ಅಮೆರಿಕದ ಜತೆ ಸಂವಾದಕ್ಕೆ ಬಾಗಿಲು ಯಾವಾಗಲೂ ಮುಕ್ತ: ಚೀನಾ
Wang Wenbin : NDTV
ಬೀಜಿಂಗ್: ಅಮೆರಿಕದ ಜತೆಗಿನ ಮಾತುಕತೆಗೆ ಚೀನಾದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಮತ್ತು ಉಭಯ ದೇಶಗಳ ನಡುವಿನ ಸಂವಹನ ಯಾವತ್ತೂ ಸ್ಥಗಿತಗೊಂಡಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ.
ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದಲ್ಲಿ ಅಮೆರಿಕ ಮತ್ತು ಚೀನಾದ ಸಂಬಂಧಗಳನ್ನು ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಈ ಮಧ್ಯೆ, ಈ ವಾರಾಂತ್ಯ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಚೀನಾಕ್ಕೆ ನೀಡಲಿರುವ ಭೇಟಿಯಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಿಲ್ಲ ಎಂದು ಅಮೆರಿಕ ಸರಕಾರದ ಉನ್ನತ ಮೂಲಗಳು ಹೇಳಿವೆ.
ಈ ಭೇಟಿಯು ದ್ವಿಪಕ್ಷೀಯ ಸಂಬಂಧ ಸುಧಾರಣೆಯನ್ನು ತ್ವರಿತಗೊಳಿಸಲಿದೆ ಎಂದು ನಿರೀಕ್ಷಿಸಿಲ್ಲವಾದರೂ ಉಭಯ ದೇಶಗಳ ನಡುವಿನ ಸಂವಹನ ಪ್ರಕ್ರಿಯೆ ಹಳಿತಪ್ಪಿಲ್ಲ ಎಂಬುದನ್ನು ತೋರಿಸಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಚೀನಾಕ್ಕೆ ಭೇಟಿ ನೀಡಲಿರುವ ಬ್ಲಿಂಕೆನ್ ಜೂನ್ 18 ಮತ್ತು 19ರಂದು ಹಲವು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು ಚೀನೀ ಅಧ್ಯಕ್ಷ ಕ್ಸಿಜಿಂಪಿಂಗ್ರನ್ನೂ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.