ನೊಂದವರ ದನಿಗೆ ಎದೆಯ ಹಾಲಾದವರು
ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ಜಾತಿ ಸಂಘರ್ಷ ಅರ್ಥಾತ್ ಅಸ್ಪಶ್ಯತೆ ಆಚರಣೆ, ಗುಡಿಸಲಿಗೆ ಬೆಂಕಿ ಹಾಕಿದ ಪ್ರಕರಣವನ್ನು ಕಳೆದ ಹತ್ತು ವರ್ಷಗಳಿಂದ ವಿಚಾರಣೆ ನಡೆಸಿದ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು ನೂರಾ ಒಂದು ಮಂದಿಗೆ ಶಿಕ್ಷೆ ಆಗಿದೆ. ಅವರಲ್ಲಿ ತೊಂಭತ್ತೆಂಟು ಜನರಿಗೆ ಜೀವಾವಧಿ ಶಿಕ್ಷೆ ಸೇರಿದಂತೆ 15ಸಾವಿರ ರೂ. ದಂಡ ವಿಧಿಸಿ, ಇನ್ನುಳಿದ ಮೂವರಿಗೆ ಐದುವರ್ಷ ಜೈಲು ಹಾಗೂ ತಲಾ ಎರಡು ಸಾವಿರ ರೂ. ದಂಡವನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ.
ಇದೊಂದು ಐತಿಹಾಸಿಕ ತೀರ್ಪು, ಈ ಸುದ್ದಿಯನ್ನು ದಿನಪತ್ರಿಕೆಗಳಲ್ಲಿ ಓದಿದಾಗ ನನ್ನ ಕಣ್ಣು, ಮನಸ್ಸುಗಳು ಆನಂದತುಂದಿಲವಾದವು. ಇಷ್ಟು ವರ್ಷಗಳು ಬರೀ ದೌರ್ಜನ್ಯ, ಅತ್ಯಾಚಾರ, ಕೊಲೆ ಇತ್ಯಾದಿ ಓದಿ, ಕೇಳಿ ಮನಸ್ಸು ಕಲ್ಲಾಗಿತ್ತು. ಆದರೂ ಒಂದು ಭರವಸೆಯಿತ್ತು. ಇವತ್ತಲ್ಲ ನಾಳೆ ಒಂದು ಒಳ್ಳೆಯ ಸುದ್ದಿ ನಮ್ಮದಾಗುತ್ತದೆ ಎನ್ನುವುದು ಸಹನೆಯ ಕುಲದವರ ಕನಸು. ಆ ಕನಸು ನಮ್ಮ ಶ್ರೇಷ್ಠ ಸಂವಿಧಾನ ಕೊಟ್ಟಿದ್ದು. ಅದು ನಮ್ಮ ಭರವಸೆಯ ಬೆಳಕು. ವಂಚಿತ ಸಮುದಾಯಗಳಿಗೆ, ಮಹಿಳೆಯರಿಗೆ, ಬೆಳಕಿನ ಕಿರಣಗಳು ಬಂದೇ ಬರುತ್ತವೆ ಎನ್ನುವ ಆಶಯ ಇದ್ದೇ ಇತ್ತು. ನಾಳೆಯ ಕನಸಿಲ್ಲದಿದ್ದರೆ ಬದುಕು ನರಕವಾಗಿ ಬಿಡುತ್ತದೆ. ಭೀಮಾ ಸಾಹೇಬರ ಬದುಕೇ ನಮ್ಮ ಕನಸುಗಳ ಬಹುದೊಡ್ದ ಮಾರ್ಗ.
