ತಿಪ್ಪೆ ಗುಂಡಿಯಲ್ಲಿ ಬೆಳೆದ ಮಲ್ಲಿಗೆ ಹೂವು...
ಹೋರಾಟದ ಬೀದಿಗಳಲ್ಲಿ ಎಲ್ಲೋ ಹಾಡು ಕೇಳಿಸುತ್ತಿದ್ದರೆ, ನಾವು ಸಾಮಾನ್ಯವಾಗಿ ಆಲಿಸಿ ಸುಮ್ಮನಾಗುತ್ತೇವೆ. ಆದರೆ ಹಾಡುವವರನ್ನು ನೋಡಬೇಕು ಎನ್ನುವ ಕುತೂಹಲ ಮೂಡುವುದು ಗದ್ದರ್ ಹಾಡುಗಳನ್ನು ಕೇಳಿದಾಗ ಮಾತ್ರ ಅನ್ನಿಸುತ್ತದೆ. ಗದ್ದರ್ ಅವರನ್ನು ನೋಡಿದಾಗ ಹಾಡು ಮೈದುಂಬಿ ನರ್ತಿಸುತ್ತದೆ. ಅದು ಭಾವಗೀತೆ ಅಲ್ಲ, ಬದಲಾಗಿ ಕೆಂಡದುಂಡೆಗಳನ್ನು ಉಗುಳುವ ಕ್ರಾಂತಿಗೀತೆ. ಗದ್ದರ್ ತನ್ನ ಮೇಲುವಸ್ತ್ರವನ್ನು ಕೈಗೆ ಸುತ್ತಿ, ಬಲಗೈಲಿ ಏಕತಾರಿ ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿ ಆಗಸಕ್ಕೆ ಮುಖಮಾಡಿ ಮುಷ್ಟಿ ಹಿಡಿದ ಕೈಗೆ ಎದೆಯ ಗುಂಡಿಗೆಯಿಂದ ಸಿಡಿದ ಗುಂಡಿನಂತೆ ಹಾಡು ಸಿಡಿಯುತ್ತದೆ. ಆಗ ಗದ್ದರ್ ಲೋಕದ ನುಡಿಕಾರನಂತೆ, ಚೌದಾರ್ ಕೆರೆಯ ನೀರನ್ನು ಮುಟ್ಟಲು ಹೊರಟ ಬಾಬಾ ಸಾಹೇಬರು, ಸ್ವಾತಂತ್ರ್ಯ ಹೋರಾಟಕ್ಕೆ ಹೊರಟ ಬರಿ ಮೈ ಫಕೀರ ಗಾಂಧಿ, ಗೆರಿಲ್ಲಾ ಹೋರಾಟಗಾರ ಚೆಗುವೆರಾ ಅವರೆಲ್ಲಾ ಮೈದುಂಬಿದಂತೆ ಹಾಡುತ್ತಾರೆ. ಹಾಡಿನೊಂದಿಗೆ ಹೋರಾಟದ ಜ್ವಾಲೆಗೆ ಸಾಕ್ಷಿಯಾದ ಗಟ್ಟಿ ಹೆಜ್ಜೆ, ಆ ಹೆಜ್ಜೆಗಳು ನೆಲಕ್ಕೆ ದಾಟಿಸಿದ ಹಾಡು. ಗದ್ದರ್ ಅವರ ತಾಯಿ ಲಕ್ಷ್ಮಮ್ಮ ಹಾಡುತ್ತಿದ್ದ ಹಾಡು ನೆನಪಾಗುತ್ತದೆ.
‘‘ತಿಪ್ಪೆಯೊಳಗೊಂದು ಮಲ್ಲೆ ಮಲ್ಲಿಗೆ ಹೂವು ಮೊಳಿಯಿತು.
ಬೊಗಸೆ ತುಂಬಾ ಹೂವು ಅರಳಿ.
