ಎಲ್ಲವನ್ನೂ ಪ್ರೀತಿಯಿಂದ ಕಟ್ಟಬೇಕು
ನಾನು ವೋಟು ಹಾಕಿದೆ. ಎಂತಹ ಖುಷಿಯ ವಿಷಯ. ನೀವು ವೋಟು ಮಾಡಿರುತ್ತೀರೆಂದು ಭಾವಿಸುತ್ತಾ ಇದನ್ನು ಬರೆಯುತ್ತಿದ್ದೇನೆ. ಪ್ರಜಾಪ್ರಭುತ್ವವನ್ನು ಕುರಿತು ಬಾಬಾಸಾಹೇಬರು ಹೇಳಿದ ಮಾತು ನೆನಪಾಗುತ್ತದೆ. ‘‘ಮಾನವ ಸಂಬಂಧಗಳ ಆಳ್ವಿಕೆಯ ಮೂಲ ತತ್ವವಾಗಿರುವ ಪ್ರಜಾಪ್ರಭುತ್ವ ಭೂಮಿಯಿಂದ ನಾಶ ಹೊಂದದಂತೆ ಮಾಡುವ ಗುರುತರವಾದ ಜವಾಬ್ದಾರಿ ಮತ್ತು ಅತೀ ಮಹತ್ವದ ಕರ್ತವ್ಯ ನಮ್ಮೆಲ್ಲರ ಮೇಲಿರುವುದು ಎಂದು ನನಗೆ ಅನ್ನಿಸುವುದು. ಅದರಲ್ಲಿ ನಮಗೆ ನಂಬಿಕೆ ಇದ್ದರೆ ಅದಕ್ಕೆ ನಾವು ಕಟಿಬದ್ಧರಾಗಿರಬೇಕು. ಅದರ ಮೂಲ ಆಶಯದಲ್ಲಿ ನಂಬಿಕೆಯಿಡುವಂತವರಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಮೂಲೋಚ್ಚಾಟನೆ ಮಾಡಲು ಪ್ರಯತ್ನಿಸುವ ಪ್ರಜಾಪ್ರಭುತ್ವ ವಿರೋಧಿಗಳನ್ನು ಸದೆಬಡಿಯಲು ನಮ್ಮೆಲ್ಲರ ಕ್ರಿಯೆಗಳನ್ನು ಮುಡಿಪಾಗಿಡಬೇಕು. ಈ ಎಲ್ಲಾ ವಿಷಯಗಳ ಮೇಲೆ ನಾವೆಲ್ಲಾ ಸಹಮತ ಹೊಂದಿದ್ದರೆ, ಇತರ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳೊಂದಿಗೆ ಸೇರಿ ಪ್ರಜಾಪ್ರಭುತ್ವ ಆಧಾರಿತ ನಾಗರಿಕತೆ ಉಳಿಸಿಕೊಂಡು ಹೋಗಲು ಪ್ರಯತ್ನಿಸೋಣ. ಪ್ರಜಾಪ್ರಭುತ್ವವು ಜೀವಂತವಾಗಿದ್ದರೆ ಅದರ ಪ್ರತಿಫಲವನ್ನು ನಾವು ಪಡೆದುಕೊಳ್ಳುವುದು ಖಚಿತ. ಒಂದು ವೇಳೆ ಪ್ರಜಾಪ್ರಭುತ್ವವು ನಿರ್ಜೀವವಾದರೆ ಅದು ನಮ್ಮ ಅವಸಾನವೂ ಕೂಡಾ, ಇದರ ಬಗ್ಗೆ ಯಾವುದೇ ಸಂಶಯ ಬೇಡ.’’
