ತಮಿಳುನಾಡಿನಲ್ಲಿ ಬಿಹಾರಿ ವಲಸಿಗರ ಮೇಲೆ ದಾಳಿಯ ಸುಳ್ಳು ವೀಡಿಯೋ ಪ್ರಸಾರ ಮಾಡಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ
Photo: X/@OfficeofJPNadda
ಹೊಸದಿಲ್ಲಿ : ಬಿಹಾರಿ ವಲಸಿಗರ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಯುತ್ತಿದೆಯೆಂಬುದಾಗಿ ಬಿಂಬಿಸುವ ಸುಳ್ಳು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಮನೀಶ್ ಕಶ್ಯಪ್ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇಂದು ತಾನೇ ನಾನು ಜೈಲಿನಿಂದ ಬಿಡುಗಡೆಗೊಂಡೆ. ಬಿಜೆಪಿಯಿಂದಾಗಿ ಮಾತ್ರವೇ ನನ್ನ ಜೀವನದ ಕರಾಳ ದಿನಗಳು ಕೊನೆಗೊಂಡವು. ಹೀಗಾಗಿ ನಾನು ಬಿಜೆಪಿಗೆ ಸೇರ್ಪಡೆಗೊಂಡೆ ಎಂದು ಅವರು ಹೇಳಿದ್ದಾರೆ. ಜಾಮೀನು ನೀಡಿ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ತನ್ನ ವಿರುದ್ಧದ ದೋಷಾರೋಪಗಳನ್ನು ಕೂಡಾ ಹಿಂತೆಗೆದುಕೊಳ್ಳಲಾಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷದ ನವೆಂಬರ್ನಲ್ಲಿ ಮದ್ರಾಸ್ ಹೈಕೋರ್ಟ್, ಕಶ್ಯಪ್ನರನ್ನು ಎನ್ಎಸ್ಎ ಕಾಯ್ದೆಯಡಿ ಬಂಧಿಸಿರುವುದನ್ನು ತಳ್ಳಿಹಾಕಿತ್ತು. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಅನುಮತಿ ನೀಡಿತ್ತು.
“ಸನಾತನ ಧರ್ಮಕ್ಕೆ ಕಳಂಕ ತರುವವರ ವಿರುದ್ಧ ಹಾಗೂ ರಾಷ್ಟ್ರವಾದವನ್ನು ವಿರೋಧಿಸುವವರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ’’ ಎಂದವರು ತಿಳಿಸಿದರು.
ಪಕ್ಷಕ್ಕೆ ಕಶ್ಯಪ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಈಶಾನ್ಯ ದಿಲ್ಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, ‘ಆತ ಜನತೆಯ ಪರವಾಗಿ ಧ್ವನಿಯೆತ್ತಿದ್ದಾನೆ’ ಎಂದು ಹೇಳಿದ್ದಾರೆ.