ಆ ಹೂವಿನಲ್ಲೊಂದು ಮೊಗ್ಗು ಅರಳಿ ಪರಿಮಳ ಬೀರಿತೋ
ಆ ಪರಿಮಳ ಸೂಸಿ ಕೇರಿಗಳೆಲ್ಲಾ ನಡೆದು ಬಂದಾವೋ
ಮೆಲ್ಲಾ ಮೆಲ್ಲಾನೆ ಕೇರಿಗಳೆಲ್ಲ ತಿಪ್ಪೆ ಸೇರಿದವೋ
ಆ ತಿಪ್ಪೆಯೊಳಗ ಕೇರಿಗಳೆಲ್ಲಾ
ಪರಿಮಳ ಘಮಲುಗೊಂಡವೋ
ಆ ಪರಿಮಳ ಬೀರಿದ ಮಲ್ಲೆ ಹೂವು
ಕೇರಿಯ ಹೆಸರ ಕೇಳಿತೋ
ಆ ಹೂವ್ವಿನ ಹೆಸರೇ ಸಾವಿತ್ರಿ ಪುಲೆ ಹೆಸರಂತೆ
ಆ ಹೂವ್ವಿನ ಹೆಸರೆ ಜ್ಯೋತಿಭಾಪುಲೆ ಹೆಸರಂತೆ’’
(ಮೂಲ- ಮರಾಠಿ- ಲಕ್ಷ್ಮಮ್ಮ : ಗದ್ದರ್ ತಾಯಿ)
ಗದ್ದರ್ ಅವರ ತಾಯಿ ಲಕ್ಷ್ಮಮ್ಮ ಮೂಲತಃ ಜಾನಪದ ಹಾಡುಗಾರ್ತಿ. ಉಳ್ಳವರ ಹೊಲ, ಗದ್ದೆಗಳಲ್ಲಿ ದುಡಿತಿದ್ದ ಕಾಲ ಅದು. ಮೂಲತಃ ಮರಾಠಿ ಮೂಲದ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಅಂತಹ ಹಾಡುಗಳ ಗೊಂಚುಲುಗಳಲ್ಲಿ ಉಳಿದುಕೊಂಡ ಹಾಡೇ ಸಾವಿತ್ರಿ ಫುಲೆ ಬಗ್ಗೆ ಕಟ್ಟಿದ ಹಾಡು. ಮರಾಠಿಯಲ್ಲಿ ಫುಲೆ ಅಂದರೆ ಹೂವು ಅಂತ. ಅಂದ್ರೆ ಫುಲೆ ಹೂಗಾರರ ಕುಲವೃತ್ತಿ ಸೂಚಕ ಅಂತ ಊಹಿಸಬಹುದು. ಇಂದಿಗೂ ಹೂಗಾರ ಮನೆತನಗಳನ್ನು ಕಾಣಬಹುದು. ಹೂವು ಫುಲೆ ಅವರ ಹೆಸರಿಗೆ ಅಂಟಿಕೊಂಡಿದ್ದರಿಂದ ಅವರನ್ನು ಮಹಾರಾಷ್ಟ್ರ ಜಾನಪದ ನುಡಿಕಾರರು ಮಲ್ಲಿಗೆ ಹೂವಿಗೆ ಹೋಲಿಕೆ ಮಾಡಿ ಪದ ಕಟ್ಟಿದ್ದಾರೆ. ಇಲ್ಲಿ ತಿಪ್ಪೆ ಜಾತಿ ಕೂಪ. ಇಂಥ ಕೆಸರಲ್ಲಿ ಅರಳಿದ ಮಲ್ಲಿಗೆ ಘಮಲಿನ ಸಾವಿತ್ರಿ ಫುಲೆ, ಮಹಾತ್ಮಾ ಜ್ಯೋತಿ ಬಾಫುಲೆ.
ಇವರು ದಲಿತ ಕೇರಿಗಳಲ್ಲಿ ಚೆಲ್ಲಿದ ಅಕ್ಷರಗಳು ಘಮಲಾಗಿ ಇಡೀ ಕೇರಿ ಕೆಚ್ಚಿನಿಂದ ಮುಂದಡಿ ಹೆಜ್ಜೆ ಇಟ್ಟು ನಡೆಯುತ್ತಿವೆ ಎಂಬ ಭಾವರೂಪಕ ಹಾಡು ಈ ನೆಲದಲ್ಲಿ ಅದೆಷ್ಟೋ ಲಕ್ಷ್ಮಮ್ಮ ನವರ ಅನಾದಿ ಜೇನ ಕೊರಳ ದಾಟಿ ಗದ್ದರ್ ನಾಲಿಗೆಯಲ್ಲಿ ಕೂಡಿ ಹರಿದಿದೆ.