ಬಾಬಾಸಾಹೇಬರು ಹೇಳಿರುವ ಮೇಲ್ಕಂಡ ಗಂಭೀರವಾದ ಈ ಸಾಲುಗಳನ್ನು ನಾವೆಲ್ಲಾ ಕಿವಿ ತುಂಬಿಸಿಕೊಳ್ಳದಿದ್ದರೆ, ಮತ್ತೆ ಎದೆಗಿಳಿಸಿಕೊಳ್ಳದಿದ್ದರೆ ಹೇಗೆ? ಈಗ ಸದ್ಯ ಪ್ರಜಾತಂತ್ರದ ಹಬ್ಬದಲ್ಲಿದ್ದೇವೆ, ಈಗ ನಡೆದಿರುವ ವೋಟಿನ ಪ್ರಮಾಣ ಸ್ವಲ್ಪ ಗಾಬರಿ ಹುಟ್ಟಿಸುವಂತಿದೆ. ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ಶೇಕಡಾವಾರು 50ರಿಂದ 60ರಷ್ಟು ಪ್ರಮಾಣದಲ್ಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಶೇ. 70ರಿಂದ 80ರಷ್ಟಿದೆ. ಶಿಕ್ಷಿತರು ಮತ್ತು ಅಶಿಕ್ಷಿತರ ನಡುವೆ ನಮ್ಮ ಪ್ರಜಾಪ್ರಭುತ್ವದ ಮತ್ತು ವೋಟಿನ ಮೌಲ್ಯ ನಮಗೆ ಅರ್ಥವಾಗುತ್ತದೆ. ಎಲ್ಲಾ ತಿಳಿದವರು ಎಂಬ ಹುಂಬತನ ಇಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ. ಗ್ರಾಮಾಂತರ ಪ್ರದೇಶದ ನಮ್ಮ ಹಳ್ಳಿಯ ಜನ ನಿಜಕ್ಕೂ ವಿವೇಕವಂತರು. ಬಾಬಾಸಾಹೇಬರು ಬರೆದ ಮೇಲ್ಕಂಡ ಸಾಲುಗಳನ್ನು ಗಮನಿಸಿ ಹೇಳುವುದಾದರೆ ಮನುಷ್ಯನ ಘನತೆಯನ್ನು ನಾವು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಎಲ್ಲವನ್ನೂ ಪ್ರೀತಿಯಿಂದಲೇ ಕಟ್ಟಬೇಕು, ಮತ ಹಾಕುವುದನ್ನು ಕೂಡ. ಪ್ರೀತಿಯ ಹಕ್ಕು ಎಂದು ಭಾವಿಸಿದರೆ ಆಗ ಅದು ತುಂಬಾ ಸರಳವಾದದ್ದು ಎನ್ನಿಸುತ್ತದೆ. ಯಾರಪ್ಪಾ ಈ ಬಿಸಿಲಲ್ಲಿ ಹೋಗಿ ಕ್ಯೂ ನಿಂತು ವೋಟು ಹಾಕುತ್ತಾರೆ ಎಂದು ಮನಸ್ಸನ್ನು ಭಾರಮಾಡಿಕೊಂಡರೆ ಅದು ಕಂಡಿತ ಭಾರವೆಂಬಂತೆ ಅನ್ನಿಸುತ್ತದೆ. ‘ವೋಟು ಒಂದು ಮೌಲ್ಯ’ ಎನ್ನುವುದು ಗ್ರಾಮಾಂತರ ಪ್ರದೇಶದ ಜನರಿಗೆ ಗೊತ್ತಿಲ್ಲದಿದ್ದರೂ ವೋಟು ಹಾಕುವ ಮಹತ್ವ ಅವರಿಗೆ ಖಂಡಿತ ಗೊತ್ತು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹಾಕಾಣ್ಕೆಯೆಂದರೆ ನಮಗೆಲ್ಲಾ ಸಿಕ್ಕಿರುವ ಬಹಳ ದೊಡ್ಡ ಅವಕಾಶ ಮತ ಚಲಾವಣೆ. ಮತ ಚಲಾಯಿಸುವುದರ ಮಹತ್ವ ಗೊತ್ತಿದ್ದೂ, ಮತ ಚಲಾಯಿಸದಿದ್ದರೆ ನಮ್ಮ ಇರುವಿಕೆಯನ್ನೇ ಕಳೆದುಕೊಂಡಂತೆ. ಇದನ್ನೆಲ್ಲಾ ಹೇಳುವಾಗ ನಾನು ವೋಟನ್ನು ಹಾಕಿದಾಗ ಆದ ಸಂತೋಷ ಮತ್ತು ಬೆಂಗಳೂರಿನಲ್ಲಿ ಆದ ಮತ ಚಲಾವಣೆೆಯ ಶೇಕಡಾವಾರು ಮತದಾನ ಮನಸ್ಸಿಗೆ ಬೇಸರ ಅನ್ನಿಸಿತು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ಚುನಾವಣೆ ಸಂದರ್ಭದಲ್ಲಿ ಆಗುತ್ತಿರುವ ಘಟನಾವಳಿಗಳು, ಭಾಷಣಗಳು, ಸುಳ್ಳು ಮತ್ತು ಸತ್ಯಗಳು, ವೈಯಕ್ತಿಕ ತೇಜೋವಧೆಗಳು ಮತ್ತು ಸಾಮಾನ್ಯ ಜನರ ಅನಿಸಿಕೆಗಳು ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಹಿಂದಿರುಗಿ ಸಮುದ್ರಕ್ಕೆ ಸೇರಿದಂತೆ ಆಗಿದೆ.
