ರಶ್ಯದ ಡ್ರೋನ್ ದಾಳಿಯಲ್ಲಿ 60,000 ಟನ್ ಧಾನ್ಯ ನಾಶ: ವರದಿ
ಸಾಂದರ್ಭಿಕ ಚಿತ್ರ \ Photo: PTI
ಕೀವ್: ಒಡೆಸಾ ಪ್ರಾಂತದಲ್ಲಿ ಉಕ್ರೇನ್ ಹೊಂದಿರುವ ಕಪ್ಪು ಸಮುದ್ರ ಬಂದರಿನಲ್ಲಿ ರಫ್ತು ಮಾಡಲು ಸಂಗ್ರಹಿಸಿಟ್ಟಿದ್ದ ಕನಿಷ್ಟ 60,000 ಟನ್ಗಳಷ್ಟು ಆಹಾರ ಧಾನ್ಯಗಳು ಬುಧವಾರ ಬೆಳಿಗ್ಗೆ ರಶ್ಯ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ನಾಶವಾಗಿದೆ ಎಂದು ವರದಿಯಾಗಿದೆ.
ರಶ್ಯದ ಭಯೋತ್ಪಾದಕರು ಆಹಾರಧಾನ್ಯ ಒಪ್ಪಂದದ ಮೂಲಸೌಕರ್ಯವನ್ನು ಉದ್ದೇಶಪೂರ್ವಕ ಗುರಿಯಾಗಿಸಿಕೊಂಡಿದ್ದಾರೆ. ಕಪ್ಪು ಸಮುದ್ರದ ಬಂದರಿನ ಮೇಲೆ ರಶ್ಯ ನಡೆಸುವ ಪ್ರತಿಯೊಂದು ಕ್ಷಿಪಣಿ ದಾಳಿಯೂ ಉಕ್ರೇನ್ ಮೇಲಷ್ಟೇ ಅಲ್ಲ, ಜಗತ್ತಿನಲ್ಲಿ ಸಹಜ ಮತ್ತು ಸುರಕ್ಷಿತ ಬದುಕು ಬಯಸುವ ಎಲ್ಲ ಜನರ ಮೇಲಿನ ಪ್ರಹಾರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
ಒಡೆಸಾದಲ್ಲಿನ ಆಹಾರಧಾನ್ಯ ದಾಸ್ತಾನು ಕೇಂದ್ರ ಹಾಗೂ ಮಿಲಿಟರಿ ವ್ಯವಸ್ಥೆಗಳ ಮೇಲೆ ರಶ್ಯವು 63 ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಡೆಸಾದ ನೈಋತ್ಯದಲ್ಲಿರುವ ಕೊರ್ಕೊಮೊರೆಸ್ಕ್ ಬಂದರಿನ ಆಹಾರ ದಾಸ್ತಾನು ಕೇಂದ್ರದ ಒಂದು ಪಾಶ್ರ್ವಕ್ಕೆ ಹಾನಿಯಾಗಿದ್ದು ಕನಿಷ್ಟ 60,000 ಟನ್ಗಳಷ್ಟು ಆಹಾರಧಾನ್ಯ ನಾಶವಾಗಿದೆ ಎಂದು ಉಕ್ರೇನ್ ಕೃಷಿ ಸಚಿವ ಮಿಕೊಲಾ ಸೊಲಿಸ್ಕಿ ಹೇಳಿದ್ದಾರೆ.