ಇಂತಹ ಹಾಡು ಕಟ್ಟಿ ಹಾಡಿದ ಹೃದಯವಂತೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಿನ ಹೆಸರು ಗದ್ದರ್. ತಾಯಿ ಲಕ್ಷ್ಮಮ್ಮನ ಹೊಟ್ಟೆಯಲ್ಲಿ ಇದ್ದಾಗಲೇ, ಈ ರಾಗಗಳನ್ನು, ಹಾಡಿನ ಮಟ್ಟುಗಳನ್ನು ಕೇಳಿಸಿಕೊಂಡಿರಬೇಕು. ಈ ದೇಶದ ಅದ್ಭುತ ಗಾಯಕ, ಕವಿ, ಹೋರಾಟಗಾರ ಹೃದಯವಂತರೆಲ್ಲರ ಪ್ರೀತಿಯ ಅಣ್ಣ, ಹೋರಾಟಗಾರರೆಲ್ಲರ ಸಂಗಾತಿ ಗುಮ್ಮಡಿ ವಿಠ್ಠಲ್ ರಾವ್ ಗದ್ದರ್. ಹಾಡುಗಳಿಗೆ ಕ್ರಾಂತಿ ಮಾಡುವುದನ್ನು ಕಲಿಸಿದ್ದರು. ಗದ್ದರ್ ಬಗ್ಗೆ ನಿಮಗೆ ಹೊಸದಾಗಿ ಏನೂ ಹೇಳಬೇಕಾಗಿಲ್ಲ ಲೋಕಕ್ಕೆ ತೆರೆದುಕೊಂಡ ಹೋರಾಟಗಾರ ಎಂಬುದು ನಿರ್ವಿವಾದ.
ಗದ್ದರ್ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರು ಕನ್ನಡದಲ್ಲಿ ಹತ್ತಾರು ಮಂದಿ ಇದ್ದಾರೆ. ಲೇಖಕರು, ಕಲಾವಿದರು, ಹಾಡುಗಾರರು, ಸಂಘಟನೆಯ ಕಾರ್ಯಕರ್ತರು ಅವರ ಬಗ್ಗೆ ಮಾತನಾಡುತ್ತಿದ್ದರೆ, ಅವರನ್ನು ಎದುರಿಗೆ ನೋಡಿದ ಅನುಭವವಾಗುತ್ತಿತ್ತು. ದಿನಾಂಕ 26.08.2024 ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಗದ್ದರ್ ಅವರು ಪರಿನಿಬ್ಬಾಣ ಹೊಂದಿದ ಒಂದು ವರ್ಷದ ನೆನಪಿಗೆ ಒಂದು ಕಾರ್ಯಕ್ರಮವನ್ನು ರೂಪಿಸಬೇಕೆಂದು ಅದಕ್ಕೆ ಪೂರ್ವಭಾವಿ ಸಭೆಗೆ, ಕರ್ನಾಟಕದ ಗದ್ದರ್ ಎಂದೇ ಖ್ಯಾತರಾದ ಸಹೋದರ ಪಿಚ್ಚಳ್ಳಿ ಶ್ರೀನಿವಾಸ್ ಅವರು ಕರೆದಾಗ ನನಗೆ ಆ ಸಭೆಗೆ ಹೋಗಲಾಗಲಿಲ್ಲ. ಇನ್ನೊಂದು ಸಭೆಗೂ ಗೈರುಹಾಜರಾದೆ. ಆದರೆ ಕಾರ್ಯಕ್ರಮಕ್ಕೆ ಹಾಜರಾಗಲೇ ಬೇಕೆಂದು ತಡವಾದರೂ ಹೋದೆ, ಆಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು. ವೇದಿಕೆಯ ಪ್ರಖರ ಬೆಳಕಿನಲ್ಲಿ ಸಂಘಟನೆಯ ಹಾಡುಗಾರರು ಗದ್ದರ್ ಹಾಡುಗಳನ್ನು ಅವರ ಶೈಲಿಯಲ್ಲೇ ದನಿ ಎತ್ತರಿಸಿ ಹಾಡುತ್ತಿದ್ದರು. ಯಾರೂ ಪೂರ್ಣಪ್ರಮಾಣದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಾಗಿರುತ್ತಾರೋ ಅಂತಹವರಿಗೆ ಮಾತ್ರ ಸಭೆಯ ಮತ್ತು ಹೋರಾಟದ ಹಾಡುಗಳ ರೋಮಾಂಚನ ಅನುಭವಕ್ಕೆ ಬರುತ್ತದೆ. ಅವರು ಮಾತ್ರ ಆ ಹಾಡುಗಳ ಶಬ್ದಗಳನ್ನು, ಲಯವನ್ನು, ಕಿಚ್ಚನ್ನೂ ಅರ್ಥಮಾಡಿಕೊಳ್ಳಬಲ್ಲರು. ಇಲ್ಲದಿದ್ದರೆ ಅದು ಸಾಮಾನ್ಯ ಹಾಡಾಗಿ ಕೇಳಿಸುತ್ತದೆ ಅಷ್ಟೆ. ಡೋಲು ಮತ್ತು ತಮಟೆಯ ಸದ್ದು ನಮ್ಮ ಎದೆ ಬಡಿತದ ಸದ್ದಾಗಿರುತ್ತದೆ. ನಮ್ಮ ದಮನಿ ದಮನಿಗಳಲ್ಲಿ ಹೋರಾಟದ ಕಿಚ್ಚು ಹರಿಯುತ್ತಿರುತ್ತದೆ. ಬೀದಿಗೆ ಇಳಿದರೆ ಸಾಕು ನಮ್ಮ ಕಾಲುಗಳು ತಮಗೆ ತಾವೇ ಚಲಿಸುತ್ತವೆ, ನಮ್ಮ ರಟ್ಟೆಗಳಿಗೆ ಶಕ್ತಿ ತುಂಬುತ್ತದೆ. ಅದು ಸುಖಾ ಸುಮ್ಮನೆ ಬರುವಂತಹದ್ದಲ್ಲ. ನೊಂದು ಬೆಂದು ಸಂಕಟವೆಲ್ಲಾ ಸೇರಿ ಅಸಮಾನತೆ ವಿರುದ್ಧ ಕೂಗುವ ಧ್ವನಿಯಾಗಿರುತ್ತದೆ. ಮುಷ್ಟಿಯಿಂದ ಆಕಾಶವನ್ನೇ ಗುದ್ದುವ ಹುಮ್ಮಸ್ಸು ಇರುತ್ತದೆ. ಇದು ಚಳವಳಿಗಳಲ್ಲಿ ನಾವೆಲ್ಲಾ ಅನುಭವಿಸಿದ ಅನುಭವ. ಇದು ದಲಿತರ ಬಿಡುಗಡೆಯಲ್ಲ, ದಲಿತರ ಬಿಡುಗಡೆಯಲ್ಲಿ ಎಲ್ಲರ ಬಿಡುಗಡೆಯಿದೆ ಎನ್ನುವ ಸಮಾನತೆಯ ಕನಸನ್ನು ಹೊತ್ತ ಹೋರಾಟದ ನೆನಕೆಗಳು. ಈಗ ಕಳೆದ ಐದು ದಶಕಗಳಲ್ಲಿ ಹೋರಾಟದ ಮಹಾ ಸಾಗರವೇ ಹರಿದು ಹೋಗಿದೆ. ಟೌನ್ ಹಾಲ್‌ನ ಕೆಂಪು ಕುರ್ಚಿಯಲ್ಲಿ ಕೂತಾಗ ಒಮ್ಮೆಲೆ ನುಗ್ಗಿಬಂದ ನೆನಪುಗಳು ಇವು.
ವೇದಿಕೆಯಲ್ಲಿ ಹಾಡು, ಮಾತುಗಳ ಕಲರವ. ಅದರಲ್ಲಿ ಮುಖ್ಯವಾಗಿ ನಮ್ಮ ಸಂಘಟನೆಯ ಎಲ್ಲಾ ನಾಯಕರೊಟ್ಟಿಗೆ ಗದ್ದರ್ ಮಗ ಬಂದಿದ್ದು ವಿಶೇಷವಾಗಿತ್ತು. ಆದರೆ ನಮ್ಮೆಲ್ಲರ ಕಣ್ಣುಗಳು ಗದ್ದರ್ ಮಗಳು ವೆನ್ನೆಲ ಅವರಿಗಾಗಿ ಕಾಯುತ್ತಿದ್ದವು. ನಮ್ಮ ಹಾಡುಗಾರರು ಹಾಡುತ್ತಿದ್ದಾಗ ಪಿಚ್ಚಳ್ಳಿಯವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಬರುತ್ತಾರೆ ಎಂದು ಹೇಳಿದರು. ಅಂತಹ ಕೆಲವೇ ಕ್ಷಣಗಳು ಮುಗಿದು ವೆನ್ನೆಲ ಸಭೆಗೆ ಆಗಮಿಸಿದಾಗ ಗದ್ದರ್ ತನ್ನ ಮಗಳಾಗಿ ವೇದಿಕೆಗೆ ಬಂದಿದ್ದು ಎಲ್ಲರಿಗೂ ಸಂತೋಷವನ್ನುಂಟುಮಾಡಿತು. ಡಾ.ಎಲ್.