ಸಾರ್ವಜನಿಕ ಜೀವನದಲ್ಲಿ ಮತ್ತು ವೈಯಕ್ತಿಕವಾಗಿಯೂ ಕೂಡಾ ನೈತಿಕತೆ ತುಂಬಾ ಮುಖ್ಯವಾದದ್ದು. ರಾಜಕಾರಣದಲ್ಲಿ ನಾಯಕನಾಗಿ ಕಾಣಿಸಿಕೊಂಡವರಿಗೆ ದಿನದ 24 ಗಂಟೆಗಳೂ ಜನರ ಜಯಘೋಷದ ಪ್ರಭಾವಳಿ ಇರುವುದಿಲ್ಲ. ಅದು ಒಂದು ಸಮಯಕ್ಕೆ ಮಾತ್ರ ಸೀಮಿತ. ಎಂತಹ ನಾಯಕನಿಗೂ ಏಕಾಂಗಿತನ ಇರುತ್ತದೆ ಮತ್ತು ಮನುಷ್ಯ ಮೂಲತಃ ಒಬ್ಬಂಟಿ. ಎಲ್ಲಾ ಸಂದರ್ಭದಲ್ಲೂ ಪ್ರಭಾವಳಿಯನ್ನು ಹೆಗಲಮೇಲೆ ಹೊತ್ತು ತಿರುಗಲು ಸಾಧ್ಯವಿಲ್ಲ, ಪ್ರಭಾವಳಿಯನ್ನು ಹೊತ್ತು ಮಲಗಲೂ ಸಾಧ್ಯವಿಲ್ಲ. ಮನುಷ್ಯನ ಕಣ್ಣಲ್ಲಿ ಹೊರಗಿನ ಪ್ರಪಂಚ ಮತ್ತು ಪ್ರಕೃತಿಯ ಹಾಗೆ ಒಳಗಿನ ಪ್ರಪಂಚದ ಪ್ರಕೃತಿ ಕೂಡಾ ಹಾಗೆಯೇ ಇರುತ್ತದೆ ಅದನ್ನು ಸಮಚಿತ್ತದಿಂದ ಧ್ಯಾನಿಸಬೇಕು. ಹೊರಗೆ ಕಂಡ ಜನಸ್ತೋಮ ತನ್ನೆದೆಯೊಳಗೆ ಇಳಿಯಬೇಕು ಇಂತಹ ಸಾರ್ವಜನಿಕ ಅನುಭವಗಳ ಜೊತೆಗೆ ಅಂಜಿಕೆ ಮತ್ತು ನೈತಿಕತೆ ಬಹಳ ಮುಖ್ಯವಾದದ್ದು. ಹಾಗೆಯೇ ಸಾರ್ವಜನಿಕ ಬದುಕಿನಲ್ಲಿ ವೈಯಕ್ತಿಕ ಬದುಕು ಗೊತ್ತೂಗೊತ್ತಿಲ್ಲದ ಹಾಗೆ ಸೇರಿ ಹೋಗಿರುತ್ತದೆ. ಆಗ ನಾಯಕನ ನಡೆ ನುಡಿ ಹೆಚ್ಚು ಎಚ್ಚರದಲ್ಲಿರಬೇಕಾಗುತ್ತದೆ. ತಂತಿಯ ಮೇಲೆ ನಡೆದಂತೆ ಎನ್ನುತ್ತಾರಲ್ಲ ಹಾಗೆ.
ಸಂಸ್ಕಾರ ಎನ್ನುವುದು ನಾವು ಹುಟ್ಟಿಬೆಳೆದ ಕುಟುಂಬ ಮತ್ತು ಪರಿಸರದಿಂದ ಬಂದಿರುತ್ತದೆ. ಕೆಲವರಿಗೆ ತಮ್ಮ ಕುಟುಂಬದಲ್ಲಿ ತುಂಬಿ ತುಳುಕುವಷ್ಟು ಸಂಪತ್ತಿನಿಂದ, ಅಧಿಕಾರದಿಂದ ಅಹಂ ಬಂದುಬಿಟ್ಟಿರುತ್ತದೆ. ಇದನ್ನು ಅರಗಿಸಿಕೊಳ್ಳಲಾಗದವರು ಎಚ್ಚರತಪ್ಪಿ ನಡೆಯುತ್ತಾರೆ. ಈ ಹೊತ್ತಿನ ಸಮಾಜ ತಂತ್ರಜ್ಞಾನದಿಂದಾಗಿ ಸಂಕೀರ್ಣವಾಗಿದೆ. ಅಂದರೆ ಯಾರೂ ಯಾರಿಗೂ ಏನನ್ನೂ ಹೇಳಲಾಗುವುದಿಲ್ಲ, ಅಷ್ಟು ಸೂಕ್ಷ್ಮವಾಗಿದೆ. ಈ ಕ್ಷಣ ಸಂತ ಕನಕದಾಸರ ಬಾಳೇಹಣ್ಣಿನ ಘಟನೆ ನೆನಪಾಗುತ್ತದೆ, ದೇವರು ಇಲ್ಲದ ಜಾಗ ಯಾವುದೂ ಇಲ್ಲ ಎನ್ನುವ ಮಾತು. ತಂತ್ರಜ್ಞಾನದ ಪರಿಕರಗಳು ಗೊತ್ತೂ ಗೊತ್ತಿಲ್ಲದ ಹಾಗೆ ಇದ್ದಿರಬಹುದು. ಯಾವತ್ತೂ ಇಲ್ಲದಷ್ಟು