2024ರ ಅ.24ರಂದು ಮರಕುಂಬಿಯ ನೊಂದ ಗ್ರಾಮಸ್ಥರಿಗೆ ಮಾತ್ರವಲ್ಲ ಇಡೀ ರಾಜ್ಯದ ದೇಶದ ಎಲ್ಲ ನೊಂದ ಸಮುದಾಯಗಳಿಗೆ ಶುಭದಿನವಾಯಿತು. ಏನೇ ಕೆಟ್ಟ ಸುದ್ದಿ ಬಂದಾಗಲೂ, ದಲಿತರಿಗೆ, ನೊಂದವರಿಗೆ, ಅಸಹಾಯಕರಿಗೆ ತೊಂದರೆಯಾದಾಗ ಮರುಗುತ್ತೇವೆ, ಆದರೆ ಒಳ್ಳೆಯ ಸುದ್ದಿಯನ್ನು ಕೇಳಿದಾಗ ಅಷ್ಟೇ ಸಂತೋಷವಾಗುತ್ತದೆ. ತೀರ್ಪು ಪ್ರಕಟವಾಗಿ ಮರುದಿನ ಪತ್ರಿಕೆಗಳಲ್ಲಿ ಇಂತಹ ಸುದ್ದಿ ನೋಡಿ, ನೂರಾರು ಸಾವಿರಾರು ಮಂದಿ ಒಳಗೊಳಗೇ ಸಂತೋಷ ಪಟ್ಟರು. ಈ ಹೊತ್ತಿಗೂ ನಮ್ಮ ಸಂವಿಧಾನ ರೂಪಿಸಿದ ಕಾನೂನುಗಳು ಗಟ್ಟಿಯಾಗಿವೆ, ಯಾರಿಗೇ ಅನ್ಯಾಯವಾದರೂ ನ್ಯಾಯ ಕೊಡಿಸುವ ಜವಾಬ್ದಾರಿ ಸಂವಿಧಾನದಲ್ಲಿ ಅಡಕವಾಗಿದೆ.
ಇಂತಹದೊಂದು ಮಹತ್ವದ ತೀರ್ಪನ್ನು ಕೊಟ್ಟ ಘನತೆವೆತ್ತ ನ್ಯಾಯಾಧೀಶರಿಗೆ ಮನಸ್ಸಿನಲ್ಲಿ ಸಾವಿರ ಸಾವಿರ ಶರಣು ಶರಣಾರ್ಥಿಗಳನ್ನು ಹೇಳಿದೆ. ಸಾವಿರಾರು ವರ್ಷಗಳಿಂದ ನೊಂದು ಬೆಂದು ಬಸವಳಿದ ಸಮುದಾಯಗಳಿಗೆ ಬೆಳಕಿನ ಕಿರಣಗಳ ತೋರಿಸಿದಿರಿ, ಅಂತಹ ಸಮುದಾಯಗಳಿಗೆ ಎದೆಹಾಲ ಅಮೃತವನ್ನಿತ್ತ ತಾಯಿಯನ್ನು ನೆನಪಿಸಿದಿರಿ, ಅದೊಂದು ಅಪೂರ್ವ ಘಳಿಗೆ ಅಂತ ಅನ್ನಿಸಿತು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುಪ್ರಿಂಕೋರ್ಟಿನ ನ್ಯಾಯಾಧೀಶರು ಒಳಮೀಸಲಾತಿಗೆ ಸಮ್ಮತಿಯನ್ನು ವ್ಯಕ್ತಪಡಿಸಿದರು. ಘನ ಸರಕಾರಗಳು ಕೊಡುವ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ಆಶಯ ಬಹಳ ದೊಡ್ಡದು. ಇಂತಹಾ ಮಹತ್ವದ ತೀರ್ಪುಗಳು ಈ ನಡುವೆ ಬರುತ್ತಿರುವುದು ವಂಚಿತ ಸಮುದಾಯಗಳು ಸಂವಿಧಾನದ ಬಲದಿಂದ ಎದ್ದುನಿಂತು ನಡೆಯಲು ಸಹಾಯ ಮಾಡುತ್ತಿದೆ. ಇಂತಹ ತೀರ್ಪುಗಳು ಸ್ವಸ್ಥ ಸಮಾಜಕ್ಕೆ ದಾರಿಮಾಡಿಕೊಡುತ್ತವೆ. ಆದರೆ ಸಮಾಜ ಇನ್ನೂ ಸರಿದಾರಿಗೆ ಬಂದಂತೆ ಕಾಣುತ್ತಿಲ್ಲ. ದಲಿತರು ಮತ್ತು ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಗಾಯವಾದ ದೇಹಕ್ಕೆ ಮತ್ತು ಮನಸ್ಸಿಗೆ ಗಾಯ ವಾಸಿಯಾಗಲು ಸಮಯಬೇಕಾಗುತ್ತದೆ. ಆದರೆ ಗಾಯದ ಮೇಲೆ ಬರೆ ಎಳೆದರೆ? ಎಷ್ಟುದಿನ ಇಂತಹ ಗಾಯಗಳನ್ನು ಸಹಿಸಿಕೊಳ್ಳುವುದು, ಎಲ್ಲದಕ್ಕೂ ಮಿತಿಯಿದೆ. ಆದರೂ ಎಲ್ಲವನ್ನು ಸಹಿಸಿಕೊಂಡು ಬಂದವರಿಗೆ ಈ ತೀರ್ಪು ಒಂದು ರೀತಿಯ ದೊಡ್ಡ ಸಮಾಧಾನ ತಂದಿದೆ.
