ಗುಜರಾತ್ ಹತ್ಯಾಕಾಂಡ : ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಝಕಿಯಾ ಜಾಫ್ರಿ ನಿಧನ
ಹತ್ಯೆಗೀಡಾದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪರ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಝಕಿಯಾ ಜಾಫ್ರಿ

ಅಹ್ಮದಾಬಾದ್ : 2002ರ ಗುಜರಾತ್ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಶನಿವಾರ ನಿಧನರಾಗಿದ್ದಾರೆ.
ಝಕಿಯಾ ಜಾಫ್ರಿ(86) ವಯೋಸಹಜ ಸಮಸ್ಯೆಗಳಿಂದ ಶನಿವಾರ ನಿಧನರಾಗಿದ್ದಾರೆ. 2002ರ ಫೆಬ್ರವರಿ 27ರಂದು ಗೋಧ್ರಾ ರೈಲು ದಹನ ಘಟನೆಯ ನಂತರ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸಹಿತ ಹಲವರು ಬರ್ಬರವಾಗಿ ಕೊಲೆಯಾಗಿದ್ದರು. ಅದರಲ್ಲಿ ಅವರ ಪತ್ನಿ ಝಾಕಿಯಾ ಬದುಕುಳಿದಿದ್ದರು. ಎಹ್ಸಾನ್ ಜಾಫ್ರಿಯ ಕ್ರೂರ ಹತ್ಯೆಗೆ ಸಂಬಂಧಿಸಿ ನ್ಯಾಯಕ್ಕಾಗಿ ನಿರಂತರ ಕಾನೂನು ಹೋರಾಟ ನಡೆಸಿ ಝಾಕಿಯಾ ಜಾಫ್ರಿ ದೇಶದ ಗಮನ ಸೆಳೆದಿದ್ದರು.
ಅಹ್ಮದಾಬಾದ್ ನಲ್ಲಿ ಝಕಿಯಾ ಜಾಫ್ರಿ ನಿಧನರಾಗಿರುವ ಬಗ್ಗೆ ಅವರ ಕುಟುಂಬದ ಮೂಲಗಳು ಕೂಡ ದೃಢಪಡಿಸಿದೆ. ಅಹ್ಮದಾಬಾದ್ ನಲ್ಲಿ ಪತಿಯ ಸಮಾಧಿಯ ಪಕ್ಕದಲ್ಲಿ ಅವರ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ.
ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಮಾನವ ಹಕ್ಕುಗಳ ಸಮುದಾಯದ ಸಹಾನುಭೂತಿಯುಳ್ಳ ನಾಯಕಿ ಝಾಕಿಯಾ ಅವರು 30 ನಿಮಿಷಗಳ ಹಿಂದೆ ನಿಧನರಾದರು ಎಂದು ಬರೆದುಕೊಂಡಿದ್ದಾರೆ.