ಜಲಗಾರನಾಗದ ಹೊರತು ಅನಿಕೇತನವಾಗಲಾರ
‘ಬೆಳಕು ಬಿಸಿಲಾಗಿ ಸುಡುಬಿಸಿಲಾಗಿ ಸುಡುತ್ತಿದೆ’. ಯಾವುದು ಅತಿಯಾದರೂ ಈ ಮನುಷ್ಯ ಅನ್ನೋ ಪ್ರಾಣಿ ಗೊಣಗುತ್ತಿರುತ್ತಾನೆ. ಬಿಸಿಲಲ್ಲದೆ ಮೋಡದ ವಾತಾವರಣವಿದ್ದು ತಂಪಾಗಿದ್ದರೆ, ‘‘ಏನ್ ದರಿದ್ರನಪ್ಪಆಕಾಶ ಮುಖ ಹೊತ್ತುಕೊಂಡು ಕೂತಿದೆ. ಒಂತರಾ ಹಿಂಸೆ, ಬೇಸರ ಕೆಲಸ ಮಾಡೋದಕ್ಕೂ ಮೂಡಿಲ್ಲ’’ ಎಂದು ಗೊಣಗುತ್ತಾನೆ. ಎಲ್ಲವೂ ಸರಿಯಾಗಿದ್ದರೂ ಈ ಮನುಷ್ಯ ಕಡಿದು ಕಟ್ಟೆ ಹಾಕಿದ್ದು ಅಷ್ಟೇಯಿದೆ. ಕುಣಿಯಲಾರದವಳು ಎನ್ನುವಲ್ಲಿ ಎಲ್ಲವನ್ನೂ ಹೆಣ್ಣಿನಮೇಲೆ ಹಾಕುವ ಈ ಗಂಡಸು ಮಾಡಿದ್ದು ಏನೂ ಇಲ್ಲ. ಅದಕ್ಕೆ ಕುಣಿಯಲಾರದವರಿಗೆ ನೆಲಡೊಂಕು ಎಂದರೆ ಸರಿಯಿರುತ್ತದೆ. ಆ ಕಾರಣಕ್ಕಾಗಿಯೇ ಮನುಷ್ಯನಿಗೆ ಪ್ರಕೃತಿಯ ಬಗ್ಗೆ ಕೂಡಾ ಒಂದು ರೀತಿಯ ಅಸಹನೆ. ಈ ಹೊತ್ತಿನ ಪ್ರಕೃತಿಯ ಎಲ್ಲಾ ವ್ಯತ್ಯಾಸಕ್ಕೆ ತನ್ನ ದುರಾಸೆಯೇ ಕಾರಣ ಎನ್ನುವುದನ್ನು ಕೂಡಾ ಒಪ್ಪಿಕೊಳ್ಳುವುದಿಲ್ಲ.
ಕಾಲಕೆಟ್ಟು ಹೋಯಿತು ಎಂದು ಹೇಳುತ್ತಾನೆಯೇ ಹೊರತು ಆ ಕಾಲದ ಸಮಾಜದಲ್ಲಿ ನಾನೂ ಇದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳದ ನಿಸ್ಸೀಮ ಈ ಮನುಷ್ಯ. ಮನುಷ್ಯನ ದುರಾಲೋಚನೆಗೆ ಬೆಳಕು ಬಿಸಿಲಾಗಿ ಸುಡುತ್ತಿದೆ. ಈಗಿನ ಬಿಸಿಲು ಸಹಜವಾಗಿರುವ ಬಿಸಿಲಲ್ಲ. ಅದು ತನ್ನ ತಾಪಮಾನವನ್ನು ಹೆಚ್ಚಿಸಿಕೊಂಡಂತೆ ಕಾಣುತ್ತಿದೆ. ಇನ್ನೂ ಎಪ್ರಿಲ್ ಮೇ ಹೊತ್ತಿಗೆ ತಾಪಮಾನ ಇನ್ನೂ ಹೆಚ್ಚಾಗಬಹುದು. ಇವೆಲ್ಲಾ ಈ ಹೊತ್ತಿನ ಎಲ್ಲರ ಅನುಭವದ ಮಾತುಗಳೇ ಆಗಿವೆ. ಪರಿಸರದ ಉಳಿವಿಗಾಗಿ ನಾವೆಲ್ಲಾ ಕೈಗೊಂಡ ಕಾರ್ಯಗಳು, ಶಪಥಗಳು, ಆ ಕ್ಷಣದ ವೀರಾವೇಶದ ನಿರ್ಣಯಗಳು ಅಷ್ಟೇ. ಮರು ಕ್ಷಣವೇ ಎಲ್ಲವನ್ನೂ ಮರೆತು ಬಿಡುತ್ತೇವೆ. ಆದರೆ ವಿಷಯ ಗಂಭೀರವಾಗಿದೆ ಅಂತ ಗೊತ್ತಿದ್ದರೂ ಇದೇನು ನಮ್ಮೊಬ್ಬರಿಗೆ ಆಗಿದ್ದಲ್ಲ, ‘ಎಲ್ಲರಿಗೂ ಆಗಿದ್ದು, ನಮಗೂ ಆಗುತ್ತದೆ’ ಎನ್ನುವ ಹುಂಬ ಚಿಂತನೆಯಷ್ಟೇ. ಅದಕ್ಕಾಗಿಯೇ ಈ ಸುಡು ಬಿಸಿಲನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಇದರ ಪರಿಣಾಮ ಮನುಷ್ಯರಿಗೆ ಮಾತ್ರ ಎಂದು ಭಾವಿಸಿದ್ದೇವೆ. ಆದರೆ ಈ ನೆಲದ ಮೇಲೆ ಕೋಟ್ಯಂತರ ಜೀವರಾಶಿಗಳು ಗಿಡ, ಮರ, ಬಳ್ಳಿಗಳು, ಪ್ರಾಣಿ ಪಕ್ಷಿಗಳು ನೀರಿಲ್ಲದೆ ತಲ್ಲಣಿಸಿವೆ, ಈ ಬಿಸಿಲಿನ ತಾಪಕ್ಕೆ ಕಾಳ್ಗಿಚ್ಚು ಬಂದರೆ ಜೀವರಾಶಿಗಳೆಲ್ಲ ಸುಟ್ಟು ಹೋಗುತ್ತವೆ. ಆಗ ನಮ್ಮ ಎದೆಗಳ ಮೇಲೆ ಬೆಂಕಿ ಉರಿಯುತ್ತಿರುವ ಅನುಭವವಾಗದಿದ್ದರೆ ನಾವೆಂತಹ ವಿವೇಕವಿರುವ ಜೀವಗಳಾಗುತ್ತೇವೆ ಹೇಳಿ ನೋಡೋಣ? ಅಂತಿಮವಾಗಿ ಜೀವಜಾಲಕ್ಕೆ ಕುತ್ತು ಬಂದಿದೆ. ದಿನಾ ಬರುತ್ತಿದ್ದ ನೀರು ಎರಡು ದಿನಕ್ಕೊಮ್ಮೆ, ಮೂರುದಿನಕ್ಕೊಮ್ಮೆ, ವಾರಕ್ಕೊಮ್ಮೆ ಬರತೊಡಗಿವೆ. ಆಮೇಲೆ ಪ್ರತಿ ಹನಿಯೂ ಅಮೃತವಾಗುತ್ತದೆ. ಈ ಸನ್ನಿವೇಶಕ್ಕೆ ಸಮಯ ದೂರವಿಲ್ಲ. ಈಗಲೂ ಈ ನೀರು ಎನ್ನುವುದು ಬಹಳ ಅಮೂಲ್ಯ ಎನ್ನುವ ಕನಿಷ್ಠ ಜ್ಞಾನಕೂಡಾ ಈ ಮನುಷ್ಯನಿಗೆ ಬಂದಂತೆ ಕಾಣುತ್ತಿಲ್ಲ. ಜೀವಜಲವಿದ್ದರೆ ಸಕಲ ಜೀವರಾಶಿಗಳು ಉಳಿಯುತ್ತವೆ. ಅವಿಲ್ಲದಿದ್ದರೆ, ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯವಾಗುತ್ತದೆ. ಇಥಿಯೋಪಿಯಾದಂತಹ ದೇಶಗಳಲ್ಲಿ ನೀರಿಲ್ಲದೆ ದಿನಗಳನ್ನು, ಕ್ಷಣಗಳನ್ನು ಹೇಗೆ ದೂಡುತ್ತಿದ್ದಾರೆ ಎನ್ನುವುದು ನಮ್ಮ ಅರಿವಿಗೆ ಬಾರದೆ ಹೋದರೆ ಅದು ನಮ್ಮ ಅಜ್ಞಾನವನ್ನು ತೋರಿಸುತ್ತದೆ ಅಷ್ಟೇ. ಎಲ್ಲದಕ್ಕೂ ಇನ್ನೊಬ್ಬರತ್ತ ಕೈತೋರಿಸುವ ನಾವು ಕನಿಷ್ಠ ಸಾಸಿವೆಗಾತ್ರವಾದರೂ ಏನಾದರೂ ಮಾಡಿರಲೇ ಬೇಕಲ್ಲಾ ಎನ್ನುವ ಪ್ರಶ್ನೆಯನ್ನು ಮತ್ತೆ ಮತ್ತೆ ನಮಗೆ ನಾವೇ ಹಾಕಿಕೊಳ್ಳದಿದ್ದರೆ, ಪ್ರಶ್ನೆಮಾಡುವುದಕ್ಕೆ ನಾವೇ ಇರುವುದಿಲ್ಲ.ಹೀಗೆ ಪ್ರಕೃತಿಯನ್ನು ನಮ್ಮೆದೆಯೊಳಗೆ ಇಳಿಸಿಕೊಳ್ಳದಿದ್ದರೆ, ಪ್ರಕೃತಿಯನ್ನು ನಮ್ಮ ಕಣ್ಣಿಗೆ ಕಟ್ಟಿಕೊಳ್ಳದಿದ್ದರೆ, ಪ್ರಕೃತಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳದಿದ್ದರೆ ಪ್ರಕೃತಿಯಭಾಗವೇ ಆಗಿರುವ ನಾವು ಅದರ ಕಣ-
ಕಣವಾಗಿದ್ದೇವಲ್ಲ ಎನ್ನುವ ಸಣ್ಣ ಖುಷಿ ನಮಗಿಲ್ಲದಿದ್ದರೆ, ಇಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ವ್ಯರ್ಥ.