ಹನುಮಂತಯ್ಯ ಅವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು, ಈ ಸಭೆಯ ಅಧ್ಯಕ್ಷತೆಯನ್ನು ನಮ್ಮೆಲ್ಲರ ಹಿರಿಯ ಜೀವ, ಅಪಾರ ತಾಳ್ಮೆಯ, ಜೀವ ಸಂವೇದನೆ ಉಳ್ಳ ಗಡ್ಡಂ ವೆಂಕಟೇಶಣ್ಣ ವಹಿಸಿದ್ದರು. ಕಾಮ್ರೆಡ್ ಗೀತಾ ಅವರು ಹಾಡಿನಲ್ಲಿ ಮೈ ಮರೆತಿದ್ದ ಮನಸ್ಸುಗಳಿಗೆ ಎಚ್ಚರದ ಬಿಸಿ ಮಾತುಗಳನ್ನಾಡಿ ನಮ್ಮನ್ನು ಜಾಗೃತಿ ಗೊಳಿಸಿದರು. ವಿಶೇಷವಾಗಿ ಮಾತನಾಡಿದ ಕೆ. ರಾಮಯ್ಯನವರು, ಗದ್ದರ್ ಒಡನಾಟವನ್ನು ಹಂಚಿಕೊಂಡರು. ಗದ್ದರ್ ಅವರನ್ನು ಅನೇಕ ಶಿಬಿರಗಳಿಗೆ ಕರೆಸಿ ಹಾಡಿಸಿದ ಗಣ್ಯರಲ್ಲಿ ಗಡ್ಡಂ ವೆಂಕಟೇಶಣ್ಣ ಹಾಗೂ ಅನೇಕ ಕಲಾವಿದರನ್ನು ನಟರನ್ನು ಈ ನಾಡಿಗೆ ಪರಿಚಯಿಸಿದ ಕೀರ್ತಿ ಸಿ.ಜಿ.ಕೆ. ಅವರಿಗೆ ಸಲ್ಲಬೇಕು. ಅವರಿಂದಲೇ ನಾನು ಗದ್ದರ್ ಹಾಡುಗಳನ್ನು ಮೊದಲ ಬಾರಿ ಕಲಾ ಕ್ಷೇತ್ರದಲ್ಲಿ ಕೂತು ಕೇಳುವಂತಾಯಿತು. ಅವತ್ತು ಗದ್ದರ್ ಅವರು ತಮ್ಮ ಪತ್ನಿ ಹಾಗೂ ಮಗಳು ವೆನ್ನೆಲ ಅವರೊಂದಿಗೆ ಬಂದಿದ್ದರು ಆಗ ವೆನ್ನೆಲ ಪುಟ್ಟ ಬಾಲಕಿಯಾಗಿದ್ದಳು. ಅದೇ ವೆನ್ನೆಲ ಈಗ ಪ್ರೌಢರಾಗಿದ್ದು ಗದ್ದರ್ ಅವರ ಹಾಡಿನ ಶಕ್ತಿಯಾಗಿದ್ದಾರೆ. ವೆನ್ನೆಲ ಅವತ್ತಿನ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿದ್ದಾಗ ‘‘ವೆನ್ನೆಲ ಗದ್ದರ್ ಆಗಿ, ಗದ್ದರ್ ವೆನ್ನೆಲ ಆಗಿ ಕಾಣುತ್ತಿತ್ತು. ಕವಿ ಮತ್ತು ಹಾಡುಗಾರನಿಗೆ ಸಾವಿಲ್ಲ , ಗದ್ದರ್ ಅಮರ’’ ಅನ್ನಿಸಿತು. ವೆನ್ನೆಲ ಆ ದಿನ ಅಪರೂಪದ ಮಾತುಗಳನ್ನಾಡಿದರು. ಅವರು ಮುಷ್ಟಿ ಹಿಡಿದು ಹಾಡನ್ನು ಜನರೆದೆಗಳಿಗೆ ದಾಟಿಸುವಾಗ ಅದು ಗದ್ದರ್ ಅವರ ಶೈಲಿಯನ್ನೇ ಹೋಲುತ್ತಿತ್ತು ವೆನ್ನೆಲಾ ಮೂಲಕ ಇಡೀ ಸಭೆ ಗದ್ದರ್ ಮಯವಾಗಿತ್ತು. ಇಡೀ ಕಾರ್ಯಕ್ರಮ ಹಾಡಿನ ಬೆಳಕಾಗಿ ಪ್ರಖರಿಸಿತ್ತು. ಮಾತು ಮರೆಯುತ್ತೇವೆ, ಹಾಡನ್ನು ಮರೆಯಲಾದೀತೆ? ಹಾಡೆಂದರೆ ತಾಯಿಯ ಜೋಗುಳ. ಆ ತಾಯಿ ಲಕ್ಷ್ಮಮ್ಮನ ಹಾಡು ಲಕ್ಷ್ಮಮ್ಮನಾಗಲಿ, ಗದ್ದರ್ ಆಗಲಿ, ನಾವೂ ನೀವುಗಳಾಗಲಿ ಒಂದೇ ಕುಟುಂಬ ಮಾತ್ರವಲ್ಲ, ಒಂದೇ ಊರಲ್ಲ ಅಥವಾ ಒಂದು ಕೇರಿಯವರಲ್ಲ , ನಾವೆಲ್ಲಾ ಈ ಪ್ರಕೃತಿಗೆ ಸೇರಿದವರು ಎಂದು ಅರ್ಥಕೊಡುವ ಈ ಜನಪದದ ನುಡಿಗಟ್ಟು ಯಾರೂ ಬರೆಯದ ಎಲ್ಲರ ಎದೆಯ ಗುಟ್ಟು.