ಇಂತಹ ತೀರ್ಪುಗಳು ಇನ್ನಷ್ಟು ಹೆಚ್ಚಾಗಬೇಕು. ದೌರ್ಜನ್ಯಗಳು ಕಡಿಮೆಯಾಗುತ್ತಾ ಹೋಗಬೇಕು. ಸಂವಿಧಾನದ ಆಶಯ, ಸರ್ವೋದಯದ ಕನಸು ಸಾಕ್ಷಾತ್ಕಾರಗೊಳ್ಳಬೇಕು. ಇದಕ್ಕೆ ಎಲ್ಲ ಮನಸ್ಸುಗಳು ಮಿಡಿಯಬೇಕು. ಪ್ರಕಟವಾದ ಈ ಸುದ್ದಿಯನ್ನು ಓದುತ್ತಿದ್ದಾಗ ಆ ಸುದ್ದಿಯ ಅಕ್ಷರಗಳೇ ನಮ್ಮನ್ನು ಮಾತನಾಡಿಸುತ್ತಿರುವಂತೆ ಭಾಸವಾಯಿತು. ಆ ವಾಕ್ಯಗಳೇ ನಮ್ಮನ್ನು ಸಂತೈಸುತ್ತಿವೆ ಅನ್ನಿಸಿತು. ಅಕ್ಷರಗಳಿಗೂ ಜೀವಸೆಲೆ ಇದೆ ಎನ್ನುವುದು ನಮ್ಮ ಸಂವಿದಾನದ ಪ್ರಸ್ತಾವನೆಯಿಂದ ಹಿಡಿದು ಪ್ರತೀ ಪುಟಗಳು, ಪ್ರತೀ ಸಾಲುಗಳು, ಪ್ರತೀ ಶಬ್ದಗಳು ಜೀವ ಜಲದ ರೂಪು ಪಡೆದುಕೊಂಡಿವೆ. ಅದು ಮಾನವ ಕುಲದ ಕಲ್ಯಾಣದ ಸ್ವರೂಪವನ್ನು ಪಡೆದುಕೊಂಡಿವೆ. ಅವಕ್ಕೆ ಜೀವ ಸ್ಪರ್ಷ ಇದೆ ಎನ್ನುವುದು ಮತ್ತು ಈ ಅಕ್ಷರಗಳನ್ನು ಸಂಜೀವಿನಿ ಎಂದು ಕರೆದರೂ ಅತಿಶಯೋಕ್ತಿಯಲ್ಲ. ಈ ಜೀವಪರ ಸಂವಿಧಾನದಿಂದ ನಮ್ಮೆಲ್ಲರ ಬದುಕು ಹಸನಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಅಕ್ಷರವು ಅರಿವಾಗಿ, ಅನ್ನವಾಗಿ, ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಅದಕ್ಕೆ ಭೀಮ ಸಾಹೇಬರು ಕಾರಣ, ಅದನ್ನು ಮರೆಯದಿರೋಣ. ಅವರ ಮಂತ್ರವಾಗಿರುವ ಶಿಕ್ಷಣ, ಸಂಘಟನೆ, ಹೋರಾಟ ಈ ಅರಿವಿನಿಂದಲೇ ನಮ್ಮ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದೇವೆ. ಮರಕುಂಬಿಯ ಸುದ್ದಿ ಓದುವಾಗ ಭೀಮ ಸಾಹೇಬರು ಮತ್ತೆ ಮತ್ತೆ ನೆನಪಾದರು. ಅವರು ಕರ್ನಾಟಕಕ್ಕೆ ಬಂದು ಹೋಗಿದ್ದು ಕೂಡಾ ನೆನಪಾಯಿತು. ಅವರು ಈ ಸುದ್ದಿಯನ್ನು ಕೇಳಿದ್ದರೆ ಒಂದು ಮುಗುಳುನಗೆ ನಗುತ್ತಿದ್ದರು ಅನ್ನಿಸುತ್ತದೆ. ಎಲ್ಲರೂ ಮುಗುಳುನಗುವ ದಿನಗಳು ಬರಲೆಂದು ಕಾಯಬಹುದು. ಇಂತಹ ಸುದ್ದಿಯನ್ನು ಯಾರೊಟ್ಟಿಗಾದರೂ ಹಂಚಿಕೊಳ್ಳಬೇಕೆಂದು ಯೋಚಿಸುತ್ತಿದ್ದಾಗ ದಸಂಸ ಅಂಬೇಡ್ಕರ್ ವಾದದ ನಾಯಕ ಮಾವಳ್ಳಿ ಶಂಕರಣ್ಣ ನೆನಪಾದರು.
ಒಂದು ಮುಖ್ಯ ಕಾರಣಕ್ಕೆ ಅವರನ್ನು ನೆನಪಿಸಿಕೊಂಡೆ. ಮರಕುಂಬಿ ಜನಕ್ಕೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಭಯ, ಆತಂಕ. ತೀರ್ಪು ಹೀಗೆ ಬಂದ ಕಾರಣಕ್ಕೆ ಸೇಡು ತೀರಿಸಿಕೊಳ್ಳಬಹುದು ಎಂದು ಅದಕ್ಕೆ ಅಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಮ್ಮ ಜನರ ರಕ್ಷಣೆಗೆ ಹೇಳಲೆಂದು ಪೋನ್ ಮಾಡಿದೆ. ಮಾವಳ್ಳಿ ಶಂಕರಣ್ಣ ಯಾವಾಗ ಎಷ್ಟೊತ್ತಿಗೆ ಫೋನ್ ಮಾಡಿದರೂ ಸದಾ ನಗು ನಗುತ್ತಲೇ ಮಾತನಾಡುತ್ತಾರೆ. ಶಂಕರಣ್ಣನಿಗೆ ಅವರ ಗುರುಗಳಾದ ಮತ್ತು ನಮ್ಮೆಲ್ಲರ ಪ್ರೀತಿ ಪಾತ್ರರಾದ ಕವಿ ಸಿದ್ದಲಿಂಗಯ್ಯನವರ ಮಾತು ‘‘ಬಡವರ ನಗುವಿನ ಶಕ್ತಿ’’ ಎಂದು ಹೇಳಿದ್ದರಿಂದ ಈ ಶಂಕರಣ್ಣ ಮತ್ತಷ್ಟು ನಗುನಗುತ್ತಲೆ ಮಾತನಾಡಿದರು.
