ಅನುಭವ ಮಂಟಪದ ಹಾಡಿನ ದೊರೆ

ಹೊರಗೆ ಜೋರು ಮಳೆ, ಒಳಗೆ ಸಂಗೀತದ ಹೊಳೆ, ಚಿತ್ರಕಲಾ ಪರಿಷತ್ತಿನಲ್ಲಿ ಮಳೆಯನ್ನೂ ಲೆಕ್ಕಿಸದೆ ಜನ ಸಂಗೀತ ಕೇಳುತ್ತಿದ್ದಾರೆ. ರಾತ್ರಿ 10 ಗಂಟೆಯಾಗಿದೆ, ಮಳೆ ಬರುತ್ತಿದೆ. ಮನೆಗೆ ಹೋಗಬೇಕು ಎಂಬ ಹಂಬಲ ಮರೆತ ಜನ ಇನ್ನೊಂದು ಹಾಡು ಹಾಡಿ ಎಂದು ಉದ್ಗರಿಸುತ್ತಿದ್ದಾರೆ. ಇನ್ನೊಂದು ಹಾಡು ಎನ್ನುವ ಆ ಒಕ್ಕೊರಳ ಧ್ವನಿ ಕಿವಿಗೆ ಬೀಳುತ್ತಲೇ ಒಂದು ಆಲಾಪ ಪ್ರಾರಂಭವಾಗುತ್ತದೆ. ಅಲ್ಲಿ ಮಳೆಯ ಜೊತೆ ಸಂಗೀತದ ಸದ್ದು. ನಿಶ್ಯಬ್ದತೆಗೆ ಸಂಗೀತ, ಸಂಗೀತಕ್ಕೆ ಮಳೆಯ ತಾಳಮದ್ದಳೆ. ಅಬ್ಬಾ ಆ ಸಂದರ್ಭ ಎಂತಹ ರೋಮಾಂಚನ! ಆ ಹಾಡುಗಾರರು ಬೇರೆ ಯಾರೂ ಅಲ್ಲ, ಪದ್ಮಭೂಷಣ ಪಂಡಿತ್ ವೆಂಕಟೇಶ್ ಕುಮಾರ್ ಅವರು.
ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ಅರ್ಥಾತ್ ಸೂರ್ಯನಿಗೆ ಬೆಳಕು ಹಿಡಿಯುವ ಅಗತ್ಯವಿಲ್ಲ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಮಾಡಿದ ದೈತ್ಯ ಪ್ರತಿಭೆೆ ಇವರು. ಬಹುಶಃ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಇವತ್ತು ದೊಡ್ಡದಾಗಿ ಕಾಣುವ ಹೆಸರಿದ್ದರೆ ಅದು ಪಂಡಿತ್ ವೆಂಕಟೇಶ್ ಕುಮಾರ್ ಅವರದ್ದು. ಹಿಂದೂಸ್ಥಾನಿ ಸಂಗೀತ ಶೈಲಿಯ ಇವರ ಗಾಯನ ಲೋಕ ಪ್ರಸಿದ್ಧಿಯಾದದ್ದು. ಇವರು ದೈತ್ಯ ಪ್ರತಿಭೆಯೊಟ್ಟಿಗೆ ಅತ್ಯಂತ ವಿನಯವಂತರು. ಸರಳ ಸಜ್ಜನಿಕೆಯಲ್ಲಿ ಇವರಿಗೆ ಇವರೇ ಸಾಟಿ.