ಇದೆಲ್ಲವನ್ನು ಹೇಳುವಾಗ ಅಗಾಧವಾದ ಪ್ರಕೃತಿಯನ್ನು ತನ್ನ ಬೊಗಸೆಯಲ್ಲಿ ಹಿಡಿದು, ಕುಡಿದು ಕಣ್ಣಿನಲ್ಲಿ ಅನಂತ ಹಸಿರನ್ನು ಹೀರಿಕೊಂಡ ಮಲೆನಾಡಿನ ಮಹಾಕವಿ ಕುವೆಂಪು ನೆನಪಾಗುತ್ತಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಎಷ್ಟೊಂದು ಮಳೆನೀರು, ಗುಡುಗು-ಸಿಡಿಲು, ಹಳ್ಳ-ಕೊಳ್ಳ ನದಿಗಳು ಅಬ್ಬಾ ! ಓದುತ್ತಾ ಓದುತ್ತಾ ನೀರಾಗಿ ಹಸಿರಾಗಿ, ಕಾಡಾಗಿ, ಎಲೆಯಾಗಿ, ಎಲೆಯತುದಿಯಲ್ಲಿ ತೊಟ್ಟಿಕ್ಕುವ ಹನಿಯಾಗಿ ಏನೆಲ್ಲಾ ಆಗಿ ಬಿಡುತ್ತೇವಲ್ಲಾ. ಆ ವಿಸ್ಮಯವನ್ನು ಕಟ್ಟಿಕೊಡುವ ನೆಲಮುಗಿಲಿಗೆ ನಿಂತ ಮಹಾಕವಿಯಾಗಿ ಕುವೆಂಪು ಕಾಣಿಸುತ್ತಾರೆ.
ಮಲೆಗಳಲ್ಲಿ ಮದುಮಗಳು ಎಂತಹ ಅನುಭವದ ಕಥನ ಅದು. ಆ ಕಾದಂಬರಿಯ ಓದು ಒಂದು ಚೇತೋಹಾರಿ! ಎಷ್ಟೊಂದು ನೆನಪುಗಳು! ಯಾಕೋ ಈ ಬಿರುಬಿಸಿಲಲ್ಲಿ ಕುವೆಂಪು ನೆನಪಾಗುತ್ತಾರೆ. ನನ್ನ ಊರು ಮಲೆನಾಡೇ, ಅವರ ಓದಿನಲ್ಲಿ ನನ್ನೂರಿನ ಮಳೆಗಾಲ ನೆನಪಾಗುತ್ತದೆ. ಮಲೆನಾಡಲ್ಲಿ ಎಷ್ಟುಮಳೆ ಆಗುತ್ತದೆಯೆಂದರೆ ಇಡೀ ನೆಲ ಹತ್ತಿಯಷ್ಟು ಮೃದುವಾಗುತ್ತದೆ. ಹೆಜ್ಜೆ ಹಾಕಿದ ಕಡೆ ನಮ್ಮ ಪಾದಗಳು ಮಣ್ಣಿನ ಷೂಗಳಾಗುತ್ತವೆ. ನೀವು ರೈನ್ ಕೋಟ್ ಹಾಕಿಕೊಂಡರೂ ಛತ್ರಿ ಹಿಡಿದರೂ, ಗೊರಗ ಹಾಕಿಕೊಂಡರೂ, ಮಳೆ ಹನಿಗಳಿಂದ ದೇಹದ ಅರ್ಧಭಾಗ ಒದ್ದೆ ಆಗಿರುತ್ತದೆ. ಈಗ ನೆನಪುಮಾಡಿಕೊಂಡರೆ ಅಂತಹ ಅನುಭವಗಳಿಂದ ನಾವು ಮಿಸ್ ಆಗುತ್ತಿದ್ದೇವಲ್ಲ ಅನ್ನಿಸುತ್ತದೆ. ನಮ್ಮ ಕವಿ ಎಲ್ಲವನ್ನೂ ಅನುಭವಿಸಿ, ಅನುಭವಿಸಿ ಅನುಭವಕ್ಕೆ ಬರುವಂತೆ ಬರೆದಿದ್ದಾರೆ. ಕುವೆಂಪು ಲೋಕವೆಂದರೆ ಶಿಶುವಾಗುವ ಲೋಕ. ವೈಚಾರಿಕ ನಿಷ್ಠೆಯಲ್ಲೂ ಅರಿವಿನ ಮಗುವಾಗಿ ಜನರನ್ನು ಮುಟ್ಟುತ್ತಾರೆ. ಕುವೆಂಪು ಅವರನ್ನು ನೆನೆಯುವುದೆಂದರೆ ಪ್ರಕೃತಿಯನ್ನು ಧ್ಯಾನಿಸಿದ ಹಾಗೆ. ಕುವೆಂಪು ಬಗ್ಗೆ ಬರೆಯುವವರನ್ನು, ಮಾತನಾಡುವವರನ್ನು ನೋಡಿದ್ದೇನೆ. ಕುವೆಂಪು ಅವರೇ ಮೈಮೇಲೆ ಬಂದಂತೆ ಮಾತನಾಡುತ್ತಾರೆ. ವೇದಿಕೆಯಿಂದ ಇಳಿದಮೇಲೆ ಅವರ ವರ್ತನೆ ಬೇರೆಯೇ ಆಗಿರುತ್ತದೆ. ಇದೆಲ್ಲಾ ನನಗಾದ ಕಹಿ ಅನುಭವ. ಅದನ್ನು ನಾನು ಇಲ್ಲಿ ದಾಖಲಿಸುತ್ತಿದ್ದೇನೆ. ಅದಕ್ಕೆ ನಾನು ‘‘ಅನಿಕೇತನವಾಗಬೇಕಾದರೆ ಜಲಗಾರನಾಗಬೇಕೆಂದು’’ ನನಗೆ ನಾನೇ ಹೇಳಿಕೊಳ್ಳುತ್ತಿರುತ್ತೇನೆ.