ಇವರನ್ನು ನೋಡಿದರೆ ಒಬ್ಬ ರಾಜನ ಕತೆ ನೆನಪಾಗುತ್ತದೆ ‘‘ಇನ್ನುಮೇಲೆ ರಾಜ್ಯದಲ್ಲಿ ಎಲ್ಲರೂ ನಗುನಗುತ್ತಲೇ ಮಾತನಾಡಬೇಕೆಂದು ರಾಜಾಜ್ಞೆಯಾಗುತ್ತದೆ’’. ಕತೆಯಲ್ಲಿ ಬರುವ ಹಾಗೆ ಆ ಆಜ್ಞೆಯನ್ನೂ,
ಅವರ ಗುರುಗಳ ಆಜ್ಞೆಯನ್ನು ಶಂಕರಣ್ಣ ಪಾಲಿಸುತ್ತಿರಬಹುದು ಅನ್ನಿಸುತ್ತದೆ. ಆದರೆ ಇಡೀ ರಾಜ್ಯದ ಹಾಗೂ ದೇಶದ ಜನ ನಗುನಗುತ್ತಲೇ ಮಾತನಾಡಿದರೆ ಮೇಲ್ಕಂಡ ಯಾವ ಘಟನೆಗಳೂ ನಡೆಯುವುದೇ ಇಲ್ಲ ಅನ್ನಿಸುತ್ತದೆ. ಅಂತಹದ್ದೊಂದು ದಿನ ಬರಲೆಂದು ನಾವೆಲ್ಲಾ ಆಶಿಸೋಣ. ನಾವೆಲ್ಲಾ ಜಗತ್ತೇ ತಲೆಮೇಲೆ ಬಿದ್ದಿರುವವರ ರೀತಿ ಇರ್ತೀವಲ್ಲ. ಅದು ಸರಿಯಲ್ಲವೇನೋ. ಸಮಾಜದಲ್ಲಿ ನಡೆಯುವುದು ನಡೆಯುತ್ತಲೆ ಇರುತ್ತದೆ. ನಾನು ಸಂಪರ್ಕಿಸಿದಾಗ ಶಂಕರಣ್ಣ ದೂರದ ಬೀದರ್‌ನಲ್ಲಿದ್ದರು. ನಗುತ್ತಲೇ ‘ಹೇಳಣ್ಣ ಏನು ಸಮಾಚಾರ’ ಎಂದರು, ಮರಕುಂಬಿ ಘಟನೆಯ ತೀರ್ಪು ನೋಡಿ ತಂಬಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ
ಅಂದೆ. ಹೌದಣ್ಣ ನಿಜ ಅಂದರು. ‘ಈ ಸಂತೋಷದಲ್ಲಿ ನಾವು ಮೈಮರೆಯುವಂತಿಲ್ಲ, ಅಲ್ಲಿ ನಮ್ಮ ಜನರಿಗೆ ಎನೂ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೆ ಯಾರಿಗಾದರೂ ಮೇಲಧಿಕಾರಿಗಳೊಡನೆ ಮಾತನಾಡಿ’ ಎಂದೆ. ‘‘ಇಲ್ಲ ಹಾಗೆಲ್ಲಾ ಏನೂ ತೊಂದರೆಯಾಗುವುದಿಲ್ಲ’’ ಎಂದು ನನಗೆ ಸಮಾಧಾನ ಹೇಳಿದರು ಮತ್ತು ತೀರ್ಪುಕೊಟ್ಟ ಘನ ನ್ಯಾಯಾಧೀಶರ ಬಗ್ಗೆ ಅಪಾರ ಗೌರವದ ಮಾತನಾಡಿದರು. ಆ ಘಟನೆ ನಡೆದಾಗಿಂದ ಆ ಘಟನೆ ವಿರುದ್ಧ ಹೋರಾಟಮಾಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಆ ಸಂಘಟನೆಯ ನಾಯಕರುಗಳಿಗೂ ಆ ಕೇಸಿನ ಪರವಾಗಿ ವಾದಮಾಡಿದ ವಕೀಲರುಗಳು ಎಲ್ಲರನ್ನೂ ಪ್ರೀತಿಯಿಂದ ಅಭಿಮಾನದಿಂದ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದೊಂದು ಐತಿಹಾಸಿಕ, ಚಾರಿತ್ರಿಕ ಹೋರಾಟ ಮತ್ತು ತೀರ್ಪು. ಚಳವಳಿಗಳಿಗೆ ಎಂತಹ ದೊಡ್ಡಶಕ್ತಿ ಇದೆ ಎಂದು ಗೊತ್ತಾಗುತ್ತದೆ. ಈ ತೀರ್ಪುನೀಡಿದ ಎಲ್ಲರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.