ಇಂತಹ ಮಹಾನ್ ಸಂಗೀತ ಕಲಾವಿದರನ್ನು ನೋಡುವುದು ಮತ್ತು ಕೇಳುವುದೆಂದರೆ ಆ ಘಳಿಗೆಗಳು ನಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳಾಗಿರುತ್ತವೆ. ನಾನು ಆಗಾಗ ಇವರ ಹೆಸರನ್ನು ಮತ್ತು ಇವರು ಹಾಡುವ ವಚನದ ಸಾಲುಗಳನ್ನು ಅಲ್ಲಲ್ಲಿ ಕೇಳಿದ್ದೆ. ಇವರನ್ನು ನೋಡುವ ಸೌಭಾಗ್ಯ ಇಷ್ಟು ಆಕಸ್ಮಿಕವಾಗಿ ಸಿಗುತ್ತದೆ ಅಂತ ಗೊತ್ತಿರಲಿಲ್ಲ. ಒಂದು ದಿನ ಆಫೀಸಿನ ಕೆಲಸ ಮುಗಿಸಿ ಹೊರಡಲು ಅನುವಾಗುತ್ತಿದ್ದೆ. ನನ್ನ ಮೇಲಿನ ಅಧಿಕಾರಿಗಳಾಗಿದ್ದ ಬಾನಂದೂರು ಕೆಂಪಣ್ಣ ಫೋನ್ ಮಾಡಿ ‘‘ಇವತ್ತು ಒಬ್ಬ ದೊಡ್ದವರನ್ನು ಪರಿಚಯ ಮಾಡಿಕೊಡುತ್ತೇನೆ. ಕಲಾಕ್ಷೇತ್ರಕ್ಕೆ ಹೋಗೋಣ’’ ಅಂದರು. ಇಬ್ಬರೂ ಕಲಾಕ್ಷೇತ್ರಕ್ಕೆ ಹೋದೆವು. ಕಲಾಕ್ಷೇತ್ರದ ಒಳಗೆ ಪ್ರವೇಶಿಸುತ್ತಿದ್ದಂತೆ ಪಂಡಿತ್ ವೆಂಕಟೇಶ್ ಕುಮಾರ್ ಅವರ ಹಾಡು ಕಿವಿಗೆ ತಾಕಿದವು. ರೋಮಾಂಚಿತನಾದೆ. ಒಳಗೆ ಪ್ರವೇಶಿಸಿದರೆ ಕಲಾಕ್ಷೇತ್ರ ಭರ್ತಿಯಾಗಿದೆ ಮತ್ತು ಹಾಡಿನ ಹೊರತಾಗಿ ಇಡೀ ಸಭಾಂಗಣ ನಿಶ್ಯಬ್ಧವಾಗಿತ್ತು. ಕೆಂಪಣ್ಣ ನನ್ನನ್ನು ಸೀದಾ ಮುಂದಕ್ಕೆ ಕರೆದುಕೊಂಡು ಹೋದರು. ಮುಂದಿನ ಮೂರು ಸೀಟುಗಳು ಖಾಲಿಯಿದ್ದವು, ಸದ್ದು ಮಾಡದೇ ಕುಳಿತುಕೊಂಡು ಹಾಡುಗಳನ್ನು ಆಲಿಸುತ್ತಾ ಹೋದೆ. ಆಗ ತಾನೆ ‘‘ಪ್ರಣತೆಯಿದೆ ಬತ್ತಿಯಿದೆ ಜ್ಯೋತಿ ಬೆಳಗುವೆಡೆ’’ ಹಾಡುತ್ತಿದ್ದರು. ನನ್ನ ಇಷ್ಟದ ಅಲ್ಲಮಪ್ರಭುವಿನ ವಚನ ಅದು. ಈ ವಚನ ಮುಗಿದಾಗ ಕಲಾಕ್ಷೇತ್ರ ಚಪ್ಪಾಳೆಯ ಸದ್ದಿನಲ್ಲಿ ಮುಳುಗಿಹೋಗಿತ್ತು. ಅಷ್ಟೇ ವಿನಯದಿಂದ ಚಪ್ಪಾಳೆಯನ್ನು ಸ್ವೀಕರಿಸಿದ ಗಾಯಕರು ‘ಅಕ್ಕ ಕೇಳವ್ವ’ ಎನ್ನುವ ಅಕ್ಕಮಹಾದೇವಿ ವಚನದ ಸಾಲನ್ನು ಹಾಡಲು ತೊಡಗಿದಾಗ ಮತ್ತೆ ಚಪ್ಪಾಳೆಯ ಸದ್ದು. ಆಲಾಪದೊಂದಿಗೆ ಶುರುಮಾಡಿದ ಈ ಹಾಡು ಅತ್ಯದ್ಭುತವಾಗಿತ್ತು. ವೆಂಕಟೇಶ್ ಕುಮಾರ್ ಹಾಡು ಕೇಳುತ್ತಿದ್ದರೆ ಕೇಳುವುದಕ್ಕೆ ಸಂಗೀತದ ಜ್ಞಾನ ಯಾಕೆ ಬೇಕು, ಕೇಳುವ ಪ್ರೀತಿಯ ಮನಸ್ಸು ಇದ್ದರೆ ಸಾಕು. ನಾನು ದಸಂಸ ಹಾಡುಗಾರನಾಗಿದ್ದವನು. ನಮ್ಮಪ್ಪ ಒಳ್ಳೆಯ ತಮಟೆಯ ವಾದ್ಯಗಾರರಾಗಿದ್ದವರು.
