ನಾನೆಂಬುದು ಕಿಂಚಿತ್ತಿನಲ್ಲೂ ತಿರುಗುತ್ತಿರುವ ಬುಗುರಿ

ಡಾ.ಮೊಗಳ್ಳಿ ಗಣೇಶ್ ಕನ್ನಡದ ಮಹತ್ವದ ಕಥೆಗಾರ, ಕವಿ, ವಿಮರ್ಶಕ. ಬರವಣಿಗೆಯೆಂದರೆ ತನ್ನ ರಕ್ತ ಮಾಂಸವನ್ನು ದೇಹದಿಂದ ಬಸಿದು ಬರೆಯುವ ಲೇಖಕ. ಇದು ನನ್ನ ಓದಿನ ಗ್ರಹಿಕೆಯಲ್ಲಿ ಹೇಳುತ್ತಿದ್ದೇನೆ. ದಲಿತ ಕಾವ್ಯ, ಸಾಹಿತ್ಯ, ಆತ್ಮ ಕಥೆಯನ್ನು ವಿಮರ್ಶೆ ಮಾಡುವುದಕ್ಕೆ ಹೊಸ ಛಂದಸ್ಸು ಬೇಕಾಗುತ್ತದೆ ಎಂದಿದ್ದವರು ಮೊಗಳ್ಳಿಗಣೇಶ್. ಸ್ವತಃ ತಾನೇ ಬರೆದ ಕಥೆ ಬುಗುರಿ, ಈ ಬುಗುರಿ ಕಥೆಯ ಹಂದರ ಜಗತ್ತಿನಲ್ಲೇ ವಿಶಿಷ್ಟವಾದದ್ದು, ಇಂತಹ ವಸ್ತುವನ್ನು ಕುರಿತು ಬರೆದ ಲೇಖಕ ಮೊಗಳ್ಳಿ ಒಬ್ಬರೇ ಇರಬಹುದು. ಇವರು ಮೂಲತಃ ಕವಿ. ಇವರು ಬರೆದ ‘ಸೂರ್ಯನ ಬೆಳಕನ್ನು ಗುಡಿಸಲಾಗುವುದಿಲ್ಲ’ ಎನ್ನುವ ಸಾಲು ನನ್ನೆದೆಯಲ್ಲಿ ಹಸಿರಾಗಿದೆ. ತಳಸಮುದಾಯಗಳ, ಆದಿವಾಸಿಗಳ ಅರಿವು ಮತ್ತು ವಿವೇಕವನ್ನು ಯಾರೂ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಈ ಕವಿತೆ ನನಗೆ ಹೇಳಿದ ಹಾಗೆ ಕೇಳಿಸುತ್ತದೆ.
ಉಳಿದ ಜಾತಿಗಳು ವೈದಿಕ ವಿಕಾರ ಆಚರಣೆಗಳನ್ನು ಅಸ್ಪೃಶ್ಯರ ಮೇಲೆ ಹೇರುವ ಮೂಲಕ ಅವರಲ್ಲಿ ಇನ್ನಿಲ್ಲದಂತೆ ಭಯ ಮತ್ತು ಆತಂಕವನ್ನು ಸೃಷ್ಟಿಸಿದವು. ಆದರೆ ‘ಇವರು ಅಪಾರ ಸಹನೆ ಮತ್ತು ಅಸ್ಮಿತೆಯಿಂದ ಎದ್ದುಬರುವ ಜೀವಗಳು’ ಎನ್ನುವ ಆಶಯ ಮೊಗಳ್ಳಿ ಅವರ ಬರಹದಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿದೆ. ಇವರ ‘ದೇವಸ್ಮಶಾನ’ ಕಾವ್ಯ ಸಂಕಲನ ಸಾಹಿತ್ಯ ಮತ್ತು ಕಾವ್ಯ ಲೋಕದಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ ಆದರೆ ಆಧುನಿಕ ಕಾವ್ಯ ಸಂದರ್ಭದಲ್ಲಿ ಬೇಂದ್ರೆ ಮತ್ತು ಸಿದ್ದಲಿಂಗಯ್ಯನವರ ನಡುವೆ ಇವರು ಕೆಲವು ಸೂಕ್ಷ್ಮಎಳೆಗಳನ್ನು ಅಪ್ಪಿ ಮುನ್ನಡೆದಂತೆ ಓದಿಸಿಕೊಳ್ಳುತ್ತದೆ. ಇದನ್ನು ನನ್ನ ಅರಿವಿನ ಓದಿನಲ್ಲಿ ಹೇಳುತ್ತಿದ್ದೇನೆ.
ದೇವಸ್ಮಶಾನ ಸಂಕಲನಕ್ಕೆ ಪು.ತಿ.ನ. ಕಾವ್ಯ ಪ್ರಶಸ್ತಿ ಬಂದ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ವಿಮರ್ಶಕ ವಿಜಯಶಂಕರ್ ಮೊಗಳ್ಳಿ ಕಾವ್ಯದ ಕುರಿತು ತುಂಬಾ ಅಪರೂಪದ ಮಾತುಗಳನ್ನು ಆಡಿದರು. ಅವರು ಮಾತನಾಡಿದ ಮಾತುಗಳನ್ನು ಮೆಲುಕು ಹಾಕುತ್ತಲೇ ಸಂಕಲನವನ್ನು ಮತ್ತೆ ಓದಿದೆ. ಆ ಓದು ಒಂದು ಕಾವ್ಯದ ಹೊಸ ಓದಿನ ಅನುಭವಕ್ಕೆ ಕಾರಣವಾಯಿತು. ಮೊಗಳ್ಳಿ ಗಂಭೀರವಾಗಿ ಕಾವ್ಯವನ್ನೇ ಬರೆದಿದ್ದರೆ ಕನ್ನಡಕ್ಕೆ ಒಂದು ಹೊಸ ಕಾವ್ಯ ಲೋಕ ಸೃಷ್ಟಿಯಾಗುತ್ತಿತ್ತು ಅಂತ ಈಗಲೂ ನನಗೆ ಅನ್ನಿಸುತ್ತದೆ. ಇವರ ಕಾವ್ಯ ಶಕ್ತಿ ಗದ್ಯದಲ್ಲಿ ಮತ್ತಷ್ಟು ವಿಸ್ತಾರವಾಯಿತು. ಇವರ ಒಂದೊಂದು ಕಥೆಯೂ ಕನ್ನಡ ಸಾಹಿತ್ಯದ ಅಧೋಲೋಕವನ್ನು ಸೃಷ್ಟಿಸುತ್ತದೆ.
ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಗೆ ಕನ್ನಡ ಸಾಹಿತ್ಯದಲ್ಲಿ ವಿಶೇಷ ಗೌರವವಿದೆ. ಅವರು ಬರೆದ ಕಥೆ ‘ಬುಗುರಿ’ ಆ ವರ್ಷದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುತ್ತದೆ. ಆನಂತರ ಎರಡು ವರ್ಷದಲ್ಲಿ ಪ್ರಜಾವಾಣಿಯ ಕಥಾ ಸ್ಪರ್ಧೆಗಳಲ್ಲಿ ಕೂಡ ಅವರು ಮೊದಲ ಬಹುಮಾನ ಪಡೆಯುತ್ತಾರೆ. ಒಬ್ಬ ಕಥೆಗಾರ ಗಾಳಿಯಲ್ಲಿ ತೇಲಾಡುವುದಕ್ಕೆ ಇನ್ನೇನು ಬೇಕು, ಆದರೆ ಮೊಗಳ್ಳಿಯ ಕಷ್ಟಕೋಟಲೆಗಳು ನೂರಾರು. ಅದನ್ನು ತಿಳಿಯಬೇಕೆಂದರೆ ‘ನಾನೆಂಬುದು ಕಿಂಚಿತ್’ ಓದಲೇ ಬೇಕು. ಇವರ ಆತ್ಮ ಕಥನ ಓದಿದ ಯಾರಲ್ಲಾದರೂ ದಿಗ್ಭ್ರಮೆ ಹುಟ್ಟಿಸುವಂತಿದೆ. ಇವರ ಬದುಕು ಎಲ್ಲಿಂದ ಎಲ್ಲಿಗೆ, ನಡೆದೂ ನಡೆದೂ, ನೆರಳೇ ಸಿಗದ ದಾರಿಹೋಕನಂತೆ ಮೊಗಳ್ಳಿ ಕಾಣುತ್ತಾರೆ. ಈ ಕಥನ ಕನ್ನಡ ಸಾಹಿತ್ಯದ ಆತ್ಮಕಥನ ಪ್ರಕಾರದಲ್ಲೇ ಅತ್ಯಂತ ವಿಶಿಷ್ಟ ಅನುಭವವನ್ನು ತಂದುಕೊಡುತ್ತದೆ.