ಈ ಮಾತುಗಳನ್ನು ನಾನು ಮತ್ತು ಶಂಕರಣ್ಣ ಮಾತನಾಡಿಕೊಂಡೆವು. ಅವರು ಈ ನಾಡಿನ ಚಳವಳಿಯ ನೇತೃತ್ವ ವಹಿಸಿದ್ದರಿಂದ ಸಂಘಟನೆಯ ಶಕ್ತಿ ಏನು ಎಂಬುದು ಅವರಿಗೆ ಗೊತ್ತಿದೆ. ಹೋರಾಟ ಚಳವಳಿ ಇಲ್ಲದಿದ್ದರೆ ಇಂತಹದೆಲ್ಲಾ ಫಲಿಸುವುದಿಲ್ಲ. ಹೋರಾಟ ಚಳವಳಿ ಎಂದರೆ ಜೀವಚಲನೆಯ ರೂಪಕಗಳು. ಈ ಎಲ್ಲ ಖುಷಿ ಮತ್ತು ಸಂತೋಷದ ಘಳಿಗೆಗಳ ನಡುವೆ ಕೂಡಾ ಶಿಕ್ಷೆಯಾದವರ ಬಗ್ಗೆ ವಿಷಾದವೆನಿಸುತ್ತದೆ. ಮನುಷ್ಯ ಸಂಘಜೀವಿ, ಕೊಡುಕೊಳ್ಳುವಿಕೆಯಲ್ಲೇ ಪರಸ್ಪರ ಹಂಚಿಕೊಂಡು ಬದುಕಬೇಕು. ಅದು ಪ್ರಕೃತಿಯ ನಿಯಮ ಮತ್ತು ಸಂವಿಧಾನದ ಆಶಯ. ದ್ವೇಷ ಮತ್ತು ಸಿಟ್ಟು ಒಳ್ಳೆಯದಲ್ಲ. ಇನ್ನೊಬ್ಬರ ಬಗ್ಗೆ ಕಹಿಯಾಗಿ ಯೋಚಿಸುವುದು ನಮ್ಮ ಆರೋಗ್ಯಕ್ಕೇ ಹಾನಿಕಾರಕ. ಮನುಷ್ಯ ಎಷ್ಟು ಬೆಳೆದಿದ್ದಾನೆಂದರೆ ಇಡೀ ಜಗತ್ತು ಅವನ ಬೆರಳ ತುದಿಯಲ್ಲಿದೆ. ಆದರೆ ಜಾತಿ ಮತ್ತು ಧರ್ಮದ ಅಮಲಿನಲ್ಲಿ ಮತ್ತೆ ಮತ್ತೆ ಕಳೆದುಹೋಗುತ್ತಿದ್ದಾನೆ. ಈ ಎಲ್ಲವನ್ನೂ ಹೇಳುವಾಗಲೂ ಕೂಡ ನನ್ನದೇ ಒಂದು ಕವಿತೆಯ ಸಾಲು ನೆನಪಾಗುತ್ತದೆ. ‘‘ನನಗೆ ಹೊಡೆದವರ ಕೈ ಕೂಡ ನೋವಾಗದಿರಲಿ’’ ಎನ್ನುವುದು ನಾವೆಲ್ಲರೂ ತಾಯಿಯ ಮಕ್ಕಳು ಎನ್ನುವುದನ್ನು ಮರೆಯದಿರೋಣ.