ಪಂಡಿತ್ ವೆಂಕಟೇಶ್ ಕುಮಾರ್ ಅವರು ಸಂಗೀತದ ಮಹೋನ್ನತಿಯನ್ನು ಸಾಧಿಸಿದವರು. ಇವರ ಸಾಧನೆ ದೊಡ್ದಮಟ್ಟದ್ದು. ಆದರೆ ಇವರು ಇಷ್ಟನ್ನು ಸಾಧಿಸಲು ಹಾಕಿದ ಶ್ರಮ ಅಷ್ಟಿಷ್ಟಲ್ಲ. ಇವರ ಶ್ರಮ, ಸಾಧನೆ, ಅನುಭವ, ನಡೆದು ಬಂದ ದಾರಿ ಬಹಳ ತ್ರಾಸದಾಯಕವಾದದ್ದು. ಈ ಸಮಾಜದ ಕಟ್ಟಕಡೆಯ ಹಾಗೂ ಪುಟ್ಟ ಸಮುದಾಯದಲ್ಲಿ ಹುಟ್ಟಿ ಬೆಳೆದವರು. ಇವರ ಕುಟುಂಬ ತೊಗಲು ಗೊಂಬೆ ಆಟದ ಕಲೆಯ ಹಿನ್ನೆಲೆ ಉಳ್ಳವರು. ಬೆಳಗಲಿ ವೀರಣ್ಣ ಇವರನ್ನು ಪೋಷಿಸಿದವರಲ್ಲಿ ಬಹಳ ಪ್ರಮುಖರು. ಇವರ ಬದುಕಿನಲ್ಲಿ ಪಡೆದ ಅನುಭವಗಳು ಇವರ ಅದ್ವಿತೀಯ ಸಾಧನೆಗೆ ಪೂರಕವಾಗಿದೆ ಎನ್ನಬಹುದು. ಇವರ ಹಾಡನ್ನು ಕೇಳುತ್ತಾ ಹೋದಂತೆ ವಿಶೇಷವಾಗಿ ಇವರು ಹಾಡುವ ವಚನಗಳನ್ನು ಕೇಳುತ್ತಿದ್ದರೆ, ಅನುಭವಮಂಟಪದಲ್ಲಿ ಹಾಡುತ್ತಿರುವ ಹಾಡಿನ ದೊರೆಯಂತೆ ಕಾಣಿಸುತ್ತಾರೆ. ಶರಣರೆಲ್ಲರೂ ಕೂತು ಕೇಳುವ ಹಾಗೆ ಕಾಣಿಸುತ್ತಾರೆ. ಆ ಹೊತ್ತಿನ ಆ ಹಾಡುಗಾರಿಕೆ ನನ್ನ ಜೀವಮಾನದ ರಸಗಳಿಗೆಗಳಾಗಿ ಉಳಿದುಬಿಟ್ಟಿವೆ. ಕಾರ್ಯಕ್ರಮ ಮುಂದುವರಿಯುವಾಗ ಕೆಂಪಣ್ಣನ ಕಿವಿಯಲ್ಲಿ ಒಂದು ಹಾಡು ಕೇಳಬಹುದಾ? ಎಂದು ಕೇಳಿದೆ. ‘‘ಹೂ ಕೇಳು’’ ಅಂದರು. ನಾನು ಚೀಟಿಯಲ್ಲಿ ‘ಅಪ್ಪಾನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನೂ ನಮ್ಮ ಕಿನ್ನರಿ ಬೊಮ್ಮಯ್ಯ ಎನ್ನನೆತಕ್ಕರಿಯಿರಿ ಕೂಡಲ ಸಂಗಮದೇವ’ ಎಂಬ ವಚನದ ಸಾಲುಗಳನ್ನು ಹಾಡಿ ಎಂದು ಕೇಳಿಕೊಂಡಾಗ ‘‘ಈ ಹಾಡಿನ ನಂತರ ಹಾಡುತ್ತೇನೆ’’ ಎಂದು ಕನಕದಾಸರ ಕೀರ್ತನೆಯ ಸಾಲುಗಳನ್ನು ಹಾಡಿದರು. ಈ ಹಾಡು ಕೇಳುತ್ತಿದ್ದರೆ ಭಕ್ತಿರಸದ ಪರಾಕಾಷ್ಠೆಯ ಅನುಭವದ ಅನನ್ಯತೆಯನ್ನು ಪಡೆದ ಹಾಗಾಯಿತು. ಈ ಹಾಡಿನ ನಂತರ ನನ್ನ ಕೋರಿಕೆಯ ಹಾಡನ್ನು ಹಾಡಿದರು. ಬಸವಣ್ಣ ಹೇಗೆ ತಳಸ್ಪರ್ಶಿಯವಾಗಿ ಎದೆಯಾಳಕ್ಕೆ ಇಳಿದ ಹಾಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರು ಕೂಡಾ ನೆಲದ ಹಾಡಾಗಿ ಜನರ ಎದೆಯಲ್ಲಿ ವಿರಾಜಮಾನರಾಗಿದ್ದಾರೆ. ಕಾರ್ಯಕ್ರಮ ಮುಗಿದಮೇಲೆ ನಾನು ಮತ್ತು ಕೆಂಪಣ್ಣ ಅವರನ್ನು ಮಾತನಾಡಿಸಲು ಹೋದೆವು. ಸುಧಾರಿಸಿಕೊಳ್ಳುತ್ತಿದ್ದ ವೆಂಕಟೇಶ್ ಕುಮಾರ್ ಸರ್ ಅವರಿಗೆ ಕೈಮುಗಿದು ನಮಸ್ಕರಿಸಿದೆವು. ಅವರೂ ಕೂಡಾ ಅಷ್ಟೇ ವಿನಯದಿಂದ ಕೈಮುಗಿದು, ಕೆಂಪಣ್ಣನ ಕೈ ಹಿಡಿದುಕೊಂಡರು. ಕೆಂಪಣ್ಣ ನನ್ನ ಪರಿಚಯ ಅವರಿಗೆ ಮಾಡಿಸಿದರು. ನಾನು ಅವರ ಕೈಹಿಡಿದು ನಮಸ್ಕರಿಸುತ್ತಾ ‘‘ನಿಮ್ಮ ಹಾಡುಗಾರಿಕೆಯನ್ನು ಅನುಭವಿಸಿದ್ದು ನನ್ನ ಜೀವಮಾನದ ಅವಿಸ್ಮರಣೀಯ ಕ್ಷಣ’’ ಅಂದೆ. ‘‘ತುಂಬಾ ದೊಡ್ಡ ಮಾತು’’ ಎಂದರು. ಅವರನ್ನು ಅಭಿನಂದಿಸಲು ಜನ ಬರುತ್ತಲೇ ಇದ್ದರು. ನಾವು ಬರುತ್ತೇವೆಂದು ಕೈಮುಗಿದು ಹೊರಟೆವು. ಅವರು ನಿಜಕ್ಕೂ ಸಂಗೀತದ ಧೀಮಂತರೇ, ಕೆಂಪಣ್ಣ ಹೇಳಿದ ದೊಡ್ಡವರೇ ಅನ್ನಿಸಿತು.