ಇದನ್ನು ಹೇಳುವಾಗ ಕುವೆಂಪು ಅವರ ‘ಸಾಲದ ಮಗು’ ಕಥೆ ನೆನಪಾಗುತ್ತದೆ. ಆ ಕತೆ ಓದುತ್ತಿದ್ದರೆ ಆಕಾಶದಿಂದ ಮಾತ್ರ ಮಳೆ ಸುರಿಯುವುದಿಲ್ಲ ಬದಲಾಗಿ ನಮ್ಮ ದೇಹದಲ್ಲಿರುವ ರೋಮದ ರಂಧ್ರಗಳಲ್ಲೂ ಕಣ್ಣೀರು ಜಿನುಗುತ್ತಿರುತ್ತದೆ. ಇದನ್ನು ಓದಿದ ಯಾರಲ್ಲಾದರೂ ಆ ಗೌಡನ ಕ್ರೌರ್ಯದ ಮನಸ್ಥಿತಿ ಕರಗಿ ಮನುಷ್ಯ ಪ್ರೀತಿಯಾಗಿ ಪರಿವರ್ತಿತವಾಗಬಾರದೇ ಅನ್ನಿಸುತ್ತದೆ ಮತ್ತು ಹೀಗೂ ಈ ಸಮಾಜದಲ್ಲಿ ನಡೆಯುತ್ತದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇಲ್ಲಿ ವಾಸ್ತವವನ್ನು ಕಥೆಮಾಡಿದ್ದಾರೆ. ಕುವೆಂಪು ಅವರು ಸಮಾಜದಲ್ಲಿರುವ ಮೌಢ್ಯಗಳನ್ನು ಹೋಗಲಾಡಿಸುವುದಕ್ಕೆ ಕಥೆ, ಕವಿತೆ, ನಾಟಕಗಳ ಮೂಲಕ ಅರಿವು ಮೂಡಿಸಲು ಪ್ರಯತ್ನಿಸಿದರು. ಜೊತೆಗೆ ತಾನು ಹುಟ್ಟಿಬಂದ ಸಮುದಾಯದ ಕ್ರೌರ್ಯದ ಮನಸ್ಥಿತಿಯನ್ನು ಕಟು ಶಬ್ಧದಲ್ಲಿ ಟೀಕಿಸಿದರು. ‘ಸಾಲದ ಮಗು’ ಕಥೆಯಲ್ಲಿ ತನ್ನ ಜೀತದ ಆಳು ಸುಬ್ಬ ಮೀನು ಹಿಡಿಯಲು ಹೋದವನು ಇನ್ನೂ ಬರಲಿಲ್ಲ ಎಂದು ಕೋಪದಿಂದ ಅವನನ್ನು ಹೊಡೆಯಲು ಬಾರುಕೋಲು ಸಮೇತ ಗೌಡರು ಹೊರಡುತ್ತಾರೆ. ಸುಬ್ಬ ಮೀನು ಹಿಡಿಯಲು ಹೋಗಿ ಹಾವು ಕಚ್ಚಿಸಿಕೊಂಡು ಸತ್ತು ಬಿದ್ದಿದ್ದ. ಇದನ್ನು ಗಮನಿಸದೇ, ಅವನು ಮಲಗಿದ್ದಾನೆಂದು ಭಾವಿಸಿ ಬೈಯುತ್ತಾ ಅವನನ್ನು ಕೋಲಿನ ತುದಿಯಿಂದ ಎಬ್ಬಿಸಲು ಪ್ರಯತ್ನಿಸುತ್ತಾರೆ. ಆಗ ಸುಬ್ಬ ತೀರಿ ಹೋದದ್ದು ಕಂಡು ‘ಅಬ್ಬಾ ಮೂರುನೂರು ರೂ ಸಾಲ ಚುಕ್ತಾ ಆಯ್ತು’ ಎನ್ನುವ ಮನೋಭಾವ ಕುವೆಂಪು ಬರೆದ ಹೊತ್ತಿಗಿಂತ ಈ ಹೊತ್ತು ಹತ್ತುಪಟ್ಟು ವಾಸ್ತವವಾಗಿದೆ ಎಂದೆನಿಸುತ್ತದೆ.
ಕುವೆಂಪು ಅವರು ಹೇಳಿದ ಸಾಮಾನ್ಯ ಅಸಾಮಾನ್ಯ ವಾಕ್ಯ ‘‘ಇಲ್ಲಿ ಯಾರೂ ಮುಖ್ಯರಲ್ಲ, ಇಲ್ಲಿ ಯಾರೂ ಅಮುಖ್ಯರಲ್ಲ’’ ಎನ್ನುವುದು ಅರ್ಥವಾಗಿಬಿಟ್ಟರೆ ಸಾಕು ಈ ನೆಲ ನಂದನವನವಾಗಿಬಿಡುತ್ತದೆ. ‘ಸಾಲದ ಮಗು’ ಕತೆ ಓದುತ್ತಿದ್ದರೆ ಆ ಮನೆ ಮಳೆಯಿಂದ ಸೋರುತ್ತಿರುವುದು, ಹಸಿವು, ದಾರಿದ್ರ್ಯ ತನ್ನ ಬದುಕನ್ನೇ ಕೊಚ್ಚಿಕೊಂಡು ಹೋಗುವ ಮಳೆ, ಗೌಡನ ದರ್ಪ, ದೌರ್ಜನ್ಯ, ನಡುರಾತ್ರಿಯಲ್ಲಿ ಗದ್ದೆ ಮೀನಿಗಾಗಿ ಗೋರಿಹಾಕಲೇಬೇಕು ಎನ್ನುವ ಒತ್ತಡ, ಕ್ರೂರ ಜಾತಿ ವ್ಯವಸ್ಥೆ ನಿತ್ಯವೂ ನಮ್ಮ ಕಣ್ಣೆದುರಿಗೇ ನಡೆಯುತ್ತಿದೆ. ಇದಕ್ಕೆ ನ್ಯಾಯ ಸಿಗಬೇಕೆಂಬುದು ಕುವೆಂಪು ಅವರ ದೊಡ್ಡ ಕನಸು. ಸಮಾಜ ಅರ್ಥಾತ್ ಮನುಷ್ಯ ಮಾನಸಿಕವಾಗಿ ಬದಲಾಗಬೇಕೆಂಬುದು ಅವರ ಆಶಯವಾಗಿದೆ. ಆದರೆ ಬದಲಾದಂತೆ ಕಂಡರೂ ಒಳಗೆ ಕತ್ತಲೆಯಲ್ಲಿ ಕೊಳೆಯುತ್ತಿದೆ. ಇದು ಬದಲಾಗದ ಶ್ರೇಷ್ಠತೆಯ ರೋಗ. ಆದರೂ ಬದಲಾಗುತ್ತದೆ, ಎನ್ನುವ ಕನಸನ್ನು ನಾವ್ಯಾರೂ ಬಿಟ್ಟವರಲ್ಲ
ಕುವೆಂಪು ಗುಂಗಿನಲ್ಲಿರುವಾಗಲೇ, ನಮ್ಮ ಕವಿಗಳಾದ ಎಸ್.ಮಂಜುನಾಥ್ (ಮಧುರಚೆನ್ನ), ಹುಲಿಕುಂಟೆ ಮೂರ್ತಿ ಇವರು, ‘ಈ ಸಂಜೆ ಫ್ರೀ ಮಾಡ್ಕೊಳಿ ಸಾರ್ ಒಂದು ಒಳ್ಳೆ ಸಿನೆಮಾ ನೋಡುವಿರಂತೆ’ ಅಂದರು. ಯಾವುದು ಸಿನೆಮಾ ಎಂದೆ?‘ಪೋಟೋ’ ಅಂದರು. ಸಿನೆಮಾ ಹೆಸರು ಪೋಟೋನಾ! ಕುತೂಹಲ ಹೆಚ್ಚಾಗಿ, ಆಗಲಿ ಖಂಡಿತಾ ಬರುತ್ತೇನೆ, ಎಂದೆ. ಯಶವಂತಪುರದ ಒರಾಯನ್ ಮಾಲ್‌ನಲ್ಲಿ ಸಿನೆಮಾ ಇತ್ತು, ಸಂಜೆ 4:30 ಕ್ಕೆ ಹೋದೆ. ಬೆಂಗಳೂರಿನಲ್ಲಿ ಈ ಮಾಲ್‌ಗಳಿಗೆ ಹೋದರೆ ಇನ್ನೊಂದು ಪ್ರಪಂಚಕ್ಕೆ ಹೋದಂತೆ ಆಗುತ್ತದೆ. ನಾನು ಎಲ್ಲಿದ್ದೇನೆ ಎಂಬುದೇ ತಿಳಿಯದಂತಾಗುತ್ತದೆ. ಅಲ್ಲಿ ಯಾರನ್ನಾದರೂ ಮಾತನಾಡಿಸಿದರೆ ಹಿಂದಿ, ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆ. ಹೇಗೋ ಅಲ್ಲಿಗೆ ತಲುಪಿದೆ. ಅಲ್ಲಿ ತಲುಪುವುದಕ್ಕೆ ಮುಂಚೆ ಹುಲಿಕುಂಟೆ ಮೂರ್ತಿಗೆ ನಾಲ್ಕೈದು ಸಾರಿ ಫೋನ್ ಮಾಡಿಕೊಂಡಿದ್ದೆ. ಈಗಲೂ ಬೆಂಗಳೂರಿನಲ್ಲಿ ಕೆಲವೊಂದು ಸ್ಥಳಗಳು ನನಗೆ ತಿಳಿಯುವುದಿಲ್ಲ. ನಾನು ಹೋಗುವ ಹೊತ್ತಿಗೆ ಮೂರ್ತಿ ಟಿಕೆಟ್ ತೆಗೆದುಕೊಂಡಿದ್ದರು. ನನ್ನ ಸ್ವಾಗತಿಸಿದ್ದು ಪೋಟೋ ಸಿನೆಮಾದ ನಿರ್ದೇಶಕರೇ ಆಗಿದ್ದರು. ಇವರೆ ನಿರ್ದೇಶಕರು ಅಂತ ನನಗೆ ಆಮೇಲೆ ತಿಳಿಯಿತು. ಕತ್ತಲೆ ಬೆಳಕಿನಲ್ಲಿ ಕುಳಿತು ಮಂಜಣ್ಣನನ್ನು ಇದು ಎಷ್ಟು ಗಂಟೆಯ ಸಿನೆಮಾ ಎಂದು ಕೇಳಿದೆ. ಒಂದೂವರೆಗಂಟೆ ಅಂದರು. ಸದ್ಯ ಈಗ ಆಗಿನಂತೆ ಎರಡೂವರೆ ಮೂರುಗಂಟೆ ಸಿನೆಮಾ ನೋಡಲು ಸಾಧ್ಯವಾಗುವುದಿಲ್ಲ. ಸಿನೆಮಾ ಆರಂಭಕ್ಕೆ ‘ತಾಯಿ ಹೊರಗಡೆ ಪಾತ್ರೆ ತೊಳೆಯುತ್ತಾ ಕುಳಿತಿದ್ದಾರೆ. ಸ್ವಲ್ಪಆರೇಳುವರ್ಷ ವಯಸ್ಸಿನ ಗಂಡು ಮಗು ದೂರದಲ್ಲಿ ಕುಳಿತಿದೆ. ಸಿನೆಮಾ ನಿಧಾನವಾಗಿ ಚಲಿಸಲಾರಂಭಿಸಿತು. ಈ ಕಲಾತ್ಮಕ ಚಿತ್ರಗಳೆಂದರೆ ಶಾಸ್ತ್ರೀಯ ಸಂಗೀತದಂತೆ ಪೂರ್ಣಪ್ರಮಾಣದಲ್ಲಿ ಅದಕ್ಕೆ ಒಡ್ಡಿಕೊಳ್ಳಬೇಕು.
