Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ‘ಇರುವೆ’ಯ ಉಸಿರನ್ನು ಸಹಿಸದವರಿಗೆ

‘ಇರುವೆ’ಯ ಉಸಿರನ್ನು ಸಹಿಸದವರಿಗೆ

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್2 Sept 2024 2:12 PM IST
share
‘ಇರುವೆ’ಯ ಉಸಿರನ್ನು ಸಹಿಸದವರಿಗೆ
‘ಜಗತ್ತಿನ ಅತಿದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ’. ತಾಳ್ಮೆ ಒಂದು ಇದ್ದರೆ ಇಂತಹ ಅನಾಹುತಗಳಿಗೆ ಆಸ್ಪದವಾಗುವುದಿಲ್ಲ. ವೈಯಕ್ತಿಕವಾಗಿ ಎಲ್ಲರಿಗೂ ಎಂತಹ ಸಂದರ್ಭದಲ್ಲೂ ಸಹನೆ ಮತ್ತು ತಾಳ್ಮೆ ಬಂದು ಬಿಟ್ಟರೆ ಯಾರಿಗೂ ತೊಂದರೆಯಾಗುವುದಿಲ್ಲ ಮತ್ತು ಯಾರಿಗೂ ನೋವುಂಟಾಗುವುದಿಲ್ಲ. ಈ ಅರಿವು ಸದಾ ನಮ್ಮೊಟ್ಟಿಗೆ ಇರಬೇಕು. ನನ್ನಂಥ ಸಾಮಾನ್ಯರು ಇದಕ್ಕಿಂತ ಹೆಚ್ಚಿಗೆ ಹೇಳಲು ಬರುವುದಿಲ್ಲ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯೊಂದರಲ್ಲಿ ‘ಜಗತ್ತಿನ ಅತಿದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ’ ಎಂಬ ಸಾಲನ್ನು ಓದಿದೆ. ಬುದ್ಧ ಹೇಳಿದ ಈ ಮಾತು ಸಾರ್ವಕಾಲಿಕವಾಗಿ ಹೌದು ಎನ್ನಿಸುತ್ತದೆ. ಓದಿದ ನನಗೂ ನನ್ನಂತಹ ಅನೇಕರಿಗೆ ಈ ಸಾಲು ಇಷ್ಟವಾಗುತ್ತದೆ. ಆದರೆ ಇದು ಎಲ್ಲಿಯವರೆಗೆ ಸಾಧ್ಯ? ಎನ್ನುವುದು ಮಾತ್ರ ಕಾಡುತ್ತಲೇ ಇರುತ್ತದೆ. ನಾನು ನನ್ನ ಸಮುದಾಯದವರನ್ನು ಸಹನೆಯ ಕುಲದವರು ಎಂದು ಕರೆಯುತ್ತೇನೆ. ಶತಮಾನಗಳಿಂದಲೂ ಎಲ್ಲವನ್ನೂ ಸಹಿಸಿಕೊಂಡವರು. ಭೂಮಿಯನ್ನು ನಾವು ಕ್ಷಮಯಾಧರಿತ್ರಿ ಎಂದು ಕರೆಯುತ್ತೇವೆ. ಪ್ರಕೃತಿಗೆ ಸೇರಿದ ಈ ಭೂಮಿ ಕೂಡಾ ಅಪಾರವಾದ ಒತ್ತಡವನ್ನು ತಾಳಲಾಗದೆ ಕೆಲವೊಮ್ಮೆ ಬಾಯಿಬಿಡುತ್ತದೆ, ಸಿಡಿಯುತ್ತದೆ. ಜ್ವಾಲಾಮುಖಿಯಾಗಿ ಅಗ್ನಿಯ ಲಾವಾರಸವನ್ನೇ ಸುರಿಸಿ ಎಲ್ಲವನ್ನೂ ಸುಟ್ಟು ಬೂದಿ ಮಾಡುತ್ತದೆ. ನೀರನ್ನು ನಾವು ಜೀವಜಲ ಎನ್ನುತ್ತೇವೆ. ನೀರಿಲ್ಲದ ಜೀವ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಬ್ರೆಕ್ಟ್ ಒಂದೆಡೆ, ನೀರು ಅತ್ಯಂತ ಮೃದುವು ಮತ್ತು ಕಠಿಣವಾದದ್ದು ಅಂತ ಹೇಳುತ್ತಾನೆ. ನೀರು ತಿಳಿಯಾದದ್ದೂ, ತೆಳುವಾದದ್ದೂ ಹೌದು. ಆದರೆ ಈಗ ನಾವು ಎಲ್ಲಿನೋಡಿದರೂ ನೀರೇ. ಈ ಮಳೆಗಾಲದಲ್ಲಿ ಎಲ್ಲಾನದಿ, ತೊರೆ, ಹಳ್ಳಗಳೆಲ್ಲಾ ಉಕ್ಕಿ ಹರಿಯುತ್ತಿವೆ. ತನಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ. ರಭಸವಾಗಿ ಹರಿಯುವ ನೀರನ್ನು ದಾಟಲು ಸಾಧ್ಯವೇ ? ಹೀಗೆ ಪ್ರಕೃತಿ ಎಲ್ಲವನ್ನು ಪೊರೆಯುತ್ತಿರುವ ಹೊತ್ತಿಗೇ, ಅತಿವೃಷ್ಟಿ ಮತ್ತು ಅನಾವೃಷ್ಟಿ ಸೃಷ್ಟಿಯಾಗುತ್ತಿರುವುದನ್ನು ನಾವೆಲ್ಲಾ ಗಮನಿಸುತ್ತಿದ್ದೇವೆ.

ಜೀವಕುಲದಲ್ಲಿ ಯಾವ ಪ್ರಾಣಿಗೆ ಏನೇ ಆದರೂ ಪ್ರತಿಕ್ರಿಯಿಸುತ್ತವೆ ಮತ್ತು ಪ್ರತಿಭಟಿಸುತ್ತವೆ. ಆದರೆ ಮನುಷ್ಯಕುಲದಲ್ಲಿ ಕೆಲವರನ್ನು ಕತ್ತಲಲ್ಲಿಡಲಾಯಿತು. ಆ ಕತ್ತಲಲ್ಲಿ ಇಟ್ಟ ಸಮುದಾಯವೇ ಅಸ್ಪಶ್ಯ ಸಮುದಾಯ. ಭಾರತದ ಈ ಅಸ್ಪಶ್ಯ ಸಮುದಾಯ ಸಹಿಸಿಕೊಂಡಷ್ಟು ಜಗತ್ತಿನಲ್ಲಿ ಯಾವ ಸಮುದಾಯವೂ ಸಹಿಸಿಕೊಂಡಿಲ್ಲ ಅನ್ನಿಸುತ್ತದೆ. ಅಕಸ್ಮಾತ್ ಬಾಬಾ ಸಾಹೇಬರು ಈ ನೆಲದಲ್ಲಿ ಹುಟ್ಟದೇ ಹೋಗಿದ್ದರೆ ನಮ್ಮ ಬಾಯಿಯನ್ನೇ ಹೊಲಿದುಬಿಡುತ್ತಿದ್ದರು ಅನ್ನಿಸುತ್ತದೆ. ಈಗಲೂ ಅನೇಕ ಕಡೆ ತುಟಿ ಬಿಚ್ಚದೆ ಬದುಕುತ್ತಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇಂತಹ ಘಟನೆಗಳನ್ನು ಹೇಳಬಾರದು ಅನ್ನಿಸಿದರೂ, ಅವೇ ದುತ್ ಎಂದು ಎದುರಾಗುತ್ತವೆ. ಒಬ್ಬೊಬ್ಬ ಅಸ್ಪಶ್ಯನ ಬದುಕಿನಲ್ಲಿ ನೂರಾರು, ಸಾವಿರಾರು ಭಾದೆಗಳು, ಸಂಕಟಗಳು ಬಂದು ಹೋಗಿರುತ್ತವೆ. ಇವನ್ನೆಲ್ಲಾ ಅನುಭವಿಸುತ್ತಾ ಈ ಬದುಕೇ ಹೀಗೆ ಅಂದುಕೊಂಡರೂ ಈ ಅಸ್ಪೃಶ್ಯತೆಯ ಅವಮಾನ ಇದೆಯಲ್ಲಾ ಅದು ಮಾತ್ರ ಹೇಳಲಾಗದ ಸಂಕಟ, ನೋವು, ಅವಮಾನ, ಮೆ,ತುಂಬಾ ಮುಳ್ಳು ಚುಚ್ಚಿದ ಅನುಭವ.

ಈ ಘಟನೆಗೆ ಹಿನ್ನೆಲೆ ಎಂಬಂತೆ ನನ್ನ ಸ್ನೇಹಿತರೊಬ್ಬರು ದಾವಣಗೆರೆಯಿಂದ ಫೋನ್ ಮಾಡಿದ್ದರು. ಇಬ್ಬರ ಕುಶಲೋಪರಿಯ ನಂತರ ನಾನು ಅವರಿಗೆ ಏನು ಹೇಳಬೇಕೋ ಅದನ್ನೇ ಅವರು ಪ್ರಸ್ತಾಪಿಸಿದರು. ‘ಏನು ಸುಬ್ಬಣ್ಣ, ಸುಮ್ಮನೆ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದ ದಲಿತ ಯುವಕನ ಕೈ ಕಡಿದಿದ್ದಾರೆ ಎಂದು ಪತ್ರಿಕೆಯಲ್ಲಿ ಓದಿದೆ. ಮನಸ್ಸಿಗೆ ತುಂಬಾ ನೋವಾಯಿತು’ ಎಂದರು. ‘ನಿಜ ಸರ್, ನೀವು ಹೇಳಿದ ಯುವಕನನ್ನು ಸೈಂಟ್ ಜಾನ್ ಆಸ್ಪತ್ರೆಯಲ್ಲಿ ಹೋಗಿ ಭೇಟಿ ಮಾಡಿ ಮಾತನಾಡಿಕೊಂಡು ಬಂದೆ’ ಎಂದೆ.

ಅವರು ಆಶ್ಚರ್ಯದಿಂದ ‘ಹೌದಾ, ಹೇಗಿದ್ದಾನೆ ಕೈ ಜೋಡಿಸಿದ್ದಾರ, ಆರೊಗ್ಯವಾಗಿದ್ದಾನ’ ಎಂದು ಒಮ್ಮೆಲೆ ನಾಲ್ಕೈದು ಪ್ರಶ್ನೆಗಳನ್ನು ಕೇಳಿದರು. ನಾನು ‘ಸಮಾಧಾನವಾಗಿ ಇರಿ ಸರ್, ನಾವೆಲ್ಲಾ ಹೀಗೆ ಮಹಾ ಭಾವುಕರು. ಯುವಕ ಸದ್ಯ ಆರೊಗ್ಯವಾಗಿದ್ದಾನೆ. ಈ ವಿಷಯ ನಾವಿಬ್ಬರೂ ಮಾತನಾಡಿದರೆ ಇನ್ನಷ್ಟು ಹೆಚ್ಚು ಭಾವುಕರಾಗುತ್ತೇವೆ. ನೀವು ನಿವೃತ್ತಿ ಆದಿರಿ ಎಂದು ತಿಳಿಯಿತು. ಹೇಗಿದೆ ಜೀವನ?’ ಎಂದು ಕೇಳಿದೆ. ಅವರ ಸೇವೆಯ ಕುರಿತು ಮಾತನಾಡುತ್ತ ಇಂಥದ್ದೇ ಇನ್ನೊಂದು ಘಟನೆಯನ್ನು ವಿವರಿಸಿದರು ‘ನೋಡಿ ಭೀಮಾ ಸಾಹೇಬರು ಇಲ್ಲದೇ ಹೋಗಿದ್ದರೆ ನಾವೆಲ್ಲಾ

ಏನಾಗುತ್ತಿದ್ದೆವೋ ಏನೋ. ನಾನು ಸೇವೆಯಲ್ಲಿದ್ದಾಗ ಒಂದು ಪಟ್ಟಣ ಪ್ರದೇಶದಲ್ಲಿ ಬಾಡಿಗೆಗೆ ಮನೆ ಹುಡುಕುತ್ತಾ ಹೋದೆ. ನನಗೆ ಗೊತ್ತಿತ್ತು, ಎಲ್ಲಿ ಹೋದರೂ ನೀವು ಯಾವ ಜಾತಿ? ಯಾವ ಸಮುದಾಯ? ಎಂದು ಕೇಳುತ್ತಾರೆ ಎಂದು ಕೆಲವು ಕಡೆ ಸುಳ್ಳು ಹೇಳಿ ಬದುಕಿ ಬಂದಿದ್ದಾಯಿತು. ಒಂದು ಗೇಟಿಗೆ ಮನೆ ಬಾಡಿಗೆಗೆ ಇದೆ ಎಂದು ಬೋರ್ಡ್ ಹಾಕಿದ್ದರಿಂದ ಹೋಗಿ ವಿಚಾರಿಸಿದೆ. ಪ್ರಾರಂಭಕ್ಕೆ ಯಾರು? ಏನು? ಎಲ್ಲಿ ಕೆಲಸ ಮಾಡುತ್ತೀರ? ಎಂದು ಎಲ್ಲಾ ಕೇಳಿದರು. ಸರಕಾರಿ ಕೆಲಸ ಅಂತ ಖಾತ್ರಿ ಮಾಡಿಕೊಂಡರು. ಕೊನೆಗೆ ಮೂಲಕ್ಕೆ ಬಂದರು ‘ತಮ್ಮದು ಯಾವ ಮತ’.