ಆನಂತರದ ದಿನಗಳಲ್ಲಿ ಅನೇಕ ಬಾರಿ ಫೋನ್ ಮಾಡಿ ಮಾತನಾಡಿಸಿದ್ದೇನೆ. 2013ರಲ್ಲಿ ನನ್ನ ಎರಡನೇ ಕಾವ್ಯ ಸಂಕಲನ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಬಿಡುಗಡೆಗೆ ಸಿದ್ಧವಾಗಿತ್ತು. ಯಾಕೋ ನನಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ವೆಂಕಟೇಶ್ ಕುಮಾರ್ ಸರ್ ಅವರನ್ನು ಕರೆಯಬೇಕೆಂದು ಆಸೆಯಾಯಿತು. ಧೈರ್ಯಮಾಡಿ ಫೋನ್ ಮಾಡಿದೆ. ಅವರು ‘‘ತುಂಬಾ ಸಂತೋಷದ ವಿಷಯ. ಅಲ್ಲಿ ನನಗೇನು ಕೆಲಸ, ಅಲ್ಲಿ ದೊಡ್ಡ ದೊಡ್ಡ ಸಾಹಿತಿಗಳು, ಕವಿಗಳು ಬರುತ್ತಾರೆ. ನಮ್ಮದೇನಿದ್ರೂ ಗುರುಗಳ ಆಶೀರ್ವಾದದಿಂದ ಹಾಡುವುದು’’ ಎಂದು. ನಾನು ‘‘ಹಾಡೋಕೆ ಬರಬೇಕು, ಪುಸ್ತಕ ಬಿಡುಗಡೆಗೂ ಇರಬೇಕು ಸರ್’’ ಎಂದೆ. ಖುಷಿಯಿಂದಲೇ ಒಪ್ಪಿಕೊಂಡರು. ನನಗೆ ಆ ಕ್ಷಣ ಇದು ನಿಜಾವೇ ಅನ್ನಿಸಿತು. ನಾನು ಈ ವಿಷಯದ ಬಗ್ಗೆ ಅಭಿನವ ರವಿಕುಮಾರ್‌ಗೆ ತಿಳಿಸಿದೆ. ಅವರು ತುಂಬಾ ಸಂತೋಷಪಟ್ಟರು. ನಾವು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಅಂದೆ. ಅದಕ್ಕೆ ರವಿಕುಮಾರ್ ಚಿತ್ರಕಲಾ ಪರಿಷತ್ ಸಹಭಾಗಿತ್ವದಲ್ಲಿ ಮಾಡೋಣ, ಅಲ್ಲಿಂದ ಅವರಿಗೆ ಒಂದು ಪುಟ್ಟ ಗೌರವ ಸಂಭಾವನೆ ಕೊಡಬಹುದು ಎಂದರು ಮತ್ತು ‘‘ಇದರೊಟ್ಟಿಗೆ ಷ. ಶೆಟ್ಟರ್ ಪುಸ್ತಕ ಬಿಡುಗಡೆಯಲ್ಲಿ ಪಾಲ್ಗೊಳ್ಳುವಂತೆ ಕೇಳೋಣ’’ ಎಂದರು.
ಆನಂತರ ನನಗೆ ಚಿಂತೆ ಶುರುವಾಯಿತು. ವೆಂಕಟೇಶ್ ಕುಮಾರ್ ಅವರ ಸಂಭಾವನೆ ಎಷ್ಟೋ ಏನೋ ಎಂದು ತಿಳಿಯದ ನಾನು, ಬನ್ನಿ ಎಂದುಬಿಟ್ಟೆ. ಅವರನ್ನು ಹೇಗೆ ಕೇಳುವುದು? ಕೊನೆಗೆ ಧೈರ್ಯಮಾಡಿ ಫೋನ್ ಮಾಡಿದೆ. ತಡಬಡಿಸುತ್ತಾ. ‘‘ನಿಮಗೆ ಗೌರವಯುತವಾಗಿ ಏನು ಕೊಡಬೇಕು ತಿಳಿತಾಯಿಲ್ಲ ಸರ್’’ ಅಂದೆ. ‘‘ಆ ಚಿಂತೆ ಬಿಟ್ಟುಬಿಡಿ, ನಮ್ಮ ಪಕ್ಕವಾದ್ಯದವರು ನಾಲ್ಕುಜನ ಬರ್ತಾರೆ ಅವರಿಗೆ ಏನು ಕೊಡಬೇಕು ಅನ್ನಿಸುತ್ತೋ ಅಷ್ಟು ಮಾಡಿ’’ ಎಂದರು. ವೆಂಕಟೇಶ್ ಕುಮಾರ್ ಸರ್ ಬೆಂಗಳೂರಿಗೆ ಬಂದರೆ ಮಿನರ್ವ ಸರ್ಕಲ್‌ನ ಭಾರತ್ ಹೋಟೆಲ್‌ನಲ್ಲೇ ಉಳಿದುಕೊಳ್ಳುವುದು. ಆ ಹೋಟೆಲ್ ಬಿಟ್ಟು ಮತ್ತೆಲ್ಲೂ ಉಳಿದುಕೊಳ್ಳುವುದಿಲ್ಲ. ಅತ್ಯಂತ ಸರಳ ಹಾಗೂ ಸ್ವಚ್ಛವಾಗಿರುವ ಹೋಟೆಲ್ ಅದು. ‘‘ಭಾರತ್ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದರೆ ಸಾಕು’’ ಎಂದರು. ಆದಿನ ಬಂದೇ ಬಿಟ್ಟಿತು. ಕಾರ್ಯಕ್ರಮ ಸಂಸ ಬಯಲು ರಂಗಮಂದಿರದಲ್ಲಿ ಏರ್ಪಾಡಾಗಿತ್ತು. ನನ್ನ ಪುಸ್ತಕ ಬಿಡುಗಡೆಗಿಂತ ವೆಂಕಟೇಶ್ ಕುಮಾರ್‌ರವರು ಹಾಡುತ್ತಾರೆ ಅನ್ನುವುದಕ್ಕೆ ಜನ ತುಂಬಿ ಹೋಗಿದ್ದರು. ಸಭೆಯಲ್ಲಿ ಸಾಂಸ್ಕೃತಿಕ ಲೋಕದ ದಿಗ್ಗಜರು ನೆರೆದಿದ್ದರು. ವೇದಿಕೆಯಲ್ಲಿ ವೆಂಕಟೇಶ್ ಕುಮಾರ್ ಅವರೊಂದಿಗೆ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಅಗ್ರಹಾರ ಕೃಷ್ಣ ಮೂರ್ತಿ ಇನ್ನೂ ಅನೇಕರಿದ್ದರು. ಕಾರ್ಯಕ್ರಮ ಸಂಗೀತದಿಂದ ಕಳೆಗಟ್ಟಿತ್ತು. ವೆಂಕಟೇಶ್ ಕುಮಾರ್‌ರವರಿಗೆ ಒಂದು ಪುಟ್ಟ ಸನ್ಮಾನ ಕೂಡಾ ಆಯಿತು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೆಂಕಟೇಶ್ ಕುಮಾರ್‌ರವರು ಹಾಡಿದ್ದು ವಚನಕಾರರ ಅನುಭವಮಂಟಪದಲ್ಲಿ ನಾವೆಲ್ಲಾ ಇದ್ದೇವೇನೋ ಅನ್ನುವಷ್ಟು ಭಾವಪರವಶಗೊಂಡೆವು. ಜನರ ಹರ್ಷ, ಚಪ್ಪಾಳೆಗಳಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.
ಪಂಡಿತ್ ವೆಂಕಟೇಶ್ ಕುಮಾರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಹೋದ ಮೇಲೆ ಅವರನ್ನು ಮತ್ತೆ ಮತ್ತೆ ನೋಡುವ, ಮಾತನಾಡಿಸುವ ಅವಕಾಶ ಸಿಗುತ್ತಾ ಬಂತು. ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಒಂದು ಕಾರ್ಯಕ್ರಮ ಏರ್ಪಾಟಾಗಿತ್ತು. ಆ ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಅಂತ ಇತ್ತು. ವೆಂಕಟೇಶ್ ಕುಮಾರ್‌ರಿಗೆ ಫೋನ್ ಮಾಡಿದೆ. ‘‘ನೀವು ಬಂದು ಫೋನ್ ಮಾಡಿ, ಒಳಗೆ ಬರುವ ವ್ಯವಸ್ಥೆ ನಾನು ಮಾಡುತ್ತೇನೆ’’ ಎಂದರು. ನಾನೂ ಮತ್ತು ಕವಿತಾ ಕಾರ್ಯಕ್ರಮಕ್ಕೆ ಹೋದೆವು. ಸರ್‌ಗೆ ಫೋನ್ ಮಾಡಿದೆ, ಅವರು ಹೊರಗೆ ಬಂದು ನಮ್ಮನ್ನು ಒಳಗೆ ಹೋಗಲು ಅನುವುಮಾಡಿಕೊಟ್ಟರು. ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಅವರ ಪ್ರೀತಿ ಮತ್ತು ಅವರ ಹಾಡಿನ ಸ್ಪರ್ಶದಲ್ಲೇ ನಾವು ಮನೆ ತಲುಪಿದೆವು.
ಆನಂತರ ಬೆಂಗಳೂರು ದೂರದರ್ಶನದಲ್ಲಿ ಅವರ ಕಾರ್ಯಕ್ರಮ ರೆಕಾರ್ಡಿಂಗ್ ಇದ್ದದ್ದು ತಿಳಿಯಿತು. ಒಂದು ವಾರದ ಮುಂಚೆಯೇ ಫೋನ್ ಮಾಡಿ ‘‘ನಮ್ಮ ಮನೆಗೆ ಊಟಕ್ಕೆ ಬರಬೇಕು ಸರ್’’ ಅಂದೆ. ‘‘ಆಗಲಿ ಬರುತ್ತೇನೆ’’ ಅಂದರು. ನಮ್ಮ ಮನೆ ಸಡಗರದಿಂದ ತುಂಬಿ ಹೋಗಿತ್ತು. ಪದ್ಮಭೂಷಣ ಪಂಡಿತ್ ವೆಂಕಟೇಶ್ ಕುಮಾರ್ ಅವರೊಟ್ಟಿಗೆ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್ ಅವರೆಲ್ಲಾ ಬಂದ ಅನುಭವ ನಮಗಾಯಿತು. ಮನೆಗೆ ಬಂದವರೇ ಸಂತೋಷದಿಂದ ಊಟ ಮಾಡಿದರು. ನನ್ನ ಇಬ್ಬರೂ ಮಕ್ಕಳನ್ನೂ ಆಶೀರ್ವದಿಸಿ ನಮ್ಮ ಪುಟ್ಟ ಸಂಸಾರ ಚೆನ್ನಾಗಿರಲಿ ಎಂದು ಹಾರೈಸಿದರು. ಮಗಳ ಸಮಾನರಾದ ನನ್ನ ಪತ್ನಿಗೆ ‘‘ನೀವು ಮಾಡಿದ ಅಡುಗೆ ಛಲೋ ಇತ್ರಿ ಅಕ್ಕಾರ’’ ಎಂದು ಹೊಗಳಿದರು. ಅವರ ವಿನಯ ಅವರ ಸಂಗೀತಕ್ಕೆ ತೊಡಿಸಿದ ಸುವರ್ಣದ ಚೌಕಟ್ಟು. ಸಂಗೀತ ಲೋಕದ ದಿಗ್ಗಜರು ನಮ್ಮ ಮನೆಗೆ ಬಂದಿದ್ದು ಮರೆಯಲಾರದ ನೆನಪು ನನಗೆ.
ಮೊನ್ನೆ ಮನಸ್ಸು ಏಕೋ ದುಗುಡದಲ್ಲಿತ್ತು, ಪಂಡಿತ್ ವೆಂಕಟೇಶ್ ಕುಮಾರ್ ಸರ್ ಅವರು ಹಾಡಿರುವ ವಚನಗಳನ್ನು ಕೇಳುತ್ತಿದ್ದೆ. ಸರ್ವಜನಾಂಗದ ಸಮ್ಮಿಲನದಂತಿದ್ದ ಅನುಭವಮಂಟಪದ ಆಸ್ಥಾನದಲ್ಲಿ ಹಾಡಿನ ದೊರೆಯಂತೆ ಪಂಡಿತ್ ವೆಂಕಟೇಶ್ ಕುಮಾರ್ ಹಾಡುತ್ತಿರುವಂತೆ ಕೇಳುತ್ತಾ ಕೇಳುತ್ತಾ ಕಳೆದುಹೋದೆ. ಅನೇಕ ವರ್ಷಗಳ ಈ ಸಿಹಿ ನೆನಪು ಅವರ ಒಡನಾಟ ಒಂದು ಅದ್ಭುತವಾದ ಅನುಭವ. ಅವರು ಹೀಗೆ ನೂರು ಕಾಲ ಹಾಡುತ್ತಲಿರಲಿ ಎನ್ನುವ ಪ್ರಾರ್ಥನೆ ಪ್ರಕೃತಿಯಲ್ಲಿ.