‘ಬುಗುರಿ’ ಒಂದು ವಾಸ್ತವ ಭಾರತದ ಕಥಾ ಹಂದರವಾದರೆ, ನನಗೆ ‘ಭತ್ತ’ ಅತ್ಯಂತ ಪ್ರಿಯವಾದ ಕಥೆ. ಭತ್ತ ಬೆಂದಾಗ ಅದರಿಂದ ಹೊರಹೊಮ್ಮುವ ಪರಿಮಳ ಜಗತ್ತಿನ ಯಾವ ಪರಿಮಳಕ್ಕಿಂತ ಕಡಿಮೆಯೇನಲ್ಲ. ನನ್ನ ಮನೆಯಲ್ಲೊಮ್ಮೆ, ನಮ್ಮವ್ವ ಭತ್ತ ಬೇಯಿಸಿ ನೀರನ್ನು ಬಸಿಯಲು ಹೋದಾಗ ಮಡಕೆ ಬಾಗಿಲ ಅಂಚಿಗೆ ಬಡಿದು, ಒಡೆದು ಹೋಗಿ ಇಡೀ ಗುಡಿಸಲ ತುಂಬ ಭತ್ತದ ಪರಿಮಳ ಆವರಿಸಿತ್ತು. ಆ ಪರಿಮಳದಿಂದ ಭತ್ತವನ್ನೇ ಬಾಚಿ ತಿನ್ನುವಷ್ಟು ಆಸೆಯಾಯಿತು. ಈ ಭೂಮಿಯೇ ಒಂದು ಹೂವಾಗಿ ಪರಿಮಳ ಬೀರಿದಂತೆ ಭತ್ತದ ವಾಸನೆ ನನ್ನನ್ನು ಆವರಿಸಿತ್ತು. ಈ ಕಥೆಯನ್ನು ಓದಿದಾಗ ಬಾಲ್ಯದ ನನ್ನ ಈ ಘಟನೆ ನೆನಪಾಯಿತು.
ಅಲ್ಲಿ ಕೂಡ ಹಸಿದ ಜನರು ಬೇಯಿಸಿದ ಭತ್ತವನ್ನೇ ತಿನ್ನುವ ಘಟನೆ ಬರುತ್ತದೆ. ಪೊಲೀಸರು, ದಸಂಸ ಹೋರಾಟ ಹೀಗೆ ಅನೇಕ ಕಾರಣಗಳಿಗೆ ಈ ಕಥೆ ನನಗೆ ಇಷ್ಟವಾಗುತ್ತದೆ. ಈಗಲೂ ಆ ಭತ್ತದ ಪರಿಮಳವನ್ನು ಆಘ್ರಾಣಿಸಿದ ಅನುಭವವಾಗುತ್ತದೆ. ಭತ್ತ ಕಥೆಯನ್ನು ಬರೆಯುವ ಮೂಲಕ ಮೊಗಳ್ಳಿ ಇಡೀ ಸಾಹಿತ್ಯದ ಜಗತ್ತಿಗೆ ಭತ್ತದ ಪರಿಮಳವನ್ನು ಅಕ್ಷರದ ಮೂಲಕ ಹರಡಿಬಿಟ್ಟರು. ಈ ಕಥೆಯ ಪರಿಮಳವೇ ಅಂತಹದ್ದು. ಇಂತಹ ಕಥೆಯನ್ನು ಓದಿಸಿದ ಮೊಗಳ್ಳಿಗೆ ನಾನು ಯಾವತ್ತೂ ಋಣಿ ಎಂದು ಹೇಳುವುದಕ್ಕೆ ಮರೆಯುವುದಿಲ್ಲ. ಹಸಿವು ಅವಮಾನಗಳ ಲೋಕದಲ್ಲಿ ಕಥೆಯ ಪರಿಮಳವನ್ನು ಹೀಗೆ ಬರೆಯುವ ನಿಮಗೆ ಅಭಿನಂದಿಸದ ಹೊರತು ಇನ್ನೇನು ಹೇಳಲು ಸಾಧ್ಯ!
ಮೊಗಳ್ಳಿಯ ಕಥೆಗಳ ಬಗ್ಗೆ ನನ್ನಂಥ ಸಾಮಾನ್ಯನು ಹೇಳುವುದಕ್ಕಿಂತ ಇಡೀ ನಾಡಿಗೆ ಮೊಗಳ್ಳಿ ಎಂತಹ ಕಥೆಗಾರ ಎನ್ನುವುದು ಗೊತ್ತಿದೆ. ಅವರ ಉಳಿದ ವೈಚಾರಿಕ ಲೇಖನಗಳಿಗಿಂತ ಅವರ ಕಥೆಗಳಲ್ಲೇ ಮುಳುಗಿ ಹೋದವನು ನಾನು ‘‘ಓಹ್ ಎಂತೆಂತಹಾ ಕಥೆ ಬರೆದುಬಿಟ್ಟನಲ್ಲಾ ಮೊಗಳ್ಳಿ’’ ಎಂದು ಯೋಚಿಸುವ ಹೊತ್ತಿನಲ್ಲಿ ‘ನಾನೆಂಬುದು ಕಿಂಚಿತ್ತು’ ಆತ್ಮಕಥನ ಓದಿದ ಮೇಲೆ ನನಗೆ ಮೊಗಳ್ಳಿಯ ಸಾಹಿತ್ಯದ ವಿರಾಟ್ ಸ್ವರೂಪ ಅರ್ಥವಾಯಿತು. ಮೊಗಳ್ಳಿ ಎಲ್ಲಿಗೇ ಜಾರಿ ಬಿದ್ದರೂ ಅದು ದುಃಖಸಾಗರಕ್ಕೇ ಜಾರಿ ಬಿದ್ದಂತೆ ಕಾಣಿಸುತ್ತದೆ. ಇವರ ನೋವು, ಸಂಕಟ, ಏಕಾಕಿತನ, ಇವೆಲ್ಲಾ ಅವರನ್ನು ಕವಿ ಮತ್ತು ಲೇಖಕನಾಗಿ ಮಾಡಿರಬಹುದೇ ಅನ್ನಿಸಿದರೂ ಅವರ ಕಿಡಿಗೇಡಿತನವಿದೆಯಲ್ಲಾ ಅದು ಎಂತಹವರಿಗೂ ಸಿಟ್ಟು ತರಿಸುತ್ತದೆ. ನನ್ನನ್ನೂ ಸೇರಿಸಿದಂತೆ.
