ಜಿನ್ಪಿಂಗ್ರನ್ನು ಭೇಟಿಯಾದ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್
ಜಿನ್ಪಿಂಗ್ | Photo : PTI
ಬೀಜಿಂಗ್: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಗುರುವಾರ ಬೀಜಿಂಗ್ನಲ್ಲಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.
1971ರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿದ್ದ ಹೆನ್ರಿ ಕಿಸಿಂಜರ್ ಅಮೆರಿಕ- ಚೀನಾದ ನಡುವೆ ದ್ವಿಪಕ್ಷೀಯ ಸಂಬಂಧ ಸ್ಥಾಪನೆಯ ಉದ್ದೇಶದಿಂದ ಚೀನಾಕ್ಕೆ ಭೇಟಿ ನೀಡಿದ್ದರು. ಈ ಭೇಟಿಯು ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಐತಿಹಾಸಿಕ ಚೀನಾ ಭೇಟಿಗೆ ವೇದಿಕೆ ಸಿದ್ಧಪಡಿಸಿತ್ತು. ಶೀತಲ ಯುದ್ಧದ ಯುಗವನ್ನು ಸಮಾಪ್ತಿಗೊಳಿಸುವುದು ಹಾಗೂ ವಿಯೆಟ್ನಾಮ್ನಲ್ಲಿ ಅಮೆರಿಕದ ಯುದ್ಧ ಅಂತ್ಯಗೊಳಿಸಲು ಚೀನಾದ ನೆರವು ಪಡೆಯುವುದು ನಿಕ್ಸನ್ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ನಿಕ್ಸನ್ ಭೇಟಿಯು ಜಾಗತಿಕ ಮಟ್ಟದಲ್ಲಿ ಪ್ರಮುಖ ಉತ್ಪಾದನಾ ಶಕ್ತಿಕೇಂದ್ರವಾಗಿ ಚೀನಾ ರೂಪುಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭ ಕಿಸಿಂಜರ್ ಅಮೆರಿಕ-ಚೀನಾ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಆದ್ಯತೆ ನೀಡಿದ್ದರು. 1971ರಿಂದ 100ಕ್ಕೂ ಅಧಿಕ ಬಾರಿ ಕಿಸಿಂಜರ್ ಚೀನಾಕ್ಕೆ ಭೇಟಿ ನೀಡಿದ್ದಾರೆ. ಕಿಸಿಂಜರ್ ಅನ್ನು ಸ್ವಾಗತಿಸಿದ ಕ್ಸಿಜಿಂಪಿಂಗ್ ` ನಾವು ನಮ್ಮ ಹಳೆಯ ಮಿತ್ರರನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಚೀನಾ-ಅಮೆರಿಕ ಐತಿಹಾಸಿಕ ಸಂಬಂಧಗಳ ವೃದ್ಧಿಗೆ ಹಾಗೂ ಎರಡು ದೇಶಗಳ ಜನರ ನಡುವಿನ ಸ್ನೇಹ ವೃದ್ಧಿಗೆ ಕಿಸಿಂಜರ್ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಿಸಿಂಜರ್ `ಅಮೆರಿಕ-ಚೀನಾ ಸಂಬಂಧ ಎರಡೂ ದೇಶಗಳು ಹಾಗೂ ಪ್ರಪಂಚದ ಶಾಂತಿ, ಸಮೃದ್ಧಿಗೆ ಪ್ರಮುಖವಾಗಿದೆ ಎಂದು ಹೇಳಿದರು.