ಮನುಷ್ಯರ ಬಿಡುಗಡೆಗಾಗಿ ಜೀವ ಕೊಟ್ಟ ಹಾಡುಗಾರ, ಹಾಡಿನಲ್ಲಿ ಬೆಳಕು ತೋರಿಸಿದ ಹಾಡುಗಾರ ಗದ್ದರ್. ಆಗಂತುಕರಿಂದ ಎದೆಗೆ ಗುಂಡು ಹೊಡೆಸಿಕೊಂಡು ಆ ಬಂದೂಕದ ಗುಂಡನ್ನು ಹೃದಯದ ಪಕ್ಕದಲ್ಲೇ ಮುದ್ದು ಕೋಗಿಲೆಯಾಗಿ ಉಳಿಸಿಕೊಂಡು, ಅದಕ್ಕೂ ಹಾಡು ಕಲಿಸಿದ, ಕೇಳಿಸಿ, ತನ್ನ ದೇಹದೊಳಗಿನ ಗುಂಡಿನೊಟ್ಟಿಗೆ ತನ್ನೆಲ್ಲಾ ಜೀವ ಕಣಗಳೂ ಹರಿದಾಡುವಂತೆ ಎಲ್ಲಾ ಜೀವ ವಿರೋಧಿಗಳಿಗೂ ಪಾಠವಾಗುವಂತೆ ಬದುಕಿದವರು. ಅವರನ್ನು ತಾಗಿದ ಗುಂಡು ತನ್ನ ತಾಯಿ ಹೇಳಿದ ಮಲ್ಲಿಗೆ ಹೂವಾಗಬೇಕು, ಲೋಕಕ್ಕೆಲ್ಲಾ ಪರಿಮಳ ಬೀರಬೇಕೆಂದು ಸಮಾನತೆಯ ಕನಸು ಕಂಡವರು ಗದ್ದರ್. ಲೋಕದ ಎಲ್ಲಾ ಒಳ್ಳೆಯದನ್ನು ತನ್ನ ಹಾಡಿಗೆ ಸೇರಿಸಿಕೊಂಡು ಲೋಕದ ಎಲ್ಲಾ ಕೆಟ್ಟತನವನ್ನು ಹಾಡಿನಲ್ಲಿ ಪ್ರತಿರೋಧಿಸಿ ಹುಲಿಯಂತೆ ಘರ್ಜಿಸಿದರು. ಸಕಲ ಜೀವಗಳ ಹಾಡಾಗಿದ್ದರು. ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಅಡವಿ ತಾಯಿಗೆ ವಂದಿಸಿದರು. ನೀರಿಗೆ, ಭೂಮಿಗೆ ಪಂಚಭೂತಗಳಿಗೂ ನಮಿಸಿದರು. ಗದ್ದರ್ ಅಪ್ಪಟ ಪ್ರಜಾಪ್ರಭುತ್ವವಾದಿ. ಭೀಮಾ ಸಾಹೇಬರು ಬರೆದ ಸಂವಿಧಾನ ಅವರ ಉಸಿರಾಗಿತ್ತು. ಬುದ್ಧನ ಪಂಚಶೀಲ ಬಾವುಟ ಬುದ್ಧನನ್ನು ಪ್ರತಿನಿಧಿಸುವಂತೆ ಮಹಾ ಮೈತ್ರಿ, ತಾಳ್ಮೆ, ಕರುಣೆ, ಬ್ರಾತೃತ್ವ ಈ ಎಲ್ಲವೂ ಅವರ ಉಸಿರಾಗಿತ್ತು.