‘ನಾನೆಂಬುದು ಕಿಂಚಿತ್ತು’ ಈ ಅನುಭವ ಕಥನದಲ್ಲಿ ಒಂದು ಘಟನೆ ಬರುತ್ತದೆ. ಹೆಸರಾಂತ ಲೇಖಕರಾದ ಎ.ಕೆ.ರಾಮಾನುಜನ್ ಅವರು ಮೈಸೂರಿಗೆ ಬಂದಾಗ ಹೋಟೆಲ್ ಒಂದರಲ್ಲಿ ಉಳಿದುಕೊಂಡಿರುತ್ತಾರೆ. ವಿಶ್ವವಿದ್ಯಾಲಯದಲ್ಲಿ ಸಿಕ್ಕಿದ ಅವರನ್ನು ಲಂಕೆಶ್ ಪತ್ರಿಕೆಗೆ ಸಂದರ್ಶನ ಮಾಡಬೇಕೆಂದು ಹೇಳಿ, ಹೋಟೆಲ್‌ಗೆ ಹೋಗಿ ಸಂದರ್ಶನ ಮುಗಿಸಿ ತಿರುಗಿ ಬರುವಾಗ ಅವರು ಒಂದು ಸೂಟ್ ಕೇಸ್ ಕೊಟ್ಟಿರುತ್ತಾರೆ. ಸೂಟ್ ಕೇಸ್ ಹಿಡಿದುಕೊಂಡು ಬರುವುದನ್ನು ಕಂಡ ಆಟೊದವನು ಎಲ್ಲಿಗೆ ಸರ್ ಎಂದು ಮೊಗಳ್ಳಿಯವರನ್ನು ಕೇಳುತ್ತಾನೆ. ಮರು ಉತ್ತರಿಸಿದ ಮೊಗಳ್ಳಿ ‘‘ಸ್ಮಶಾನಕ್ಕೆ ಬರ್ತಿಯಾ’’ ಎಂದು ಹೇಳಿದಾಗ ಆಟೊದವನ ಪರಿಸ್ಥಿತಿ ಏನಾಗಿರಬೇಡ. ಇಂತಹ ಉತ್ತರಗಳನ್ನು ನನ್ನಂತಹವರಿಂದ ಹಿಡಿದು ನನಗೆ ಗೊತ್ತಿರುವ ಅನೇಕರು ಮೊಗಳ್ಳಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.
ನನಗೆ ಈಗಲೂ ಒಂದು ಶಬ್ದ ನೆನಪಿದೆ ‘‘ನನ್ನ ಮುಂದೆ ಯಾರೋ ಅವನು’’ ಎಂದು ಯಾರೋ ಒಬ್ಬರ ಬಗ್ಗೆ ಹೇಳಿದ ಮಾತು ಈಗಲೂ ಕೇಳಿಸಿದಂತಿದೆ. ಮೊಗಳ್ಳಿಗೆ ಯಾರು ಇಷ್ಟವಾಗುತ್ತಾರೋ, ಯಾರು ಇಷ್ಟವಾಗುವುದಿಲ್ಲವೋ ಮೊಗಳ್ಳಿಗೆ ಮಾತ್ರ ಗೊತ್ತು. ಮೊಗಳ್ಳಿಯ ಈ ವಿಚಿತ್ರ ನಡವಳಿಕೆಗಳು ನನಗೆ ಈಗಲೂ ಅರ್ಥವಾಗಿಲ್ಲ.
ಪ್ರಸಿದ್ಧಿಗೆ ಬಂದಮೇಲೆ ಲಂಕೇಶ್ ಮೇಷ್ಟ್ರು ಮೊಗಳ್ಳಿಯನ್ನು ಕರೆದು ಮಾತನಾಡಿಸಿ ಬುಗುರಿ ಕಥಾ ಸಂಕಲನವನ್ನು ಪ್ರಕಟಿಸುವುದರ ಜೊತೆಗೆ ಪತ್ರಿಕೆಗೆ ಬರೆಯುವುದಕ್ಕೆ ಹೇಳಿದರು. ಮೊಗಳ್ಳಿ ಪುಸ್ತಕ ವಿಮರ್ಶೆ ಜೊತೆಗೆ ಲೇಖನ ಮತ್ತು ಕಥೆಗಳನ್ನು ಲಂಕೇಶ್ ಪತ್ರಿಕೆಗೆ ಬರೆಯ ತೊಡಗಿದರು. ಒಂದು ವಾರ ಪ್ರಕಟವಾದ ವಿಮರ್ಶೆ ಕುರಿತು ನನಗೆ ಸರಿ ಅನ್ನಿಸಲಿಲ್ಲ. ಇದನ್ನೆಲ್ಲಾ ಸಾಮಾನ್ಯ ಓದುಗನ ದೃಷ್ಟಿಯಲ್ಲೆ ನಾನು ಹೇಳುತ್ತಿದ್ದೇನೆ. ಹಾಗೆಯೇ ಇನ್ನೊಂದಿಬ್ಬರ ಬಳಿ ವಿಮರ್ಶೆ ಕುರಿತು ಕೇಳಿದೆ, ಅವರಿಗೂ ಹಾಗೇ ಅನ್ನಿಸಿತ್ತು. ಮಾರನೇ ದಿನ ಪತ್ರಿಕಾಲಯಕ್ಕೆ ಹೋಗಿ ಮೇಷ್ಟ್ರಿಗೆ ‘‘ಮೊಗಳ್ಳಿಯ ಪುಸ್ತಕ ಪರಿಚಯ ಸ್ವಲ್ಪ ಅತಿ ಅನ್ನಿಸಿತು ಸರ್’’ ಅಂದೆ. ಮೇಷ್ಟ್ರು ‘‘ಹೌದಾ, ನಾವು ಕ್ರಿಮಿನಾಶಕರು ಕಣಯ್ಯ’’ ಅಂದರು. ಆ ವಿಮರ್ಶೆ ಮೇಷ್ಟ್ರಿಗೆ ಸರಿ ಅನ್ನಿಸಿತ್ತು, ಅನ್ನಿಸುತ್ತದೆ. ಕ್ರಿಮಿನಾಶ ಮಾಡುವಾಗ ಎರೆ ಹುಳ ಕೂಡಾ ಸಾಯಬಹುದಲ್ಲಾ, ಅಂತ ನಾಲಿಗೆ ತುದಿಯಲ್ಲಿದ್ದ ಮಾತನ್ನು ಹಾಗೇ ನುಂಗಿಕೊಂಡೆ. ಮೊಗಳ್ಳಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಅವರ ಸಣ್ಣ ಪರಿಚಯ ಇತ್ತು. ಆಗಲೇ ಬಂಜಗೆರೆ, ಮತ್ತು ಸಾಕೇತ್ ರಾಜ್ ಅವರನ್ನು ಅಬ್ದುಲ್‌ರಶೀದ್ ಪರಿಚಯ ಮಾಡಿಕೊಟ್ಟಿದ್ದರು. ಸಾಕೇತ್‌ರಾಜ್ ಜೆ.ಎನ್.ಯು.ಯಿಂದ ಕಲಿತು ಹಿಂದಿರುಗಿದ ಪ್ರತಿಭಾವಂತರು ಹಾಗೂ ಲೇಖಕರು ಎಂದಷ್ಟೇ ಹೇಳಿದರು. ನಾನು ಅವರೊಟ್ಟಿಗೆ ತುಂಬಾ ಮಾತನಾಡಿದ್ದೆ. ವಿಶೇಷವಾಗಿ ದಸಂಸ ಚಳವಳಿ, ನನ್ನ ಕಷ್ಟಸುಖಗಳು ಹೀಗೆ ಎಷ್ಟೋ ಗಂಟೆಗಳು ಮಾತನಾಡಿದ ನಂತರ ನನ್ನ ಮಾತುಗಳನ್ನು ಕೇಳಿಸಿಕೊಂಡು ಹೂಂಗುಟ್ಟುತ್ತಲೇಯಿದ್ದ ಸಾಕೇತ್‌ರಾಜ್ ‘ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸುಬ್ಬು’ ಎಂದು ಹೇಳಿದ ಮಾತು ಈಗಲೂ ನೆನಪಾಗುತ್ತದೆ.
ಮೊಗಳ್ಳಿ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸೆರಿಕೊಂಡ ಮೇಲೆ ಅನೇಕ ಮಹತ್ವದ ಕೃತಿಗಳನ್ನು ಬರೆದಿದ್ದಾರೆ ಎನ್ನುವುದು ತಿಳಿಯದ ವಿಷಯವೇನಲ್ಲ. ಇವರ ವಿಮರ್ಶಾ ಕೃತಿ ತಕರಾರು. ಈ ಕೃತಿ ಕನ್ನಡ ಸಾಹಿತ್ಯದ ತಕರಾರು ಆಗಿದೆ. ನನ್ನ ಪ್ರಕಾರ ಈ ಕೃತಿಯ ಲೇಖನಗಳು ಅಗ್ನಿಯಲ್ಲಿ ಪ್ರಕಟವಾಗುತ್ತಿದ್ದಾಗಲೇ ಕನ್ನಡ ಸಾಹಿತ್ಯದ ಅನೇಕ ಸಾಹಿತಿಗಳ ಕೆಂಗಣ್ಣಿಗೆ ಗುರಿಯಾಯಿತು. ಮೊಗಳ್ಳಿಯನ್ನು ಆಗ ಬೌದ್ಧಿಕವಾಗಿ ಹೇಗೆಲ್ಲಾ ಕಡೆಗಣಿಸಬಹುದೋ ಹಾಗೆಲ್ಲಾ ಕಡೆಗಣಿಸಿದರು ಅನ್ನಿಸುತ್ತದೆ. ಹಾಗಂತ ಮೊಗಳ್ಳಿಯೇನು ಇದಕ್ಕೆಲ್ಲಾ ಕ್ಯಾರೇ ಎನ್ನಲಿಲ್ಲ. ಆದರೆ ನನ್ನ ಪ್ರಕಾರ ಈ ತಕರಾರು ಕೃತಿ ಬಸವಲಿಂಗಪ್ಪನವರು ಹೇಳಿದ ಮಾತಿನ ವಿಸ್ತರಣೆ ಇರಬಹುದೇ ಅನ್ನಿಸಿತು. ಮೊಗಳ್ಳಿ ಕನ್ನಡದ ಒಬ್ಬ ಸಮರ್ಥ ಲೇಖಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರು ಅಗ್ನಿಯಲ್ಲಿ ಬರೆದ ‘ಗೋವಿನ ಹಾಡಿನ’ ಕುರಿತು ಲೇಖನ ಕನ್ನಡದಲ್ಲಿ ಹೊಸ ಸಂಚಲವನ್ನೇ ಉಂಟುಮಾಡಿತು. ಹಸು ಮತ್ತು ಹುಲಿಯ ರೂಪಕಗಳು ಬ್ರಾಹ್ಮಣ್ಯ ಎನ್ನುವುದು ನನ್ನಂತವರಿಗೆ ಒಂದು ಆದಿಮ ಸತ್ಯ ಸಿಕ್ಕಂತಾಯಿತು. ದಲಿತರು ಯಾರ ಸಾವನ್ನೂ ಬಯಸುವುದಿಲ್ಲ ಆದರೆ ಸ್ವತಃ ದಲಿತರು ಇನ್ನೊಬ್ಬರಿಗಾಗಿ ಸಾಯುವುದು, ಸಾಯುತ್ತಿರುವುದು ಶತಮಾನಗಳ ಇತಿಹಾಸ. ಇದನ್ನು ನೋಡಿದರೆ ತಿಳಿಯುತ್ತದೆ. ಹಸುವಿನ ಆಹಾರ ಹುಲ್ಲು ಮತ್ತು ಹುಲಿಯ ಆಹಾರ ಮಾಂಸ. ಇದು ಪ್ರಕೃತಿಯ ಆಹಾರ ಚಕ್ರ. ಆದರೆ ಈ ಗೋವಿನ ಹಾಡು ಪ್ರಕೃತಿಯ ನಿಯಮವನ್ನೇ ಮೀರುವ ಹುನ್ನಾರ, ಜೀವ ವಿರೋಧಿಯಾಗಿ ಒಂದು ಜೀವ ಸಂಕುಲದ ವಿನಾಶಕ್ಕೆ ಕಾರಣವಾಗುತ್ತದೆ. ಇದರ ಹುನ್ನಾರವನ್ನು ಬಯಲು ಮಾಡಿದ ಮೊಗಳ್ಳಿ ಗಣೇಶ್ ಅವರ ಈ ಲೇಖನ ಕನ್ನಡಕ್ಕೆ ಒಂದು ಹೊಸ ನುಡಿಗಟ್ಟಿಗೆ ನಾಂದಿ ಹಾಡಿತು. ಇದನ್ನು ಓದಿದ ಕ್ಷಣ ಮೊಗಳ್ಳಿಗೆ ಫೋನ್ ಮಾಡಿ ‘ಯಾವಾಗ ಬೆಂಗಳೂರಿಗೆ ಬರುತ್ತೀರಿ, ನಿಮ್ಮ ಲೇಖನ ಓದಿದೆ, ಕುಣಿದಾಡುವಷ್ಟು ಖುಷಿಯಾಯಿತು. ನೀವು ಬೆಂಗಳೂರಿಗೆ ಬಂದಾಗ ನಿಮ್ಮನ್ನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತಾಡುವ ಆಸೆ’ ಎಂದು ತುಂಬಾ ಭಾವುಕನಾಗಿ ಮಾತನಾಡಿದೆ. ಪ್ರತಿಕ್ರಿಯಿಸಿದ ಮೊಗಳ್ಳಿ ‘ಹೌದೇನೋ ಸುಬ್ಬು ಇರುವ ಸತ್ಯವನ್ನು ಹೇಳಲೇ ಬೇಕಲ್ಲ, ಸತ್ಯದ ಕಣ್ಣಿಗೆ ಬಟ್ಟೆ ಕಟ್ಟಲಾಗುವುದಿಲ್ಲ’ ಎಂದು ಬಂದಾಗ ಭೇಟಿಯಾಗುವೆ ಎಂದರು.