ನಾನು ‘ಹಿಂದೂ ಮತ ಅಂದೆ’ ಬೇಕೂ ಅಂತಲೇ. ಹಿಂದೂ ಮತ ಅಂದಿದ್ದಕ್ಕೆ ‘ಹಿಂದೂ ಹೌದು ಅದರಲ್ಲಿ ಯಾವುದು’ ಅಂದರು.

‘ಹಂಗೇನು ಇರಲ್ಲ ಸರ್, ಹಿಂದೂ ಅಂದರೆ ನಾವೆಲ್ಲಾ ಒಂದು ಅಲ್ಲವಾ ಸರ್’ ಅವನಿಗೆ ಈ ಉತ್ತರ ಕಸಿವಿಸಿ ಉಂಟುಮಾಡಿತು.

‘ನೀವು ವೆಜ್ಜಾ ನಾನ್ ವೆಜ್ಜಾ’ ಅಂದರು. ನಾನು ‘ನಾನ್ ವೆಜ್’ ಅಂದೆ.

‘‘ಹೋ ನೀವು ಒಕ್ಕಲಿಗರ?’’ ಅಂದರು. ಅಲ್ಲ ಅಂದಿದ್ದಕ್ಕೆ ಸ್ವಲ್ಪ ತಡೆದು ‘‘ಇಲ್ಲಿ ನೋಡಿ. ಅಗೋ ಅಲ್ಲಿ ದೂರದಲ್ಲಿ ಕಸದ ರಾಶಿಯಲ್ಲಿ ಚಿಂದಿ ಆಯ್ತಾ ಇದ್ದಾರಲ್ಲ, ಅವರಿಗೆ ಬೇಕಾದ್ರೆ ಮನೆ ಕೊಡ್ತೀನಿ. ಆದ್ರೆ ಈ ‘ಎಸ್ಸಿಗಳಿಗೆ’ ಮಾತ್ರ ಮನೆ ಕೊಡಲ್ಲ’’ ಅಂದುಬಿಟ್ಟ. ಆ ಮಾತನ್ನು ಕೇಳಿ ‘‘ಎಸ್ಸಿಗೆ ಕೊಡಲ್ಲ ಅಂದ್ರಲ್ಲ.

ನೀವು ಈ ಶಬ್ದ ಉಪಯೋಗಿಸುವ ಹಾಗಿಲ್ಲ ಸರ್. ನಾನು ಪೊಲೀಸ್‌ಗೆ ಕಂಪ್ಲೇಂಟ್ ಕೊಡಬೇಕಾಗುತ್ತೆ’’ ಅಂದಿದ್ದಕ್ಕೆ ‘‘ಅಯ್ಯೋ ನಾವು ಹಳ್ಳಿಯಲ್ಲಿ ಹೀಗೆ ಕರೆಯದು’’ ಎಂದು ಹೇಳಿ ಒಳ ಹೋಗಲು ನೋಡಿದ. ನಾನು ತಡೆದು ‘‘ನೋಡಿ ಸರ್, ಅಲ್ಲಿ ಕಸ ಆಯುತ್ತಿದ್ದಾರಲ್ಲ ನನಗೆ ಗೊತ್ತಿರುವವರು. ನೀವು ಅವರಿಗೆ ಗ್ಯಾರಂಟಿ ಮನೆ ಕೊಡ್ತೀರಾ?’’ ಎಂದು ಕೇಳಿದೆ. ‘‘ಮನೆ ಕಟ್ಟಿರುವುದು ನಾನು, ನಾನು ಯಾರಿಗೆ ಬೇಕಾದರೂ ಮನೆ ಕೊಡುತ್ತೇನೆ. ನೀನ್ಯಾರು ಅದನ್ನು ಕೇಳುವುದಕ್ಕೆ?’’ ಎಂದು ಏಕ ವಚನದಲ್ಲಿ ದಬಾಯಿಸಿ ಒಳ ಹೋದ.