ನನಗೆ ಕೆಲವೇ ಕೆಲವು ಅಚ್ಚು ಮೆಚ್ಚಿನ ಕವಿಗಳಿದ್ದಾರೆ ಅವರಲ್ಲಿ ಬ್ರೆಕ್ಟ್, ನೆರೋಡ, ವೋಲೇ ಷೋಯಿಂಕಾ. ಆ ಸಾಲಿನಲ್ಲಿ ನಿಲ್ಲಬಲ್ಲ ಕವಿ ನಮ್ಮ ಗುಮ್ಮಡಿ ವಿಠ್ಠಲ್ ರಾವ್ ಗದ್ದರ್. ಇಲ್ಲೊಂದು ಗಮನ ಸೆಳೆಯುವ ವಿಶೇಷವೆಂದರೆ ಈ ತಿಪ್ಪೆಯ ರೂಪಕವನ್ನು ನಮ್ಮ ಕುವೆಂಪು ಕೂಡ ಬಳಸಿದ್ದಾರೆ, ಇದು ಅಚ್ಚರಿಯಾದರೂ ಯಾರು ನೆಲದಿಂದ ನೋಡುತ್ತಾರೋ ಅವರಿಗೆ ತಿಪ್ಪೆ ಕೂಡಾ ದೊಡ್ಡ ರೂಪಕವಾಗಿ ಕಾಣುತ್ತದೆ. ಹಿಂದೆ ದಲಿತ ಚಳವಳಿಯಲ್ಲಿ ಅನೇಕ ವಿಷಯಗಳಿಗೆ ಸಂಬಂಧ ಪಟ್ಟ ಹೋರಾಟಗಳು ನಡೆದಿವೆ.
‘ಹೆಂಡ ಬೇಡ, ವಸತಿ ಶಾಲೆ ಬೇಕು, ಹೆಂಡ ಬೇಡ, ಭೂಮಿ ಬೇಕು’ ಮೊದಲಾದ ಘೋಷಣೆಗಳು ಮೊಳಗಿದ್ದವು. ಇವುಗಳಲ್ಲಿ ಕೆಲವು ಭರವಸೆಗಳನ್ನು ಸರಕಾರಗಳು ಈಡೇರಿಸಿವೆ. ಈ ಹೊತ್ತು ವಸತಿ ಶಾಲೆಗಳಲ್ಲಿ ನಮ್ಮ ಲಕ್ಷಾಂತರ ಮಕ್ಕಳು ಓದುತ್ತಿದ್ದಾರೆ. ಈ ವಿಷಯಕ್ಕೆ ಸರಕಾರಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಆದರೆ ಭೂಮಿ ವಿಷಯದಲ್ಲಿ ಮಾತ್ರ ಇದು ಕಾರ್ಯರೂಪಕ್ಕೆ ಬರಲಿಲ್ಲ. ಅಸ್ಪಶ್ಯರಿಗೆ, ಹಿಂದುಳಿದ ಸಮುದಾಯಕ್ಕೆ ಮತ್ತು ಅನೇಕ ಸಣ್ಣಪುಟ್ಟ ಸಮುದಾಯಕ್ಕೆ ಈ ಹೊತ್ತಿಗೂ ಅಂಗೈಅಗಲ ಜಾಗ ಇಲ್ಲ. ಅಂತಹ ಸಮುದಾಯದವರು ಯಾರಾದರೂ ಸತ್ತರೆ ಹೂಳಲೂ ಸಹ ಜಾಗವಿಲ್ಲ. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡರೆ ಒಕ್ಕಲೆಬ್ಬಿಸುತ್ತಾರೆ. ಆದರೆ ಈಗಲೂ ದಲಿತರಿಗೆ ಕನಿಷ್ಠ ಶೇ.1ರಷ್ಟು ಭೂಮಿ ಕೂಡ ಸಿಕ್ಕಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿ. ಈ ಎಲ್ಲವನ್ನೂ ಹೇಳುತ್ತಾ ಕೆ. ರಾಮಯ್ಯ ನವರು ‘‘ಈಗ ನಮಗೆ ಕೊಡಲು ಭೂಮಿ ಉಳಿದಿಲ್ಲ. ಎಲ್ಲವೂ ಭೂಮಾಲಕರು, ಬಂಡವಾಳಶಾಹಿಗಳ ಕೈಯಲ್ಲಿದೆ. ಈಗ ನಾವು ಆಕಾಶದಲ್ಲಿ ಪಾಲು ಕೇಳಬೇಕಿದೆ. ಅಂದರೆ ತರಂಗದ ಪಾಲುಪಡೆದವರು ದೇಶದಲ್ಲೇ ಒಬ್ಬ ದಲಿತನೂ ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ. ಆದರೂ ನಾವು ಅಲ್ಲಿ ಪಾಲು ಕೇಳಬೇಕಿದೆ’’ ಎಂದರು. ಈ ಮಾತು ಒಂದು ಕ್ಷಣ ಇಡೀ ಸಭೆಯನ್ನು ಸ್ತಂಭೀಭೂತರನ್ನಾಗಿ ಮಾಡಿತ್ತು. ಲಕ್ಷಾಂತರ, ಕೋಟ್ಯಂತರ ದಲಿತರು ತರಂಗಗಳನ್ನು ಬಳಸಲು ಯಾರೋ ಬಂಡವಾಳಶಾಹಿಗಳಿಗೆ ಹಣ ತೆರುತ್ತಿದ್ದೇವೆ. ಆದರೆ ನಾವು ಮಾತ್ರ ಇನ್ನೂ ಪಾಲುದಾರರಾಗಿಲ್ಲ ಎನ್ನುವುದು ಸತ್ಯವಾದರೂ ಈ ರೀತಿಯ ಸಂಪತ್ತುಗಳು ನಮ್ಮವು ಎಂಬುದು ಗೊತ್ತಿಲ್ಲದಿರುವುದೇ ನಮ್ಮ ದಾರಿದ್ರ್ಯಕ್ಕೆ ಕಾರಣ
ವಾಗಿದೆ. ಹೀಗೆ ಇಡೀ ಕಾರ್ಯಕ್ರಮ ವಾಸ್ತವ ಸಂಗತಿಗಳ ಅರಿವಿನಲ್ಲಿ ಇನ್ನಷ್ಟು ಎಚ್ಚರಗೊಳ್ಳುವ ಮನಸ್ಸು ನಮ್ಮದಾಗಬೇಕು. ಗದ್ದರ್ ತಾಯಿ ಲಕ್ಷ್ಮಮ್ಮ ಹಾಡಿದ ಫುಲೇ ದಂಪತಿಯ ವಿಚಾರವನ್ನು ಹೇಳುತ್ತಲೇ ಜಾಗತಿಕ ಸಂದರ್ಭದ ವಿಚಾರಗಳಿಗೆ ಕೂಡ ನಾವು ತೆರೆದುಕೊಳ್ಳಬೇಕಾದ ಅಗತ್ಯವಿದೆ.
ಕವಿ ಸಿದ್ದಲಿಂಗಯ್ಯ ‘‘ಮಲಗಿದವರ ಕೂರಿಸಿದೆ ನಿಲ್ಲಿಸುವವರು ಯಾರೋ ಬಲದ ಜೊತೆಗೆ ಛಲದ ಪಾಠ ಕಲಿಸುವವರು ಯಾರೋ’’ ಎನ್ನುವ ಸಾಲುಗಳನ್ನು ಮುಂದುವರಿಸಿ ‘ಜ್ಞಾನ ವಿಜ್ಞಾನಗಳ ಸಂಪತ್ತಿನ ಅರಿವಿಗೆ ವಿಸ್ತರಿಸಿಕೊಳ್ಳದೇ ಹೋದರೆ ನಾವು ಇನ್ನೂ ಕತ್ತಲಿನಲ್ಲಿಯೇ ಇರಬೇಕಾಗುತ್ತದೆ’. ಗದ್ದರ್ ಅವರ ಪರಿನಿಬ್ಬಾಣದ ಪುಣ್ಯ ಸ್ಮರಣೆ ವೈಚಾರಿಕ ಪ್ರಖರತೆಯನ್ನು ಪಡೆದುಕೊಳ್ಳದಿದ್ದರೆ ನಾವು ಕ್ರಮಿಸಬೇಕಾದ ದಾರಿ ಇನ್ನೂ ದೂರವಾಗುತ್ತಲೇ ಹೋಗುತ್ತದೆ. ಗದ್ದರ್ ಅವರ ಈ ಪರಿನಿಬ್ಬಾಣದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದ ಪಿಚ್ಚಳ್ಳಿ ಶ್ರೀನಿವಾಸ್, ಅಂಬಣ್ಣ, ಹುಲಿಕುಂಟೆ ಮೂರ್ತಿ ಎಲ್ಲಾ ಸಂಘಟಕರಿಗೆ ಭೀಮ ವಂದನೆಗಳು ನಾವೆಲ್ಲರೂ ತಿಪ್ಪೆಯಲ್ಲಿ ಬೆಳೆದ ಮಲ್ಲಿಗೆಯ ಹೂವುಗಳು. ಆ ಹೂಗಳನ್ನು ಬಿದಿರ ಬುಟ್ಟಿಯಲ್ಲಿ ಹೊತ್ತು ನಮ್ಮ ಹೃದಯಗಳು ಮೊಲ್ಲೆ ಮಲ್ಲಿಗೆಯ ಪರಿಮಳವನ್ನು ಹಂಚುವ ದಾರಿಯಲ್ಲಿ ನಡೆಯೋಣ. ಫುಲೆ ದಂಪತಿಯ ಮಕ್ಕಳಲ್ಲವೇ ನಾವು...