ಎಚ್ಚರ ಈ ಹೊತ್ತು ನಮಗೆಲ್ಲಾ ಬೇಕಾಗಿದೆ. ವಿಶೇಷವಾಗಿ ನಾವು ನೈತಿಕವಾಗಿದ್ದರೆ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕುವುದಿಲ್ಲ. ನಮ್ಮ ಜಿಲ್ಲೆ ಹಾಸನದಲ್ಲಿ ಆಗಿರುವ ಅನಾಹುತ ಇದಿಷ್ಟೂ ಹೇಳಲು ಕಾರಣ. ಈ ಬಗ್ಗೆ ಬರೆಯಲು ತುಂಬಾ ವಿಷಾದವೆನಿಸುತ್ತದೆ. ಒಂದು ಕ್ಷಣ ಪುರುಷ ದೌರ್ಜನ್ಯ ಇಷ್ಟು ಮಿತಿ ಮೀರಬಹುದೇ ಎಂದೆನಿಸುತ್ತದೆ.
ಇದನ್ನೆಲ್ಲಾ ಹೇಳುವಾಗ ನನ್ನಪ್ಪ ನೆನಪಾಗುತ್ತಾರೆ. ಕೃಷಿ ಕೂಲಿಕಾರರಾಗಿದ್ದ ನನ್ನ ಪೋಷಕರ ನೈತಿಕತೆ ಎಷ್ಟು ದೊಡ್ಡದು ಅನ್ನಿಸುತ್ತದೆ. ನಾನು ಬಾಲ್ಯದಲ್ಲಿ ಸ್ಕೂಲಿಗೆ ಹೋಗುವುದು ಎಂದರೆ, ಕೈಕಾಲು ಕಟ್ಟಿದ ಹಾಗೆ ಆಗುತ್ತಿತ್ತು. ಇಡೀ ದಿನ ಊರುಕೇರಿ ತಿರುಗಾಡಿಕೊಂಡು ಇರು, ಎಂದರೆ ಇದ್ದುಬಿಡುತ್ತಿದ್ದೆ. ಅಪ್ಪ ಅಮ್ಮ ಕೂಲಿಗೆ ಹೋಗುವವರೆಗೂ ಕಾಯುತ್ತಿದ್ದ ನಾನು ಅವರು ಆಕಡೆಗೆ ಹೋದ ಮೇಲೆ ಸ್ಕೂಲಿಗೆ ಚಕ್ಕರ್ ಹೊಡೆದು ಅಂಗಡಿ ಬೀದಿ ಸುತ್ತುತ್ತಿದ್ದೆ. ಹೀಗೆ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಇಟ್ಟಿದನ್ನು ನೋಡಿ ಬಾಯಲ್ಲಿ ನೀರು ಬಂತು. ತಿನ್ನೋಣವೆಂದರೆ ಜೇಬಲ್ಲಿ ಕಾಸಿಲ್ಲ, ತಿರುಗಿ ಮನೆಗೆ ಓಡಿ ಬಂದು ಮನೆಯೆಲ್ಲಾ ಹುಡುಕಾಡಿದರೂ ಐದು ಪೈಸೆ ಇದ್ದಿರಲಿಲ್ಲ, ಕಲ್ಲಂಗಡಿ ಹಣ್ಣು ಮತ್ತೆ ನೆನಪಾಯಿತು, ಮತ್ತೆ ಓಡಿದೆ. ಕಲ್ಲಂಗಡಿ ಮಾರುವವ ‘‘ಏನಕ್ಕಲಾ ಪದೇ ಪದೇ ಬರ್ತಿಯ, ದುಡ್ಡು ಇದ್ದರೆ ತಗಂಡು ತಿನ್ನು. ಇಲ್ಲದಿದ್ದರೆ ಅತ್ಲಾಗಿ ಹೋಗು’’ ಎಂದು ಬೈದ. ಆಸೆ ಯಾರಪ್ಪನದು ಅಲ್ಲ, ನಿಂತೆ. ಯಾರೋ ಬಂದು ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದರು. ಸರಿಯಾದ ಸಮಯಕ್ಕೆ ಬಸ್ ಬಂತು. ಅದನ್ನು ತಿನ್ನುತಿದ್ದವರು ಅರ್ಧ ತಿಂದು ಎಸೆದು ಹೋದರು, ಒಂದು ಕ್ಷಣ ಆಕಡೆ ಈಕಡೆ ನೋಡಿ ಎತ್ತಿಕೊಂಡು ಮಣ್ಣಾದರೂ ಒರೆಸಿಕೊಂಡು ತಿನ್ನುತ್ತಿದ್ದೆ. ಎಲ್ಲಿತ್ತೋ ನಮ್ಮಪ್ಪ ಪಟಾರನೆ ಹಿಂತಲೆಗೆ ಹೊಡೆದು ‘‘ಕಂಡೋರು ತಿಂದು ಬಿಸಾಕಿದ ಎಂಜಲು ತಿಂತೀಯ ನನ್ನ ಮಗನೇ ಸ್ಕೂಲ್ಗೆ ಹೋಗು ಅಂತಂತದ್ರೆ ಬೀದಿ ಸುತ್ತುತ್ತೀಯ’’ ಅಪ್ಪನ ಏಟಿಗೆ ತಲೆ ಗಿರ್ ಅಂದರೂ ಎಲ್ಲಿ ನನ್ನ ಅಪ್ಪ ಸ್ಕೂಲಿನ ಹತ್ರ ಕರಕೊಂಡು ಹೋಗಿ ಮೇಷ್ಟ್ರ ಹತ್ರ ಕೊಟ್ಟರೆ ನನ್ನ ಕತೆ ಮುಗೀತು ಎಂದುಕೊಂಡೆ. ಸದ್ಯ ಸೀದಾ ಮನೆಹತ್ರ ಕರಕೊಂಡು ಬಂದ ಅಪ್ಪ ಜಗಲಿಯಲ್ಲಿದ್ದ ಕಂಬಕ್ಕೆ ಕೈ ಕಾಲು ಸೇರಿದಂತೆ ಇಡೀ ದೇಹವನ್ನು ಕಟ್ಟಿಹಾಕಿದರು. ‘‘ಕಂಡೊರ್ ಮನೆಯ ರುಚಿ ನೋಡ್ತಿಯ, ಕಂಡೊರ್ ಎಂಜಲು ತಿಂತೀಯ. ಸಾವಿರ ರೂಪಾಯಿ ಅಲ್ಲೇ ಬಿದ್ದಿದ್ರೂ ಕಾಣಲಿಲ್ಲ ಅಂತ ಮುಂದಕ್ಕೆ ಹೋಗಬೇಕು. ನಮ್ಮದೇ ನಮಗಿಲ್ಲ ಇನ್ನೊಬ್ಬರು ತಿಂದ ಎಂಜಲು ತಿಂತೀಯ ಬೋ.. ಮಗನೇ. ಇನ್ನೊಂದು ದಿನ ಇಂತದ್ದು ಕಂಡರೆ ನೀನು ಹುಟ್ಟೇಯಿಲ್ಲ ಅನ್ನಿಸಿಬಿಡ್ತಿನಿ. ಸಾಯಂಕಾಲ ನಿಮ್ಮವ್ವ ಬರೋವರೆಗೂ ನೀನು ಹಿಂಗೇ ಬಿದ್ದಿರಬೇಕು. ನಿಂಗೆ ನೀರು ನೀಡಿ ಕೊಟ್ಟರೆ ಸೈ ಅಲ್ಲ’’ ಎಂದು ಮುರುಕಲು ಬಾಗಿಲನ್ನು ಹಾಕಿಕೊಂಡು ಎಲ್ಲೋ ಹೋದರು. ಸಾಯಂಕಾಲ ಬಂದ ಅವ್ವ ಅಳುತ್ತಲೇ ಕಟ್ಟುಬಿಚ್ಚಿ ‘‘ನನ್ ಮಗೀನ ಹಿಂಗ್ ಕಟ್ಟಿಹಾಕಿದ್ದಾನಲ್ಲ’’ ಅಂತ ಬೈದುಕೊಳ್ಳುತ್ತಲೇ ಅವ್ವ ‘‘ಇನ್ನೊಂದು ಸಲ ನೀನು ತಪ್ಪು ಮಾಡಿದೆ ಅಂತ ಗೊತ್ತಾದ್ರೆ ನಾನೇ ಸತ್ತೋಗ್ತಿನಿ’’ ಎಂದು ಹೇಳಿದ್ದು ನನ್ನ ಜೀವಮಾನದಲ್ಲಿ ತಪ್ಪು ಈವರೆಗೂ ಮಾಡಲು ಮನಸ್ಸು ಬರಲಿಲ್ಲ. ನಮ್ಮ ಮನೆಗಳಲ್ಲಿ ಅಗ್ಗವಾಗಿ ಸಿಗುತ್ತಿದ್ದಿದ್ದು ನೀರು ಮತ್ತೆ ಉಪ್ಪು ಮಾತ್ರ. ಆಗ ತಂದು ಆಗ ತಿನ್ನ ಬೇಕು. ಅಂಥ ಕಾಲದಲ್ಲೂ ನನ್ನ ಅವ್ವ ಅಪ್ಪ ನೈತಿಕತೆಯನ್ನು ಬಿಟ್ಟವರಲ್ಲ. ಇದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಮಾತು ‘‘ಮನುಷ್ಯನ ಘನತೆ ಮತ್ತು ವ್ಯಕ್ತಿತ್ವ ಹೇಳಿಕೊಡದಿದ್ದರೂ ಬಡವರಲ್ಲಿ ಸಹಜವಾಗಿಯೇ ಇರುವಂತಹ ದೊಡ್ಡ ಗುಣ’’. ಇಂತಹ ನೈತಿಕತೆಯೇ ದೇಶದ ನಿಜವಾದ ಆಸ್ತಿ ಮತ್ತು ಸಂಪತ್ತು.