ನಾನು ಹೆಗ್ಗೋಡಿನ ನೀನಾಸಂ ನಲ್ಲಿ ಕಲಿಯುತ್ತಿದ್ದಾಗ ಅನೇಕ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಿನೆಮಾಗಳನ್ನು ಕೆ.ವಿ. ಸುಬ್ಬಣ್ಣನವರು ತೋರಿಸುತ್ತಿದ್ದರು. ಈ ಹೊತ್ತಿಗೂ ಚರ್ಚೆಯಲ್ಲಿರುವ ಬಹಳ ಮಹತ್ವದ ಸಿನೆಮಾ ಎಂದರೆ ಸತ್ಯಜಿತ್ ರೇ ಅವರ ಪತೇರ್ ಪಾಂಚಾಲಿ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ರೋಷಾಮನ್. ಈ ಚಿತ್ರಗಳ ಬಗ್ಗೆ ಕೆ.ವಿ.ಸುಬ್ಬಣ್ಣ ಅವರು ಮತ್ತೆ ಮತ್ತೆ ಮಾತನಾಡುತ್ತಿದ್ದರು. ನೀನಾಸಂ ನಡೆಸುತ್ತಿದ್ದ ಸಿನೆಮಾ ಶಿಬಿರಕ್ಕೆ ಅನೇಕ ದಿಗ್ಗಜರೆಲ್ಲಾ ಬರುತ್ತಿದ್ದರು. ಪುಣೆಯಿಂದ ಸತೀಶ್ ಬಹದ್ಧೂರ್, ನಮ್ಮವರೇ ಆದ ಗಿರೀಶ್ ಕಾಸರವಳ್ಳಿ, ಅನಂತ ಮೂರ್ತಿ, ಡಿ. ಆರ್. ನಾಗರಾಜ್ ಮೊದಲಾದವರೆಲ್ಲ ಅಲ್ಲಿ ಸೇರುತ್ತಿದ್ದರು. ನಾನು ಮೊದಲ ಬಾರಿಗೆ ಡಿ.ಆರ್.ನಾಗರಾಜ್ ಅವರನ್ನು ನೋಡಿದ್ದು ಅಲ್ಲೇ. ಸಿನೆಮಾ ಶಿಬಿರದಲ್ಲಿ ನಾವು ನೋಡಿದ ಸಿನೆಮಾದ ಬಗ್ಗೆ ಕರ್ನಾಟಕದ ಎಲ್ಲಾ ಕಡೆಯಿಂದ ಬಂದವರು ಸಂವಾದ ನಡೆಸುತ್ತಿದ್ದರು. ಸತೀಶ್ ಬಹದ್ದೂರ್ ಸಿನೆಮಾದ ಕುರಿತು ಮಾತನಾಡುವಾಗ ಇಂಗ್ಲಿಷ್ ಮತ್ತು ಹಿಂದಿ ಬಳಸುತ್ತಿದ್ದುದರಿಂದ ನನಗೆ ಅರ್ಧಂಬರ್ಧ ಮಸುಕು ಮಸುಕಾಗಿ ತಿಳಿಯುತ್ತಿತ್ತು. ಬಹಳ ಮುಖ್ಯವಾದುದ್ದನ್ನು ಕೊನೆಯಲ್ಲಿ ಗೆಳೆಯ ವಿದ್ಯಾರಣ್ಯ ಅವನಿಂದ ಕೇಳಿ ತಿಳಿದುಕೊಳ್ಳುತ್ತಿದ್ದೆ. ಕೆಲವುಸಲ ನೇರವಾಗಿ ಕೆ. ವಿ ಸುಬ್ಬಣ್ಣ ಅವರಲ್ಲೇ ಕೇಳುತ್ತಿದ್ದೆ. ಆಗ ಕೆ. ವಿ.ಸುಬ್ಬಣ್ಣ ಅವರು ಅಗಿಯುತ್ತಿದ್ದ ಎಲೆ ಅಡಿಕೆಯನ್ನು ಪಕ್ಕದ ಬೇಲಿಗೆ ಪಿಚಕ್ಕನೆ ಉಗಿದು ಕೆಲವು ವಿಷಯಗಳನ್ನು ತಿಳಿ ಹೇಳುತ್ತಿದ್ದರು. ಅವರು ಹೇಳಿದ ಒಂದು ಮಾತು ಈಗಲೂ ನನಗೆ ನೆನಪಿದೆ. ಸಿನೆಮಾವನ್ನು ನೋಡುವುದಕ್ಕೆ ಭಾಷೆಯ ಅಗತ್ಯವಿಲ್ಲ. ‘‘ಈ ಜಗತ್ತಿನ ಎಲ್ಲರ ಕಷ್ಟ ಸುಖಗಳು, ಪ್ರೀತಿ ಪ್ರೇಮಗಳು, ಹಿಂಸೆ, ಯುದ್ಧ ಒಂದೇ ಆಗಿರುತ್ತವೆ’’ಅಂದರು. ಅವರು ಹೇಳಿದ ಈ ಮಾತಿನಿಂದ ಸಿನೆಮಾ ನೋಡುವುದನ್ನು ತಿಳಿದುಕೊಂಡೆ. ಸತೀಶ್ ಬಹದ್ದೂರ್ ಕೂಡಾ ಸಿನೆಮಾದ ದೃಶ್ಯ,ಕ್ಯಾಮರಾ ಚಲನೆ, ಬೆಳಕಿನವಿನ್ಯಾಸ, ವಸ್ತ್ರವಿನ್ಯಾಸ ಮುಖವರ್ಣಿಕೆ ಹಾಗೂ ಸಂಭಾಷಣೆಯ ಏರಿಳಿತ ಹೀಗೆ ಅನೇಕ ವಿಷಯಗಳ ಕುರಿತು ಸಿನೆಮಾ ಸಂವಾದದಲ್ಲಿ ಹೇಳುತ್ತಿದ್ದರು. ಆಗ ಅದು ತುಂಬಾ ಬೋರ್ ಅನ್ನಿಸುತ್ತಿತ್ತು. ಯಾವಾಗ ನಾನು ದೂರದರ್ಶನಕ್ಕೆ ಸೇರಿಕೊಂಡೆನೋ ಅವಾಗ ಸತೀಶ್ ಬಹದ್ದೂರ್ ಅವರು ತುಂಬಾ ಅಮೂಲ್ಯವಾದದ್ದನ್ನು ಹೇಳಿದ್ದರು ಅನ್ನಿಸಿತು.