‘‘ನಾನು ನಿಮ್ಮ ಬಗ್ಗೆ ಪೊಲೀಸ್ ಸ್ಟೇಷನ್‌ಗೆ ಕಂಪ್ಲೇಂಟ್ ಕೊಡುವೆ’’ ಅಂದಿದ್ದಕ್ಕೆ ‘‘ಯಾರಿಗೆ ಬೇಕಾದರೂ ಕಂಪ್ಲೇಂಟ್ ಕೊಡು. ಅದು ಏನ್ ಮಾಡಿಕೊಳ್ಳುತ್ತಿಯೋ ಮಾಡಿಕೊ ಹೋಗು’’ ಅಂದಿದ್ದಾನೆ. ನನ್ನ ಸ್ನೇಹಿತರಿಗೆ ಇದೆಲ್ಲಾ ಕೇಳಿ ಸುಸ್ತಾದಂತೆ ಆಗಿದೆ. ಹಾಗಾದರೆ ಈ ಮನೆಯನ್ನು ಇವನೊಬ್ಬನೇ ಕಟ್ಟಿದ್ದಾನ, ಇವನ ಮನೆ ಕಟ್ಟಲಿಕ್ಕೆ ನಮ್ಮ ಸಮುದಾಯದ ಯಾರೂ ಕೆಲಸ ಮಾಡಿಲ್ಲವೇ ಅಥವಾ ನನ್ನ ಸಮುದಾಯ ಇವನಿಗೆ ಏನು ಅಪಚಾರ ಮಾಡಿದೆ. ಅಕಸ್ಮಾತ್ ನಾನು ಇದನ್ನು ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಅಲ್ಲಿ ಏನು ನಡೆಯುತ್ತದೆ ಎಂದು ಹೇಳುವ ಅಗತ್ಯ ನನಗೆ ಕಂಡು ಬರಲಿಲ್ಲ. ತುಂಬ ಬೇಸರ ಎನಿಸಿ ಮನೆಯ ಕಡೆ ಹೆಜ್ಜೆ ಹಾಕತೊಡಗಿದೆ. ಅವನು ಇಂಥವರಿಗೆ ಬಾಡಿಗೆ ಮನೆ ಕೊಡಲಾಗುವುದು ಎಂದು ಬೋರ್ಡಿನಲ್ಲಿ ಬರೆಯಿಸಿ ಹಾಕಬಹುದಿತ್ತಲ್ಲ ಎಂದು ನನಗೆ ನಾನೇ ಯೋಚಿಸುತ್ತಾ ಬಂದೆ. ನಮ್ಮಂಥವರಿಗೆ ಬರೀ ಪ್ರಶ್ನೆಗಳೇ ಇವೆ, ಅವರಿಗೆ ಎಲ್ಲದಕ್ಕೂ ಉತ್ತರವಿದೆ. ನಾವು ಬರೀ ಪ್ರಶ್ನೆಗಳಲ್ಲೇ ಬದುಕುತ್ತಿದ್ದೇವೆ ಅನ್ನಿಸಿತು. ಗೆಳೆಯ ಕೈ ಕಡಿಸಿಕೊಂಡ ವಿಷಯವನ್ನು ಹೇಳಲು ಹೋಗಿ ತನ್ನ ಮನಸ್ಸು ಕೆಡಿಸಿದ ಘಟನೆಯನ್ನು ಹೇಳುವ ಹೊತ್ತಿಗೆ ಅವರ ದನಿ ಆದ್ರವಾಗಿತ್ತು. ಸರ್ ಇರಲಿ ಇಂಥಹದ್ದನ್ನೆಲ್ಲಾ ನೂರಾರು ಸಾವಿರಾರು ಕೇಳಿದ್ದೇವೆ. ಧೈರ್ಯಗುಂದುವ ಅಗತ್ಯವಿಲ್ಲ, ಬಾಬಾ ಸಾಹೇಬರು ಧೈರ್ಯಗುಂದಿದ್ದರೆ ಇದನ್ನೆಲ್ಲ ನಾವಿಂದು ಹಂಚಿಕೊಳ್ಳುವ ವಾತಾವರಣವೂ ಇರುತ್ತಿರಲಿಲ್ಲ. ಇರಲಿ ಬೆಂಗಳೂರು ಕಡೆ ಬಂದಾಗ ಖಂಡಿತ ಮನೆಗೆ ಬನ್ನಿ ಸರ್’’ ಎಂದೆ.

ಬಹುಷಃ ಜಗತ್ತಿನಲ್ಲಿ ಕಣ್ಣಿಗೆ ಕಂಡರೂ ಕಾಣದಂತೆ ಹರಿಯುತ್ತಿರುವ ಜೀವಿ ಇರುವೆ. ಇರುವೆಗೆ ತೊಂದರೆ ಆದರೆ ಅದು ನಮ್ಮನು ಕಚ್ಚಿಬಿಡುತ್ತದೆ. ಆದರೆ ಈ ಸಮುದಾಯ ಮಾತ್ರ ಇನ್ನೂ ಎಲ್ಲಾ ಬಾಧೆೆಗಳನ್ನು ತಡೆದುಕೊಂಡೇ ಬದುಕುತ್ತಿದೆ. ಉರಿ ಬಿಸಿಲಲ್ಲಿ ಮರದ ಕೆಳಗೆ ನಿಂತರೆ ಹಾಯ್ ಎನಿಸುತ್ತದೆ, ನಿರಾಳ ಎನ್ನಿಸುತ್ತದೆ. ಆ ಮರದ ನೆರಳಿನ ಋಣ ತಿರಿಸಲು ಸಾಧ್ಯವೇ? ಅದು ಕೊಡುವ ಆಮ್ಲಜನಕಕ್ಕೆ ಬೆಲೆಕಟ್ಟಲಾದೀತೆ? ಬಿಸಿಲತಾಪದಲ್ಲಿ ನಡೆದುಕೊಂಡು ಬಂದಾಗ ಮರ ನೆರಳಾಗುತ್ತದೆ. ಅಕಸ್ಮಾತ್ ಮನುಷ್ಯನಿಗೆ ಇನ್ನೊಂದು ರೀತಿಯ ಶಕ್ತಿ ಇದ್ದಿದ್ದರೆ ಆ ಮರವನ್ನು ನೆರಳ ಸಹಿತವಾಗಿ ತನ್ನ ಮನೆಯವರೆಗೆ ಎಳೆದುಕೊಂಡು ಬರುತ್ತಿದ್ದ . ಸದ್ಯ ಅಂತಹ ಶಕ್ತಿ ಇನ್ನೂ ಸಾಧ್ಯವಾಗಿಲ್ಲ. ಮರದ ನೆರಳ ಪಡೆದವನು ತನಗೆ ಬೇಕಾದಾಗ ಅದರ ಕೊಂಬೆಗಳನ್ನು ಕತ್ತರಿಸುತ್ತಾನೆ. ಪ್ರಕೃತಿಯನ್ನು ತನ್ನ ಸ್ವಾರ್ಥಕಾಗಿ ಹೇಗೆಲ್ಲಾ ಬಳಸಿಕೊಳ್ಳಬೇಕೋ ಹಾಗೆಲ್ಲಾ ಬಳಸಿಕೊಂಡಿದ್ದಾನೆ. ಹಾಗೆ ಮನುಷ್ಯ ಮನುಷ್ಯರ ನಡುವೆ ಕೂಡಾ. ಅವನು ಎಷ್ಟು ನೀಚ ಎಂದರೆ ತನ್ನಂತೆ ಇರುವ ಇನ್ನೊಬ್ಬನನ್ನು ಯುದ್ಧಮಾಡಿ ಗೆಲ್ಲುತ್ತಾನೆ ಅಥವಾ ಸೋಲುತ್ತಾನೆ. ಇದು ಮನುಷ್ಯನ ದೌರ್ಬಲ್ಯ. ಮನುಷ್ಯನನ್ನು ಇತರ ಯಾವ ಪ್ರಾಣಿಗೂ ಹೋಲಿಸಲು ಸಾಧ್ಯವಿಲ್ಲ. ಜಾತಿ, ಧರ್ಮ, ದೇವರು ಈ ಹೆಸರು ಹೇಳಿಕೊಂಡು ಒಳ್ಳೆಯದನ್ನು ಮಾಡಿದ್ದು ಕಡಿಮೆ ಎಂದೇ ಹೇಳಬೇಕು. ಇನ್ನೊಬ್ಬನನ್ನು ಶೋಷಿಸುತ್ತಲೇ ತಾನೇ ಮೆರೆಯಬೇಕೆನ್ನುವ ದುರ್ಬಲ ಮನಸ್ಸಿನವನು ಮನುಷ್ಯ. ಜಾತಿಯ ಹಾಗೂ ಧರ್ಮದ ಅಹಂಕಾರದಿಂದ ನಡೆಸಿದ ಅನಾಹುತಗಳಿಗೆ ಕೊನೆಯೇ ಇಲ್ಲ. ಕನಕಪುರದಲ್ಲಿ ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ಅನೀಶ್ ನ ತಾಯಿಯವರನ್ನು ಎದುರುಗೊಂಡಾಗ ಅವರಿಗೆ ಹೇಳಲಿಕ್ಕೆ ಮಾತುಗಳೇ ಇರಲಿಲ್ಲ. ಕಣ್ಣುಗಳು ತುಂಬಿಕೊಂಡಿದ್ದವು. ತನ್ನ ಮಗನ ಈ ದುಸ್ಥಿತಿಯನ್ನು ಕಂಡು ಎಂತಹ ತಾಯಿಯೂ ಏನು ಮಾತನಾಡಲು ಸಾಧ್ಯ? ‘ಇನ್ನು ಎಷ್ಟುದಿನ ಸಹಿಸುವುದು ಸರ್’ ಎಂದ ಆ ತಾಯಿಯ ಈ ಒಂದು ಮಾತಿನಲ್ಲಿ ನೋವು, ಆತಂಕ, ಸಂಕಟ, ಸಿಟ್ಟು ಎಲ್ಲವೂ ಇತ್ತು.

‘‘ನೆಲದವರೆಗೆ ತಲೆ ಬಗ್ಗಿಸಬಹುದು, ಆಮೇಲೆ ತಲೆ ಎತ್ತಲೇ ಬೇಕಲ್ಲ ಸರ್, ನಮಗೂ ಸಾಕಾಗಿದೆ. ನಾವು ಬದುಕಬಾರದ ಸರ್? ನನಗಿರುವುದು ಒಬ್ಬನೇ ಮಗ. ಹೆತ್ತು ಹೊತ್ತ ತಾಯಿಯ ನೋವು, ಸಂಕಟ ಯಾಕೆ ಸರ್ ಅರ್ಥ ಆಗಲ್ಲ ಅವರಿಗೆ? ಅವರು ಕೂಡಾ ತಾಯಿ ಹೊಟ್ಟೆಯಲ್ಲೇ ಹುಟ್ಟಿದವರಲ್ಲವಾ’’ ಮಂಜುಳಮ್ಮ ಅವರ ದುಃಖದ ಕಟ್ಟೆ ಒಡೆದಿತ್ತು.

ನಾವು ಸುಮ್ಮನೆ ಕೇಳುತ್ತಾ ಹೋದೆವು. ಅವರು ಸಮಾಧಾನ ಆಗುವವರೆಗೂ ಮಾತನಾಡಿದರು. ನಾವಾಡುವ ಯಾವ ಮಾತುಗಳಿಗೂ ಇಲ್ಲಿ ಅರ್ಥ ಇಲ್ಲ ಅನ್ನಿಸಿ ಸುಮ್ಮನೆ ನಿಂತಿದ್ದೆ. ಆಸ್ಪತ್ರೆಯ ಗೋಡೆಗಳು ಮರಗಟ್ಟಿದ್ದವು ಅನ್ನಿಸುತ್ತದೆ. ಗ್ಲೂಕೋಸ್ ಬಾಟಲ್‌ನಲ್ಲಿ ಹನಿಯುತ್ತಿದ್ದ ಡ್ರಿಪ್‌ನ್ನು ನೋಡುತ್ತಾ ನಿಂತೆ. ಇಪ್ಪತ್ತೇಳು ವರ್ಷದ ಅಜಾನುಬಾಹು ಅನೀಶ್ ತಾಯಿಯ ಮಾತುಗಳನ್ನು ಕೇಳುತ್ತಾ ಕಣ್ಣಲ್ಲೇ ನೋವು ಮತ್ತು ಸಂಕಟವನ್ನು ಅನುಭವಿಸುತ್ತಾ ನನ್ನ ನೋಡುತ್ತಿದ್ದ. ಅಲ್ಲಿ ತುಂಬಾ ಹೊತ್ತು ಇರಲು ಕಷ್ಟವಾಯಿತು.

ಅನೀಶ್ ಕೈಯನ್ನು ಹಿಡಿದು ಹುಷಾರಾಗು, ಎಲ್ಲಾ ಒಳ್ಳೆಯದೇ ಅಗುತ್ತೆ ಎಂದು ಮೆಲುದನಿಯಲ್ಲಿ ಹೇಳಿದೆ. ಅವನು ಉತ್ತರಿಸಲಿಲ್ಲ. ನಂತರ ನನ್ನ ಎಲ್ಲಾ ಸುಖ ದುಃಖಗಳಲ್ಲಿ ಸಮಾನವಾಗಿ ಭಾಗಿಯಾಗುವ

ಕವಿತಾ ಈ ಸಂದರ್ಭದಲ್ಲಿ ಅನೀಶ್ ಅವರ ತಾಯಿ ಮಂಜುಳಾ ಅವರ ಕೈ ಹಿಡಿದು ‘‘ನಾವು ನಿಮ್ಮೊಟ್ಟಿಗೆ ಇರುತ್ತೇವೆ’’ ಎಂದು ಹೇಳಿದರು. ಎಲ್ಲವನ್ನೂ ನೋಡುತ್ತಾ ನಾನು ಕರಗುತ್ತಿದ್ದೆ. ಅಲ್ಲಿಗೆ ನಮ್ಮ ಕಣ್ಣುಗಳು ತೇವವಾಗಿದ್ದವು. ಅಮ್ಮ ಮತ್ತು ಮಗನಿಗೆ ಯಾಂತ್ರಿಕವಾಗಿ ಸಮಾಧಾನ ಹೇಳಿದೆವು.

