ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿಪೌಡರ್ ನಲ್ಲಿ ಕ್ಯಾನ್ಸರ್ಕಾರಕ ಅಂಶ: ಸಂಸ್ಥೆಗೆ 18.8 ದಶಲಕ್ಷ ಡಾಲರ್ ದಂಡ
ಸಾಂದರ್ಭಿಕ ಚಿತ್ರ | Photo: PTI
ವಾಷಿಂಗ್ಟನ್: ಜಾನ್ಸನ್ ಆ್ಯಂಡ್ ಜಾನ್ಸನ್(ಜೆಜೆ) ಸಂಸ್ಥೆಯ ಬೇಬಿಪೌಡರ್ ಬಳಸಿದ ಬಳಿಕ ತನಗೆ ಕ್ಯಾನ್ಸರ್ ರೋಗ ಬಂದಿರುವುದರಿಂದ ಸಂಸ್ಥೆ ಪರಿಹಾರ ನೀಡಬೇಕು ಎಂದು ಪ್ರಕರಣ ದಾಖಲಿಸಿದ್ದ ಕ್ಯಾಲಿಫೋರ್ನಿಯಾದ ವ್ಯಕ್ತಿಗೆ 18.8 ದಶಲಕ್ಷ ಡಾಲರ್ ಪರಿಹಾರ ನೀಡುವಂತೆ ಅಮೆರಿಕದ ನ್ಯಾಯಾಲಯ ಆದೇಶಿಸಿದೆ.
ಎಳೆಯ ಶಿಶುವಾಗಿದ್ದಾಗಿಂದಲೂ ಜಾನ್ಸನ್ ಆ್ಯಂಡ್ ಜಾನ್ಸನ್ ಟಾಲ್ಕಮ್ ಪೌಡರ್ ಬಳಸುತ್ತಿದ್ದ ಕಾರಣ ಹೃದಯದ ಸುತ್ತಲಿನ ಅಂಗಾಂಶದಲ್ಲಿ ಮಾರಣಾಂತಿಕ ಕ್ಯಾನ್ಸರ್ ಮೆಸೊಥೆಲಿಯೊಮ ಅಭಿವೃದ್ಧಿಗೊಂಡಿದೆ. ಈ ಅಂಶವನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು 24 ವರ್ಷದ ಎಮೋರಿ ಹೆರ್ನಾಂಡೆಸ್ ಎಂಬಾತ ಓಕ್ಲಾಂಡ್ನ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಹೆರ್ನಾಂಡೆಸ್ ಗೆ ಪರಿಹಾರ ಒದಗಿಸುವಂತೆ ಸಂಸ್ಥೆಗೆ ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾನ್ಸನ್ ಸಂಸ್ಥೆಯ ದಾವೆ ಪ್ರಕ್ರಿಯೆ ವಿಭಾಗದ ಉಪಾಧ್ಯಕ್ಷ ಎರಿಕ್ ಹ್ಯಾಸ್ `ಸಂಸ್ಥೆಯ ಬೇಬಿಪೌಡರ್ ಕಲ್ನಾರಿನ ಅಂಶವನ್ನು ಹೊಂದಿಲ್ಲ ಮತ್ತು ಸುರಕ್ಷಿತವಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು' ಎಂದಿದ್ದಾರೆ.