ಕುವೆಂಪು ಅವರ ‘ಸಾಲದ ಮಗುವಿನ’ ಕಷ್ಟ ಮತ್ತು ನೋವು ನಾನು ನೋಡುತ್ತಿದ್ದ ಫೋಟೋ ಚಿತ್ರದಲ್ಲಿ ಮುಂದುವರಿದಂತೆ ಕಾಣುತ್ತಿತ್ತು. ಉತ್ತರ ಕರ್ನಾಟಕದ ಹಳ್ಳಿಯೊಂದರ ಈ ಕಥೆಯಲ್ಲಿ ಪುಟ್ಟ ಬಾಲಕ ತಾಯಿಯಲ್ಲಿ ‘‘ಅವ್ವ ನನ್ನನ್ನು ಬೆಂಗಳೂರಿಗೆ ಕಳುಹಿಸು, ಅಲ್ಲಿ ಅಪ್ಪ ಇದ್ದಾನೆ. ಅವನೊಂದಿಗೆ ನಾನೂ ವಿಧಾನಸೌಧದ ಮುಂದೆ ಫೋಟೋ ತೆಗೆದುಕೊಳ್ಳಬೇಕು’’ ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಾನೆ. ಇದೇಮಾತನ್ನು ಗೋಲಿ ಆಡುವಾಗ ತನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಾನೆ. ಆಗ ಅವನ ಸ್ನೇಹಿತರು ನೀನು ಸುಳ್ಳು ಹೇಳುತ್ತೀಯ ಎಂದು ಅವನನ್ನು ಹಂಗಿಸುತ್ತಾರೆ, ಹಟಕ್ಕೆಬಿದ್ದ ಬಾಲಕನ ಮನಸ್ಸಿನಲ್ಲಿ ತಾನು ಬೆಂಗಳೂರಿಗೆ ಹೋಗಿ ಅಪ್ಪನೊಟ್ಟಿಗೆ ವಿಧಾನ ಸೌಧದ ಮುಂದೆ ಪೋಟೋ ತೆಗೆಸಿಕೊಳ್ಳಲೇ ಬೇಕೆನ್ನುವ ಕನಸು ಗಟ್ಟಿಯಾಗುತ್ತದೆ. ತಾಯಿ ಯಾರದೋ ನೆರವಿನಿಂದ ಬಾಲಕನನ್ನು ಅಪ್ಪನ ಬಳಿ ಕಳುಹಿಸಿಕೊಡುತ್ತಾಳೆ. ಬೆಂಗಳೂರಿಗೆ ಬಂದ ಆ ಬಾಲಕ ಅಪ್ಪನೊಟ್ಟಿಗೆ ತನ್ನ ಕನಸನ್ನು ಹಂಚಿಕೊಳ್ಳುತ್ತಾನೆ. ಅದೇ ಸಮಯಕ್ಕೆ ಕೋವಿಡ್ ಕಾರಣಕ್ಕೆ ಇಡೀ ದೇಶದಲ್ಲಿ ಲಾಕ್‌ಡೌನ್ ಆಗಿ ಊರಿಗೆ ತೆರಳುವವರ ಆತಂಕ ಹೆಚ್ಚಾಗಿ ಅಪ್ಪ ಮತ್ತು ಮಗ ತುಮಕೂರಿನವರೆಗೂ ಒಂದು ಟೆಂಪೋದಲ್ಲಿ ಬಂದು ಪೊಲೀಸರು ತಡೆ ಹಿಡಿದಿದ್ದರಿಂದ ತಂದೆ ಮತ್ತು ಮಗ ಇನ್ನಿತರರು ಕಾಲ್ನಡಿಗೆಲ್ಲಿ ತೆರಳುತ್ತಾರೆ. ಈ ಸಿನೆಮಾದಲ್ಲಿ ಏನು ಆಗಬಾರದೆಂದು ಭಾವಿಸಿ ಕುಳಿತಿದ್ದೆನೋ ಅದು ಆಗಿಬಿಡುತ್ತದೆ. ಇಡೀ ಸಿನೆಮಾದ ಚಲನೆ ಕೋವಿಡ್ ಕಾಲದ ದುರಿತದ ದಿನಗಳನ್ನು ನೆನಪಿಸುತ್ತವೆ. ನೆನಪಿಸಿಕೊಳ್ಳಬಾರದನ್ನು ನೆನಪಿಸಿಕೊಳ್ಳಲೇ ಬಾರದು ಎನ್ನುತ್ತಾ ಮತ್ತೆ ಮತ್ತೆ ನೋಡಿದಾಗ ಹೃದಯ ಕಲ್ಲಾಗುತ್ತದೆ. ಬಾಲಕ ನಡೆ ನಡೆದು ಸುಸ್ತಾಗಿ ಜ್ವರ ಬಂದು ಕೊನೆಯುಸಿರೆಳೆಯುತ್ತಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಂದೆ-ತಾಯಿ ಜಗತ್ತಿನ ತಬ್ಬಲಿಗಳಾಗುತ್ತಾರೆ. ಈ ಸಂದರ್ಭದಲ್ಲಿ ನೊಂದ ತಾಯಿ ನಿಟ್ಟುಸಿರು ಬಿಡುತ್ತಾ ಗೋಡೆಯನ್ನು ಗಮನಿಸುತ್ತಾಳೆ. ಗೋಡೆಯ ಮೇಲೆ ವಿಧಾನಸೌಧದ ಚಿತ್ರವಿರುತ್ತದೆ. ಒಮ್ಮೆಲೇ ಎದ್ದು ಸಿಟ್ಟಿನಿಂದ, ದುಃಖದಿಂದ ಆ ಚಿತ್ರವನ್ನು ಹರಿದು ಚಿಂದಿಮಾಡಿ ಈ ವಿಧಾನಸೌಧವನ್ನು ನೋಡುವುದಕ್ಕಾಗಿಯೇ ನನ್ನ ಮಗ ಬೆಂಗಳೂರಿಗೆ ಹೋಗಬೇಕಾಯಿತು ಮತ್ತು ಆತ ಸಾಯಬೇಕಾಯಿತು ಎನ್ನುತ್ತಾ ದುಃಖದ ಕಟ್ಟೆಯೊಡೆದು ದುಃಖ ಮತ್ತು ಕಣ್ಣೀರಿನ ಜೊತೆ ನಲುಗುತ್ತಾಳೆ.
ಸಿನೆಮಾವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ದೇಶಿಸಿರುವ ನಿರ್ದೇಶಕ ಉತ್ಸವ್ ಪ್ರಥಮ ಪ್ರಯತ್ನದಲ್ಲಿಯೇ ಅತ್ಯುತ್ತಮ ಸಿನೆಮಾ ಕೊಡುವುದರಲ್ಲಿ ಸಫಲರಾಗಿದ್ದಾರೆ. ಅದರಲ್ಲಿ ನಟಿಸಿದ್ದ ಮಹಾದೇವ ಹಡಪದ್, ನನಗೆ ಪರಿಚಿತವಿರುವ ನಟ ಜಹಾಂಗೀರ್, ಡಿಂಗ್ರಿ ನರೇಶ್ ಮತ್ತು ಉಳಿದವರೂ ಕೂಡ ತುಂಬಾ ಸಹಜವಾಗಿ ಅಭಿನಯಿಸಿದ್ದಾರೆ. ಇವರೆಲ್ಲರೂ ರಂಗಭೂಮಿಯ ಪ್ರತಿಭೆಗಳೇ ಆಗಿದ್ದಾರೆ. ಸಿನೆಮಾ ಅತ್ಯಂತ ಪ್ರಭಾವಿ ಮಾಧ್ಯಮ. ಸಮಾಜದ ಓರೆ ಕೋರೆಗಳನ್ನು ತಿದ್ದುತ್ತದೆ. ಮನುಷ್ಯನ ಗುಣ ಅವಗುಣಗಳನ್ನು ಕನ್ನಡಿಯಂತೆ ತೋರಿಸುತ್ತದೆ. ಜಗತ್ತಿನಲ್ಲಿ ಈ ಹೊತ್ತಿಗೂ ಸಿನೆಮಾವನ್ನು ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮನುಷ್ಯ ಬದಲಾವಣೆಗಾಗಿ ಅವನೇ ನಿರ್ಮಿಸಿಕೊಂಡ ಕಲಾ ಪ್ರಕಾರಗಳಾದ ಸಾಹಿತ್ಯ, ಸಂಗೀತ, ನಾಟಕ, ಸಿನೆಮಾ ಇಂತಹ ಅನೇಕ ಪ್ರಕಾರಗಳಲ್ಲಿ ತನ್ನ ವಾಸ್ತವವನ್ನು ತಾನು ಅಭಿನಯಿಸುತ್ತಲೇ, ಮೆಚ್ಚಿಕೊಳ್ಳುತ್ತಲೇ ಬದಲಾವಣೆಗೆ ಹಪ ಹಪಿಸುತ್ತಾನೆ. ಬದಲಾವಣೆಯ ಅಭಿನಯವನ್ನು ತುಂಬಾ ಅದ್ಭುತವಾಗಿ ಅಭಿನಯಿಸುತ್ತಿದ್ದಾನೆ ಎಂದುಕೊಳ್ಳಬಹುದೇನೋ. ಈ ಎಲ್ಲವನ್ನು ನೆನೆಯುತ್ತಾ ಬಸವಣ್ಣನವರ ಒಂದು ವಚನ ನೆನಪಾಗುತ್ತದೆ.
ಕುತ್ತಿಗೆಗೆ ಕಟ್ಟಿದ ಬೆಂಡು, ಕಾಲಿಗೆ ಕಟ್ಟಿದ ಗುಂಡು
ತೇಲಲೀಯದು ಮುಳಗಲೀಯದು
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ ಕೂಡಲಸಂಗಮದೇವಾ...