ಅಧಿಕಾರದ ದರ್ಪ, ಅಹಂಕಾರ ತುಂಬಿ ತುಳುಕುವವರ ಕುಟುಂಬಗಳಲ್ಲಿ ಇದೆಲ್ಲಾ ಜುಜುಬಿ ಎನ್ನಿಸಬಹುದು. ಇವರು ಮಾಡುವ ತಪ್ಪುಗಳೂ ಕೂಡ ತಪ್ಪುಗಳೇ ಅನ್ನಿಸುವುದಿಲ್ಲ, ಆದರೆ ನಮ್ಮೊಳಗಿನ ಅಂತರಾತ್ಮಕ್ಕೆ ನಮ್ಮ ಸರಿ ತಪ್ಪುಗಳು ಗೊತ್ತೇ ಇರುತ್ತದೆ. ಈ ಸಂದರ್ಭದಲ್ಲಿ ನಮ್ಮವ್ವ ಒಂದು ಮಾತು ಹೇಳುತ್ತಿದ್ದರು ‘‘ಯಾರಿಗೆ ಹೆದರದಿದ್ದರೂ ತನ್ನ ನೆರಳಿಗಾದರೂ ಹೆದರಬೇಕು’’ ಎಂದು. ಈ ಪ್ರಜ್ಞೆ ನಮ್ಮ ಮನಸ್ಸಿನಲ್ಲಿ ಸದಾ ಜಾಗೃತಿಯಲ್ಲಿದ್ದರೆ, ಎಲ್ಲಾ ಸಂಪತ್ತು ಅಧಿಕಾರ ಮೀರಿದ ವಿನಯ ನಮ್ಮನ್ನು ಕಾಪಾಡುತ್ತದೆ. ಆದರೆ ದರ್ಪ ಮತ್ತು ಅಹಂಕಾರದಲ್ಲಿ ಮೆರೆಯುವವರಿಗೆ ಮತ್ತು ಕಾನೂನನ್ನು ಮೀರಿದವರಿಗೆ ಕೊನೆಗೆ ಪ್ರಕೃತಿ ಕೂಡಾ ಕ್ಷಮಿಸುವುದಿಲ್ಲ, ಆಗ ತನಗೂ ಗೊತ್ತಿಲ್ಲದ ಹಾಗೆ ಇಡೀ ಸಮಾಜಕ್ಕೆ ತಪ್ಪಿತಸ್ಥನಾಗಿ ಕಾಣುವುದನ್ನು ಯಾರಿಂದಲೂ ತಡೆಹಿಡಿಯಲಾಗದು. ಇತ್ತೀಚೆಗೆ ಹಾಸನದಲ್ಲಿ ನಡೆದ ಅನಾಹುತದ ಹಿನ್ನೆಲೆಯಲ್ಲಿ ಇಷ್ಟು ಹೇಳಬೇಕಾಯಿತು. ಅನ್ಯಾಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲೇ ಬೇಕು ಎನ್ನುವುದು ಮಾನವಂತರೆಲ್ಲರ ಆಶಯ.
