ಅಪಾಯದ ಮಟ್ಟ ಮೀರಿದ ಯಮುನಾ ನದಿ, ಮನೆ, ಶಾಲೆಗಳಿಗೆ ನುಗ್ಗಿದ ನೀರು
ನೀರು ಶುದ್ಧೀಕರಣ ಘಟಕ ಬಂದ್,ಕುಡಿಯುವ ನೀರಿಗೆ ಸಮಸ್ಯೆ
ಹೊಸದಿಲ್ಲಿ: ದಿಲ್ಲಿಯ ಯಮುನಾ ನದಿಯಲ್ಲಿ ರಾತ್ರಿಯ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಮನೆಗಳು ಮತ್ತು ರಸ್ತೆಗಳಿಗೆ ನೀರು ನುಗ್ಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಯಮುನಾ ನದಿಯಲ್ಲಿ ನೀರಿನ ಮಟ್ಟ 208.46 ಮೀಟರ್ ಆಗಿತ್ತು. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್ಗಳಷ್ಟು ಹೆಚ್ಚಿದೆ.
ಅರವಿಂದ ಕೇಜ್ರಿವಾಲ್ ಸರಕಾರ ಮಧ್ಯ ಪ್ರವೇಶಿಸಿ ಬ್ಯಾರೇಜ್ ನಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಿತ್ತು, ಆದರೆ ಕೇಂದ್ರವು ಬ್ಯಾರೇಜ್ ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಉತ್ತರಿಸಿದೆ.
ಹಿಮಾಚಲ ಪ್ರದೇಶದಲ್ಲಿ ಸುರಿದಿರುವ ಭಾರೀ ಮಳೆಯಿಂದಾಗಿ ಬ್ಯಾರೇಜ್ ತುಂಬಿದೆ.
ಸಿವಿಲ್ ಲೈನ್ಸ್ ಪ್ರದೇಶದ ರಿಂಗ್ ರೋಡ್ ಜಲಾವೃತಗೊಂಡಿದೆ ಮತ್ತು ಮಜ್ನು ಕಾ ತಿಲಾವನ್ನು ಕಾಶ್ಮೀರಿ ಗೇಟ್ ಐಎಸ್ಬಿಟಿಗೆ ಸಂಪರ್ಕಿಸುವ ಮಾರ್ಗವನ್ನು ಮುಚ್ಚಲಾಗಿದೆ. ಈ ಸ್ಥಳವು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ದಿಲ್ಲಿ ವಿಧಾನಸಭೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ವಜೀರಾಬಾದ್ ನಲ್ಲಿರುವ ನೀರು ಶುದ್ಧೀಕರಣ ಘಟಕವನ್ನು ಮುಚ್ಚಲಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ಈ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಜಲಾವೃತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಮತ್ತು ಖಾಸಗಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಮುಖ್ಯಮಂತ್ರಿ ಇಂದು ಬೆಳಿಗ್ಗೆ ಘೋಷಿಸಿದರು.
ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಮುಖ್ಯಮಂತ್ರಿ ಕೇಜ್ರಿವಾಲ್, ರವಿವಾರದವರೆಗೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಸರಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ. ಖಾಸಗಿ ಕಚೇರಿಗಳಿಗೂ ಮನೆಯಿಂದಲೆ ಕೆಲಸ WFH ಆಯ್ಕೆಗೆ ತೆರಳುವಂತೆ ಸೂಚಿಸಲಾಗಿದೆ.