ಸೊರೇನ್, ನೂತನ ಸಿಎಂಗೆ ಜೆಎಂಎಂ ನೇತೃತ್ವದ ಮೈತ್ರಿಕೂಟದ ಸಂಪೂರ್ಣ ಬೆಂಬಲ ಇದೆ ಎಂದರು.
ತಮ್ಮ ಬಂಧನದ ಕುರಿತು ಮಾತನಾಡಿದ ಅವರು ಜನವರಿ 31ರ ರಾತ್ರಿ ದೇಶದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯವಾಗಿದೆ ಎಂದರು. ತನ್ನ ಬಂಧನಕ್ಕೆ ಕಾರಣವಾದ ವಿದ್ಯಮಾನಗಳಲ್ಲಿ ರಾಜಭವನ ಕೂಡ ಶಾಮೀಲಾಗಿದೆ ಎಂದು ಅವರು ಆರೋಪಿಸಿದರು.
ತನ್ನ ಬಂಧನಕ್ಕಾಗಿ ಸಂಚು ಬಹಳ ಕಾಲದಿಂದ ನಡೆದಿತ್ತು. ಸಣ್ಣ ಉರಿಯಲ್ಲಿ ಅದು ಬೇಯುತ್ತಿತ್ತು. ಸಂಪೂರ್ಣವಾಗಿ ಯೋಜಿತ ರೀತಿಯಲ್ಲಿ ಅದನ್ನು ಕಾರ್ಯಗತಗೊಳಿಸಲಾಯಿತು ಎಂದು ಅವರು ಹೇಳಿದರು.
ದೇಶದ ಆಡಳಿತ ಪಕ್ಷಗಳಿಗೆ ಹಿಂದುಳಿದ ಸಮುದಾಯಗಳ ವಿರುದ್ಧ ಇರುವ ದ್ವೇಷಕ್ಕೆ ಜನವರಿ 31 ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
“ನಾವು (ಆದಿವಾಸಿಗಳು) ಕಾಡಿನಲ್ಲೇ ವಾಸಿಸುವುದನ್ನು ಮುಂದುವರಿಸಬೇಕೆಂದು ಹೇಳಲು ಅವರಿಗೆ ಹತ್ತಿರದವರು ಹಿಂಜರಿಯುವುದಿಲ್ಲ. ನಾವು ಕಾಡು ತೊರೆದು ಬಂದು ಅವರ ಪಕ್ಕದಲ್ಲಿ ಕುಳಿತೆವು. ಇದರಿಂದ ಅವರ ಬಟ್ಟೆಗಳು ಕೊಳೆಯಾದವು. ಅವರು ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆ. ಅವರ ಇಚ್ಛೆಯಂತೆ ಎಲ್ಲವೂ ನಡೆದರೆ ನಾವು ಮತ್ತೆ ಕಾಡಿನಲ್ಲಿರುತ್ತೇವೆ. ನಾನು ವಿಮಾನದಲ್ಲಿ ಪ್ರಯಾಣಿಸುವುದು, ಪಂಚತಾರಾ ಹೋಟೆಲ್ಗಳಲ್ಲಿ ಉಳಿದುಕೊಳ್ಳುವುದು ಹಾಗೂ ಬಿಎಂಡಬ್ಲ್ಯು ಕಾರು ಓಡಿಸುವುದು ಅವರಿಗೆ ಸಮಸ್ಯೆಯಾಗಿದೆ,” ಎಂದು ಅವರು ಹೇಳಿದರು.
ಹೇಮಂತ್ ಸೊರೇನ್ ಜೈಲಿನಲ್ಲಿರುವಾಗ “20 ವರ್ಷಗಳ ಹಿಂದೆ ಆದಿವಾಸಿಯಾಗಿ ಕಾಡಿನಲ್ಲಿ ಇದ್ದ ಅನುಭವ” ಆಗಲಿದೆ ಎಂದು ಕೆಲ ಮಾದ್ಯಮಗಳ ವರದಿ ಕುರಿತಂತೆ ಅವರು ಮೇಲಿನ ಪ್ರತಿಕ್ರಿಯೆ ಮಾಡಿದ್ದಾರೆಂದೇ ತಿಳಿಯಲಾಗಿದೆ.
“ನಾನು ಸೋಲೊಪ್ಪಿಕೊಂಡಿಲ್ಲ. ಅವರು ತಮ್ಮ ಕಾರ್ಯತಂತ್ರಗಳಲ್ಲಿ ಯಶಸ್ವಿಯಾಗುತ್ತಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಇದು ಜಾರ್ಖಂಡ್, ಆದಿವಾಸಿಗಳು ಮತ್ತು ದಲಿತರು ತ್ಯಾಗಗಳನ್ನು ಮಾಡಿದ ನಾಡು,” ಎಂದು ಅವರು ಹೇಳಿದರು.