ಲಂಕಾ ವಿರುದ್ಧದ ಮೊದಲ ಟೆಸ್ಟ್: ಪಾಕ್ಗೆ 4 ವಿಕೆಟ್ ಜಯ
ಗಾಲೆ: ಆತಿಥೇಯ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಪ್ರವಾಸಿ ಪಾಕಿಸ್ತಾನವು ಗುರುವಾರ ನಾಲ್ಕು ವಿಕೆಟ್ಗಳಿಂದ ರೋಮಾಂಚಕಾರಿಯಾಗಿ ಗೆದ್ದಿದೆ. ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆ ತೋರಿಸಿದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ತಂಡವನ್ನು ಆಧರಿಸಿ ಜಯವನ್ನು ಖಾತರಿಪಡಿಸಿದರು.
ಪಂದ್ಯವನ್ನು ಗೆಲ್ಲಲು ಎರಡನೇ ಇನಿಂಗ್ಸ್ನಲ್ಲಿ 131 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಪಾಕಿಸ್ತಾನ ಒಂದು ಹಂತದಲ್ಲಿ 79 ರನ್ಗಳನ್ನು ಗಳಿಸುವಷ್ಟರಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶ್ರೀಲಂಕಾದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪಾಕಿಸ್ತಾನಿ ಬ್ಯಾಟರ್ಗಳ ಮೇಲೆ ಸವಾರಿ ಮಾಡಿದರು. ಜಯಸೂರ್ಯ ಪಾಕಿಸ್ತಾನದ ಎರಡನೇ ಇನಿಂಗ್ಸ್ನಲ್ಲಿ 56 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಉರುಳಿಸಿದರು.
ಆಗ ಇಮಾಮ್ ಉಲ್ ಹಕ್ (50 ಅಜೇಯ) ತಂಡದ ನೆರವಿಗೆ ಧಾವಿಸಿದರು. ಅವರು ಮೊದಲ ಇನಿಂಗ್ಸ್ನಲ್ಲಿ ಜೀವನಶ್ರೇಷ್ಠ 208 ರನ್ಗಳನ್ನು ಗಳಿಸಿದ್ದ ಸೌದ್ ಶಕೀಲ್ (30) ಜೊತೆಗೆ ಮಹತ್ವದ ಭಾಗೀದಾರಿಕೆ ನಿಭಾಯಿಸಿ ಇನಿಂಗ್ಸ್ಗೆ ಸ್ಥಿರತೆ ಒದಗಿಸಿದರು.
ನಾಯಕ ಬಾಬರ್ ಆಝಮ್ 24 ರನ್ ಗಳಿಸಿದರೆ, ಅಂತಿಮವಾಗಿ ಅಘಾ ಸಲ್ಮಾನ್ 6 ರನ್ ಗಳಿಸಿ ಅಜೇಯರಾಗಿ ಉಳಿದರು. ಸೌದ್ ಶಕೀಲ್ರ ಅದ್ಭುತ ಮೊದಲ ಇನಿಂಗ್ಸ್ ನಿರ್ವಹಣೆಯಿಂದಾಗಿ ಪಾಕಿಸ್ತಾನವು 149 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯನ್ನು ಗಳಿಸಿತ್ತು. ಅದು ಅಂತಿಮವಾಗಿ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಸೌದ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಮೊದಲ ಇನಿಂಗ್ಸ್ನಲ್ಲಿ 312 ರನ್ ಗಳಿಸಿತ್ತು. ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಕೊಲಂಬೊದಲ್ಲಿ ಸೋಮವಾರ ಆರಂಭಗೊಳ್ಳಲಿದೆ.