ಬರುವಾಗ ಅನಿಸುತ್ತಿತ್ತು ನಿಮ್ಮೊಟ್ಟಿಗೆ ನಾವು ಇರುತ್ತೇವೆ, ಬದುಕುತ್ತೇವೆ ಸಮಾಜದ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ನಾವು ಭಾಗಿಯಾಗುತ್ತೇವೆ ಎಂದು ಹೇಳುವುದು ತಪ್ಪಾ? ಈ ಇರುವಿಕೆಯನ್ನು ಮತ್ತೆ ಮತ್ತೆ ಹತ್ತಿಕ್ಕಲಾಗುತ್ತದೆ. ನಮ್ಮ ಇರುವಿಕೆಯನ್ನು ಯಾಕೆ ಇವರು ಸಹಿಸುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಆದರೂ ಅವರನ್ನು ಸಹಿಸಿಕೊಳ್ಳುತ್ತೇವೆ, ಮತ್ತೂ ಸಹಿಸಿಕೊಳ್ಳುತ್ತೇವೆ. ಇತ್ತೀಚೆಗೆ ಹುಬ್ಬಳ್ಳಿ, ಧಾರವಾಡ ಮತ್ತು ಮೈಸೂರಿನಲ್ಲಿ ಎರಡು ಹೆಣ್ಣುಮಕ್ಕಳ ಹತ್ಯೆಯಾಯಿತು, ಬೆಂಗಳೂರಿನಲ್ಲಿ ನನಗೆ ಗೊತ್ತಿರುವ ಕವಯಿತ್ರಿ ಸಾಮಾಜಿಕ ಹೋರಾಟಗಾರ್ತಿ ಸೌಮ್ಯಾ ಅವರ ಮಗಳ ಕೊಲೆ ಆಯಿತು. ಈ ಎಲ್ಲಾ ಜೀವ ಹತ್ಯೆಗಳನ್ನು ನೆನಪಿಸಿಕೊಳ್ಳುತ್ತಾ ನಾವು ನಿಮ್ಮೊಟ್ಟಿಗೆ ಇರುವುದನ್ನು ಮನುಷ್ಯ ಮತ್ತೆ ಮತ್ತೆ ಸಹಿಸಿಕೊಳ್ಳುತ್ತಿಲ್ಲ ಏಕೆ ? ಎನ್ನುವ ಪ್ರಶ್ನೆಗೆ ಒಂದು ಸರಳ ಸಣ್ಣ ಉತ್ತರವಿದೆ. ಅದು ಬುದ್ಧ ಹೇಳಿದ್ದು, ‘ಜಗತ್ತಿನ ಅತಿದೊಡ್ಡ ಪ್ರಾರ್ಥನೆ ಎಂದರೆ ತಾಳ್ಮೆ’. ತಾಳ್ಮೆ ಒಂದು ಇದ್ದರೆ ಇಂತಹ ಅನಾಹುತಗಳಿಗೆ ಆಸ್ಪದವಾಗುವುದಿಲ್ಲ. ವೈಯಕ್ತಿಕವಾಗಿ ಎಲ್ಲರಿಗೂ ಎಂತಹ ಸಂದರ್ಭದಲ್ಲೂ ಸಹನೆ ಮತ್ತು ತಾಳ್ಮೆ ಬಂದು ಬಿಟ್ಟರೆ ಯಾರಿಗೂ ತೊಂದರೆಯಾಗುವುದಿಲ್ಲ ಮತ್ತು ಯಾರಿಗೂ ನೋವುಂಟಾಗುವುದಿಲ್ಲ. ಈ ಅರಿವು ಸದಾ ನಮ್ಮೊಟ್ಟಿಗೆ ಇರಬೇಕು. ನನ್ನಂಥ ಸಾಮಾನ್ಯರು ಇದಕ್ಕಿಂತ ಹೆಚ್ಚಿಗೆ ಹೇಳಲು ಬರುವುದಿಲ್ಲ.

ಈ ಮಳೆಗಾಲದಲ್ಲಿ ಎಲ್ಲಾ ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ, ನಮ್ಮ ಮನಸ್ಸು ಕೂಡಾ ಪ್ರೀತಿಯಿಂದ ತುಂಬಿ ಹರಿಯಲಿ ಎನ್ನುವುದಷ್ಟೇ ನನ್ನ ನಮ್ರ ವಿನಂತಿ

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X