ಇದೆಲ್ಲದರ ನಡುವೆ ಸುವರ್ಣ ಕರ್ನಾಟಕದ ಸವಿನೆನಪಿಗೆ, ರಾಜ್ಯ ಸರಕಾರ ನೂರು ಜನಕ್ಕೆ ಪ್ರಶಸ್ತಿ ಗೌರವವನ್ನು ಕೊಟ್ಟು ಗೌರವಿಸಿದೆ ಮತ್ತು 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಕನ್ನಡಿಗರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ವಿಸ್ತರಿಸುವ ಜವಾಬ್ದಾರಿ ಸರಕಾರಕ್ಕೂ, ಸಮಾಜಕ್ಕೂ ಎರಡಕ್ಕೂ ಬೇಕಾಗಿದೆ. ಭಾಷೆ ಮತ್ತು ಬದುಕು ಬೇರೆ ಬೇರೆಯಲ್ಲ, ಅದು ದೇಹ ಮತ್ತು ಉಸಿರಿನ ಹಾಗೆ. ಆದರೂ ಕನ್ನಡ ಶಾಲೆಗಳನ್ನು ಮುಚ್ಚುವುದು ನಿಲ್ಲಬೇಕು. ಎಲ್ಲಿಂದ ನಮ್ಮ ಜ್ಞಾನಪರಂಪರೆ ಗಟ್ಟಿಗೊಳ್ಳಬೇಕೋ ಆ ನೆಲೆಗಳು ದುರ್ಬಲವಾಗುತ್ತಿವೆ. ಬೆಂಗಳೂರಿನಲ್ಲಿ ಕನ್ನಡ ಮಾಯವಾಗಿದೆ. ಹೇಗೆಂದರೆ ನಮ್ಮ ಗೊಲ್ಲಳ್ಳಿ ಶಿವಪ್ರಸಾದ್ ಹಾಡಿದ ಹಾಡು ನೆನೆಪಾಗುತ್ತದೆ ‘‘ಎಲ್ಲ ಮಾಯ, ನಾಳೆ ನಾವು ಮಾಯ, ನಾಳೆ ನೀವು ಮಾಯ’’ ಹಾಡು ನೆನಪಾಗುತ್ತದೆ. ಈ ಹಾಡಿನ ಹಾಗೆ ಮುಂದಿನ ದಿನಮಾನಗಳಲ್ಲಿ ಕನ್ನಡ ಮಾಯವಾಗುವ ಎಲ್ಲ ಅಪಾಯಗಳು ನಮ್ಮ ಕಣ್ಣೆದುರಿಗಿವೆ. ಅವೆಲ್ಲವನ್ನೂ ಮೀರಿ ಬೆಂಗಳೂರು ಕನ್ನಡಿಗರ ಅಸ್ಮಿತೆಯ ಮಹಾನಗರದಲ್ಲಿ ಕನ್ನಡವನ್ನು ಮಾತನಾಡುತ್ತಲೇ ವಿಸ್ತರಿಸಬೇಕೇ ವಿನಃ ಭಾಷಣಗಳಿಂದಲ್ಲ. ಇದು ಕನ್ನಡದ ಎಲ್ಲ ಸಂಘಸಂಸ್ಥೆಗಳು, ಅಕಾಡಮಿ-ಪ್ರಾಧಿಕಾರ ಮತ್ತು ಎಲ್ಲ ಕನ್ನಡಿಗರ ಜವಾಬ್ದಾರಿ. ಉಳಿದ ಭಾಷಿಕರೊಡನೆ ಕನ್ನಡವನ್ನು ಮಾತನಾಡಿಸುತ್ತಲೇ ವಿಸ್ತರಿಸಬೇಕೇ ವಿನಃ ಅವರ ಭಾಷೆಯಲ್ಲಿ ನಾವು ಮಾತನಾಡುವ ಹೆಚ್ಚುಗಾರಿಕೆ ಕನ್ನಡಕ್ಕೆ ಅಪಾಯವನ್ನು ತಂದೊಡ್ಡಲಿದೆ.
ಇದು ಬರಿಯ ನವೆಂಬರ್ ತಿಂಗಳ ಜವಾಬ್ದಾರಿಯಲ್ಲ, 365 ದಿನಗಳೂ ಸಹ ಶಿರಸಾವಹಿಸಿ ಮಾಡಬೇಕಾದ ಕೆಲಸ.