ನಾನೆಂಬುದು ಕಿಂಚಿತ್ ಕೃತಿಗೆ ಬೆನ್ನುಡಿ ಬರೆದಿರುವ ಚಂದನ್ ಗೌಡರ ‘‘ಮೊಗಳ್ಳಿಯವರ ಕಾವ್ಯಾತ್ಮಕ ವರ್ಣನೆ, ಅವರು ಕಂಡ ದುಃಖ, ನೋವು, ಅಕ್ಕರೆಗಳ ಸತ್ಯವನ್ನು ನಾವು ಮತ್ತೆ ಕಾಣುವಂತೆ ಮಾಡುತ್ತದೆ’’ ಎನ್ನುವ ಮಾತು ಈ ಕೃತಿಯನ್ನು ಓದಿದವರಿಗೆ ವೇದ್ಯವಾಗುತ್ತದೆ. ಇನ್ನೊಬ್ಬ ಕಥೆಗಾರ ಅಬ್ದುಲ್ ರಶೀದ್ ಹೀಗೆ ಬರೆಯುತ್ತಾರೆ ‘‘ಈ ಆತ್ಮಕಥೆ ನನಗಂತೂ ಒಂದು ಅದ್ಭುತ ಕಥಾ ಪ್ರವಾಹದಂತೆ ಕಂಡಿದೆ ಒಬ್ಬ ಪುರಾತನ ಹಕೀಮನಂತೆ ಕಾಲಕಾಲಗಳ ವ್ಯಾಧಿಗಳಿಗೆ ಇಲಾಜು ನೀಡುವ ಬರಹಗಾರ ನಮ್ಮ ಹೃದಯದಲ್ಲಿ ಮಾತ್ರವಲ್ಲ ಇನ್ನೂ ಬಹಳಕಾಲ ಈ ನೆಲದಲ್ಲಿ ಉಳಿಯುತ್ತಾನೆ’’ ಎಂದು ಈ ಮಾತು ಅಕ್ಷರಶಃ ನಿಜ.
ಈ ಕಥನದಲ್ಲಿ ಮುಖ್ಯವಾದ ವಿಷಯವನ್ನು ಹೇಳಲೇ ಬೇಕು.
ಅದು ಮೊಗಳ್ಳಿ ತಾನು ಇಷ್ಟಪಟ್ಟು ಆಡುತ್ತಿದ್ದ ಆಟ ಕ್ರಿಕೆಟ್ 8ನೇ ತರಗತಿಯಲ್ಲಿಯೇ ಆಡುವುದನ್ನು ಶುರು ಮಾಡಿದ ಮೊಗಳ್ಳಿ ಮೈಸೂರು ಮಾನಸಗಂಗೋತ್ರಿ ಕ್ಯಾಂಪಸಿನಲ್ಲಿಯೇ ಅತ್ಯುತ್ತಮ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು. ಬಹುಷಃ ಯಾರಾದರೂ ಒಳ್ಳೆಯ ಕ್ರಿಕೆಟರ್ ಕಣ್ಣಿಗೆ ಬಿದ್ದಿದ್ದರೆ ಈ ದೇಶದ ಅತ್ಯುತ್ತಮ ಬೌಲರ್ ಆಗುತ್ತಿದ್ದರು ಅನ್ನಿಸುತ್ತದೆ. ಹಾಗೇನಾದರೂ ಆಗಿದ್ದಿದ್ದರೆ ಒಬ್ಬ ಅದ್ಭುತ ಕಥೆಗಾರ ಕನ್ನಡಕ್ಕೆ ಸಿಗುತ್ತಿರಲಿಲ್ಲ. ಮೊಗಳ್ಳಿ ಅನೇಕರಿಗೆ ಪ್ರಿಯ, ಕೆಲವರಿಗೆ ಮಾತ್ರ ಅಪ್ರಿಯ, ಇವರ ಓದು ಮತ್ತು ಬದುಕಿಗೆ ಮಾರ್ಗದರ್ಶನ ನೀಡಿದವರಲ್ಲಿ ಜೀಶಂಪ, ಕಾಳೇಗೌಡ ನಾಗಾವಾರ ಹೀಗೆ ಇನ್ನೂ ಅನೇಕರು. ಇವರ ಕಥೆ ಮತ್ತು ಲೇಖನಗಳನ್ನು ಗಂಭೀರವಾಗಿ ಗಮನಿಸಿದ ಆಗಿನ ಸರಕಾರದ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಪತ್ರ ಬರೆದು ವಿದಾನಸೌಧಕ್ಕೆ ಬಂದು ಭೇಟಿಯಾಗಲು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ನೀವೇ ನಮ್ಮೂರಿಗೆ ಬಂದರೆ ನಮ್ಮ ಊರಿನ ಜನರ ಕಷ್ಟಸುಖ ತಿಳಿಯಬಹುದು ಎಂದಿದ್ದಕೆ ಎಂ.ಪಿ.ಪ್ರಕಾಶ್ ತಮ್ಮೊಂದಿಗೆ ಸರಕಾರದ ಅಧಿಕಾರಿಗಳೊಡನೆ ಊರಿಗೆ ಬಂದ ಘಟನೆಯಂತೂ ಮರೆಯುವ ಹಾಗಿಲ್ಲ ಇದರಿಂದ ಊರಿನ ಅನೇಕ ಸಮಸ್ಯೆಗಳು ಬಗೆಹರಿದವು. ಇದು ಮೊಗಳ್ಳಿಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
