ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆ: ಟೆಸ್ಲಾ ಕಂಪೆನಿಗೆ ಸಚಿವ ಎಂ.ಬಿ.ಪಾಟೀಲ್ ಆಹ್ವಾನ
ಬೆಂಗಳೂರು, ಜೂ. 23: ‘ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಕಂಪೆನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕು. ಕಂಪೆನಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಸರಕಾರ ಎಲ್ಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, ‘ಟೆಸ್ಲಾ ಕಂಪೆನಿಯು ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟಪಡುವುದಾದರೆ ಕರ್ನಾಟಕ ರಾಜ್ಯವು ಅದಕ್ಕೆ ಪ್ರಶಸ್ತ ತಾಣವಾಗಿದೆ. ಈ ಕಂಪೆನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೆ, ಸ್ಪೇಸ್-ಎಕ್ಸ್ ಕಂಪೆನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ(ಸ್ಟಾರ್ ಲಿಂಕ್) ಒದಗಿಸುತ್ತಿದೆ. ಈ ಕಂಪೆನಿಗಳನ್ನು ಮುನ್ನಡೆಸುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೆ ಸಹಕಾರ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ.
#Karnataka: The Ideal Destination for #Tesla's Expansion into #India
As a #progressive state & a thriving hub of #innovation & #technology, Karnataka stands ready to support and provide the necessary facilities for Tesla and other ventures of @elonmusk, including #Starlink.… pic.twitter.com/XUBk4c1Cnw
— M B Patil (@MBPatil) June 23, 2023
ಕರ್ನಾಟಕ ರಾಜ್ಯವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಹೀಗಾಗಿ, ಟೆಸ್ಲಾ ಘಟಕ ತೆರೆಯಲು ಇದು ಸೂಕ್ತ ನೆಲೆ. ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ, ಎಲನ್ ಮಸ್ಕ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಕೋರಿದ್ದರು. ಆ ಹಿನ್ನೆಲೆಯಲ್ಲಿ ಪಾಟೀಲ್ ಟ್ವೀಟ್ ಮಾಡಿ ‘ಕರ್ನಾಟಕಕ್ಕೆ ಬನ್ನಿ’ ಎನ್ನುವ ಮನವಿ ಮಾಡಿದ್ದಾರೆ. ಹಾಗೆಯೇ ತಮ್ಮ ಫೇಸ್ ಬುಕ್‍ನಲ್ಲೂ ಈ ಬಗ್ಗೆ ಸಚಿವರು ಬರೆದುಕೊಂಡಿದ್ದಾರೆ.