ಬಾಬಾ ಸಿದ್ದೀಕಿ ಪುತ್ರ ಜೀಶನ್ ಸಿದ್ದೀಕಿ ಎನ್ ಸಿಪಿಗೆ ಸೇರ್ಪಡೆ: ಬಾಂದ್ರಾ ಪೂರ್ವದಿಂದ ಸ್ಪರ್ಧೆ
Photo: NDTV
ಮಹಾರಾಷ್ಟ್ರ: ಮಾಜಿ ಸಚಿವ ದಿವಂಗತ ಬಾಬಾ ಸಿದ್ದೀಕಿ ಪುತ್ರ ಜೀಶನ್ ಸಿದ್ದೀಕಿ ಶುಕ್ರವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ ಆರೋಪದ ಮೇಲೆ ಅವರನ್ನು ಕಳೆದ ಆಗಸ್ಟ್ ನಲ್ಲಿ ಕಾಂಗ್ರೆಸ್ ನಿಂದ ಉಚ್ಚಾಟಿಸಲಾಗಿತ್ತು.
“ನನಗೆ ಮತ್ತು ನನ್ನ ಕುಟುಂಬಕ್ಕೆ ಇದು ಭಾವನಾತ್ಮಕ ದಿನ. ಈ ಕಷ್ಟದ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನಗೆ ಬಾಂದ್ರಾ ಪೂರ್ವದಿಂದ ಟಿಕೆಟ್ ನೀಡಲಾಗಿದೆ. ಎಲ್ಲಾ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ನಾನು ಬಾಂದ್ರಾ ಪೂರ್ವ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇನೆ ಎಂದು ನನಗೆ ಖಾತ್ರಿಯಿದೆ ಎಂದು ಎನ್ಸಿಪಿಗೆ ಸೇರಿದ ನಂತರ ಜೀಶನ್ ಹೇಳಿದ್ದಾರೆ.
2019ರ ಚುನಾವಣೆಯಲ್ಲಿ, ಮುಂಬೈ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಶಿವಸೇನೆಯ ನಾಯಕ ವಿಶ್ವನಾಥ್ ಮಹದೇಶ್ವರ್ ಅವರನ್ನು ಸೋಲಿಸಿ ಜೀಶನ್ ಸಿದ್ದೀಕಿ ಬಾಂದ್ರಾ ಪೂರ್ವ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಎನ್ ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು ಇತ್ತೀಚೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 10ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.