‘ಬುಗುರಿ’ ಕಥೆ ಪ್ರಕಟವಾದಾಗ ಈ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ದೇವನೂರು ಮಹಾದೇವರು ಮೊಗಳ್ಳಿಯವರನ್ನು ಅಭಿನಂದಿಸಲು ಮಾನಸಗಂಗೋತ್ರಿಗೆ ತಾವೇ ಹೋಗಿದ್ದರು. ಆಶ್ಚರ್ಯ ಎಂದರೆ ದೇವನೂರು ಮಹಾದೇವ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ದೇವನೂರರು ಸಮಾರಂಭಕ್ಕೆ ಹೋಗದೇ ಮೊಗಳ್ಳಿಯನ್ನು ಅಭಿನಂದಿಸಲು ಮಾನಸಗಂಗೋತ್ರಿಗೆ ಬಂದಿದ್ದರು. ಮೊಗಳ್ಳಿ ಈ ಹೊತ್ತಿಗೂ ಆ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾ ‘‘ನಾವೆಲ್ಲಾ ಏನೇ ಬರೆದರೂ ಮಾದೇವಣ್ಣನ ಕಣ್ ಬೆಳಕಿನಲ್ಲಿ ಮುನ್ನಡೆಯುತ್ತಿದ್ದೇವೆ ಸುಬ್ಬು’’ ಎನ್ನುವ ಮಾತು ಸಾಕವ್ವನ ಮೊಮ್ಮಗಳ ಮಾತಿನಂತೆ ಕೇಳಿಸುತ್ತದೆ.
ಬುಗುರಿ ಕಥೆಯಲ್ಲಿ ಹೇಲು ಗುಂಡಿಗೆ ಬಿದ್ದ ಬುಗುರಿಗಾಗಿ ಕಾದಿದ್ದವನು ಅದು ಸಿಕ್ಕಾಗ ಅದನ್ನು ಮತ್ತೆ ಬೇಡವೆಂದು ಎಸೆಯುವ ಚೆಲುವನ ಮನಸ್ಥಿತಿ ಮತ್ತು ಆ ಸಂದರ್ಭದಲ್ಲಿ ಅಪ್ಪನ ರೌದ್ರಾವತಾರವನ್ನು ಕಂಡು ಆ ಎಳೆಯ ಮನಸ್ಸಿನ ಮೇಲೆ ಆದ ಆಘಾತ ಇನ್ನಿಲ್ಲದಂತೆ ಕಾಡಿ ಈ ಕ್ರೂರ ಪ್ರಪಂಚ ಸಾಕಪ್ಪ ಅನ್ನಿಸಿ ತನ್ನ ತಾಯಿಯ ಹೊಟ್ಟೆಯ ಒಳಗೆ ಮತ್ತೆ ಸೇರಿಕೊಳ್ಳಬೇಕು ಎನ್ನುವ ಚೆಲುವನ ವ್ಯಕ್ತಿತ್ವ ಬೆಳೆದಂತೆಲ್ಲಾ ಕನ್ನಡ ಸಾಹಿತ್ಯವನ್ನು ಸುತ್ತಿಕೊಂಡು ತಿರುಗುತ್ತಿರುವ ಬುಗುರಿಯಂತೆ ಕಾಣುತ್ತಾನೆ. ಈ ಬುಗುರಿಯ ಚಲನೆ ಯಾವತ್ತೂ ನಿಲ್ಲುವುದಿಲ್ಲ.
ನಾನೆಂಬುದು ಕಿಂಚಿತ್
ಚತುರ್ಯುಗವೆಂಬುದು ಕಿಂಚಿತ್
ಅಪ್ಪುದೆಂಬುದೊಂದು ಕಿಂಚಿತ್
ಆಗದೆಂಬುದೊಂದು ಕಿಂಚಿತ್
ತಾನು ಶುದ್ಧವಾದ ಶರಣಂಗೆ ಗುಹೇಶ್ವರನೆಂಬುದೊಂದು ಕಿಂಚಿತ್
► ಅಲ್ಲಮಪ್ರಭು