ರಾಜ್ಯೋತ್ಸವ ಪ್ರಶಸ್ತಿ ಕೆಲವರಿಗೆ ತಪ್ಪಿದ್ದರ ಬಗ್ಗೆ ಬೇಸರವಾಗುತ್ತದೆ. ಇವತ್ತು ಬೆಳಗ್ಗೆ ನಮ್ಮ ಹಿರಿಯ ಲೇಖಕರು, ಚಿಂತಕರು, ಪತ್ರಕರ್ತರು, ಸಂವಾದ ಮಾಸಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ ಸರ್ ಅವರಿಗೆ ಒಂದು ಒಳ್ಳೆಯ ಸುದ್ದಿಗೆ ಅಭಿನಂದಿಸಲು ಫೋನ್ ಮಾಡಿದ್ದೆ. ಅವರು ತುಸು ಸಿಟ್ಟಾಗಿದ್ದರು. ‘‘ನನಗೆ ಮುಖ್ಯಮಂತ್ರಿಗಳು ಮುಖತ ಸಿಕ್ಕರೆ ಕೇಳಲೇ ಬೇಕು. ಕಳೆದ ಐದು ದಶಕಗಳಿಂದ ದಲಿತ ಚಳವಳಿಗೆ ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟವರು ಹಿರಿಯ ಜೀವಗಳಾದ ಕೋಲಾರದ ಮುನಿಸ್ವಾಮಣ್ಣ, ಮಂಡ್ಯದ ಗುರುಪ್ರಸಾದ್ ಅಣ್ಣ ಇಬ್ಬರಲ್ಲಿ ಒಬ್ಬರಿಗಾದರೂ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು ಎಂದರು. ಕಾಂಗ್ರೆಸಿನವರು ತಮಗೆ 136 ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ, ಆ ಗೆಲುವಿನಲ್ಲಿ ಸಿಂಹಪಾಲು ದಲಿತರದ್ದು ಮತ್ತು ದಲಿತ ನಾಯಕರದ್ದು ಎನ್ನುವುದನ್ನು ಮರೆತುಬಿಟ್ಟಿದ್ದಾರೆ.ವಿಶೇಷವಾಗಿ ನಾನು ಇವರಿಬ್ಬರಿಗೆ ಪ್ರಶಸ್ತಿ ಕೊಡಲೇಬೇಕೆಂದು ಪ್ರಯತ್ನಿಸಿದ್ದೆ, ಒಬ್ಬರಿಗಾದರೂ ಕೊಡಬಹುದಿತ್ತು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೆ. ಇದು ಆಗಿಲ್ಲ ಎನ್ನುವುದು ನನಗೆ ಬೇಸರ ತಂದಿದೆ’’ ಎಂದು ದುಗುಡದಿಂದ ತಮ್ಮ ಬೇಸರವನ್ನು ತೋಡಿಕೊಂಡರು. ಬಸವನಗುಡಿಯ ಮೈದಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚುಜನ ದಲಿತರನ್ನು ಸಂಘಟಿಸುವಲ್ಲಿ ಮತ್ತು ಇಡೀ ಕರ್ನಾಟಕದ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ, ತಾಲೂಕು, ಹೋಬಳಿಗಳಲ್ಲಿ ನಾವೆಲ್ಲಾ ಪ್ರವಾಸ ಮಾಡಿದ್ದೇವೆ. ಅದರಲ್ಲಿ ಗುರು ಮತ್ತು ಮುನಿಸ್ವಾಮಪ್ಪ ಅವರೂ ಇದ್ದರು ಎನ್ನುವುದನ್ನು ಗಮನಿಸಬೇಕಾದ ಸಂಗತಿ. ಮುಂದಿನ ದಿನಮಾನಗಳಲ್ಲಿ ಅವರಿಗೆ ಇಂತ ಮಹತ್ವದ ಗೌರವ ಸಿಗಲೆಂದು ಆಶಿಸೊಣ.
ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನತಾನರಿತವಂಗೆ
ಫಲವೊಂದೆ ಷಡುದರುಷನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವ ನಿಮ್ಮನರಿತವಂಗೆ
► ಬಸವಣ್ಣ