ಕ್ಯಾಲಿಫೋರ್ನಿಯಾದ ಹಿಂದು ದೇವಳದ ಗೋಡೆಗಳಲ್ಲಿ ಖಲಿಸ್ತಾನ ಪರ, ಭಾರತ ವಿರೋಧಿ ಘೋಷಣೆಗಳ ಬರಹ; ಭಾರತದಿಂದ ಖಂಡನೆ
Photo: twitter.com/HinduAmerican
ಹೊಸದಿಲ್ಲಿ: ಅಮೆರಿಕಾದ ಕ್ಯಾಲಿಫೋರ್ನಿಯಾದ ನೇವಾರ್ಕ್ ಎಂಬಲ್ಲಿರುವ ಹಿಂದು ದೇವಸ್ಥಾನ ಸ್ವಾಮಿನಾರಾಯಣ ಮಂದಿರದ ಗೋಡೆಗಳಲ್ಲಿ ಖಲಿಸ್ತಾನ ಪರ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಅಪರಿಚಿತರು ಬರೆದಿರುವ ವಿದ್ಯಮಾನ ನಡೆದಿದೆ. ಘೋಷಣೆಗಳ ಗೋಡೆಬರಹಗಳಿಂದ ತುಂಬಿರುವ ದೇವಸ್ಥಾನದ ಚಿತ್ರವನ್ನು ಹಿಂದು ಅಮೆರಿಕನ್ ಫೌಂಡೇಷನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಹಲವಾರು ಘೋಷಣೆಗಳೂ ದೇವಳದ ಗೋಡೆಗಳಲ್ಲಿ ಕಂಡುಬಂದಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಜನರಿಗೆ ನೋವುಂಟು ಮಾಡಲು ಮತ್ತು ಹಿಂಸೆಯ ಭೀತಿ ಸೃಷ್ಟಿಸಲು ಹೀಗೆ ಮಾಡಲಾಗಿದೆ ಎಂದು ಫೌಂಡೇಶನ್ ಹೇಳಿದೆ.
ಈ ಸಂಬಂಧ ನೆವಾರ್ಕ್ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗಕ್ಕೂ ದೂರು ಸಲ್ಲಿಸಲಾಗಿದೆ.
ಘಟನೆಯನ್ನು ಭಾರತ ಖಂಡಿಸಿ ತ್ವರಿತ ಕ್ರಮಕ್ಕೆ ಆಗ್ರಹಿಸಿದೆ. ಅಮೆರಿಕಾದಲ್ಲಿರುವ ಭಾರತೀಯ ದೂತಾವಾಸ ಪ್ರತಿಕ್ರಿಯಿಸಿ, ಈ ಘಟನೆ ಭಾರತೀಯ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ನಾವು ತ್ವರಿತ ತನಿಖೆ ಮತ್ತು ಕ್ಷಿಪ್ರ ಕ್ರಮಕ್ಕಾಗಿ ಆಗ್ರಹಿಸುತ್ತೇವೆ ಎಂದು ಹೇಳಿದೆ.
ಆಗಸ್ಟ್ ತಿಂಗಳಿನಲಿ ಕೆನಡಾದ ಸರ್ರೇ ಎಂಬಲ್ಲಿರುವ ಲಕ್ಷ್ಮೀ ನಾರಾಯಣ ಮಂದಿರದ ಗೋಡೆ ಮತ್ತು ಗೇಟುಗಳಲ್ಲೂ ಖಲಿಸ್ತಾನ ಪರ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು.