ನೀವು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದೀರಿ, ನೀವು ದೇಶ ವಿರೋಧಿಗಳು: ಬಿಜೆಪಿ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ
Photo: Twitter@NDTV
ಹೊಸದಿಲ್ಲಿ: ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ವಿರುದ್ಧ ಇಂದು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ನಾನು ಮಣಿಪುರಕ್ಕೆ ಹೋಗಿದ್ದೆ. ಪ್ರಧಾನಿ ಮೋದಿ ಒಮ್ಮೆಯೂ ಅಲ್ಲಿಗೆ ಹೋಗಿಲ್ಲ. ಪ್ರಧಾನಿ ಮೋದಿಗೆ ಮಣಿಪುರ ಹಿಂದೂಸ್ತಾನದ ಭಾಗವಲ್ಲ. ಪ್ರಧಾನಿ ಮಣಿಪುರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಮಣಿಪುರದಿಂದ ಹರ್ಯಾಣದ ನುಹ್ ವರೆಗೆ ನೀವು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ. ಬಿಜೆಪಿಯ ರಾಜಕೀಯವು "ಮಣಿಪುರದಲ್ಲಿ ಭಾರತವನ್ನು ಕೊಂದಿದೆ... ಬಿಜೆಪಿ ದೇಶ ವಿರೋಧಿಯಾಗಿದೆ. ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಭಾರತದ ಜನರ ಮಾತು ಕೇಳದಿದ್ದರೆ ಯಾರ ಮಾತು ಅವರು ಆಲಿಸುತ್ತಾರೆ?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಮಣಿಪುರದಲ್ಲಿ ಮಗನನ್ನು ಗುಂಡಿನ ದಾಳಿಯಿಂದ ಕಳೆದುಕೊಂಡ ಮಹಿಳೆಯೊಂದಿಗೆ ತಾನು ನಡೆಸಿದ್ದ ಸಂಭಾಷಣೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, . "ಇಡೀ ರಾತ್ರಿ, ನಾನು ನನ್ನ ಮಗನ ಶವದೊಂದಿಗೆ ಮಲಗಿದ್ದೆ, ನಾನು ಹೆದರಿ ನನ್ನ ಮನೆಯಿಂದ ಹೊರಬಂದೆ" ಎಂದು ಆ ಮಹಿಳೆ ನನ್ನ ಬಳಿ ಹೇಳಿದ್ದರು ಎಂದರು.
ಭಾರತ ಒಂದು ಧ್ವನಿ, ಹೃದಯದ ಧ್ವನಿ. ಮಣಿಪುರದಲ್ಲಿ ನೀವು ಆ ಧ್ವನಿಯನ್ನು ಹಿಸುಕಿಹಾಕಿದ್ದೀರಿ. ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ. ನೀವು ದೇಶದ್ರೋಹಿಗಳು. ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ಇನ್ನೊಬ್ಬ ತಾಯಿ, ಭಾರತ ಮಾತಾ, ನೀವು ಅವಳನ್ನು ಮಣಿಪುರದಲ್ಲಿ ಕೊಂದಿದ್ದೀರಿ. ಆದ್ದರಿಂದಲೇ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ನೀವು ಭಾರತ ಮಾತೆಯ ರಕ್ಷಕರಲ್ಲ, ನೀವು ಭಾರತಾಂಬೆಯ ಕೊಲೆಗಾರರುಎಂದು ರಾಹುಲ್ ವಾಗ್ದಾಳಿ ನಡೆಸಿದರು.
"ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ ಏಕೆಂದರೆ ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ನೀವು (ಬಿಜೆಪಿ) ಮಣಿಪುರವನ್ನು ವಿಭಜಿಸಿದ್ದೀರಿ. ಸೇನೆಯನ್ನು ಕರೆಸುವ ಮೂಲಕ ಮಣಿಪುರದಲ್ಲಿ ಹಿಂಸಾಚಾರವನ್ನು ಕೇಂದ್ರವು ತಡೆಯಬಹುದು, ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ'' ಎಂದು ರಾಹುಲ್ ಗಾಂಧಿ ಆರೋಪಿಸಿದರು.
"ನೀವು ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ, ನೀವು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ, ನೀವು ಈಗ ಹರ್ಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ" ಎಂದುಇತ್ತೀಚೆಗೆ ಗುರುಗ್ರಾಮ್ ಹಾಗೂ ನುಹ್ ನಲ್ಲಿ ಆರು ಜನರನ್ನು ಕೊಂದ ಕೋಮು ಘರ್ಷಣೆಯನ್ನು ಉಲ್ಲೇಖಿಸಿ ರಾಹುಲ್ ಹೇಳಿದರು.
ಈ ಹೇಳಿಕೆಯು ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು, ಹಿರಿಯ ಸಚಿವರು ರಾಹುಲ್ ಗಾಂಧಿಯವರ ಕ್ಷಮೆಯಾಚನೆಗೆ ಒತ್ತಾಯಿಸಿದರು.