ಹೆಚ್ಚಿನ ಆಟಗಾರರಿಗೆ ಕೊಹ್ಲಿ ಪ್ರೇರಣೆ: ದ್ರಾವಿಡ್
ಹೊಸದಿಲ್ಲಿ: ವಿರಾಟ್ ಕೊಹ್ಲಿ ಕ್ರಿಕೆಟ್ನಲ್ಲಿ ಮಾಡಿರುವ ಸಾಧನೆ ಮತ್ತು ಅವರ ಕೆಲಸ ನಿಷ್ಠೆಯನ್ನು ಶ್ಲಾಘಿಸಿರುವ ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ಹಲವು ಕ್ರಿಕೆಟಿಗರಿಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಗುರುವಾರ ಆರಂಭಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯವು ಕೊಹ್ಲಿಯ 500ನೇ ಅಂತರ್ರಾಷ್ಟ್ರೀಯ ಪಂದ್ಯವಾಗಿದೆ. ಈ ಸಾಧನೆ ಮಾಡಿರುವ ಇತರರೆಂದರೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಮಹೇಂದ್ರ ಸಿಂಗ್ ಧೋನಿ.
‘‘ಅವರ (ಕೊಹ್ಲಿಯ) ಅಂಕಿಸಂಖ್ಯೆಗಳೇ ಮಾತಾಡುತ್ತವೆ. ಅವರ ಸಾಧನೆಗಳೆಲ್ಲವೂ ಪುಸ್ತಕಗಳಲ್ಲಿ ದಾಖಲಾಗಿವೆ. ಅವರು ಈ ತಂಡದಲ್ಲಿರುವ ಹಾಗೂ ಭಾರತದಲ್ಲಿರುವ ಅಸಂಖ್ಯಾತ ಜನರು, ಹುಡುಗರು ಮತ್ತು ಹುಡುಗಿಯರಿಗೆ ನೈಜ ಪ್ರೇರಣೆಯಾಗಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ’’ ಎಂದು ಪಂದ್ಯದ ಮುನ್ನಾ ದಿನ ಸುದ್ದಿಗಾರರೊಂದಿಗೆ ಮಾತನಾಡಿದ ದ್ರಾವಿಡ್ ಹೇಳಿದರು.
‘‘ವಿರಾಟ್ರ ಯಾನವನ್ನು ನೋಡಲು ಸಂತೋಷವಾಗುತ್ತದೆ. ನಾನು ತಂಡದ ಹೊರಗಿದ್ದುಕೊಂಡು ಅವರ ಬೆಳವಣಿಗೆಯನ್ನು ಮೆಚ್ಚುಗೆಯಿಂದ ನೋಡುತ್ತಾ ಬಂದಿದ್ದೇನೆ’’ ಎಂದರು. ‘‘ಕೊಹ್ಲಿಯ ಸುದೀರ್ಘ ಕ್ರೀಡಾ ಬದುಕು ಮತ್ತು ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲಿನ ಅವರ ಸಾಧನೆಗಳು ಅವರ ತೆರೆಮರೆಯ ತ್ಯಾಗ ಮತ್ತು ಕಠಿಣ ಪರಿಶ್ರಮದ ಫಲವಾಗಿದೆ’’ ಎಂದು ದ್ರಾವಿಡ್ ನುಡಿದರು.
34 ವರ್ಷದ ಕೊಹ್ಲಿ 2008 ಆಗಸ್ಟ್ನಲ್ಲಿ ದಾಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ಧೋನಿ ನಾಯಕತ್ವದ ಭಾರತೀಯ ತಂಡದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು ಈವರೆಗೆ 274 ಏಕದಿನ ಪಂದ್ಯಗಳು, 115 ಟ್ವೆಂಟಿ20 ಪಂದ್ಯಗಳು ಮತ್ತು 110 ಟೆಸ್ಟ್ಗಳನ್ನು ಆಡಿದ್ದಾರೆ.