ಇತ್ತೀಚಿನ ದಿನಗಳಲ್ಲಿ ಸಂಪತ್ತಿನ ಹಂಚಿಕೆಯ ಚರ್ಚೆ ನಡೆಯುತ್ತಿದೆ. ನಮ್ಮ ಪವಿತ್ರ ಸಂವಿಧಾನದ ಆಶಯದಂತೆ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ನಾವೆಲ್ಲಾ ಬದುಕುತ್ತಿದ್ದೇವೆ. ಯಾರು ಯಾರದ್ದನ್ನು ಕಿತ್ತುಕೊಂಡು ಬದುಕುತ್ತಿಲ್ಲ. ಇವತ್ತಿಗೂ ಬಸವಣ್ಣ ಹೇಳಿದ ಕಾಯಕ ಮತ್ತು ದಾಸೋಹದ ಚಿಂತನೆಯಲ್ಲಿ ಕರ್ನಾಟಕದ ಹತ್ತಾರು ಮಠಗಳು ಅನ್ನ ಮತ್ತು ಅಕ್ಷರದ ದಾಸೋಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುವುದು ನಮ್ಮ ಕಣ್ಣಮುಂದಿದೆ. ಭೂದಾನ ಚಳವಳಿಯಲ್ಲಿ ಆಚಾರ್ಯ ವಿನೋಬಾ ಅವರು ಲಕ್ಷಾಂತರ ಎಕರೆ ಭೂಮಿಯನ್ನು ಉಳ್ಳವರಿಂದ ಪಡೆದು ಇಲ್ಲದವರಿಗೆ ಹಂಚಿದ್ದು ನಮ್ಮ ಕಣ್ಣಮುಂದಿದೆ. ಆಚಾರ್ಯ ವಿನೋಬಾ ಅವರು ಇಂತಹದ್ದೇ ವಿಚಾರಗಳನ್ನು ಹೊಂದಿದ್ದ ಕುವೆಂಪು ಅವರ ಜೊತೆ ಅವರ ಮನೆಯಲ್ಲೇ ಉಳಿದು ಚಿಂತಿಸಿದ್ದ ಘಟನೆಗಳು ನೆನಪಾಗುತ್ತದೆ. ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಆಶಯವನ್ನು ಎಲ್ಲರೆದೆಗಳಿಗೆ ಬಿತ್ತಿದ ಕುವೆಂಪು ಸಮಾನತೆಯ ಕನಸುಗಳನ್ನು ಕಂಡಿದ್ದ ಭೂದಾನ ಚಳವಳಿಯ ಆಶಯವನ್ನು ಹೊಂದಿದ್ದ ಇಬ್ಬರ ಆಶಯಗಳು ನಮಗೆಲ್ಲಾ ಆದರ್ಶವಲ್ಲವೇ? ಈ ನೆಲ ಪ್ರೀತಿಗೆ, ಸಹಬಾಳ್ವೆಗೆ ಹಂಚಿ ತಿನ್ನುವ ಕುಟುಂಬಕ್ಕೆ ಸಾಕ್ಷಿಯಾಗಿದೆ. ನಾಳೆಯ ಬೆಳಕಿಗೂ ಕೈಮರವಾಗಿದೆ. ಇಂತಹ ಮಾನವೀಯ ಕಾನೂನುಗಳು ಸಂವಿಧಾನದಲ್ಲೂ ಅಡಕವಾಗಿವೆ. ಇದರ ಬಗ್ಗೆ ಕೆಲವರು ಅಪಸ್ವರವೆತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೂ ಈ ಹೊತ್ತು ಜಮೀನ್ದಾರಿಕೆ, ಭೂಮಾಲಕತ್ವ, ಬಂಡವಾಳಶಾಹಿಗಳು ಸಂಪತ್ತನ್ನು ಸಂಗ್ರಹಿಸಿಕೊಂಡು ಬದುಕುತ್ತಿರುವುದನ್ನು ಕಾಣಬಹುದು. ಇದನ್ನು ಹೇಳುವ ಹೊತ್ತಿನಲ್ಲಿ ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಚಲನಚಿತ್ರ ‘ಕಾಂತಾರ’ವನ್ನು ಮತ್ತೆ ಟಿವಿಯಲ್ಲಿ ನೋಡಿದೆ. ಅದರ ಕೊನೆಯ ದೃಶ್ಯವಂತೂ ಅತ್ಯಂತ ಪರಿಣಾಮಕಾರಿಯಾಗಿತ್ತು. ಕೊನೆಯಲ್ಲಿ ಭೂಮಾಲಕ ಶೋಷಿತರಿಗೆ ಅನ್ಯಾಯ ಮಾಡಿದ್ದು ಶೋಷಿತರಿಗೂ ತಿಳಿಯುತ್ತದೆ. ಭೂಮಾಲಕನಿಗೆ ತಾನು ಅನ್ಯಾಯ ಮಾಡುತ್ತಿರುವುದು ಶೋಷಿತರಿಗೆ ತಿಳಿದಿದೆ ಎನ್ನುವುದೂ ಆತನಿಗೆ ತಿಳಿಯುತ್ತದೆ. ಆಗ ತನ್ನ ದಂಡಿನೊಂದಿಗೆ ಕೋವಿ ಹಿಡಿದು ಜಮೀನ್ದಾರ ಬರುತ್ತಾನೆ. ಜಮೀನ್ದಾರ ದಂಡಿನೊಂದಿಗೆ ಬರುವ ವಿಷಯ ಶೋಷಿತರಿಗೂ ತಿಳಿದು, ಜಮೀನ್ದಾರನ ವಿರುದ್ಧ ಹೋರಾಡಲು ಸಿದ್ಧರಾಗಿರುತ್ತಾರೆ. ಎರಡೂ ಕಡೆಯವರಿಗೂ ಮಾರಾಮಾರಿಯಾಗುತ್ತದೆ. ಶೋಷಿತರ ಕೈ ಮೇಲಾಗುವುದನ್ನು ಗಮನಿಸಿದ ಜಮೀನ್ದಾರ ಬಂದೂಕು ಕೈಗೆತ್ತಿಕೊಂಡು ಎದುರಾಳಿಗಳನ್ನು ಹೊಡೆದು ಉರುಳಿಸುತ್ತಿರುವಾಗ ಅವನ ಬಂದೂಕಿನ ತುದಿ, ಎದುರಾಳಿ ಪಕ್ಷದ ಒಂದು ಮಗುವಿನ ಕಡೆ ಹೋಗುತ್ತದೆ. ಪಕ್ಕದಲ್ಲಿದ್ದವನು ‘‘ಯಜಮಾನ್ರೆ ಅದು ಮಗು’’ ಎಂದು ಎಚ್ಚರಿಸುತ್ತಾನೆ. ಅದಕ್ಕೆ ಯಜಮಾನ ಉತ್ತರವಾಗಿ ‘‘ನನಗೂ ಗೊತ್ತು ಅದು ಮಗೂ ಅಂತ. ಈಗ ಅದನ್ನು ಮುಗಿಸಲಿಲ್ಲ ಎಂದರೆ ಬೆಳೆದು ದೊಡ್ಡವನಾಗಿ ಮತ್ತೆ ಅವನೂ ಭೂಮಿ ಕೇಳಲು ಬರಬಹುದು’’ ಎಂದು ಆ ಮಗುವಿನ ಮೇಲೆ ಗುಂಡು ಹಾರಿಸುತ್ತಾನೆ. ಇದು ಭೂಮಾಲಕರು ಭೂ ರಹಿತರ ಮೇಲೆ ನಡೆಸುವ ಮಹಾಕ್ರೌರ್ಯ. ಇದು ನಿಲ್ಲಬೇಕಾದರೆ ಪ್ರತೀ ಕುಟುಂಬವೂ ಕನಿಷ್ಠ ಭೂಮಿ ಹೊಂದಬೇಕಾದ ಅಗತ್ಯವಿದೆ. ಎಲ್ಲರೂ ಎಲ್ಲರಿಗಾಗಿ ಎನ್ನುವ ತತ್ವ ಪ್ರಚಾರವಾಗಬೇಕಿದೆ. ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ ಅನುಪಮವಾದದ್ದು. ಇದರ ಆಶಯಗಳನ್ನು ಸಾಕಾರಗೊಳಿಸುವ ಕನಸು ನಮ್ಮೆಲ್ಲರದಾಗಬೇಕು ಅದಕ್ಕೆ ಬದ್ಧರಾಗೋಣ. ಕೊನೆಯಲ್ಲಿ ಬುದ್ಧನ ಮಾತು ನೆನಪಾಗುತ್ತದೆ. ಪ್ರೀತಿ ಪ್ರೀತಿಯನ್ನು ಹೆಚ್ಚಿಸುತ್ತದೆ. ದ್ವೇಷ ದ್ವೇಷವನ್ನು ಹೆಚ್ಚಿಸುತ್ತದೆ. ನಾವೆಲ್ಲರೂ ಮೊದಲ ವಾಕ್ಯದ ಪರವಾಗಿರೋಣ. ಆಗ ಪ್ರತೀ ಜೀವಕ್ಕೂ ಬೆಲೆ ಬರುತ್ತದೆ, ಬದುಕುವ ಹಕ್ಕು ಎಲ್ಲರದಾಗುತ್ತದೆ. ಪ್ರಜಾಪ್ರಭುತ್ವ ಬಲಿಷ್ಠವಾಗಬೇಕಾದರೆ ಮತದಾರ ಪ್ರಭುಗಳು ಮತ ಹಾಕುವುದನ್ನು ಮರೆಯಬಾರದು.